ಮಾಂಸಹಾರಿಗಳು ಅದರಲ್ಲೂ ಚಿಕನ್ ಇಷ್ಟಪಡುವವರು ಸ್ಪೆಷಲ್ ಚಿಕನ್ ಫ್ರೈ ಮಾಡಬಹುದಾಗಿದೆ. ಇದಕ್ಕೆ ಬೇಕಾಗುವ ಪದಾರ್ಥಗಳು ಮತ್ತು ಮಾಡುವ ವಿಧಾನ ಹೀಗಿದೆ.
ಚಿಕನ್- ಒಂದು ಕೆಜಿ
ಕಾರದಪುಡಿ- ಎರಡು ಟೀ ಚಮಚೆ
ನೀರು- ಕಾಲು ಬಟ್ಟಲು
ಉಪ್ಪು- ರುಚಿಗೆ ತಕ್ಕಷ್ಟು
ಅರಸಿನ- ಅರ್ಧ ಟೀ ಚಮಚೆ
ಶುಂಠಿ ಬೆಳ್ಳುಳ್ಳಿ ಪೇಸ್ಟ್- ಒಂದು ಟೀ ಚಮಚೆ
ಸೋಯಾಸಾಸ್- ಒಂದು ಟೀ ಚಮಚೆ
ಎಣ್ಣೆ- ಮೂರು ಟೀ ಚಮಚೆ
ಈರುಳ್ಳಿ- ಒಂದು
ನಿಂಬೆಹಣ್ಣು- ಅರ್ಧ ಹೋಳು
ಗರಂ ಮಸಾಲೆ- ಒಂದು ಟೀ ಚಮಚೆ
ಸ್ಪೆಷಲ್ ಚಿಕನ್ ಫ್ರೈ ಮಾಡುವುದು ಹೇಗೆ?
ಮೊದಲಿಗೆ ಚಿಕನ್ ತೆಗೆದುಕೊಂಡು ಮಧ್ಯಮ ತುಂಡುಗಳನ್ನಾಗಿ ಕತ್ತರಿಸಿಕೊಳ್ಳಬೇಕು. ಈರುಳ್ಳಿಯನ್ನು ಚಿಕ್ಕದಾಗಿ ಹಚ್ಚಿಟ್ಟುಕೊಳ್ಳಬೇಕು. ಆ ನಂತರ ಕುಕ್ಕರ್ ತೆಗೆದುಕೊಂಡು ಅದಕ್ಕೆ ಚಿಕನ್ ತುಂಡುಗಳನ್ನು ಹಾಕಿ, ನೀರು, ಕಾರದ ಪುಡಿ, ಉಪ್ಪು, ಅರಿಸಿನ, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಸೋಯಾ ಸಾಸ್ ಸೇರಿಸಿ ಸುಮಾರು ಮೂರು ನಿಮಿಷಗಳ ಕಾಲ ಬೇಯಿಸಬೇಕು. ನಂತರ ಮುಚ್ಚಳ ತೆಗೆದು ನೀರು ಆವಿಯಾಗಲು ಸ್ವಲ್ಪ ಸಮಯ ಬಿಡಬೇಕು.
ಇಷ್ಟು ಮಾಡಿಕೊಂಡ ಬಳಿಕ ಒಂದು ಪಾತ್ರೆಯನ್ನು ತೆಗೆದುಕೊಂಡು ಅದಕ್ಕೆ ಎಣ್ಣೆ ಹಾಕಿ ಅದು ಕಾದ ಬಳಿಕ ಹಚ್ಚಿದ ಈರುಳ್ಳಿ ಹಾಕಿ ಕಂದು ಬಣ್ಣ ಬರುವ ತನಕ ಹುರಿಯಬೇಕು. ಬಳಿಕ ಬೇಯಿಸಿಟ್ಟ ಚಿಕನ್ ಹಾಕಿ ಕಂದು ಬಣ್ಣವಾಗುವ ವರೆಗೆ ಹುರಿದು ಅದಕ್ಕೆ ನಿಂಬೆ ರಸ ಗರಂ ಮಸಾಲೆ ಹಾಕಿ ತಿರುಗಿಸಿ ಎರಡು ನಿಮಿಷ ಬಿಟ್ಟು ಇಳಿಸಿದರೆ ಸ್ಪೆಷಲ್ ಚಿಕನ್ ಫ್ರೈ ರೆಡಿ.