ಚಪಾತಿ, ರೋಟಿ ಜತೆಗಿರಲಿ ಪಾಲಕ್ ಚಟ್ನಿ

ಚಪಾತಿ, ರೋಟಿ ಜತೆಗಿರಲಿ ಪಾಲಕ್ ಚಟ್ನಿ

LK   ¦    Aug 06, 2019 01:15:40 PM (IST)
ಚಪಾತಿ, ರೋಟಿ ಜತೆಗಿರಲಿ ಪಾಲಕ್ ಚಟ್ನಿ

ಚಪಾತಿ, ರೋಟಿ ಮುಂತಾದವುಗಳನ್ನು ಇತರೆ ಚಟ್ನಿಯೊಂದಿಗೆ ಸೇವಿಸುವವರು ಪಾಲಕ್ ಚಟ್ನಿಯೊಂದಿಗೆ ಸೇವಿಸಿದರೆ ರುಚಿ ಹೇಗಿರುತ್ತದೆ ಎಂಬುದನ್ನು ನೋಡಬಹುದಾಗಿದೆ. ಆರೋಗ್ಯದ ದೃಷ್ಠಿಯಿಂದಲೂ ಇದು ಉತ್ತಮವಾಗಿರುವುದರಿಂದ ಒಮ್ಮೆ ಪಾಲಕ್ ಚಟ್ನಿಯನ್ನು ಮಾಡಿ ಸವಿಯುವುದೇ ಒಳ್ಳೆಯದು. ಪಾಲಕ್ ಚಟ್ನಿ ಮಾಡಲು ಬೇಕಾಗುವ ಪದಾರ್ಥಗಳ ವಿವರ ಮತ್ತು ತಯಾರಿಸುವ ವಿಧಾನ ಹೀಗಿದೆ.

ಬೇಕಾಗುವ ಪದಾರ್ಥಗಳು

ಪಾಲಕ್ ಸೊಪ್ಪು- ಎರಡು ಕಂತೆ

ಹಸಿಮೆಣಸಿನ ಕಾಯಿ- ಐದು

ಈರುಳ್ಳಿ- ಒಂದು

ಧನಿಯಾಪುಡಿ- ಒಂದು ಟೀ ಚಮಚ

ಜೀರಿಗೆ- ಒಂದು ಟೀ ಚಮಚ

ಉಪ್ಪು- ರುಚಿಗೆ ತಕ್ಕಂತೆ

ಕಾಯಿತುರಿ-ಅರ್ಧ ಕಪ್

ಎಣ್ಣೆ- ಒಗ್ಗರಣೆಗೆ ತಕ್ಕಷ್ಟು

ಕರಿಬೇವುಸೊಪ್ಪು- ಸ್ವಲ್ಪ

ಪಾಲಕ್ ಚಟ್ನಿ ತಯಾರಿಸುವುದು ಹೇಗೆ?

ಮೊದಲಿಗೆ ಪಾಲಕ್ ಸೊಪ್ಪನ್ನು ತೆಗೆದುಕೊಂಡು ಅದನ್ನು ಚೆನ್ನಾಗಿ ತೊಳೆದು ಚಿಕ್ಕದಾಗಿ ಹಚ್ಚಿಟ್ಟುಕೊಳ್ಳಬೇಕು. ಇನ್ನೊಂದೆಡೆ ಈರುಳ್ಳಿಯನ್ನು ಕೂಡ ಸಣ್ಣದಾಗಿ ಹಚ್ಚಿಟ್ಟುಕೊಳ್ಳಬೇಕು. ಹಚ್ಚಿಟ್ಟ ಪಾಲಕ್ ಸೊಪ್ಪನ್ನು ತೆಗೆದುಕೊಂಡು ಸ್ವಲ್ಪ ನೀರಿನಲ್ಲಿ ಒಂದು ನಿಮಿಷ ಕಾಲ ಕುದಿಸಬೇಕು. ಆ ನಂತರ ಅದಕ್ಕೆ ಈರುಳ್ಳಿಯನ್ನು ಹೊರತುಪಡಿಸಿ ಉಳಿದ ಎಲ್ಲ ಸಾಮಗ್ರಿಗಳನ್ನು ಹಾಕಿ ಮಿಕ್ಸಿ ಮಾಡಬೇಕು.

ಇದಾದ ಬಳಿಕ ಒಂದು ಬಾಣಲಿಯಲ್ಲಿ ಎಣ್ಣೆಯಿಟ್ಟು ಅದು ಕಾದ ಬಳಿಕ ಅದರಲ್ಲಿ ಈರುಳ್ಳಿ ಹಾಕಿ ಚೆನ್ನಾಗಿ ಹುರಿಯಬೇಕು. ನಂತರ ಕರಿಬೇವುಸೊಪ್ಪು ಹಾಕಿ ತಿರುಗಿಸಿ ನಂತರ ಮಿಕ್ಸಿ ಮಾಡಿಟ್ಟ ಪಾಲಕ್ ನ್ನು ಸುರಿಯಬೇಕು. ಬಳಿಕ ಚೆನ್ನಾಗಿ ತಿರುಗಿಸಿ ಇಳಿಸಿದರೆ ಪಾಲಕ್ ಚಟ್ನಿ ರೆಡಿ.