ಕಾಯಿ ತುರಿ ಮಿಕ್ಸ್ ಸೀಗಡಿ ಫ್ರೈ ಸವಿದು ನೋಡಿ...

ಕಾಯಿ ತುರಿ ಮಿಕ್ಸ್ ಸೀಗಡಿ ಫ್ರೈ ಸವಿದು ನೋಡಿ...

YK   ¦    Jan 20, 2020 01:15:51 PM (IST)
ಕಾಯಿ ತುರಿ ಮಿಕ್ಸ್ ಸೀಗಡಿ ಫ್ರೈ ಸವಿದು ನೋಡಿ...

ತೆಂಗಿನಕಾಯಿ ತುರಿ ಮಿಕ್ಸ್ ಸೀಗಡಿ ಫ್ರೈ ಊಟಕ್ಕೆ ಪಲ್ಯ, ಉಪ್ಪಿನ ಕಾಯಿಯಂತೆ ಮಜಾ ಕೊಡುತ್ತದೆ. ಕಾಯಿ ತುರಿ ಮಿಕ್ಸ್ ಸೀಗಡಿ ಫ್ರೈ ಮಾಡಲು ಏನೇನು ಪದಾರ್ಥಗಳು ಬೇಕು? ಮಾಡುವುದು ಹೇಗೆ ಎಂಬುದರ ಬಗ್ಗೆ ಮಾಹಿತಿ ಇಲ್ಲಿದೆ.
ಬೇಕಾಗುವ ಪದಾರ್ಥಗಳು

ಹಸಿ ಸೀಗಡಿ ಮೀನು- ಅರ್ಧ ಕೆಜಿ
ಕಾಯಿತುರಿ- ಅರ್ಧ ಬಟ್ಟಲು
ಬೆಳ್ಳುಳ್ಳಿ- ಆರು ಎಸಳು
ಉಪ್ಪು- ರುಚಿಗೆ ತಕ್ಕಷ್ಟು
ಈರುಳ್ಳಿ- ಒಂದು
ನಿಂಬೆ ರಸ- ಒಂದು ಚಮಚೆ
ಕೊತ್ತಂಬರಿ ಸೊಪ್ಪು- ಸ್ವಲ್ಪ
ಕಾರದಪುಡಿ- ಎರಡು ಟೀ ಚಮಚೆ
ಅರಸಿನಪುಡಿ- ಅರ್ಧ ಟೀ ಚಮಚೆ
ಎಣ್ಣೆ- ಮೂರು ಚಮಚೆ

ಮಾಡುವ ವಿಧಾನ ಹೀಗಿದೆ..
ಹಸಿ ಸೀಗಡಿ ಮೀನನ್ನು ಶುಚಿಗೊಳಿಸಿಟ್ಟುಕೊಳ್ಳಬೇಕು. ಹಾಗೆಯೇ ಈರುಳ್ಳಿಯನ್ನು ಚಿಕ್ಕದಾಗಿ ಕತ್ತರಿಸಿಟ್ಟುಕೊಳ್ಳಬೇಕು, ಜತೆಗೆ ಬೆಳ್ಳುಳ್ಳಿಯನ್ನು ಜಜ್ಜಿಕೊಳ್ಳಬೇಕು ಆ ನಂತರ ಮೀನನ್ನು ಪಾತ್ರೆಗೆ ಹಾಕಿ ಅದಕ್ಕೆ ಜಜ್ಜಿದ ಬೆಳ್ಳುಳ್ಳಿ, ಉಪ್ಪು, ಅರಸಿನ ಪುಡಿ, ಕಾರದಪುಡಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಬೇಕು. ಬಳಿಕ ಸ್ವಲ್ಪ ಹೊತ್ತು ಬಿಡಬೇಕು.

ಆ ನಂತರ ಒಂದು ಪಾತ್ರೆಯಲ್ಲಿ ಎಣ್ಣೆ ಹಾಕಿ ಅದು ಕಾದ ಬಳಿಕ ಕತ್ತರಿಸಿಟ್ಟ ಈರುಳ್ಳಿಯನ್ನು ಹಾಕಿ ಚೆನ್ನಾಗಿ ಕಂದು ಬಣ್ಣ ಬರುವ ವರೆಗೆ ಹುರಿಯಬೇಕು. ನಂತರ ಮಸಾಲೆ ಬೆರೆಸಿಟ್ಟ ಸೀಗಡಿ ಮೀನನ್ನು ಹಾಕಿ ಚೆನ್ನಾಗಿ ಹುರಿಯಬೇಕು. ಅದು ಕೂಡ ಕಂದು ಬಣ್ಣ ಬಂದ ಬಳಿಕ ತೆಂಗಿನ ತುರಿಯನ್ನು ಅದಕ್ಕೆ ಸೇರಿಸಿ ಮತ್ತೆ ಹುರಿಯಬೇಕು. ಅದು ಚೆನ್ನಾಗಿ ಮೀನಿನೊಂದಿಗೆ ಬೆರೆತು ಬೆಂದ ಬಳಿಕ ನಿಂಬೆ ರಸವನ್ನು ಹಾಕಿ ತಿರುಗಿಸಬೇಕು. ಆ ನಂತರ ಕೊತ್ತಂಬರಿ ಸೊಪ್ಪನ್ನು ಉದುರಿಸಿ ಇಳಿಸಿದರೆ ಕಾಯಿ ತುರಿ ಮಿಕ್ಸ್ ಸೀಗಡಿ ಫ್ರೈ ತಯಾರಾದಂತೆಯೇ.