ಆಹಾರ ತಂತ್ರಜ್ಞಾನ ಪದವಿಗಿದೆ ವಿಫುಲ ಅವಕಾಶಗಳು

ಆಹಾರ ತಂತ್ರಜ್ಞಾನ ಪದವಿಗಿದೆ ವಿಫುಲ ಅವಕಾಶಗಳು

Ashok K. G. Mijar   ¦    Nov 10, 2020 09:02:50 AM (IST)
ಆಹಾರ ತಂತ್ರಜ್ಞಾನ ಪದವಿಗಿದೆ ವಿಫುಲ ಅವಕಾಶಗಳು

ಆಹಾರ ನಮ್ಮ ಬದುಕಿನ ದೈನಂದಿನ ವಿಷಯ. ಯಾವ ವರ್ಗದ ಜನರೇ ಇರಲಿ; ಬದುಕಬೇಕೆಂದಲ್ಲಿ ಆಹಾರ ಸೇವಿಸಲೇ ಬೇಕಲ್ಲವೇ? ತಾನು ಸಸ್ಯಾಹಾರಿ, ಮಾಂಸಾಹಾರಿಯಾಗಿದ್ದರೂ ಆಗಿರಲಿ; ಭೂಮಿ ಮೇಲೆ ಎಲ್ಲೇ ಇರಲಿ, ಪ್ರತಿದಿನವೂ ಮಾನವನಿಗೆ ಆಹಾರದ ಅವಶ್ಯಕತೆಯಿದೆ. ವಿಜ್ಞಾನ ಇಂದು ಬೆಳೆಯುತ್ತಲೇ ಇದೆ. ಆಹಾರ ಮತ್ತು ಆರೋಗ್ಯದ ವಿಷಯದಲ್ಲಂತೂ ಅನವರತ ಸಂಶೋಧನೆ ನಡೆದದ್ದೇ ಇದೆ. ದೂರದರ್ಶನದಲ್ಲಿ ವಿವಿಧ ಆಹಾರದ ವಿಶೇಷತೆ ತೋರಿಸಲೆಂದೇ, ಅಡುಗೆಯಲ್ಲಿ ಹೊಸ ಪ್ರಯೋಗಗಳನ್ನು ಮಾಡಲೆಂದೇ ಅದಷ್ಟೋ ವಾಹಿನಿಗಳು ಸರ್ಕಸ್ ಮಾಡುತ್ತಿವೆ. ಯೂಟ್ಯೂಬ್ ವೀಡಿಯೋಗಳನ್ನು ಹುಡುಕಿದರೆ ಆಹಾರ ಸಂಬಂಧಿ ಅನೇಕ ಚಾನೆಲ್ ಗಳು ನೋಡಸಿಗುತ್ತವೆ. ಆಹಾರದ ಬಗೆಗಿನ ಚರ್ಚೆಗಳು ಕಾಲಕ್ಕೆ ತಕ್ಕಂತೆ ಬದಲಾಗುತ್ತವೆ. ಆಹಾರದ ಬಗ್ಗೆ ಈ ಕೊರೋನಾ ಹುಟ್ಟಿಸಿದ ಆವಾಂತರವೇ ಒಂದು ಒಳ್ಳೆಯ ಉದಾಹರಣೆ. ಮಾನವನ ಜೀವನ ಶೈಲಿಯನ್ನೇ ಬದಲಿಸಿ ಹಾಕಿದ್ದಲ್ಲದೆ; ಆಹಾರದ ಬಗೆಗಿನ ಜಾಗ್ರತೆ ಮತ್ತು ಭಯ ಎರಡನ್ನು ಬೆಳೆಸಿತ್ತು. ಸರಿ ಈವಾಗ ನಾನು ಹೇಳುವ ಪದವಿ, ಫುಡ್ ಟೆಕ್ನಾಲಜಿಯ ಬಗ್ಗೆ. ಫುಡ್ ಟೆಕ್ನಾಲಜಿ ಒಂದು ಸೈನ್ಸ್ ಕೋರ್ಸ್; ಇವತ್ತು ಈ ಪದವಿಗಿರುವ ಅನೇಕ ಅವಕಾಶಗಳ ಬಗ್ಗೆ ಚರ್ಚೆ ಮಾಡೋಣ.

ಆಹಾರ ತಂತ್ರಜ್ಞಾನ ಪದವಿ ಎಂದರೇನು? ಕೋರ್ಸ್ ಮಾಡುವುದು ಹೇಗೆ?

ಅನೇಕ ಬಾರಿ ನಾವು ಬೇರೆ ಬೇರೆ ಪದವಿ ಶಿಕ್ಷಣದ ಕುರಿತು ಕೇಳಿರುತ್ತೇವೆ ಆದರೆ ಸರಿಯಾದ ಮಾಹಿತಿಯಿರುವುದಿಲ್ಲ. ಫುಡ್ ಟೆಕ್ನಾಲಜಿ ಕೋರ್ಸ್ ಒಂದು ಸೈನ್ಸ್ ಕೋರ್ಸ್ ಆಗಿದ್ದು ಪದವಿ, ಸ್ನಾತಕೋತ್ತರ ಪದವಿ ಮತ್ತು ಸಂಶೋಧನಾ ಪದವಿಯವರೆಗೂ ಶಿಕ್ಷಣಕ್ಕೆ ಅವಕಾಶವಿದೆ. ಆಹಾರದ ಉತ್ಪನ್ನಗಳನ್ನು ತಯಾರಿಸುವ ಎಲ್ಲಾ ಕಂಪೆನಿಗಳು, ಖಾಸಗಿ ಸಂಸ್ಥೆಗಳು, ಆಹಾರೋತ್ಪನ್ನ ಕೇಂದ್ರಗಳು ಈ ಪದವಿಗೆ ಹೆಚ್ಚಿನ ಬೇಡಿಕೆ ಕಲ್ಪಿಸುತ್ತವೆ. ತಂತ್ರಜ್ಞಾನವನ್ನೇ ಮುಖ್ಯ ಕಲಿಕೆಯಾಗಿಟ್ಟುಕೊಂಡು ಆಹಾರದ ಉತ್ಪಾದನೆ, ಪ್ರಕ್ರಿಯೆ, ಸಂರಕ್ಷಣೆ, ಪ್ಯಾಕೇಜಿಂಗ್, ಲೇಬಲಿಂಗ್, ಗುಣಮಟ್ಟ ನಿರ್ವಹಣೆ ಮತ್ತು ವಿತರಣೆಯ ವಿಭಾಗಗಳಲ್ಲಿ ಅಧ್ಯಯನ ಮಾಡುವುದೇ ಈ ಪದವಿಯಾಗಿದೆ. ತುಂಬಾ ಆಸಕ್ತಿದಾಯಕವಾದ ಈ ಪದವಿ ಶಿಕ್ಷಣಕ್ಕೂ ಈಗ ಬೇಡಿಕೆ ವ್ಯಕ್ತವಾಗುತ್ತಿದೆ.

ಎಸ್ಸೆಸೆಲ್ಸಿಯ ಬಳಿಕ ಪದವಿಪೂರ್ವ ಕಲಿಕೆಯಲ್ಲಿ, ವಿಜ್ಞಾನ ವಿಭಾಗವನ್ನು ಆಯ್ಕೆ ಮಾಡಿಕೊಳ್ಳಬೇಕು. ಭೌತಶಾಸ್ತ್ರ, ರಸಾಯನಶಾಸ್ತ್ರ, ಜೀವಶಾಸ್ತ್ರ, ಗಣಿತ ಮತ್ತು ಹೋಮ್ ಸೈನ್ಸ್ ವಿಷಯಗಳನ್ನು ಆಯ್ಕೆ ಮಾಡಿಕೊಂಡಲ್ಲಿ ಮುಂದಕ್ಕೆ ಪದವಿ ಶಿಕ್ಷಣಕ್ಕೆ ಅನುಕೂಲವಾಗುತ್ತದೆ. ಕನಿಷ್ಠ ೫೦ ರಿಂದ ೬೦% ಅಂಕಗಳನ್ನಾದರು ಪಡೆದಿದ್ದಲ್ಲಿ ಒಳ್ಳೆಯದು. ಮುಂದೆ ಪದವಿಯಲ್ಲೂ ಇದೇ ವಿಷಯಗಳನ್ನು ಆಯ್ಕೆ ಮಾಡಿಕೊಂಡು ಓದಿಕೊಳ್ಳಬಹುದು. ಹಾಗೆಯೇ ಫುಡ್ ಟೆಕ್ನಾಲಾಜಿಯಲ್ಲಿ ಸ್ನಾತಕೋತ್ತರ ಪದವಿಯನ್ನೂ ಮಾಡಬಹುದು ಬಳಿಕ ಇದೇ ವಿಷಯದಲ್ಲಿ ಪಿ.ಹೆಚ್.ಡಿ. ಗೂ ಅವಕಾಶವಿದೆ. ಬಿ.ಟೆಕ್ ಇನ್ ಫುಡ್ ಟೆಕ್ನಾಲಜಿ ಮತ್ತು ಎಮ್.ಟೆಕ್ ಇನ್ ಫುಡ್  ಟೆಕ್ನಾಲಜಿ ಕೂಡ ಮಾಡಬಹುದು.

 

ಯಾವ ಕೌಶಲಗಳನ್ನು ಬೆಳೆಸಿಕೊಳ್ಳಬೇಕು?

ತಮ್ಮ ಪದವಿ ಶಿಕ್ಷಣದಲ್ಲಿ ಬೆಳೆಸಿಕೊಂಡ ಶಿಸ್ತು ಮತ್ತು ಗುಣಗಳೇ ಒಂದು ಉತ್ತಮ ನೌಕರಿ ಕೊಡಿಸಲು ಸಾಧ್ಯ. ಹಾಗಾಗಿ ಒಬ್ಬ ವಿದ್ಯಾರ್ಥಿಯು ಅನೇಕ ಕೌಶಲ್ಯಗಳನ್ನು ಮೈಗೂಡಿಸಿಕೊಂಡಿರಬೇಕು. ಅವುಗಳಲ್ಲಿ ಮುಖ್ಯವಾದುವುಗಳೆಂದರೆ; ತಾಂತ್ರಿಕ ಕೌಶಲ್ಯ, ಪ್ರಾಯೋಗಿಕ ಕೌಶಲ್ಯ, ಸಾಂಸ್ಥಿಕ ಕೌಶಲ್ಯ, ವೀಕ್ಷಣಾ ಕೌಶಲ್ಯ, ಸಂಶೋಧನಾ ಕೌಶಲ್ಯ, ಸಮಸ್ಯೆ ಪರಿಹರಿಸುವ ಕೌಶಲ್ಯ, ವೈಜ್ಞಾನಿಕ ಮನೋಭಾವ, ಆಹಾರ ವಿಜ್ಞಾನದ ಬಗೆಗಿನ ಆಸಕ್ತಿ, ಆರೋಗ್ಯ ಮತ್ತು ಪೋಷಣೆಯ ಕುರಿತು ಆಸಕ್ತಿ, ಗ್ರಾಹಕ ಮಾರುಕಟ್ಟೆಯ ಬಗ್ಗೆ ತಿಳುವಳಿಕೆ, ವಿಶ್ಲೇಷಣಾತ್ಮಕ ಮನೋಭಾವ, ಸಮಯ ಪರಿಪಾಲನೆ ಮತ್ತು ವಿಭಿನ್ನ ಸಂದರ್ಭಗಳಲ್ಲಿ ಕೆಲಸ ಮಾಡುವ ಗುಣ; ಹೀಗೆ ಹತ್ತು ಹಲವು ಕೌಶಲಗಳನ್ನು ಬೆಳೆಸಿಕೊಂಡಲ್ಲಿ ಮಾತ್ರ ಮುಂದಕ್ಕೆ ಉದ್ಯೋಗ ಪಡೆಯುವಲ್ಲಿ ಸಹಕಾರಿಯಾಗಬಹುದು.

ಉದ್ಯೋಗಾವಕಾಶಗಳು:

ಆಹಾರ ತಂತ್ರಜ್ಞಾನ ಪದವಿ ಮಾಡಿದವರಿಗೆ ಅನೇಕ ವಲಯಗಳಲ್ಲಿ ಕೆಲಸ ಮಾಡಬಹುದು; ಸ್ಟಾರ್ ಹೋಟೇಲ್/ ರೆಸ್ಟೋರೆಂಟ್ ಗಳಲ್ಲಿ, ಕೆಟರಿಂಗ್ ವ್ಯಾಪಾರಗಳಲ್ಲಿ, ಆಸ್ಪತ್ರೆಗಳಲ್ಲಿ, ಆಹಾರೋತ್ಪಾದನಾ ಕಂಪೆನಿಗಳಲ್ಲಿ, ಆಹಾರ ವಿತರಣಾ ಸಂಸ್ಥೆಗಳಲ್ಲಿ, ಜಾಹೀರಾತು ಕಂಪೆನಿಗಳಲ್ಲಿ, ಹೀಗೆ ವಿವಿಧ ಕಡೆಗಳಲ್ಲಿ ಉದ್ಯೋಗ ಅರಸಬಹುದು. ಯಾವ ಉದ್ಯೋಗಗಳನ್ನು/ ಹುದ್ದೆಗಳನ್ನು ಆಹಾರ ತಂತ್ರಜ್ಞಾನ ಪದವಿ ಮಾಡಿದವನು ಪಡೆದುಕೊಳ್ಳಬಹುದು ಎನ್ನುವುದನ್ನು ಒಮ್ಮೆ ನೋಡಿಬಿಡೋಣ:

*ಲ್ಯಾಬ್ ಟೆಕ್ನಿಷಿಯನ್: ಸ್ಯಾಂಪ್ಲಿಂಗ್, ಟೆಸ್ಟಿಂಗ್, ಮೆಶರಿಂಗ್ ಹೀಗೆ ಆಹಾರದ ಪ್ಯಾಕಿಂಗ್ ನವರೆಗೆ ಸಂಪೂರ್ಣ ಜವಾಬ್ದಾರಿ ಲ್ಯಾಬ್ ಟೆಸ್ಟ್ ಮೇಲೆ ಇರುತ್ತದೆ. ಹಾಗಾಗಿ ಸರಿಯಾದ ಫಲಿತಾಂಶವನ್ನು ಕ್ಲಪ್ತ ಸಮಯಕ್ಕೆ ಒದಗಿಸುವುದು ಇವರ ಕೆಲಸವಾಗಿದೆ. ಹೆಚ್ಚಿನ ಎಲ್ಲಾ ಆಹಾರ ಕಂಪೆನಿಗಳಲ್ಲಿ ಈ ಕೆಲಸ ಈ ಡಿಗ್ರಿಗಿದೆ.

*ಸಂಶೋಧನಾ ವಿಜ್ಞಾನಿಯಾಗಿ: ಈ ಹುದ್ದೆಯಲ್ಲಿರುವರು, ಆಹಾರದ ಗುಣಮಟ್ಟ, ರುಚಿ, ವಿನ್ಯಾಸ, ಪೌಷ್ಟಿಕ ಗುಣ ಮತ್ತು ಗ್ರಾಹಕರ ಮೇಲೆ ಅದರ ಪ್ರಭಾವ ಹಾಗೆಯೇ ಇಳುವರಿಯ ಬಗ್ಗೆಯೂ ಸಂಶೋಧನೆ ಮಾಡುತ್ತಾರೆ. ಇದು ಬಹಳ ಜವಾಬ್ದಾರಿಯುತ ಕೆಲಸವಾಗಿದ್ದು ಸಂಭಾವನೆಯೂ ಅಧಿಕವಾಗಿರುತ್ತದೆ.

*ಇಂಜಿನಿಯರ್: ಆಹಾರ ಪ್ರಕ್ರಿಯೆಗೆ ಸಂಬಂಧಪಟ್ಟ ಹಾಗೆ ಯೋಜನೆ ಮಾಡುವುದು, ವಿನ್ಯಾಸ, ಪರಿಕಲ್ಪನೆ ಮತ್ತು ಬದಲಾವಣೆ ಹೀಗೆ ಎಲ್ಲಾ ಸಮಯದಲ್ಲೂ ಇಂಜಿನಿಯರ್ ಆಗಿ ಕೆಲಸ ಮಾಡಬೇಕಾಗುತ್ತದೆ. ಈ ಹುದ್ದೆಗೆ ಎಲ್ಲಾ ಆಹಾರ ಕಂಪೆನಿಗಳಲ್ಲೂ ಬೇಡಿಕೆಯಿದೆ.

*ಆಹಾರೋತ್ಪನ್ನ ನಿರ್ದೇಶಕರಾಗಿ: ಈ ಹುದ್ದೆಯಲ್ಲಿ ಕೆಲಸ ಮಾಡುವವರು ಹೊಸ ಆವಿಷ್ಕಾರಗಳನ್ನು ಅಳವಡಿಸಿಕೊಳ್ಳುವುದು, ಹೊಸ ತಂತ್ರಜ್ಞಾನಗಳಿಗೆ ಒತ್ತು ಕೊಡುವುದನ್ನು ಮಾಡುತ್ತಾರೆ.

*ಹೋಮ್ ಇಕಾನಮಿಸ್ಟ್: ನ್ಯೂಟ್ರಿಶಿಯನ್ ಮತ್ತು ಡಯಟಿಕ್ಸ್ ವಿಭಾಗದಲ್ಲಿ ಪರಿಣತರನ್ನು ಹೋಮ್ ಇಕಾನಮಿಸ್ಟ್ ಎಂದು ಕರೆಯುತ್ತೇವೆ. ಇವರ ಮುಖ್ಯ ಕೆಲಸವೆಂದರೆ ಪ್ಯಾಕೆಟ್ ಅಥವಾ ಕಂಟೈನರ್ ನಲ್ಲಿ ನಮೂದಿಸಿದ ಹಾಗೆ ಅಥವಾ ಸೂಚನೆಗಳನ್ನು ನೀಡಿದ ಹಾಗೆ ಸರಿಯಾಗಿ ಆಹಾರವಿದೆಯೇ ಎಂದು ಪರೀಕ್ಷಿಸುವುದು. ಅನೇಕ ಕಂಪೆನಿಗಳಲ್ಲಿ ಈ ಹುದ್ದೆಗಳಿವೆ.

*ವ್ಯವಸ್ಥಾಪಕ ಮತ್ತು ಲೆಕ್ಕಪರಿಶೋಧಕ: ಆಹಾರದ ಉತ್ಪಾದನಾ ಮತ್ತು ವಿತರಣಾ ವ್ಯವಸ್ಥೆಯನ್ನು ಸರಿಯಾಗಿ ನೋಡಿಕೊಳ್ಳುವುದು, ಅದರ ಲೆಕ್ಕವನ್ನು ಸರಿಯಾಗಿ ನಮೂದಿಸಿಟ್ಟುಕೊಳ್ಳುವ ಕೆಲಸದಲ್ಲಿಯೂ ಈ ಡಿಗ್ರಿಯವರಿಗೆ ವಿಫುಲ ಅವಕಾಶಗಳಿವೆ.

*ಗುಣಮಟ್ಟ ಪರಿಶೀಲಕರಾಗಿ: ಆಹಾರದ ಗುಣಮಟ್ಟ ಪರೀಕ್ಷೆ ಅತೀ ಅಗತ್ಯ. ಆಹಾರ ಪದಾರ್ಥಗಳು ಗ್ರಾಹಕರಿಗೆ ತಲುಪುವ ಮುಂಚೆ ವಿವಿಧ ರೀತಿಯಲ್ಲಿ ಅದರ ಗುಣಮಟ್ಟದ ಪರೀಕ್ಷೆ ನಡೆಯುತ್ತದೆ. ಉತ್ತಮ ಉಪಕರಣಗಳನ್ನು ಉಪಯೋಗಿಸಿ ಪರೀಕ್ಷೆ ನಡೆಸಬೇಕಾಗುತ್ತದೆ. ಎಲ್ಲಾ ಕಂಪೆನಿಗಳಲ್ಲೂ ಈ ಹುದ್ದೆಗೆ ಫುಡ್ ಟೆಕ್ನಾಲಾಜಿ ಕೋರ್ಸ್ ನವರಿಗೆ ಬೇಡಿಕೆಯಿರುತ್ತದೆ.

*ಆಹಾರ ತಪಾಸಣಾಕಾರರಾಗಿ: ಆಹಾರ ಸರಿಯಾದ ರೀತಿಯಲ್ಲಿ ತಪಾಸಣೆಯಾಗಿದೆಯೇ ಎಂದು ನೋಡಿಕೊಳ್ಳುವುದು, ಪ್ಯಾಕೇಜಿಂಗ್ ಸರಿಯಾಗಿದೆಯೇ ನೋಡುವುದು, ಮತ್ತು ಆಹಾರ ಜನರಿಗೆ ಸೇವಿಸಲು ಯೋಗ್ಯವಾದುದೇ ಎಂದು ಪರೀಕ್ಷಿಸುವುದು ಇವರ ಕೆಲಸ. ಹೆಚ್ಚಾಗಿ ಎಲ್ಲಾ ಆಹಾರೋತ್ಪಾದನಾ ಕಂಪೆನಿಗಳಲ್ಲಿ ಈ ಹುದ್ದೆಗಳಿವೆ.

*ಬಯೋಕೆಮಿಸ್ಟ್: ಈ ಒಂದು ಹುದ್ದೆಯಲ್ಲಿ ಬಯೋಕೆಮಿಸ್ಟ್ ಆದವರು, ಆಹಾರದ ಗುಣಮಟ್ಟ, ರುಚಿ, ವಿನ್ಯಾಸ, ಸಂಗ್ರಹಣೆ ಹೀಗೆ ಹಲವು ವಿಷಯಗಳಲ್ಲಿ ಬದಲಾವಣೆ, ಸೂಚನೆ ಮತ್ತು ಪರಿಹಾರಗಳನ್ನು ಸೂಚಿಸುತ್ತಾರೆ.

*ಓರ್ಗ್ಯಾನಿಕ್ ಕೆಮಿಸ್ಟ್: ಯಾವ ಕಚ್ಛಾ ಆಹಾರ ಪದಾರ್ಥ ಪರಿಪೂರ್ಣ ಆಹಾರವಾಗಿ ಬದಲಾಗುತ್ತದೋ ಆ ಪ್ರಕ್ರಿಯೆಯನ್ನು ನೋಡಿಕೊಳ್ಳುವುದು ಮತ್ತು ಬೇರೆ ಬೇರೆ ವಿಧಾನಗಳನ್ನು ಅನುಸರಿಸುವುದು ಇವರ ಕೆಲಸವಾಗಿರುತ್ತದೆ. ಅನೇಕ ಹುದ್ದೆಗಳು ಕಂಪೆನಿಗಳಲ್ಲಿ ಈ ಪದವಿಗಿರುತ್ತದೆ.

*ನ್ಯೂಟ್ರಿಶನಲ್ ಥೆರಪಿಸ್ಟ್: ಆಸ್ಪತ್ರೆಗಳು ಮತ್ತು ಸಾಮಾನ್ಯ ವೈದ್ಯರುಗಳ ಜೊತೆ ಒಡನಾಟ ಇಟ್ಟುಕೊಂಡು ಇವರು ಕೆಲಸ ಮಾಡುತ್ತಾರೆ. ಪೌಷ್ಟಿಕತಜ್ಞರಾಗಿ ಕೆಲಸಮಾಡುವುದು ಇವರ ಮುಖ್ಯ ಜವಾಬ್ದಾರಿಯಾಗಿರುತ್ತದೆ.

*ಫುಡ್ ಬ್ಲಾಗರ್/ವ್ಲೋಗರ್: ಫುಡ್ ಬ್ಲಾಗರ್ ಇತ್ತೀಚಿನ ದಿನಗಳಲ್ಲಿ ಹೆಚ್ಚೆಚ್ಚು ಮಂದಿಯನ್ನು ತನ್ನತ್ತ ಸೆಳೆಯುವ ತಾಣವಾಗಿದೆ. ಸಾಮಾಜಿಕ ಜಾಲತಾಣಗಳನ್ನು ಜಾಸ್ತಿಯಾಗಿ ಬಳಸುವ ಹದಿಹರೆಯದವರನ್ನೂ, ವ್ಯಾಪಾರಸ್ಥರನ್ನೂ ಬ್ಲಾಗ್ ಬರವಣಿಗೆಯ ಮೂಲಕ ಹಿಡಿದಿಟ್ಟುಕೊಳ್ಳಬಹುದು.  ಹಾಗೆಯೇ ವ್ಲೋಗರ್ ಅಂದ್ರೆ, ವಿವಿಧ ಆಹಾರ ಪದ್ದತಿಯ ಬಗ್ಗೆ ವೀಡಿಯೋ ಚಿತ್ರೀಕರಣ ಮಾಡಿ ಅದನ್ನು ಬಿತ್ತರಿಸುವುದು. ವಿಶ್ವದಾದ್ಯಂತ ಈ ಕಾರ್ಯಚಟುವಟಿಕೆಗೆ ಅಪಾರ ಬೇಡಿಕೆಯಿದೆ ಮತ್ತು ಇದನ್ನು ಸುಲಭವಾಗಿ ಸಂಭಾವನೆಯಾಗಿ ಪರಿವರ್ತಿಸಬಹುದು.

*ಟೆಕ್ನಿಕಲ್ ಬ್ರೀವರ್: ಟೆಕ್ನಿಕಲ್ ಬ್ರೀವರ್ ಅಂದರೆ ಬಿಯರ್ ಪಾನೀಯಗಳನ್ನು ಲೇಬಲಿಂಗ್ ಮತ್ತು ಮಾರ್ಕೆಟಿಂಗ್ ಜವಾಬ್ದಾರಿಯನ್ನು ಹೊತ್ತುಕೊಳ್ಳುವವರು. ಬಿಯರ್ ಫ್ಯಾಕ್ಟರಿ ಮತ್ತು ರೆಸ್ಟೋರೆಂಟ್ ಗಳ ನಡುವೆ ಕೊಂಡಿಯಾಗಿಯೂ ಕೆಲಸಮಾಡಬಹುದು.

ಆಹಾರ ತಂತ್ರಜ್ಞಾನ ಪದವಿಗೆ ಒತ್ತು ಕೊಡುವ ಕಂಪೆನಿಗಳು:

ಅನೇಕ ಕಂಪೆನಿಗಳು ಈ ಪದವಿಯನ್ನೇ ಬಹಳವಾಗಿ ನಿರೀಕ್ಷಿಸುತ್ತವೆ. ಅವುಗಳಲ್ಲಿ ಕೆಲವನ್ನು ಇಲ್ಲಿ ಹೆಸರಿಸುತ್ತೇನೆ:

ಎಂ.ಟ್.ಆರ್. ಫುಡ್ ಲಿಮಿಟೆಡ್, ಅಮುಲ್, ಡಾಬರ್ ಇಂಡಿಯಾ ಲಿಮಿಟೆಡ್, ಗೋದ್ರೇಜ್ ಇಂಡಸ್ಟ್ರಿಯಲ್ ಲಿಮಿಟೆಡ್, ಪೆಪ್ಸಿಕೊ ಇಂಡಿಯಾ ಹೋಲ್ಡಿಂಗ್ಸ್, ಬ್ರಿಟಾನಿಯಾ ಇಂಡಸ್ಟ್ರೀಸ್ ಲಿಮಿಟೆಡ್, ನೆಸ್ಟ್ಲೆ ಇಂಡಿಯಾ ಪ್ರೈವೇಟ್ ಲಿಮಿಟೆಡ್, ಐಟಿಸಿ ಲಿಮಿಟೆಡ್, ಆಗ್ರೋ ಟೆಕ್ ಫುಡ್ಸ್, ಪಾರ್ಲೆ ಪ್ರೊಡಕ್ಟ್ಸ್ ಪ್ರೈವೇಟ್ ಲಿಮಿಟೆಡ್, ಪರ್ಫೈಟ್ ಇಂಡಿಯಾ ಲಿಮಿಟೆಡ್, ಹಿಂದುಸ್ತಾನ್ ಲಿವರ್ ಲಿಮಿಟೆಡ್, ಕ್ಯಾಡ್ಬರಿ ಇಂಡಿಯಾ ಲಿಮಿಟೆಡ್, ಮಿಲ್ಕ್ ಫುಡ್, ಕೊಕ-ಕೋಲಾ ಇಂಡಿಯಾ ಲಿಮಿಟೆಡ್, ಗಿತ್ಸ್ ಫುಡ್ ಪ್ರೈವೇಟ್ ಲಿಮಿಟೆಡ್, ಬ್ರಿಟಾನಿಯಾ ಇಂಡಸ್ಟ್ರೀಸ್ ಲಿಮಿಟೆಡ್ ಹೀಗೆ ಹತ್ತು ಹಲವಾರು ಪ್ರಖ್ಯಾತ ಕಂಪೆನಿಗಳು ಈ ಪದವಿಯ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಹಾಗಾಗಿ ಈ ಕ್ಷೇತ್ರದಲ್ಲಿ ಪದವಿ ಮಾಡಿದವರಿಗೆ ವಿಫುಲ ಅವಕಾಶಗಳಿರುವುದು ಖಚಿತ.