ಮನಶ್ಶಾಸ್ತ್ರಜ್ಞರೊಂದಿಗೆ ಎಷ್ಟು ಅವಧಿಯ ಸಮಾಲೋಚನೆ ಅಗತ್ಯವಿದೆ?

ಮನಶ್ಶಾಸ್ತ್ರಜ್ಞರೊಂದಿಗೆ ಎಷ್ಟು ಅವಧಿಯ ಸಮಾಲೋಚನೆ ಅಗತ್ಯವಿದೆ?

Oct 18, 2020 12:27:00 PM (IST)
ಮನಶ್ಶಾಸ್ತ್ರಜ್ಞರೊಂದಿಗೆ ಎಷ್ಟು ಅವಧಿಯ ಸಮಾಲೋಚನೆ ಅಗತ್ಯವಿದೆ?

ಇದು ಸಾಮಾನ್ಯವಾಗಿ ಕೇಳಲಾಗುವ ಪ್ರಶ್ನೆ. ಕೌನ್ಸೆಲಿಂಗ್ ಮತ್ತು ಸೈಕೋಥೆರಪಿ (ಮನೋಚಿಕಿತ್ಸೆ) ಬಗ್ಗೆ ಬಹಳಷ್ಟು ಜನರಿಗೆ ತಮ್ಮದೇ ಆದ ಅನುಮಾನಗಳಿವೆ ಹೆಚ್ಚಿನ ಜನರಿಗೆ ಕೌನ್ಸೆಲಿಂಗ್ ಪ್ರಕ್ರಿಯೆಯ ಪರಿಚಯವಿಲ್ಲ ಎಂಬುದು ನಿಜ. ಅನೇಕರ ನಿರೀಕ್ಷೆ ಏನಿರುತ್ತದೆಂದರೆ, ಒಂದೇ ವೈಯಕ್ತಿಕ  ಸಮಾಲೋಚನೆಯಲ್ಲಿ ಸಮಸ್ಯೆ ಪರಿಹಾರವಾಗಬೇಕು ಎಂದು. ಮೊದಲಿಗೆ ಕೌನ್ಸೆಲಿಂಗ್ ಅನ್ನುವುದನ್ನು ಅರ್ಥ ಮಾಡಿಕೊಳ್ಳೋಣ. 

ಕೌನ್ಸೆಲಿಂಗ್ ಅಥವಾ ವೈಯಕ್ತಿಕ ಸಮಾಲೋಚನೆ ಒಂದು ಪ್ರಕ್ರಿಯೆ. ಆ ಪ್ರಕ್ರಿಯೆಯಲ್ಲಿ, ಮನಶ್ಶಾಸ್ತ್ರಜ್ಞನು ಒಬ್ಬ ವ್ಯಕ್ತಿಯ ಸಮಸ್ಯೆಗಳನ್ನು ಆತನಿಗೆ /ಆಕೆಗೆ  ವಿವಿಧ ದೃಷ್ಟಿಕೋನಗಳಿಂದ ನೋಡಲು ಅನುಕೂಲ ಮಾಡಿಕೊಡುತ್ತಾನೆ ಮತ್ತು ನಂತರ ಮೂಲ ಕಾರಣವನ್ನು ನೋಡುತ್ತಾನೆ. ಈ ಪ್ರಕ್ರಿಯೆಯು ಅನೇಕ ವಿಷಯಗಳ ಮೇಲೆ ಅವಲಂಬಿತವಾಗಿರುತ್ತದೆ. ಒಂದು ಚಿಕಿತ್ಸೆಗೆ ಬಂದವನ ಇಚ್ಛಾಶಕ್ತಿ; ಚಿಕಿತ್ಸಕನೊಂದಿಗೆ ಹಂಚಲಾದ ವಿವರಗಳ ನೈಜತೆ; ವ್ಯಕ್ತಿಯು ಪ್ರಸ್ತುತ ಇರುವ ಪರಿಸ್ಥಿತಿ ಅಥವಾ ಸಂದರ್ಭಗಳು; ಬಗೆಹರಿಸಬೇಕಾಗಿರುವ ಸಮಸ್ಯೆಗಳು ಮತ್ತು ಅವುಗಳ ಸಂಕೀರ್ಣತೆ; ಮನಃಶಾಸ್ತ್ರಜ್ಞರು ಹೇಳಿದ ಸಲಹೆ ಮತ್ತು ಕೆಲವು ಅಭ್ಯಾಸಗಳನ್ನು ಎಷ್ಟರ ಮಟ್ಟಿಗೆ ಕಾರ್ಯಗತಗೊಳಿಸುತ್ತಾರೆ ಎನ್ನುವುದು; ಚಿಕಿತ್ಸಕನ ಕೌಶಲ್ಯ ಮುಂತಾದ ಅನೇಕ ವಿಚಾರಗಳನ್ನು ನಾವು ಗಮನಿಸಬೇಕಾಗುತ್ತದೆ. ಆದ್ದರಿಂದ, ಎಷ್ಟು ಸೆಷನ್‌ಗಳು ಬೇಕಾಗುತ್ತವೆ ಎಂಬುದರ ಕುರಿತು ನಿರ್ದಿಷ್ಟ ಸಂಖ್ಯೆಯನ್ನು ಮೊದಲೇ ಹೇಳಲು ಸಾಧ್ಯವಿಲ್ಲ. 

ಈ ಪ್ರಶ್ನೆಯ ಹಿಂದೆ ಇರುವ ಇನ್ನೊಂದು ಕಾರಣವೆಂದರೆ ಪ್ರಯಾಣದ್ದು! ಅನೇಕ ಬಾರಿ ವೈಯಕ್ತಿಕ ಸಮಾಲೋಚನೆಗೆ ಹೋಗಬೇಕಾದರೆ ಅದು ಎಲ್ಲಿ ಕಷ್ಟವಾಗಿ ಬಿಡುತ್ತದೋ ಎಂಬ ಭಯ. 

ಪ್ರಸ್ತುತ, ನನ್ನನ್ನೂ ಸೇರಿದಂತೆ ಆನ್‌ಲೈನ್ ಸಮಾಲೋಚನೆಗಳನ್ನು ಒದಗಿಸುವ ಅನೇಕ ಮನಶ್ಶಾಸ್ತ್ರಜ್ಞರಿದ್ದಾರೆ. ಇದರಿಂದ ನಾವು ಅನಗತ್ಯ ಪ್ರಯಾಣದ ಸಮಯ ಮತ್ತು ವೆಚ್ಚವನ್ನು ಕಡಮೆ ಮಾಡಬಹುದು. 

ಇವುಗಳ ಜೊತೆಗೆ ಇನ್ನೊಂದು ವಿಷಯ ನಾವು ಅರ್ಥ ಮಾಡಿಕೊಳ್ಳಬೇಕಿರುವುದೆಂದರೆ, ಸಮಾಲೋಚನೆಗಳ ಸಂಖ್ಯೆಯ ಜೊತೆಗೆ ಅದು ಎಷ್ಟು ಪರಿಣಾಮಕಾರಿಯಾಗಿ ಸಾಗುತ್ತದೆ ಎಂಬುದು. ಹಾಗಾಗಿ ಯಾವಾಗ ಒಬ್ಬ ವ್ಯಕ್ತಿ ಮನಃಶಾಸ್ತ್ರಜ್ಞರ ಬಳಿ ವೈಯಕ್ತಿಕ ಸಮಾಲೋಚನೆಗೆ ಹೋಗುತ್ತಾನೋ, ಆವಾಗ ಅದಕ್ಕೆ ಪೂರ್ಣವಾಗಿ ಒಡ್ಡಿಕೊಳ್ಳಬೇಕು ಮತ್ತು ಕೊಟ್ಟಿರುವ ಸಲಹೆಗಳನ್ನು ಪಾಲಿಸಬೇಕು. ಆವಾಗಲೇ ಸಮಸ್ಯೆಗಳಿಗೆ ಪರಿಹಾರಗಳನ್ನು ಕಂಡುಕೊಳ್ಳಲು ಸಾಧ್ಯ. ಕೌನ್ಸೆಲಿಂಗ್ ನಲ್ಲೂ ಬೇರೆ ಬೇರೆ ವಿಧಗಳಿವೆ. ಅವುಗಳ ಕುರಿತು ಇನ್ನೊಂದು ದಿನ ಚರ್ಚಿಸುತ್ತೇನೆ.