ತೆಂಗಿನ ಹಾಲಿನ ಪ್ರಾನ್ಸ್ ಕರ್ರಿ ಮಾಡಿ ನೋಡಿ!

ತೆಂಗಿನ ಹಾಲಿನ ಪ್ರಾನ್ಸ್ ಕರ್ರಿ ಮಾಡಿ ನೋಡಿ!

LK   ¦    Nov 12, 2020 07:48:58 PM (IST)
ತೆಂಗಿನ ಹಾಲಿನ ಪ್ರಾನ್ಸ್ ಕರ್ರಿ ಮಾಡಿ ನೋಡಿ!

ಪ್ರಾನ್ಸ್ ಮಾಂಸಹಾರಿಗಳ ನೆಚ್ಚಿನ ತಿನಿಸಾಗಿದ್ದು, ಇದರಿಂದ ಹಲವು ರೀತಿಯ ಖಾದ್ಯಗಳನ್ನು ತಯಾರಿಸಬಹುದಾಗಿದೆ. ಅದರಲ್ಲಿ ಪ್ರಾನ್ಸ್ ತೆಂಗಿನ ಕರ್ರಿಯೂ ಒಂದಾಗಿದೆ. ಇದನ್ನು ತಯಾರಿಸಲು ಬೇಕಾಗುವ ಪದಾರ್ಥಗಳು ಮತ್ತು ತಯಾರಿಸುವ ವಿಧಾನ ಈ ಕೆಳಗಿನಂತಿದೆ.

ಬೇಕಾಗುವ ಪದಾರ್ಥಗಳ ವಿವರ

ಪ್ರಾನ್- ಅರ್ಧ ಕೆಜಿ

ಈರುಳ್ಳಿ- 1

ಸಾಸಿವೆ- ಅರ್ಧ ಟೀ ಚಮಚ

ಕರಿಬೇವು- ಸ್ವಲ್ಪ

ಬೆಳ್ಳುಳ್ಳಿ ಶುಂಠಿ ಪೇಸ್ಟ್- ಒಂದು ಟೀ ಚಮಚ

ಮೆಣಸಿನಪುಡಿ- ಎರಡು ಟೀ ಚಮಚ

ದನಿಯಪುಡಿ- ಎರಡು ಟೀ ಚಮಚ

ಜೀರಿಗೆಪುಡಿ- ಒಂದು ಟೀ ಚಮಚ

ಅರಸಿನ- ಅರ್ಧ ಟೀ ಚಮಚ

ಉಪ್ಪು- ಒಂದೂವರೆ ಟೀ ಚಮಚ

ಎಣ್ಣೆ- ಎರಡು ಟೇಬಲ್ ಚಮಚ

ತೆಂಗಿನ ಹಾಲು- ಅರ್ಧ ಬಟ್ಟಲು

ತೆಂಗಿನ ಹಾಲಿನ ಸಿಗಡಿ ಕರಿ ಮಾಡುವ ವಿಧಾನ

ಮೊದಲಿಗೆ ಸಿಗಡಿಯನ್ನು ನಾಳ ತೆಗೆದು ಶುಚಿಗೊಳಿಸಿಟ್ಟುಕೊಳ್ಳಬೇಕು, ಈರುಳ್ಳಿಯನ್ನು ಸಣ್ಣದಾಗಿ ಹಚ್ಚಿಕೊಳ್ಳಬೇಕು. ತೆಂಗಿನ ಕಾಯಿಯನ್ನು ತುರಿದು ಹಿಂಡಿ ಹಾಲನ್ನು ತಯಾರಿಸಿಟ್ಟುಕೊಳ್ಳಬೇಕು. ಆ ನಂತರ ಒಂದು ಪಾತ್ರೆಯನ್ನು ತೆಗೆದುಕೊಂಡು ಅದನ್ನು ಸ್ಟೌವ್ ಮೇಲಿಟ್ಟು ನಿಧಾನ ಉರಿಯಲ್ಲಿ ಎಣ್ಣೆಯನ್ನು ಹಾಕಿ ಅದು ಕಾಯುತ್ತಿದ್ದಂತೆಯೇ ಸಾಸಿವೆ ಹಾಕಿ ಅದು ಸಿಡಿದ ಬಳಿಕ ಈರುಳ್ಳಿ, ಕರಿಬೇವು ಹಾಕಿ ಚೆನ್ನಾಗಿ ಹುರಿಯಬೇಕು. ಬಳಿಕ ಅದಕ್ಕೆ ಬೆಳ್ಳುಳ್ಳಿ ಶುಂಠಿ ಪೇಸ್ಟ್ ಹಾಕಿ ತಿರುಗಿಸಬೇಕು. ಇದಾದ ಬಳಿಕ ಮೆಣಸಿನಪುಡಿ, ದನಿಯಪುಡಿ, ಜೀರಿಗೆ ಪುಡಿ, ಅರಸಿನಪುಡಿ, ಉಪ್ಪು ಹಾಕಿ ಚೆನ್ನಾಗಿ ಕಲೆಸಬೇಕು.

ಇಷ್ಟು ಮಾಡಿದ ಬಳಿಕ ಹಸಿ ಸಿಗಡಿಗಳನ್ನು ಹಾಕಿ ತೆಂಗಿನ ಹಾಲು ಸೇರಿಸಿ (ಅಗತ್ಯವಿದ್ದರೆ ಸ್ವಲ್ಪ ನೀರು ಹಾಕಿ) ಬೇಯಿಸಿ ಇಳಿಸಿದರೆ ಸಿಗಡಿ ತೆಂಗಿನ ಹಾಲಿನ ಕರಿ ಸವಿಯಲು ರೆಡಿಯಾದಂತೆಯೇ.....