ದರಸಗುಪ್ಪೆ ಬೆಣ್ಣೆ ಇಡ್ಲಿ ರುಚಿ ನೋಡಿದ್ದೀರಾ?

ದರಸಗುಪ್ಪೆ ಬೆಣ್ಣೆ ಇಡ್ಲಿ ರುಚಿ ನೋಡಿದ್ದೀರಾ?

LK   ¦    Oct 28, 2020 03:01:03 PM (IST)
ದರಸಗುಪ್ಪೆ ಬೆಣ್ಣೆ ಇಡ್ಲಿ ರುಚಿ ನೋಡಿದ್ದೀರಾ?

ಅದು ರಸ್ತೆ ಬದಿಯಲ್ಲಿರುವ ಪುಟ್ಟ ಕ್ಯಾಂಟೀನ್. ಆದರೆ ಅಲ್ಲಿ ಸರತಿ ಸಾಲಿನಲ್ಲಿ ನಿಂತು ಕಾದು ಜನ ಇಡ್ಲಿ ತಿಂದು ಹೋಗುತ್ತಾರೆ ಎಂದರೆ ಖಂಡಿತಾ ಅಚ್ಚರಿಯಾಗಬಹುದಲ್ಲವೆ? ಅಷ್ಟೇ ಅಲ್ಲ ಅದ್ಯಾವ ಇಡ್ಲಿಯಪ್ಪಾ ಎಂಬ ಪ್ರಶ್ನೆಯೂ ಮೂಡಬಹುದು.

ತಮ್ಮಲ್ಲಿ ಎದ್ದಿರುವ ಪ್ರಶ್ನೆ ಮತ್ತು ಕುತೂಹಲ ತಣಿಸಿ ಕೊಳ್ಳಬೇಕಾದರೆ  ಶ್ರೀರಂಗಪಟ್ಟಣ ಬಳಿಯಿರುವ ದರಸಗುಪ್ಪೆ ಗ್ರಾಮಕ್ಕೆ ಹೋಗಬೇಕು. ಅಲ್ಲಿನ ಶಿವಣ್ಣ ಎಂಬುವರು ಕಡಿಮೆ ಬೆಲೆಗೆ ರುಚಿ, ಶುಚಿಯಾಗಿ  ಮಾಡಿಕೊಡುವ ಇಡ್ಲಿಯನ್ನು ಸೇವಿಸಿ ಬರಬೇಕಾಗುತ್ತದೆ.

ಸಾಮಾನ್ಯವಾಗಿ ಹೆಚ್ಚಿನವರು ತಟ್ಟೆ ಇಡ್ಲಿ, ಮಲ್ಲಿಗೆ ಇಡ್ಲಿ, ರವೆ ಇಡ್ಲಿ, ಮಸಾಲೆ ಇಡ್ಲಿ ಹೀಗೆ ಹಲವು ವಿಧದ ಇಡ್ಲಿಯನ್ನು ಸೇವಿಸಿದವರಿಗೆ  ದರಸಗುಪ್ಪೆ ಬೆಣ್ಣೆ ಇಡ್ಲಿ ಸ್ವಲ್ಪ ವಿಶೇಷವಾಗಿ ಕಾಣಬಹುದು. ಆದರೆ ಇದು ಜನರೇ ಇಟ್ಟ ಹೆಸರು ಎಂದರೆ ಅಚ್ಚರಿಯಾಗುತ್ತದೆ. ಅಷ್ಟೇ ಅಲ್ಲ ಅದರ ಜನಪ್ರಿಯತೆಗೆ ಸಾಕ್ಷಿಯಾಗುತ್ತದೆ.

ಶ್ರೀರಂಗಪಟ್ಟಣಕ್ಕೆ ಹೊಂದಿಕೊಂಡಂತೆ ಇರುವ ದರಸಗುಪ್ಪೆ ಗ್ರಾಮದಲ್ಲಿ ಹೊಟ್ಟೆಪಾಡಿಗಾಗಿ ಶಿವಣ್ಣ ಎಂಬುವರು ಪುಟ್ಟದಾದ ಕ್ಯಾಂಟೀನ್ ಆರಂಭಿಸಿದರು. ಬೆಳಗ್ಗಿನ ಉಪಹಾರಕ್ಕೆ ಇಡ್ಲಿ ಚಟ್ನಿ ನೀಡುವ ವ್ಯವಸ್ಥೆ ಮಾಡಿದರು. ಬೇರೆಯವರಿಗಿಂತ ಸ್ವಲ್ಪ ಹೆಚ್ಚು ರುಚಿ, ಬಿಸಿಬಿಸಿಯಾದ ಮತ್ತು ಶುಚಿಯಾದ ಇಡ್ಲಿ ಮಾಡಿ ಅದಕ್ಕೆ ಚಟ್ನಿ ಒಂದಿಷ್ಟು ಬೆಣ್ಣೆ ಹಾಕಿ ಕೊಡತೊಡಗಿದರು.

ಅವರ ಕೈರುಚಿ ಜನರನ್ನು ಸೆಳೆಯತೊಡಗಿತು. ಪ್ರತಿಯೊಬ್ಬರಿಗೂ ಬಿಸಿಬಿಸಿಯಾದ ಇಡ್ಲಿ ಇಷ್ಟವಾಗತೊಡಗಿತು. ಒಮ್ಮೆ ಇಲ್ಲಿಗೆ ಬಂದ ಜನ ಮತ್ತೆ ಬರತೊಡಗಿದರು. ದರಸಗುಪ್ಪೆ ಶಿವಣ್ಣ ಅವರ ಬೆಣ್ಣೆ ಇಡ್ಲಿ ಸುತ್ತಮುತ್ತಲಿನ ಜನರಲ್ಲದೆ ರಸ್ತೆಯಲ್ಲಿ ಪ್ರಯಾಣಿಸುವ ಪ್ರಯಾಣಿಕರನ್ನು ಸೆಳೆಯ ತೊಡಗಿತು. ಹೀಗಾಗಿ ಇಲ್ಲಿಗೆ ಗ್ರಾಹಕರು ಬಂದು ಕಾದು ತಾಜಾ ಇಡ್ಲಿಯನ್ನು ಸೇವಿಸಿ ಹೋಗತೊಡಗಿದರು.

ಇವತ್ತು ನಾವು ಅಲ್ಲಿ ಹೋಟೆಲ್ ಮುಂದೆ ಇಡ್ಲಿ ತಿನ್ನುತ್ತಿರುವವರು, ಇಡ್ಲಿಗಾಗಿ ಕಾದು ಕುಳಿತವರು, ಇಡ್ಲಿ ತಯಾರಿಸುವುದರಲ್ಲಿ ನಿರತರಾದ ಶಿವಣ್ಣ ಹೀಗೆ ಹತ್ತಾರು ದೃಶ್ಯಗಳು ಅಲ್ಲಿ ಕಂಡು ಬರುತ್ತದೆ. ಸುಮಾರು ಅರುವತೈದರ ಪ್ರಾಯದ ಆಸುಪಾಸಿನಲ್ಲಿರುವ ಶಿವಣ್ಣ ಹಲವು ವರ್ಷಗಳಿಂದ ಬೆಣ್ಣೆ ಇಡ್ಲಿ ತಯಾರಿಸುತ್ತಾ ಬಂದಿದ್ದಾರೆ. ರುಚಿ ಮತ್ತು ಶುಚಿಗೆ ಹೆಚ್ಚಿನ ಆದ್ಯತೆ ನೀಡಿದ್ದಾರೆ.

ಒಂದು ಬಾರಿಗೆ ಸಮಾರು 100 ಇಡ್ಲಿಯನ್ನು ತಯಾರಿಸುವ ಶಿವಣ್ಣ ಪ್ರತಿ 15 ನಿಮಿಷಕ್ಕೊಮ್ಮೆ ಇಡ್ಲಿ ತಯಾರಿಸಿ ಗ್ರಾಹಕರಿಗೆ ಬಿಸಿಬಿಸಿಯಾಗಿಯೇ ಅರ್ಥಾತ್  ತಾಜಾ ಇಡ್ಲಿಯನ್ನೇ ನೀಡುತ್ತಾರೆ. ಹೀಗಾಗಿಯೇ ದರಸಗುಪ್ಪೆ ಬೆಣ್ಣೆ ಇಡ್ಲಿಗೆ ಎಲ್ಲಿಲ್ಲದ ಡಿಮ್ಯಾಂಡ್.