ನನಗೆ ಉತ್ತಮ ಸೈಕೊಲಾಜಿಸ್ಟ್ ಯಾರು ಎಂದು ಕಂಡುಹಿಡಿಯುವುದು ಹೇಗೆ!?

ನನಗೆ ಉತ್ತಮ ಸೈಕೊಲಾಜಿಸ್ಟ್ ಯಾರು ಎಂದು ಕಂಡುಹಿಡಿಯುವುದು ಹೇಗೆ!?

Akshara Damle   ¦    Nov 08, 2020 06:56:25 AM (IST)
ನನಗೆ ಉತ್ತಮ ಸೈಕೊಲಾಜಿಸ್ಟ್ ಯಾರು ಎಂದು ಕಂಡುಹಿಡಿಯುವುದು ಹೇಗೆ!?
ಇದು ಉತ್ತರಿಸಲು ತುಂಬಾ ಕಷ್ಟಕರವಾದ ಪ್ರಶ್ನೆಯಾಗಿದೆ. ಏಕೆಂದರೆ ಮನಶ್ಶಾಸ್ತ್ರಜ್ಞನ ಕೌಶಲ್ಯಗಳು ಎಷ್ಟೇ ಇದ್ದರೂ "ನಿಮಗಾಗಿ ಉತ್ತಮ ಮನಶ್ಶಾಸ್ತ್ರಜ್ಞ ಯಾರು" ಎಂಬ ಪ್ರಶ್ನೆಗೆ ಉತ್ತರ ಇತರ ಹಲವು ಅಂಶಗಳನ್ನು ಅವಲಂಬಿಸಿರುತ್ತದೆ.  
 
ಉದಾಹರಣೆಗೆ, ಒಬ್ಬ ವ್ಯಕ್ತಿಗೆ ಒಬ್ಬ ಮನಶ್ಶಾಸ್ತ್ರಜ್ಞರೊಂದಿಗೆ ತಮ್ಮ ಸಮಸ್ಯೆಗಳನ್ನು ಹಂಚಿಕೊಳ್ಳುವುದು ಸುಲಭ ಸಾಧ್ಯವಾಗಬಹುದು. ಆದರೆ ಇನ್ನೊಬ್ಬ ವ್ಯಕ್ತಿಗೆ ಅದೇ ಮನಶ್ಶಾಸ್ತ್ರಜ್ಞನೊಂದಿಗೆ ಅಷ್ಟೇ ಸುಲಭವಾಗಿ ತನ್ನ ಸಮಸ್ಯೆಗಳನ್ನು ಹಂಚಿಕೊಳ್ಳಲು ಸಾಧ್ಯವಾಗದೇ ಇರಬಹುದು. ಸಮಾಲೋಚನೆ (ಕೌನ್ಸೆಲಿಂಗ್) ಮತ್ತು ಮಾನಸಿಕ ಚಿಕಿತ್ಸೆಯಲ್ಲಿ ವೈಜ್ಞಾನಿಕ ಅಥವಾ ಪುರಾವೆ ಆಧಾರಿತ ವಿಧಾನಗಳು ಲಭ್ಯವಿದ್ದರೂ, ಅದನ್ನು ಬಳಸುವ ವಿಧಾನ ಮತ್ತು ವ್ಯಕ್ತಿಯ ಮೇಲೆ ಅದು ಪರಿಣಾಮ ಬೀರುವುದರ ಹಿಂದೆ  ವೈಯಕ್ತಿಕ ಅಂಶಗಳು ಒಳಗೊಂಡಿರುತ್ತವೆ.
 
ಕೆಲವೊಮ್ಮೆ ಯಾವ ಕ್ರಮ ಪರಿಣಾಮಕಾರಿಯಾಗಿದೆ ಮತ್ತು ಯಾವುವು ಪರಿಣಾಮಕಾರಿಯಾಗಿಲ್ಲ ಎಂಬುವುದನ್ನು ಕಂಡುಹಿಡಿಯಲು ಒಂದೆರಡು ಸೆಷನ್‌ಗಳು ಬೇಕಾಗಬಹುದು.
 
ಕೆಲವರು ಒಂದು ಅಥವಾ ಎರಡು ಸೆಷನ್ ಗಳಲ್ಲೇ ಸೈಕಾಲಜಿಸ್ಟ್ ಗಳನ್ನು ಬದಲಾಯಿಸುತ್ತಾರೆ. ಮೊದಲ ಸೆಷನ್ ನಲ್ಲಿಯೇ ನಿಮಗೆ ಸೈಕಾಲಜಿಸ್ಟ್ ಬಳಿ ತೆರೆದುಕೊಳ್ಳಲು ಸಾಧ್ಯವಾಗುತ್ತದೋ ಇಲ್ಲವೋ ಎಂಬುವುದು ಅರ್ಥವಾಗುತ್ತದಾದರೂ, ಕೆಲವೊಂದು ಬಾರಿ ಕೌನ್ಸೆಲಿಂಗ್ ಅನ್ನುವ ಪ್ರಕ್ರಿಯೆಯಲ್ಲಿ ತೊಡಗಿಕೊಳ್ಳಲು ತಮಗೆ ತಾವು ಸಮಯವನ್ನು ಕೊಡಬೇಕು.
 
ಆದ್ದರಿಂದ, ನಿಮಗಾಗಿ ಉತ್ತಮ ಚಿಕಿತ್ಸಕ ಯಾರು ಎಂಬ ಪ್ರಶ್ನೆಗೆ ಉತ್ತರವನ್ನು ಪ್ರಯತ್ನಿಸಿಯೇ ಕಂಡುಕೊಳ್ಳಬೇಕು.
 
ಸಲಹೆಗಳನ್ನು ಪಡೆದುಕೊಳ್ಳಲು ಬಂದ ವ್ಯಕ್ತಿಗೆ  ತೆರೆದುಕೊಳ್ಳಲು ಆರಾಮದಾಯಕವಾದ ಜಾಗವನ್ನು ರಚಿಸುವಲ್ಲಿ ಮನಶ್ಶಾಸ್ತ್ರಜ್ಞನ ಕೌಶಲ್ಯಗಳು ಮುಖ್ಯವಾಗುತ್ತವೆ ಎಂಬುದು ಕೂಡಾ ಗಮನಿಸಬೇಕಾದ ಅಂಶ.
 
ಮತ್ತು ಮನೋವಿಜ್ಞಾನದಲ್ಲಿ 'ಒಂದೇ ಮಾದರಿ ಎಲ್ಲಾ ಕಡೆಗೂ ಸಲ್ಲುತ್ತದೆ' ಸೂತ್ರವು ಕಾರ್ಯನಿರ್ವಹಿಸುವುದಿಲ್ಲ. ದೈಹಿಕ ಆರೋಗ್ಯದ ವಿಷಯದಲ್ಲಿ ಉದಾಹರಣೆ ತೆಗೆದುಕೊಳ್ಳುವುದಾದರೆ, ವೈದ್ಯರು ಬೇರೆ ಬೇರೆ ಜನರಿಗೆ ಜ್ವರಕ್ಕೆ ಒಂದೇ ಮದ್ದನ್ನು ಕೊಡಬಹುದು. ಆದರೆ ಮಾನಸಿಕ ಅಸ್ವಸ್ಥತೆಯನ್ನು ಶುಶ್ರೂಷೆ ಮಾಡಲು ಆ ಮಾದರಿ ಪ್ರಯೋಜನಕಾರಿಯಾಗುವುದಿಲ್ಲ.
 
ನಮ್ಮ ಜೀವನದಲ್ಲಿ ಸಹ, ವಿಭಿನ್ನ ಸಮಸ್ಯೆಗಳನ್ನು ನಿಭಾಯಿಸಲು ನಮ್ಮದೇ ಆದ ಆಯ್ಕೆಗಳಿವೆ. ಉದಾಹರಣೆಗೆ, ಕೆಲವರಿಗೆ ಅತಿಯಾದ ಚಿಂತೆ ಆದಾಗ  ಲಾಂಗ್ ಡ್ರೈವ್‌ಗೆ ಹೋದರೆ ಮನಸ್ಸು ಹಗುರವೆನಿಸಬಹುದು. ಇನ್ನೊಬ್ಬ ವ್ಯಕ್ತಿಗೆ ಸುದೀರ್ಘವಾಗಿ ನಡೆಯುವುದರಿಂದ ಮನಸ್ಸಿಗೆ ನೆಮ್ಮದಿ ಸಿಗಬಹುದು ಮತ್ತು ಇನ್ನು ಕೆಲವರಿಗೆ  ಚೆನ್ನಾಗಿ ತಿಂದಾಗ ಸಮಾಧಾನವೆನಿಸಬಹುದು.
 
ಖಿನ್ನತೆ, ಆತಂಕ, ಅಥವಾ ಭಯ ಮುಂತಾದ ಹೆಸರುಗಳು ಒಂದೇ ಇದ್ದರೂ ಅವುಗಳನ್ನು ಪರಿಹರಿಸುವ ವಿಧಾನಗಳು ಸಂಪೂರ್ಣವಾಗಿ ಭಿನ್ನವಾಗಿರುತ್ತವೆ.
ಹಾಗಾಗಿ ಕೌನ್ಸೆಲಿಂಗ್ ಮತ್ತು ಮನೋಚಿಕಿತ್ಸೆಯ ಪ್ರಕ್ರಿಯೆಯು ಪ್ರತಿಯೊಬ್ಬ ವ್ಯಕ್ತಿಯಿಂದ ವ್ಯಕ್ತಿಗೆ ಮಾರ್ಪಾಡಾಗುತ್ತದೆ.
 
ಕೌನ್ಸೆಲಿಂಗ್ ಮತ್ತು ಸೈಕೋಥೆರಪಿ ಜಾಗದಲ್ಲಿ ವಿಷಯಗಳು ಹೆಚ್ಚು ಸಾವಯವವಾಗಿ ನಡೆಯುತ್ತವೆ.