ಮನೆಯಲ್ಲೇ ಮಾಡಿ ರುಚಿಯಾದ ಪ್ರಾನ್ಸ್ ಪಲಾವ್

ಮನೆಯಲ್ಲೇ ಮಾಡಿ ರುಚಿಯಾದ ಪ್ರಾನ್ಸ್ ಪಲಾವ್

LK   ¦    Jun 27, 2020 09:55:46 AM (IST)
ಮನೆಯಲ್ಲೇ ಮಾಡಿ ರುಚಿಯಾದ ಪ್ರಾನ್ಸ್ ಪಲಾವ್

ಪಲಾವ್ ಎಂದಾಕ್ಷಣ ಚಿಕನ್ ಮತ್ತು ಮಟಾನ್ ಪಲಾವ್ ನೆನಪಾಗುತ್ತದೆ. ಆದರೆ ಪ್ರಾನ್(ಸೀಗಡಿ)ನಿಂದಲೂ ರುಚಿಯಾದ ಪಲಾವ್ ಮಾಡಬಹುದಾಗಿದೆ. ಹಾಗಾದರೆ ಪ್ರಾನ್ ಪಲಾವ್ ಮಾಡುವುದು ಹೇಗೆ ಎಂಬುದರ ಮಾಹಿತಿ ಇಲ್ಲಿದೆ.

ಪ್ರಾನ್ ಪಲಾವ್‍ಗೆ ಬೇಕಾಗುವ ಪದಾರ್ಥಗಳು
ಪ್ರಾನ್- ಮುನ್ನೂರು ಗ್ರಾಂ
ಅಕ್ಕಿ(ಜೀರಾ/ಬಾಸುಮತಿ)- ಇನ್ನೂರೈವತ್ತು ಗ್ರಾಂ
ಎಣ್ಣೆ- ಅರ್ಧ ಬಟ್ಟಲು
ಉಪ್ಪು- ಮೂರು ಚಮಚೆ
ತೆಂಗಿನಹಾಲು- ಅರ್ಧ ಬಟ್ಟಲು
ಮೊಸರು- ಕಾಲು ಬಟ್ಟಲು
ಗರಂಮಸಾಲೆ-ಒಂದು ಟೀ ಚಮಚೆ
ಈರುಳ್ಳಿ- ದೊಡ್ಡದು ಒಂದು
ಬೆಳ್ಳುಳ್ಳಿ-ಶುಂಠಿಪೇಸ್ಟ್- ಒಂದು ಚಮಚೆ
ಟೊಮ್ಯಾಟೋ- ಎರಡು
ಹಸಿಮೆಣಸು- ಎರಡು
ಮೆಣಸಿನಪುಡಿ- ಎರಡು ಟೀ ಚಮಚೆ
ಅರಸಿನ- ಅರ್ಧ ಟೀ ಚಮಚೆ
ಕೊತ್ತಂಬರಿ ಸೊಪ್ಪು- ಸ್ವಲ್ಪ

ಮಾಡುವ ವಿಧಾನ ಹೀಗಿದೆ..
ಮೊದಲಿಗೆ ಪ್ರಾನ್ಸ್ ನಾಳ ತೆಗೆದು ಶುಚಿಗೊಳಿಸಿ ಅದಕ್ಕೆ ಅರಸಿನ ಮತ್ತು ಸ್ವಲ್ಪ ಉಪ್ಪು ಹಾಕಿ ಕಲೆಸಿ ಇಡಬೇಕು. ಈರುಳ್ಳಿ ಮತ್ತು ಟೊಮ್ಯಾಟೋವನ್ನು ಚಿಕ್ಕದಾಗಿ ಹಚ್ಚಿಕೊಳ್ಳಬೇಕು. ಕೊತ್ತಂಬರಿ ಸೊಪ್ಪನ್ನು ಕೂಡ ಹಚ್ಚಿಟ್ಟುಕೊಳ್ಳಬೇಕು. ಹಸಿ ಮೆಣಸನ್ನು ಅರ್ಧಕ್ಕೆ ಕತ್ತರಿಸಿ ಮಧ್ಯೆ ಸೀಳಬೇಕು. ಇನ್ನೊಂದೆಡೆ ಒಂದು ಚಮಚೆ ಉಪ್ಪು ಹಾಕಿ ಅನ್ನವನ್ನು ಸಂಪೂರ್ಣವಾಗಿ ಬೇಯಿಸದೆ ಮುಕ್ಕಾಲು ಭಾಗ ಬೇಯಿಸಿ ಬಸಿದಿಟ್ಟುಕೊಳ್ಳಬೇಕು.
ಆ ನಂತರ ಕುಕ್ಕರ್ ತೆಗೆದುಕೊಂಡು ಅದಕ್ಕೆ ಎಣ್ಣೆ ಹಾಕಿ ಕಾದ ಬಳಿಕ ಕತ್ತರಿಸಿದ ಈರುಳ್ಳಿಯನ್ನು ಹಾಕಿ ಹುರಿಯಬೇಕು. ಅದು ಕಂದು ಬಣ್ಣಕ್ಕೆ ಬರುತ್ತಿದ್ದಂತೆಯೇ ಟೊಮ್ಯಾಟೋ ಹಾಕಬೇಕು ಅದನ್ನು ಚೆನ್ನಾಗಿ ಹುರಿಯಬೇಕು ಅದು ಸಂಪೂರ್ಣ ಬೆಂದು ಮೃದುವಾಗುತ್ತಿದ್ದಂತೆಯೇ ಬೆಳ್ಳುಳ್ಳಿ ಶುಂಠಿ ಪೇಸ್ಟ್ ಹಾಕಿ ತಿರುಗಿಸಬೇಕು. ಅದಕ್ಕೆ ಹಸಿಮೆಣಸು, ಮೆಣಸಿನ ಪುಡಿ ಹಾಕಿ ಚೆನ್ನಾಗಿ ತಿರುಗಿಸಿ ನಂತರ ಪ್ರಾನ್‍ನ್ನು ಹಾಕಿ ಸ್ವಲ್ಪ ಹೊತ್ತು ಬೇಯಲು ಬಿಡಿ. ಬಳಿಕ ತೆಂಗಿನಹಾಲು ಮತ್ತು ಮೊಸರು ಹಾಕಿ ಎರಡು ನಿಮಿಷ ಬಿಟ್ಟು ಅದಕ್ಕೆ ಅನ್ನವನ್ನು ಹಾಕಿ ಚೆನ್ನಾಗಿ ತಿರುವಿ ಕಲೆಸಬೇಕು. ಇದಕ್ಕೆ ಉಪ್ಪು, ಕೊತ್ತಂಬರಿ ಸೊಪ್ಪು, ಗರಂ ಮಸಾಲ ಹಾಕಿ. ಬಳಿಕ ಮುಚ್ಚಳ ಮುಚ್ಚಿ ಎರಡು ನಿಮಿಷ ಹೆಚ್ಚು ಉರಿಯಲ್ಲಿಯೂ ನಂತರ ಹತ್ತು ನಿಮಿಷಗಳ ಕಾಲ ನಿಧಾನ ಉರಿಯಲ್ಲಿ ಬೇಯಿಸಬೇಕು. ನಂತರ ಇಳಿಸಿ. ಒಂದೈದು ನಿಮಿಷ ಬಿಟ್ಟು ಕುಕ್ಕರ್ ಮುಚ್ಚಳ ತೆಗೆದು ಸೌಟ್ ನಿಂದ ಚೆನ್ನಾಗಿ ಕಲೆಸಿದರೆ ಪ್ರಾನ್ ಪಲಾವ್ ಸಿದ್ಧವಾದಂತೆಯೇ.