ಕೋಪ - ತಾಳ್ಮೆ

ಕೋಪ - ತಾಳ್ಮೆ

Jan 31, 2021 11:08:46 AM (IST)
ಕೋಪ - ತಾಳ್ಮೆ
ಜೊತೆಗೆ ಕೆಲಸ ಮಾಡುತ್ತಿದ್ದ ಮಹಿಳೆಯರ ಗುಂಪು ಇತ್ತು. ಅವರಲ್ಲಿ, ಒಬ್ಬ ಮಹಿಳೆ ಯಾವಾಗಲೂ ನಸುನಗುತ್ತಾ, ಎಲ್ಲಾ ಸವಾಲುಗಳನ್ನು ತನ್ನ ಮೇಲೆ ತಾನೇ ತೆಗೆದುಕೊಳ್ಳುತ್ತಾ ತುಂಬಾ ಶಾಂತ ಸ್ವಭಾವದ ವ್ಯಕ್ತಿಯಾಗಿ ಗುರುತಿಸಿಕೊಂಡಿದ್ದಳು. ಆದ್ದರಿಂದ ಇತರರು ಆಕೆ ಅತ್ಯಂತ ತಾಳ್ಮೆಯ ವ್ಯಕ್ತಿ ಎಂದು ಭಾವಿಸಿದ್ದರು, ಮತ್ತು ಅವರೆಲ್ಲರೂ ಅವಳು ಎಂದಿಗೂ ಕೋಪಗೊಳ್ಳುವುದಿಲ್ಲ ಎಂದು ನಂಬಿದ್ದರು.
 
ಆದರೆ ಒಂದು ಬಾರಿ ಈ ಗುಂಪು ಒಂದು ತರಬೇತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿತು. ಆ ಕಾರ್ಯಾಗಾರದಲ್ಲಿ ಈ ಶಾಂತ ಚಿತ್ತದ ಮಹಿಳೆಗೂ ಕೋಪದ ಸಮಸ್ಯೆಗಳಿವೆ ಎಂದು ಗುರುತಿಸಲಾಯಿತು. ಇದನ್ನು ಮತ್ತಷ್ಟು ಪರಿಶೋಧಿಸಿದಾಗ ಅವಳು ಅನೇಕ ವಿಷಯಗಳ ಬಗ್ಗೆ ಕೋಪಗೊಂಡಿದ್ದಳು.  ಆದರೆ ಅವಳ ಕೋಪದ ಭಾವನೆಗಳನ್ನು ಅದುಮಿಟ್ಟುಕೊಂಡಿದ್ದಳು ಮತ್ತು ಕೆಲವು ವಿಷಯಗಳ ಬಗ್ಗೆ ಅವಳು ಕೋಪಗೊಂಡಿದ್ದಾಳೆಂದು ಎಂದಿಗೂ ತೋರಿಸಿರಲಿಲ್ಲ.
 
ಆಕೆಗೆ ಕೋಪವನ್ನು ವ್ಯಕ್ತಪಡಿಸಲು ಮುಕ್ತ ಅವಕಾಶ ಕೊಟ್ಟಾಗ ಅನೇಕ ವಿಷಯಗಳು ಹೊರಬರಲು ಪ್ರಾರಂಭಿಸಿದವು. ಆಕೆಯೊಳಗೆ ತುಂಬಾ ಕೋಪವಿದೆ ಎಂದು ತಿಳಿದ ಗುಂಪಿನ ಸದಸ್ಯರು ಆಶ್ಚರ್ಯಚಕಿತರಾದರು. 
 
ತಾಳ್ಮೆಯನ್ನು ನಾವೆಲ್ಲರೂ ನಮ್ಮೊಳಗೆ ಬೆಳೆಸಿಕೊಳ್ಳಬೇಕಾದ ಸದ್ಗುಣವೆಂದು ಪರಿಗಣಿಸುತ್ತೇವೆ. ಕೋಪವನ್ನು ನಕಾರಾತ್ಮಕ ಭಾವನೆ ಎಂದು ಪರಿಗಣಿಸಲಾಗುತ್ತದೆ. ಆದರೆ ಕೋಪವನ್ನು ನಿಯಂತ್ರಿಸುವುದು ಮತ್ತು  ತಾಳ್ಮೆಯನ್ನು ಬೆಳೆಸಿಕೊಳ್ಳುವುದು ಇವೆರಡೂ ಸುಲಭದ  ಕೆಲಸವಲ್ಲ! ಆದ್ದರಿಂದ, ಬಹಳಷ್ಟು ಜನರು ತಮ್ಮ ಕೋಪದ ಭಾವನೆಗಳನ್ನು ನಿಗ್ರಹಿಸಲು ಪ್ರಾರಂಭಿಸುತ್ತಾರೆ. ಇದು ವ್ಯಕ್ತಿಗಳಿಗೆ ಆರೋಗ್ಯಕರವಲ್ಲ. ಆದ್ದರಿಂದ ನಮ್ಮ ಕೋಪವನ್ನು ವ್ಯಕ್ತಪಡಿಸಲು ಆರೋಗ್ಯಕರ ಮಾರ್ಗಗಳನ್ನು ನಾವು ಕಂಡುಕೊಳ್ಳಬೇಕು. ಇಲ್ಲದಿದ್ದರೆ, ನೀವು ಹೊರಗಿನ ಪ್ರಪಂಚಕ್ಕೆ ತಾಳ್ಮೆಯಿಂದ ಕಾಣಿಸಿಕೊಂಡರೂ, ನಿಮ್ಮೊಳಗೆ ನೀವು ಜ್ವಾಲಾಮುಖಿಯನ್ನು ನಿರ್ಮಿಸುತ್ತಿರುತ್ತೀರಿ!