ಡೋಪಮೈನ್ ಡಿಟಾಕ್ಸ್ ಬಗ್ಗೆ ನಿಮ್ಮ ಅಭಿಪ್ರಾಯವೇನು?

ಡೋಪಮೈನ್ ಡಿಟಾಕ್ಸ್ ಬಗ್ಗೆ ನಿಮ್ಮ ಅಭಿಪ್ರಾಯವೇನು?

AKSHARA DAMLE   ¦    Nov 22, 2020 10:01:16 AM (IST)
ಡೋಪಮೈನ್ ಡಿಟಾಕ್ಸ್ ಬಗ್ಗೆ ನಿಮ್ಮ ಅಭಿಪ್ರಾಯವೇನು?

ಪ್ರಾಮಾಣಿಕವಾಗಿ ಹೇಳುವುದಾದರೆ,'ಡೋಪಮೈನ್ ಡಿಟಾಕ್ಸ್' ಎಂಬ ಪದವು ನನಗೆ ತಿಳಿದಿರಲಿಲ್ಲ. ಆದರೆ ಈ ಪ್ರಶ್ನೆ ಬಂದಾಗ, ನಾನು ಈ ಪರಿಕಲ್ಪನೆಯನ್ನು ಅನ್ವೇಷಿಸಲು ಯೋಚಿಸಿದೆ. ಅದರ ಕುರಿತು ತಿಳಿದುಕೊಳ್ಳುತ್ತಾ ಹೋದಂತೆ ನಾನು ಅದನ್ನು ಕೆಲವು ಬಾರಿ ಅಭ್ಯಾಸ ಮಾಡಿದ್ದೇನೆ ಮತ್ತು ಅವುಗಳು ಹೇಗೆ ನನ್ನ ಮನಸ್ಸು ಮತ್ತು ದೇಹದ ಮೇಲೆ ಉತ್ತಮ ಪರಿಣಾಮ ಬೀರಿವೆ ಎಂಬುವುಕ್ಕೆ ಸಾಕ್ಷಿಯಾಗಿದ್ದೇನೆ ಎಂಬುದನ್ನು ಮನಗಂಡೆ. 

ಇದು ತುಂಬಾ ಆಸಕ್ತಿದಾಯಕ ವಿಚಾರ. ಇಲ್ಲಿ, ಒಬ್ಬರು ನಿರ್ದಿಷ್ಟವಾಗಿ ಹೆಚ್ಚಿನ ಆನಂದವನ್ನು ನೀಡುವ ಅಥವಾ ಮೆದುಳಿಗೆ ಹೆಚ್ಚಿನ ಪ್ರಚೋದನೆಯನ್ನು ನೀಡುವ ಚಟುವಟಿಕೆಗಳಿಂದ ತಮ್ಮನ್ನು ತಾವು ದೂರವಾಗಿಸಿಕೊಳ್ಳಬೇಕು. ವಿಶೇಷವಾಗಿ ಪ್ರಸ್ತುತ ಕಾಲದಲ್ಲಿ, ಇದು ಮುಖ್ಯವಾಗಿ ಸ್ಮಾರ್ಟ್‌ಫೋನ್, ಅಥವಾ ಇತರೆ ಇಲೆಕ್ಟ್ರಾನಿಕ್ ಉಪಕರಣಗಳ ಕಾರಣದಿಂದ ಹೆಚ್ಚಾಗಿರುವ 'ಸ್ಕ್ರೀನ್ ಟೈಮ್', ಅಥವಾ ಸಂಗೀತವನ್ನು ಕೇಳುವುದು ಅಥವಾ ನಿಮಗೆ ಸಂತೋಷ ಕೊಡುವಂತಹ ಇತರೆ ಯಾವುದೇ ಚಟುವಟಿಕೆಗಳಿಂದ ತನ್ನನ್ನು ತಾನು ಪ್ರತ್ಯೇಕಿಸಿಕೊಳ್ಳಬೇಕು.

ಡೋಪಮೈನ್ ಡಿಟಾಕ್ಸ್ ನಲ್ಲಿ ಹೆಚ್ಚಿನ ಸಮಯವನ್ನು ಪ್ರಕೃತಿಯೊಂದಿಗೆ ಕಳೆಯಬೇಕು. ತನ್ಮೂಲಕ ಸುತ್ತಮುತ್ತಲಿನ ಪರಿಸರದೊಂದಿಗೆ ನಮ್ಮ ಸೂಕ್ಷ್ಮ ಸಂವೇದನೆಯನ್ನು ಹೆಚ್ಚಿಸಿಕೊಳ್ಳಬೇಕು. ಜೊತೆಗೆ, ಇತರೆ ಚಟುವಟಿಕೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು. ಉದಾಹರಣೆಗೆ ಅಡುಗೆ ಮಾಡುವುದು, ತೋಟಗಾರಿಕೆ, ಶುಚಿಗೊಳಿಸುವಿಕೆ ಮುಂತಾದ ಕಾರ್ಯಗಳಲ್ಲಿ ಮಗ್ನರಾಗಿ ಅವುಗಳಲ್ಲಿ ಸಂತೋಷವನ್ನು ಪಡೆಯಬೇಕು. ಈ ರೀತಿ ಮಾಡುವುದರಿಂದ ಮನಸ್ಸಿಗೆ ಅತೀ ಅಗತ್ಯವಾದ ಶಾಂತಿ, ನೆಮ್ಮದಿಯೂ ಸಿಗುತ್ತದೆ. ಹಾಗೆಯೇ, ಒತ್ತಡ, ಆತಂಕ, ದುಃಖ ಇತ್ಯಾದಿಗಳನ್ನು ಕಡಿಮೆ ಮಾಡಲು ಸಹ ಇದು ಸಹಾಯ ಮಾಡುತ್ತದೆ.

ಹೇಗೆ ಮಾಡುವುದು? 

ನೀವು ಮೊಬೈಲ್ ನೆಟ್‌ವರ್ಕ್ ಇಲ್ಲದ ಗ್ರಾಮೀಣ ಪ್ರದೇಶಕ್ಕೆ ಹೋಗಿ. ನಿಮ್ಮ ಯಾವುದೇ ಎಲೆಕ್ಟ್ರಾನಿಕ್ ಸಾಧನಗಳಲ್ಲಿ ವೀಡಿಯೊಗಳು ಅಥವಾ ಚಲನಚಿತ್ರಗಳು ಇಲ್ಲದಿರಲಿ.   ಡಿಜಿಟಲ್ ಸಾಧನಗಳಿಂದ ಸಂಪೂರ್ಣವಾಗಿ ಮುಕ್ತರಾಗಿ. ಆವಾಗ ಆತ್ಮಾವಲೋಕನ ಮಾಡಿಕೊಳ್ಳಲು, ತಿದ್ದಿಕೊಳ್ಳಲು ಅವಕಾಶವಾಗುತ್ತದೆ. 

ನಾನು ಹಲವಾರು ಬಾರಿ ಈ ರೀತಿಯ ಪ್ರಯೋಗಗಳನ್ನು ಮಾಡಿದ್ದೇನೆ. ಮತ್ತು ಅವುಗಳ ಪ್ರಯೋಜನವನ್ನು ಪಡೆದಿದ್ದೇನೆ. ಈ ವಿಧಾನವು ನಿಮ್ಮತನವನ್ನು ಹುಡುಕಿಕೊಳ್ಳಲು ಬಹಳ ಉಪಯುಕ್ತ.