ಕೊಡಗಿನಲ್ಲಿ ಮಳೆಗಾಲದ ಸಮಯದಲ್ಲಿ ಶೀತದಿಂದ ದೇಹವನ್ನು ಕಾಪಾಡಿ ಆರೋಗ್ಯವಾಗಿಡುವಲ್ಲಿ ಆಟಿ ಸೊಪ್ಪಿನ ಪಾತ್ರವಿದೆ. ಇಲ್ಲಿನ ಕಾಡುಗಳ ನಡುವೆ ಬೆಳೆಯುವ ಗಿಡಮೂಲಿಕೆಯಾದ ಆಟಿ ಸೊಪ್ಪಿನಿಂದ ಪಾಯಸ ಮಾಡಿ ಸೇವಿಸಲಾಗುತ್ತದೆ. ಇದನ್ನು ಆಟಿ 18ರಂದು ಅಂದರೆ ಆಗಸ್ಟ್ 3ರಂದು ಪ್ರತಿವರ್ಷ ಮಾಡಲಾಗುತ್ತದೆ. ಹಾಗಾದರೆ ಔಷಧೀಯ ಗುಣಹೊಂದಿರುವ ಆಟಿ ಪಾಯಸವನ್ನು ಮಾಡುವುದು ಹೇಗೆ ಎಂಬುದರ ಮಾಹಿತಿ ಇಲ್ಲಿದೆ.
ಬೇಕಾಗುವ ಪದಾರ್ಥಗಳ ವಿವರ
ಆಟಿ ಸೊಪ್ಪು- ಒಂದು ಕಟ್ಟು
ಅಕ್ಕಿ – ಒಂದು ಕಪ್
ಬೆಲ್ಲ- ಎರಡು ಅಚ್ಚು
ತೆಂಗಿನತುರಿ- ಒಂದು ಕಪ್
ಏಲಕ್ಕಿ ಪುಡಿ- ಸ್ವಲ್ಪ
ಉಪ್ಪು- ಚಿಟಿಕೆಯಷ್ಟು
ಹಸುವಿನ ತುಪ್ಪ- ಅಗತ್ಯದಷ್ಟು
ಜೇನು- ಅಗತ್ಯದಷ್ಟು
ಮಾಡುವ ವಿಧಾನ ಹೀಗಿದೆ..
ಮೊದಲಿಗೆ ಆಟಿಸೊಪ್ಪನ್ನು ತಂದು ಅದನ್ನು ಸ್ವಚ್ಛಗೊಳಿಸಿ ಬಳಿಕ ಚೆನ್ನಾಗಿ ತೊಳೆದು ಅದನ್ನು ಪಾತ್ರೆಗೆ ಹಾಕಿ ಸೊಪ್ಪು ಮುಳುಗುವಷ್ಟು ನೀರನ್ನು ಹಾಕಿ ಚೆನ್ನಾಗಿ ಬೇಯಿಸಬೇಕು. ಆಗ ಸೊಪ್ಪು ನೀಲಿ ಬಣ್ಣದ ರಸ ಬಿಡಲಾರಂಭಿಸುತ್ತದೆ. ಅದು ಚೆನ್ನಾಗಿ ರಸ ಬಿಟ್ಟ ಬಳಿಕ ಸೊಪ್ಪನ್ನು ಸೋಸಿ ತೆಗೆದು ಬಳಿಕ ನೀರನ್ನು ತೆಗೆದುಕೊಂಡು ಆ ನೀರಿಗೆ ಅಕ್ಕಿಯನ್ನು ಹಾಕಿ ಚೆನ್ನಾಗಿ ಬೇಯಿಸಬೇಕು.
ಅದು ಬೇಯುತ್ತಿದ್ದಂತೆಯೇ ಬೆಲ್ಲವನ್ನು ಹಾಕ ಬೇಕು. ಬೆಲ್ಲ ಕರಗಿದ ಬಳಿಕ ತೆಂಗಿನ ತುರಿ, ಏಲಕ್ಕಿ ಪುಡಿ, ಉಪ್ಪು ಹಾಕಿ ಚೆನ್ನಾಗಿ ತಿರುಗಿಸಿ ಇಳಿಸಿದರೆ ಆಟಿ ಪಾಯಸ ರೆಡಿ. ಪಾಯಸವನ್ನು ತಟ್ಟೆಗೆ ಹಾಕಿ ಸೇವಿಸುವಾಗ ಒಂದು ಚಮಚೆ ಜೇನು ಹಾಗೂ ಹಸುವಿನ ತುಪ್ಪವನ್ನು ಹಾಕಿಕೊಂಡರೆ ಇನ್ನಷ್ಟು ರುಚಿಯಾಗಿರುತ್ತದೆ.