ಧೈರ್ಯದ ಅಭಿವ್ಯಕ್ತಿ ಭಯದ ಅದುಮಿಕೆಯಾಗಬಾರದು

ಧೈರ್ಯದ ಅಭಿವ್ಯಕ್ತಿ ಭಯದ ಅದುಮಿಕೆಯಾಗಬಾರದು

Akshara Damle   ¦    Jan 17, 2021 09:16:23 AM (IST)
ಧೈರ್ಯದ ಅಭಿವ್ಯಕ್ತಿ ಭಯದ ಅದುಮಿಕೆಯಾಗಬಾರದು

ಸಾಧಾರಣವಾಗಿ ಈ ಧೈರ್ಯವನ್ನು ಬಹಳ ಧನಾತ್ಮಕ ಗುಣವಾಗಿ ಪರಿಗಣಿಸುತ್ತಾರೆ. ಒಬ್ಬ ವ್ಯಕ್ತಿ  ಧೈರ್ಯವಂತನಾಗಿದ್ದರೆ ಆತನ ಮತ್ತು ಅಥವಾ ಆಕೆಯ ಧೈರ್ಯವನ್ನು ಸಮಾಜ ಕೊಂಡಾಡುತ್ತದೆ.  ಒಬ್ಬ ವ್ಯಕ್ತಿ ದೈರ್ಯವಂತ ಆದರೆ ಆತನನ್ನು ಉನ್ನತ ಸ್ಥಾನದಲ್ಲಿ ನೋಡುತ್ತದೆ ಮತ್ತು ಆತನಿಗೆ ನಾಯಕತ್ವದ ಕೆಲಸಗಳನ್ನು ಅಥವಾ ಜವಾಬ್ದಾರಿಗಳನ್ನು ಕೊಡಲಾಗುತ್ತದೆ. 

ಆದರೆ ಅನೇಕರು ಒಬ್ಬ ವ್ಯಕ್ತಿ ತೋರಿಸುತ್ತಿರುವ ಧೈರ್ಯ ನಿಜವಾದ ಧೈರ್ಯವೋ ಅಥವಾ ಭಯದ ಅದುಮಿಕೆಯೋ ಎಂಬುದನ್ನು ಗಮನಿಸುವುದಿಲ್ಲ. ಎಷ್ಟೋ ಜನರಿಗೆ ತಮ್ಮ ಅಭದ್ರತೆ,  ಅನುಮಾನ ಮುಂತಾದುವುಗಳನ್ನು ಮೆಟ್ಟಿ ನಿಲ್ಲುವುದಕ್ಕೆ ಧೈರ್ಯವೂ ಒಂದು ಸಾಧನವಾಗಿದೆ.  

ಅತಿಯಾದ ಭಯವನ್ನು ಎದುರಿಸಲು ಕೃತಕವಾಗಿ ಧೈರ್ಯವನ್ನು ತಂದುಕೊಳ್ಳುತ್ತಾರೆ. ಇಲ್ಲಿ ಪ್ರಶ್ನೆ ಏನೆಂದರೆ ಅಂತಹ ಕೃತಕ ಧೈರ್ಯ ದೀರ್ಘಕಾಲಿನ ಆಗಿರುವುದಿಲ್ಲ. ಇನ್ನೊಂದು ಆಯಾಮವನ್ನು ನೋಡುವುದಾದರೆ,  ಭಯವನ್ನುಂಟು ಮಾಡುತ್ತಿರುವಂತಹ ಸನ್ನಿವೇಶ, ವ್ಯಕ್ತಿ ಅಥವಾ ಸ್ಥಳ ಇಲ್ಲವಾಗುತ್ತಿದ್ದಂತೆ ಧೈರ್ಯವೂ ಕಳೆದು ಹೋಗುತ್ತದೆ.  

ಧೈರ್ಯವನ್ನು ನಾವು ಏನು ಒಂದು ರೀತಿಯಲ್ಲಿ ಅರ್ಥ ಮಾಡಿಕೊಳ್ಳಬೇಕು. ಅದೇನೆಂದರೆ, ಭಯದ ಕುರಿತು ಅರಿವಿಲ್ಲದೆ ಇದ್ದು ಮಾಡುವಂಥ ವರ್ತನೆಗಳು ಧೈರ್ಯವಂತಿಕೆಯಂತೆಯೇ ಕಂಡರೂ,   ಭಯದ ಕುರಿತು ಸಂಪೂರ್ಣವಾಗಿ ಮಾಹಿತಿ ಇದ್ದು ಅದನ್ನು ಎದುರಿಸುವ ಛಲವನ್ನು ತೋರಿಸುವುದು ನಿಜವಾದ ಧೈರ್ಯ.  

ಒಂದು ಗುಂಪಿನಲ್ಲಿ ಒಂದಷ್ಟು ಜನ ಹಳ್ಳಿ ಕಡೆ ನಡೆದುಕೊಂಡು ಹೋಗುತ್ತಿರಬೇಕಾದರೆ ದಾರಿಯಲ್ಲಿ ಹೆಡೆಯೆತ್ತಿದ ನಾಗರಹಾವನ್ನು ನೋಡಿದಾಗ ಒಬ್ಬ ವ್ಯಕ್ತಿ ತತ್ ಕ್ಷಣ ಪಕ್ಕದಲ್ಲಿದ್ದ ದೊಣ್ಣೆಯನ್ನು ಕೈಗೆತ್ತಿಕೊಂಡು ಹಾವಿನ ತಲೆಗೆ ಹೊಡೆದು ಕೊಲ್ಲುತ್ತಾನೆ ಎಂದಾದರೆ ಅದು ಧೈರ್ಯದಿಂದ ಬಂದಂತಹ ವರ್ತನೆ ಅಲ್ಲ. ಅದು ಕೇವಲ ಆ ಕ್ಷಣದ ಪ್ರತಿಕ್ರಿಯೆ. ಅದೇ ವ್ಯಕ್ತಿಗೆ ಇನ್ನೊಂದು ನಾಗರಹಾವನ್ನು ಎದುರು ತಂದಿಟ್ಟರೆ ಅದೇ ರೀತಿಯ ನಡವಳಿಕೆಯನ್ನು ತೋರಿಸುವುದಕ್ಕೆ ಸಾಧ್ಯವಿಲ್ಲ.  

ಆದರೆ ಅದೇ ಸಂದರ್ಭದಲ್ಲಿ ಇನ್ನೊಬ್ಬ ವ್ಯಕ್ತಿ ಹಾವಿನ ಇರುವಿಕೆಯನ್ನು ಗಮನಿಸಿ ಹಾವಿನಿಂದ ತನ್ನೊಡನೆ ಇರುವಂತ ವ್ಯಕ್ತಿಗಳಿಗೂ ಯಾವುದೇ ರೀತಿಯ ಹಾನಿಯಾಗದಂತೆ ಜೊತೆಗೆ ಹಾವಿಗೂ ಯಾವುದೇ ರೀತಿಯ ರೀತಿಯ ಹಾನಿಯಾಗದಂತೆ ನೋಡಿಕೊಂಡು ಸುರಕ್ಷಿತವಾಗಿ ಅದನ್ನು    ಕಾಡಿನಲ್ಲಿ ಬಿಡುವುದಕ್ಕೆ ಸಾಧ್ಯವಾದರೆ ಅದನ್ನು ಧೈರ್ಯ ಅನ್ನಬಹುದು.

ಆದ್ದರಿಂದ ಧೈರ್ಯವನ್ನು ಪ್ರಶಂಶಿಸುವಾಗ ಅದು ನಿಜವಾದ ಧೈರ್ಯವೇ ಅಥವಾ ಭಯದ ಅದುಮಿಕೆಯೇ ಎನ್ನುವುದನ್ನು ಗಮನಿಸುವುದು ಒಳಿತು.