ಖಾರ ಅಕ್ಕಿರೊಟ್ಟಿ ಮಾಡುವುದು ಹೇಗೆ ಗೊತ್ತಾ?

ಖಾರ ಅಕ್ಕಿರೊಟ್ಟಿ ಮಾಡುವುದು ಹೇಗೆ ಗೊತ್ತಾ?

LK   ¦    May 15, 2020 02:04:37 PM (IST)
ಖಾರ ಅಕ್ಕಿರೊಟ್ಟಿ ಮಾಡುವುದು ಹೇಗೆ ಗೊತ್ತಾ?

ಅಕ್ಕಿರೊಟ್ಟಿಯನ್ನು ಬೇರೆ, ಬೇರೆ ರೀತಿಯಲ್ಲಿ ಮಾಡಬಹುದಾಗಿದ್ದು, ಅದರಲ್ಲಿ ಖಾರ ಅಕ್ಕಿರೊಟ್ಟಿಯೂ ಒಂದಾಗಿದೆ. ಇದನ್ನು ಮಾಡುವುದು ತುಂಬಾ ಸುಲಭವೂ ಹೌದು. ರುಚಿಯೂ ಕೂಡ. ಹಾಗಾದರೆ ಖಾರ ಅಕ್ಕಿ ರೊಟ್ಟಿ ಮಾಡಲು ಬೇಕಾಗುವ ಪದಾರ್ಥಗಳು ಮತ್ತು ಮಾಡುವ ವಿಧಾನದ ವಿವರಗಳು ಇಲ್ಲಿದೆ.

 

ಬೇಕಾಗುವ ಪದಾರ್ಥಗಳು

ಅಕ್ಕಿ ಹಿಟ್ಟು- ಒಂದು ಕಪ್

ಈರುಳ್ಳಿ- ಹಚ್ಚಿದ್ದು ಅರ್ಧ ಕಪ್

ಮೆಣಸಿನಕಾಯಿ- ಮೂರು

ತೆಂಗಿನಕಾಯಿ ತುರಿ- ಕಾಲು ಕಪ್

ಕೊತ್ತಂಬರಿ ಸೊಪ್ಪು- ಸ್ವಲ್ಪ

ಉಪ್ಪು- ರುಚಿಗೆ ತಕ್ಕಷ್ಟು

 ಖಾರ ಅಕ್ಕಿರೊಟ್ಟಿ ಮಾಡುವುದು ಹೇಗೆ?

ಮೊದಲಿಗೆ ಈರುಳ್ಳಿ ಮತ್ತು ಮೆಣಸಿನ ಕಾಯಿಯನ್ನು ಚಿಕ್ಕದಾಗಿ ಹಚ್ಚಿಟ್ಟುಕೊಳ್ಳಿ. ನಂತರ ಕಾಯಿತುರಿಯನ್ನು ಸಿದ್ಧ ಮಾಡಿಕೊಳ್ಳಿ. ನಂತರ ಅಗಲವಾದ ಪಾತ್ರೆಯನ್ನು ತೆಗೆದುಕೊಂಡು ಅದರಲ್ಲಿ ಅಕ್ಕಿ ಹಿಟ್ಟು, ಉಪ್ಪು, ಈರುಳ್ಳಿ, ಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು ಹಾಕಿ ಸ್ವಲ್ಪ ಸ್ವಲ್ಪವೇ ನೀರು ಹಾಕುತ್ತಾ ಕಲೆಸುತ್ತಾ ಹೋಗಬೇಕು ಚಪಾತಿ ಹಿಟ್ಟಿನಂತೆ ಕಲೆಸಿಕೊಂಡು ಬಳಿಕ ಸ್ವಲ್ಪ ಹೊತ್ತು ಹಾಗೆಯೇ ಬಿಡಬೇಕು.

ಆನಂತರ ಕಾವಲಿಯನ್ನು ಒಲೆಯ ಮೇಲಿಟ್ಟು ಅದು ಕಾದ ನಂತರ ಒಂದು ಚಮಚ ಎಣ್ಣೆಯನ್ನು ಕಾವಲಿಗೆ ಹಚ್ಚಬೇಕು. ಬಳಿಕ ಮುಷ್ಟಿಯಷ್ಟು ಹಿಟ್ಟನ್ನು ತೆಗೆದುಕೊಂಡು ಉಂಡೆ ಮಾಡಿ ಕಾವಲಿ ಮೇಲಿಟ್ಟು ಅಗಲವಾಗಿ ತಟ್ಟಿ ಎಣ್ಣೆ ಹಾಕಿ ಎರಡು ಬದಿಯೂ ಚೆನ್ನಾಗಿ ಬೇಯಿಸಿ ತೆಗೆದರೆ ಖಾರ ರೊಟ್ಟಿ ರೆಡಿಯಾದಂತೆಯೇ...