ಊಟದ ಜತೆಗಿರಲಿ ಕಾಟ್ಲ ಫಿಶ್ ಫ್ರೈ

ಊಟದ ಜತೆಗಿರಲಿ ಕಾಟ್ಲ ಫಿಶ್ ಫ್ರೈ

LK   ¦    May 20, 2020 02:23:22 PM (IST)
ಊಟದ ಜತೆಗಿರಲಿ ಕಾಟ್ಲ ಫಿಶ್ ಫ್ರೈ

ಸಮುದ್ರ ಮೀನನ್ನು ಕರಾವಳಿ, ಮಲೆನಾಡು ಪ್ರದೇಶದ ಜನರು ಇಷ್ಟಪಡುವಷ್ಟು ಬಯಲು ಸೀಮೆಯ ಜನರು ಇಷ್ಟ ಪಡುವುದಿಲ್ಲ. ಇವರ ಪೈಕಿ ಹೆಚ್ಚಿನವರು ಕೆರೆಯಿಂದ ಸಾಕಿ ಬೆಳೆಸುವ ಕಾಟ್ಲ ಮೀನನ್ನು ಇಷ್ಟಪಡುತ್ತಾರೆ. ಕಾಟ್ಲ ಮೀನು ಇಷ್ಟಪಡುವವರಿಗಾಗಿ ಕಾಟ್ಲಾ ಫಿಶ್ ಫ್ರೈ ಮಾಡುವ ಬಗ್ಗೆ ಮಾಹಿತಿ ಇಲ್ಲಿದೆ.

 

ಬೇಕಾಗುವ ಪದಾರ್ಥಗಳು

ಕಾಟ್ಲ ಮೀನು- ಅರ್ಧ ಕೆಜಿ

ಈರುಳ್ಳಿ- ಒಂದು

ಜೀರಿಗೆ- ಒಂದು ಟೀ ಚಮಚ

ಅರಸಿನ- ಅರ್ಧ ಟೀ ಚಮಚ

ಕೆಂಪು ಮೆಣಸು- ಆರು

ನಿಂಬೆರಸ- ಒಂದು ಚಮಚ

ಬೆಳ್ಳುಳ್ಳಿ- ಮೂರ್ನಾಲ್ಕು ಎಸಳು

ಶುಂಠಿ- ಸ್ವಲ್ಪ

ಉಪ್ಪು- ಎರಡು ಟೀ ಚಮಚ

ಕೊತ್ತಂಬರಿ ಸೊಪ್ಪು- ಸ್ವಲ್ಪ

ಎಣ್ಣೆ- ಕಾಯಿಸಲು ಅಗತ್ಯವಿರುವಷ್ಟು

ಮಾಡುವ ವಿಧಾನ ಹೀಗಿದೆ..

ಮೊದಲಿಗೆ ತುಂಡು ಮಾಡಿಕೊಂಡಿರುವ ಮೀನನ್ನು ಶುದ್ಧ ನೀರಿನಿಂದ ತೊಳೆಯಬೇಕು. ಸ್ವಲ್ಪ ಉಪ್ಪು ಹಾಕಿ ಚೆನ್ನಾಗಿ ಕದಡಿ ಇಡಬೇಕು. ಇನ್ನೊಂದು ಕಡೆಯಲ್ಲಿ ಈರುಳ್ಳಿಯನ್ನು ಚಿಕ್ಕದಾಗಿ ಹಚ್ಚಿಟ್ಟುಕೊಳ್ಳಬೇಕು. ಮೆಣಸು ಜೀರಿಗೆಯನ್ನು ಪಾತ್ರೆಯಲ್ಲಿ ಹಾಕಿ ಸ್ವಲ್ಪ ಬಿಸಿ ಮಾಡಿ ಆ ನಂತರ ಅದನ್ನು ಮಿಕ್ಸಿಗೆ ಹಾಕಿ ಅದಕ್ಕೆ ಹಚ್ಚಿಟ್ಟ ಈರುಳ್ಳಿ, ಬೆಳ್ಳುಳ್ಳಿ, ಶುಂಠಿ, ಅರಸಿನಪುಡಿ, ನಿಂಬೆ, ರಸ ಉಪ್ಪು ಹಾಕಿ ಸ್ವಲ್ಪ ನೀರು ಹಾಕಿ ಚೆನ್ನಾಗಿ ರುಬ್ಬಬೇಕು.

ಅದು ನುಣ್ಣಗೆಯಾದ ಬಳಿಕ ತೆಗೆದು ಆ ಮಸಾಲೆಯನ್ನು ಮೀನಿಗೆ ಚೆನ್ನಾಗಿ ಸವರಿ ಸ್ವಲ್ಪ ಸಮಯಗಳ ಕಾಲ ಹಾಗೆಯೇ ಇಡಬೇಕು. ಬಳಿಕ ಕಾವಲಿ ಅಥವಾ ತಾವಾಕ್ಕೆ ಎಣ್ಣೆ ಸವರಿ ನಿಧಾನ ಉರಿಯಲ್ಲಿ ಚೆನ್ನಾಗಿ ಎರಡು ಕಡೆಯೂ ಕಂದು ಬಣ್ಣ ಬರುವವರೆಗೆ ಬೇಯಿಸಿ ತೆಗೆದರೆ ಫಿಶ್ ಫ್ರೈ ರೆಡಿಯಾದಂತೆಯೇ..  ಬಳಿಕ ಅದರ ಮೇಲೆ ಕೊತ್ತಂಬರಿ ಸೊಪ್ಪು ಉದುರಿಸಿ ಬಿಡಿ.