ಕೆಲಸ ಮತ್ತು ವೈಯಕ್ತಿಕ ಜೀವನದ ನಡುವೆ ಸಮತೋಲನವನ್ನು ಕಂಡುಕೊಳ್ಳಿ

ಕೆಲಸ ಮತ್ತು ವೈಯಕ್ತಿಕ ಜೀವನದ ನಡುವೆ ಸಮತೋಲನವನ್ನು ಕಂಡುಕೊಳ್ಳಿ

Akshara Damle   ¦    Dec 13, 2020 10:00:16 AM (IST)
ಕೆಲಸ ಮತ್ತು ವೈಯಕ್ತಿಕ ಜೀವನದ ನಡುವೆ ಸಮತೋಲನವನ್ನು ಕಂಡುಕೊಳ್ಳಿ

ನಾನು ದಿನವಿಡೀ ಕೆಲಸದಲ್ಲಿಯೇ ಮಗ್ನನಾಗಿರುತ್ತೇನೆ ಮತ್ತು ಈ ಕಾರಣದಿಂದಾಗಿ, ಮನೆಯಲ್ಲಿ ಸಾಕಷ್ಟು ಜಗಳಗಳು ನಡೆಯುತ್ತಿವೆ! ನಾನು ಏನು ಮಾಡಲಿ? ನಾನು ಒಬ್ಬ ಸಾಮಾಜಿಕ ಕಾರ್ಯಕರ್ತ!
ಸಾಮಾಜಿಕ ಕಾರ್ಯವು ಯಾವತ್ತೂ ಹಾಗೆಯೇ! ಅದಕ್ಕೆ ಕೊನೆ ಎಂಬುದಿಲ್ಲ. ಹಾಗಾಗಿ ಅತೀವವಾದ ಶ್ರದ್ಧೆಯಿಂದ ಇಂತಹ ಕೆಲಸಗಳಲ್ಲಿ ತೊಡಗಿಕೊಂಡವರು ಅನೇಕ ಬಾರಿ ಕೌಟುಂಬಿಕ ಜವಾಬ್ದಾರಿಗಳನ್ನು ಮರೆತುಬಿಡುತ್ತಾರೆ.
ಸಮುದಾಯಕ್ಕೋಸ್ಕರ ಕೆಲಸ ಮಾಡುವುದು ಒಳ್ಳೆಯ ವಿಚಾರವೇ ಆದರೂ, ನಮ್ಮ ಮಿತಿಗಳನ್ನು ನಾವು ಅರಿತುಕೊಳ್ಳಬೇಕು.
ಸಮಾಜದಲ್ಲಿ ಅನೇಕರಿಗೆ ಬೇರೆ ಬೇರೆ ರೀತಿಯ ಸಮಸ್ಯೆಗಳಿರುತ್ತವೆ. ಎಷ್ಟೋ ಬಾರಿ ನಾವು ಇತರರ ಸಮಸ್ಯೆಗಳನ್ನು ನಮ್ಮದೇ ಸಮಸ್ಯೆ ಎಂದು ಭಾವಿಸಿಕೊಂಡು ಬಗೆಹರಿಸಲು ಹೋಗುತ್ತೇವೆ. ಇದರಿಂದಾಗಿ ನಿಮ್ಮ ಅನೇಕ ಸಮಯ ವ್ಯಯವಾಗುತ್ತದೆ. ಕುಟುಂಬದ ಕೆಲಸಗಳಿಗೆ ಸಮಯ ಕಡಮೆಯಾಗುತ್ತದೆ.
ವಾರಕ್ಕೊಮ್ಮೆಯಾದರೂ ಒಂದು ದಿನ ರಜೆ ತೆಗೆದುಕೊಂಡದ್ದೇ ಆದರೆ, ಅದು ನಿಮ್ಮನ್ನು ನೀವು ಪುನಶ್ಚೇತನಗೊಳಿಸಲು, ಮನೆಯ ಮಂದಿಯೊಂದಿಗೆ ಸಮಯ ಕಳೆಯಲು ಅವಕಾಶವಾಗುತ್ತದೆ.
ನಿಮ್ಮ ಹೆಂಡತಿಯೊಂದಿಗೆ ಗುಣಮಟ್ಟದ ಸಮಯವನ್ನು ಕಳೆಯದಿದ್ದರೆ, ನೀವು ಉತ್ತಮ ಗಂಡನಾಗುವುದಿಲ್ಲ. ಮಕ್ಕಳ ಪಾಲನೆ ಅಥವಾ ಮಾರ್ಗದರ್ಶನ ಮಾಡುವ ಪ್ರಕ್ರಿಯೆಯಲ್ಲಿ ನಿಮ್ಮ ಸಮಯವನ್ನು ವಿನಿಯೋಗಿಸದಿದ್ದರೆ, ನೀವು ಉತ್ತಮ ತಂದೆಯಾಗುವುದಿಲ್ಲ.
ಮನೆಯಲ್ಲಿ ನಿಮ್ಮ ಹೆತ್ತವರನ್ನು ಅಥವಾ ವೃದ್ಧರನ್ನು ನೋಡಿಕೊಳ್ಳಲು ನೀವು ನಿರ್ದಿಷ್ಟ ಸಮಯವನ್ನು ಮೀಸಲಿಡದಿದ್ದರೆ, ನೀವು ಉತ್ತಮ ಮಗನಾಗುವುದಿಲ್ಲ. ಇಂತಹುದೇ ನಿಯಮಗಳು ಮಹಿಳಾ ಸಾಮಾಜಿಕ ಕಾರ್ಯಕರ್ತರಿಗೂ ಸಲ್ಲುತ್ತದೆ.
ಆದ್ದರಿಂದ, ಕೆಲಸ ಮತ್ತು ವೈಯಕ್ತಿಕ ಜೀವನದ ನಡುವೆ ಸಮತೋಲನವನ್ನು ಕಂಡುಕೊಳ್ಳುವುದು ಬಹಳ ಮುಖ್ಯ.