ಕಾಫಿ ಜತೆಗೆ ಅವರೆ ಕಚೋರಿ ಸವಿಯಿರಿ

ಕಾಫಿ ಜತೆಗೆ ಅವರೆ ಕಚೋರಿ ಸವಿಯಿರಿ

LK   ¦    Mar 15, 2021 01:35:30 PM (IST)
ಕಾಫಿ ಜತೆಗೆ ಅವರೆ ಕಚೋರಿ ಸವಿಯಿರಿ

ಸಂಜೆಯ ಕಾಫಿ ಜತೆಗೆ ಏನಾದರು ತಿಂಡಿ ತಿನ್ನಬೇಕೆಂದು ಬಯಸುವವರು ಗರಿಗರಿಯಾದ ಬಿಸಿ, ಬಿಸಿ ಅವರೆ ಕಚೋರಿಯನ್ನು ಮನೆಯಲ್ಲಿಯೇ ಮಾಡಿ ಸವಿಯಬಹುದಾಗಿದೆ. ಹಾಗಾದರೆ ಅವರೆ ಕಚೋರಿಗೆ ಏನೇನು ಪದಾರ್ಥಗಳು ಬೇಕು ಮತ್ತು ಹೇಗೆ ತಯಾರಿಸುವುದು ಎಂಬುದರ ಕುರಿತ ಮಾಹಿತಿ ಇಲ್ಲಿದೆ.

ಬೇಕಾಗುವ ಪದಾರ್ಥಗಳ ವಿವರ

ಮೈದಾ: 150ಗ್ರಾಂ

ಅವರೆಕಾಳು: 100ಗ್ರಾಂ

ಉದ್ದಿನಬೇಳೆ: 50 ಗ್ರಾಂ

ಕಾರದ ಪುಡಿ: ಒಂದು ಟೀ ಚಮಚೆ

ದನಿಯಾಪುಡಿ: ಒಂದು ಟೀ ಚಮಚೆ

ಜೀರಿಗೆಪುಡಿ: ಎರಡು ಟೀ ಚಮಚೆ

ಗರಂಮಸಾಲೆ: ಒಂದು ಟೀ ಚಮಚೆ

ಗೋಡಂಬಿ, ಒಣದ್ರಾಕ್ಷಿ: ಸ್ವಲ್ಪ

ಉಪ್ಪು: ರುಚಿಗೆ ತಕ್ಕಷ್ಟು

ಇಂಗು ಮಿಶ್ರಿತ ನೀರು: ಒಂದು ಟೀ ಚಮಚೆ

ಎಣ್ಣೆ: ಕರಿಯಲು ಅಗತ್ಯವಿರುವಷ್ಟು

ತಯಾರಿಸುವ ವಿಧಾನ

ಮೊದಲಿಗೆ ಅವರೆಕಾಳು ಮತ್ತು ಉದ್ದಿನ ಬೇಳೆಯನ್ನು ಪ್ರತ್ಯೇಕ ಪಾತ್ರೆಯಲ್ಲಿ ಚೆನ್ನಾಗಿ ಬೇಯಿಸಿಕೊಳ್ಳಬೇಕು. ಅದು ಬೆಂದ ನಂತರ ನೀರನ್ನು ಬಸಿದು ತೆಗೆದು ಒಂದು ಪಾತ್ರೆಯಲ್ಲಿ ಹಾಕಿ ಆರಲು ಬಿಡಬೇಕು.

ಇನ್ನೊಂದು ಪಾತ್ರೆ ತೆಗೆದುಕೊಂಡು ಅದಕ್ಕೆ ಎರಡು ಟೀ ಚಮಚೆಯಷ್ಟು ಎಣ್ಣೆ ಹಾಕಿ ಬಿಸಿ ಮಾಡಬೇಕು ಅದಕ್ಕೆ ಅವರೆಕಾಳು ಮತ್ತು ಉದ್ದಿನ ಬೇಳೆಯನ್ನು ಹಾಕಿ ಚೆನ್ನಾಗಿ ಹುರಿಯಬೇಕು. ಅದರಲ್ಲಿದ್ದ ನೀರು ಆವಿಯಾದ ಬಳಿಕ ಅದಕ್ಕೆ ಇಂಗು ಮಿಶ್ರಿತ ನೀರು, ಉಪ್ಪು ಸೇರಿದಂತೆ ಎಲ್ಲ ಮಸಾಲೆ ಹಾಗೂ ಗೋಡಂಬಿ, ದ್ರಾಕ್ಷಿ ಹಾಕಿ ಮಿಶ್ರಣ ಮಾಡಿಕೊಳ್ಳಬೇಕು.

ಇನ್ನೊಂದು ಪಾತ್ರೆಯಲ್ಲಿ ಮೈದಾ ಹಿಟ್ಟನ್ನು ಚೆನ್ನಾಗಿ ನಾದಿ ಕಲೆಸಿಕೊಳ್ಳಬೇಕು. ಬಳಿಕ ಸಣ್ಣದಾಗಿ ಗೋಲಾಕಾರದ ಉಂಡೆಗಳನ್ನಾಗಿ ಮಾಡಿಕೊಳ್ಳಬೇಕು. ನಂತರ ಅದರೊಳಗೆ ಮೊದಲೇ ಮಾಡಿಟ್ಟುಕೊಂಡಿದ್ದ ಮಸಾಲೆ ಮಿಶ್ರಿತ ಅವರೆಕಾಳಿನ ಮಿಶ್ರಣವನ್ನು ಹಾಕಿ ಲಟ್ಟಿಸಬೇಕು. ಬಳಿಕ ಬಾಣಲೆಯಲ್ಲಿ ಎಣ್ಣೆ ಹಾಕಿ ಕಂದು ಬಣ್ಣ ಬರುವ ತನಕ ಕರಿದು ತೆಗೆದರೆ ಅವರೆಕಾಳು ಕಚೋರಿ ಸೇವಿಸಲು ರೆಡಿ.