ಸಿಂಪಲ್ ಚಿಲ್ಲಿ ಮಿಕ್ಸ್ ಸಿಗಡಿ ಫ್ರೈ.....

ಸಿಂಪಲ್ ಚಿಲ್ಲಿ ಮಿಕ್ಸ್ ಸಿಗಡಿ ಫ್ರೈ.....

LK   ¦    May 02, 2020 04:53:22 PM (IST)
ಸಿಂಪಲ್ ಚಿಲ್ಲಿ ಮಿಕ್ಸ್ ಸಿಗಡಿ ಫ್ರೈ.....

ಸೀಗಡಿಯಿಂದ ಹಲವು ರೀತಿಯ ಪದಾರ್ಥಗಳನ್ನು ತಯಾರಿಸಬಹುದಾಗಿದೆ. ಅದರಲ್ಲಿ ಚಿಲ್ಲಿ ಮಿಕ್ಸ್ ಸಿಗಡಿ ಫ್ರೈ ಒಂದಾಗಿದೆ. ಇದನ್ನು ತಯಾರು ಮಾಡಲು ಬೇಕಾಗುವ ಪದಾರ್ಥಗಳು ಮತ್ತು ಮಾಡುವ ವಿಧಾನ ಇಲ್ಲಿದೆ.

ಚಿಲ್ಲಿ ಮಿಕ್ಸ್ ಸಿಗಡಿ ಫ್ರೈಗೆ ಬೇಕಾಗುವ ಸಾಮಾನುಗಳು

ಸೀಗಡಿ- ಅರ್ಧ ಕೆಜಿ
ಕೆಂಪುಮೆಣಸು- ಆರು
ಬೆಳ್ಳುಳ್ಳಿ- ಆರು ಎಸಳು
ಜೀರಿಗೆಪುಡಿ- ಒಂದು ಟೀ ಚಮಚ
ಕರಿಮೆಣಸುಪುಡಿ- ಒಂದು ಟೀ ಚಮಚ
ಅರಸಿನಪುಡಿ- ಅರ್ಧ ಟೀ ಚಮಚ
ಉಪ್ಪು- ಒಂದು ಟೀ ಚಮಚ
ವಿನೆಗಾರ್- ಎರಡು ಟೇಬಲ್ ಚಮಚ
ಕೊತ್ತಂಬರಿ ಸೊಪ್ಪು- ಸ್ವಲ್ಪ
ಎಣ್ಣೆ- ಮೂರು ಟೇಬಲ್ ಚಮಚ

ಚಿಲ್ಲಿ ಮಿಕ್ಸ್ ಸಿಗಡಿ ಫ್ರೈ ತಯಾರಿಸುವುದು ಹೇಗೆ?

ಮೊದಲಿಗೆ ಸಿಗಡಿ ಮೀನನ್ನು ಶುಚಿಗೊಳಿಸಿಟ್ಟುಕೊಳ್ಳಬೇಕು. ಇನ್ನೊಂದೆಡೆ ಕೆಂಪು ಮೆಣಸನ್ನು ತುಂಡು ಮಾಡಿ, ಬೆಳ್ಳುಳ್ಳಿಯನ್ನು ಜಜ್ಜಿಟ್ಟುಕೊಳ್ಳಬೇಕು.

ಆ ನಂತರ ಒಂದು ಪಾತ್ರೆಯನ್ನು ಒಲೆ ಮೇಲಿಟ್ಟು ಅದಕ್ಕೆ ಎಣ್ಣೆ ಹಾಕಬೇಕು. ಅದು ಕಾದ ಬಳಿಕ ಅದಕ್ಕೆ ತುಂಡು ಮಾಡಿಟ್ಟ ಕೆಂಪು ಮೆಣಸನ್ನು ಹಾಕಬೇಕು. ಅದು ತೆಳು ಕಂದು ಬಣ್ಣ ಬರುವವರೆಗೆ ಹುರಿಯಬೇಕು. ಬಳಿಕ ಅದಕ್ಕೆ ಜಜ್ಜಿದ ಬೆಳ್ಳುಳ್ಳಿಯನ್ನು ಹಾಕಿ ಒಂದು ನಿಮಿಷದ ಕಾಲ ಹುರಿಯಬೇಕು. ನಂತರ ಸಿದ್ದಪಡಿಸಿಟ್ಟುಕೊಂಡಿದ್ದ ಜೀರಿಗೆ, ಮೆಣಸಿನಪುಡಿ, ಅರಸಿನವನ್ನು ಅದಕ್ಕೆ ಹಾಕಿ ಮಿಕ್ಸ್ ಮಾಡಿ ಆ ನಂತರ ಸಿಗಡಿಯನ್ನು ಹಾಕಿ ಸ್ವಲ್ಪ ನೀರು ಮತ್ತು ಉಪ್ಪು ಹಾಕಿ ಬೇಯಿಸಿ ಅದು ಬೆಂದ ನಂತರ ಅದರ ಮೇಲೆ ವಿನೆಗಾರ್ ಹಾಕಿ ತಿರುಗಿಸಿ ಒಂದು ನಿಮಿಷ ಬಿಟ್ಟು ಕೊತ್ತಂಬರಿ ಸೊಪ್ಪು ಉದುರಿಸಿ ಬಳಿಕ ಒಲೆಯಿಂದ ಇಳಿಸಿದರೆ ಚಿಲ್ಲಿ ಮಿಕ್ಸ್ ಸಿಗಡಿ ಫ್ರೈ ರೆಡಿಯಾದಂತೆಯೇ....