ಸವಾಲುಗಳ ನಡುವೆ ಸವಾಲಾಗಿರುವ ಗಣಕ ವಿಜ್ಞಾನ ಪದವಿ

ಸವಾಲುಗಳ ನಡುವೆ ಸವಾಲಾಗಿರುವ ಗಣಕ ವಿಜ್ಞಾನ ಪದವಿ

Oct 06, 2020 09:27:24 AM (IST)
ಸವಾಲುಗಳ ನಡುವೆ ಸವಾಲಾಗಿರುವ ಗಣಕ ವಿಜ್ಞಾನ ಪದವಿ

ಕಂಪ್ಯೂಟರ್ ಸೈನ್ಸ್ ಒಂದು ವಿಶೇಷತೆಯಿರುವ ಪದವಿ. ಇದು ಯಾಕೆ ವಿಶೇಷತೆಯ ಡಿಗ್ರಿಯೆಂದರೆ ಇದನ್ನು ಹೋಲಿಸೋದು ಇಂಜಿನಿಯರಿಂಗ್ ಡಿಗ್ರಿಯ ಜೊತೆಗೆ. ಕೆಲವರಂತೂ ಬಿ.ಟೆಕ್/ಎಂ.ಟೆಕ್ ನ್ನು ಬಿ.ಎಸ್ಸಿ/ಎಂ.ಎಸ್ಸಿ. ಕಂಪ್ಯೂಟರ್ ಸೈನ್ಸ್  ನೊಂದಿಗೆ ತುಲನೆ ಮಾಡುತ್ತಾರೆ; ಮಾತ್ರವಲ್ಲದೆ ಕೆಲವರು ಕೋರ್ಸ್  ಆಯ್ಕೆ ಮಾಡುವಲ್ಲಿಯೇ ಗೊಂದಲಕ್ಕೊಳಗಾಗುತ್ತಾರೆ. ಇದಕ್ಕೆ ಕಾರಣವೂ ಇದೆ; ಎಂ.ಟೆಕ್., ಎಂ.ಸಿ.ಎ., ಮಾಡಿದವರ ಮತ್ತು ಎಂ.ಎಸ್ಸಿ. ಕಂಪ್ಯೂಟರ್ ಸೈನ್ಸ್ ಮಾಡಿದವರ ಕೆಲಸದ ಅವಕಾಶಗಳಲ್ಲಿ ಹೆಚ್ಚಿನ ವ್ಯತ್ಯಾಸ ಇಲ್ಲದೇ ಇರುವುದು. ಆದರೂ ಈ ಕೋರ್ಸ್ ಸೊರಗುತ್ತಿದೆ; ಇದಕ್ಕೆ ಹಲವಾರು ಕಾರಣಗಳಿವೆ. ಮುಂದಕ್ಕೆ ಅದರ ಬಗ್ಗೆಯೂ ಚರ್ಚಿಸೋಣ.

ಪದವಿಗೆ ಸಾಮಾನ್ಯ ಅರ್ಹತೆ:

ಗಣಕ ವಿಜ್ಞಾನದ ಯಾವುದೇ ಪದವಿ ಆರಂಭವಾಗಬೇಕಾದರೂ ಪ್ರಥಮ ಅಡಿಪಾಯ ಯಾವ ರೀತಿಯಲ್ಲಾದರೂ ಅವರು ಕಂಪ್ಯೂಟರ್ ವಿಷಯ ಕಲಿತಿರಬೇಕು. ಇತ್ತೀಚಿನ ಶೈಕ್ಷಣಿಕ ಬದಲಾವಣೆಗಳನ್ನು ಗಮನಿಸಿದರೆ, ಎಳವೆಯಿಂದಲೇ ಮಕ್ಕಳಿಗೆ ಕಂಪ್ಯೂಟರ್ ತರಬೇತಿ ಶುರುವಾಗುತ್ತದೆ. ಶಾಲೆಯಲ್ಲಿ ಸಾಲದೆಂದು ಮತ್ತೆ ಮನೆಯಲ್ಲೂ ಗಣಕಯಂತ್ರದ ಬೆಂಭೂತ ಅವರ ಬೆನ್ನು ಹಿಡಿಯುತ್ತದೆ. ನಲವತ್ತು ವರುಷಗಳಲ್ಲಿ ಬರುವಂತಹ ಚಾಲೀಸು ಈ ಮಕ್ಕಳಿಗೆ ನಾಲ್ಕನೇ ತರಗತಿಯಲ್ಲೇ ಒಂದು ಗತಿ ಕಾಣಿಸುತ್ತದೆ. ಆದರೆ ಪೋಷಕರ ಗಮನವಿರುವುದು ಇಂಜಿನಿಯರ್ ಡಿಗ್ರಿ ಮೇಲೆ ಅಥವಾ ವೃತ್ತಿಪರ ಪದವಿಗಳ ಮೇಲೆ. ಅದೇನೇ ಇರಲಿ, ಶಾಲೆಯಲ್ಲಿ ಗಣಕಯಂತ್ರದ ಅಡಿಪಾಯ ಹಾಕಿಕೊಂಡ ಮಕ್ಕಳು ಕ್ರಮೇಣ ಬೆಳೆಯುತ್ತಾ ಪದವಿಪೂರ್ವ ಶಿಕ್ಷಣದಲ್ಲೂ ಕಂಪ್ಯೂಟರ್ ವಿಷಯವನ್ನು ಆಯ್ಕೆ ಮಾಡುತ್ತಾರೆ. ವಾಣಿಜ್ಯ ಅಥವಾ ವಿಜ್ಞಾನದ ವಿಭಾಗದಲ್ಲಿ ಅವರು ಕಂಪ್ಯೂಟರ್ ಸೈನ್ಸ್ ಕಾಂಬಿನೇಷನ್ ತೆಗೆದುಕೊಳ್ಳುವುದು ವಾಡಿಕೆ. ಮುಂದಕ್ಕೆ ಅಂತಹ ವಿದ್ಯಾರ್ಥಿಗಳಿಗೆ ಹಲವು ಕೋರ್ಸ್ಗಳಿಗೆ ಹೋಗಬಹುದು. ಇಂಜಿನಿಯರಿಂಗ್ ಪದವಿ ಅಥವಾ ಬಿ.ಕಾಂ., ಬಿ.ಸಿ.ಎ. ಬಿ.ಎಸ್ಸಿ. ಕೂಡಾ ಮಾಡಬಹುದು. ಮುಂದಕ್ಕೆ ಇದೇ ವಿಷಯದಲ್ಲಿ ಎಂ.ಸಿ.ಎ. ಅಥವಾ ಎಂ.ಎಸ್ಸಿ.ಗೆ ಅವಕಾಶವಿದೆ. ಸ್ನಾತಕೋತ್ತರ ಪದವಿಯ ಬಳಿಕ ಸಂಶೋಧನೆಯಲ್ಲಿ ಆಸಕ್ತಿಯಿರುವವರಿಗೆ ಪಿ.ಹೆಚ್.ಡಿ. ಕೂಡಾ ಮಾಡಬಹುದು.

ಎಂ.ಎಸ್ಸಿ. ಕಂಪ್ಯೂಟರ್ ಸೈನ್ಸ್  ಬಳಿಕದ ವೃತ್ತಿ ಜೀವನ:

ಕಂಪ್ಯೂಟರ್ ಸೈನ್ಸ್ ನಲ್ಲಿ ಎಂ.ಎಸ್ಸಿ. ಮಾಡುವ ಬದಲು ನಾನು ಎಂ.ಸಿ.ಎ. ಅಥವಾ ಇಂಜಿನಿಯರಿಂಗ್ ಮಾಡಬಹುದಿತ್ತು, ಸುಮ್ಮನೆ ಈ ಪದವಿ ಆಯ್ಕೆ ಮಾಡಿಕೊಂಡೆ ಎನ್ನುವ ವಿದ್ಯಾರ್ಥಿಗಳೂ ಇದ್ದಾರೆ. ಕೈಲಾಗದವನು ಮೈಯೆಲ್ಲಾ ಪರಚಿಕೊಂಡನಂತೆ ಎನ್ನುವ ಹಾಗೇ ತನಗೆ ಸಾಮರ್ಥ್ಯಯಿಲ್ಲದವರಲ್ಲಿ ಮಾತ್ರ ಈ ಮಾತು ಬರುತ್ತದೆ. ಗಣಕ ವಿಜ್ಞಾನದ ಪದವಿಗೆ ಸರಕಾರಿ ಉದ್ಯೋಗಗಳಿವೆ ಅದೇ ರೀತಿ ಖಾಸಗಿ ಉದ್ಯೋಗಗಳೂ ಹೆಚ್ಚಿನ ಸಂಖ್ಯೆಯಲ್ಲಿವೆ. ಸರಕಾರಿ ಉದ್ಯೋಗಗಳಿಗೆ ಪ್ರವೇಶಾತಿ ಪರೀಕ್ಷೆಗಳನ್ನು ನೀಡಿ ಸಂದರ್ಶನದಲ್ಲಿ ಉತ್ತಮ ಪ್ರದರ್ಶನ ನೀಡಿ ಕೆಲಸಗಿಟ್ಟಿಸಿಕೊಂಡಿದ್ದಲ್ಲಿ ಮುಂದೆ ಬಂಗಾರದ ಬದುಕು ತಮ್ಮದಾಗುತ್ತದೆ. ಹೋಲಿಕೆ ಮಾಡಿದಲ್ಲಿ ಖಾಸಗಿ ಉದ್ಯೋಗಗಳೇ ಜಾಸ್ತಿಯಿರುವ ಪದವಿಯಿದು. ಮಾಹಿತಿ ತಂತ್ರಜ್ಞಾನ ಶೀಘ್ರವಾಗಿ ಬೆಳೆಯುತ್ತಿರುವ ಈ ಕಾಲಘಟ್ಟದಲ್ಲಿ ಅನೇಕ ಕಂಪೆನಿಗಳು ಅಣಬೆಗಳಂತೆ ಅಲ್ಲಲ್ಲಿ ತಲೆಯೆತ್ತುತ್ತಿವೆ. ಒಳ್ಳೆಯ ಸಂಭಾವನೆ ಪಡೆದುಕೊಂಡು ಒತ್ತಡದಲ್ಲಿ ಕೆಲಸ ಮಾಡಿ ಧಿಡೀರ್ ಶ್ರೀಮಂತಿಕೆಯ ಕನಸು ಕಾಣುವ ಪದವೀಧರರು ಉನ್ನತ ಶ್ರೇಣಿಯಲ್ಲಿರುವ ಖಾಸಗಿ ಕಂಪೆನಿಗಳಿಗೆ ಮೊರೆಹೋಗುವುದು ಸರ್ವೇ ಸಾಮಾನ್ಯ. ಎಂ.ಎಸ್ಸಿ. ಕಂಪ್ಯೂಟರ್ ಸೈನ್ಸ್ ಬಳಿಕ ಸಂಶೋಧನೆಯತ್ತ ಒಲವು ತೋರಿಸುವವರು ಬರೇ ಬೆರಳೆಣಿಕೆಯಷ್ಟು ಮಂದಿ ಮಾತ್ರ. ಉಪನ್ಯಾಸ ವೃತ್ತಿಗಂತೂ ನನಗೆ ಬೇಡಪ್ಪಾ ಈ ಸಹವಾಸ ಎನ್ನುವವರೇ ಹೆಚ್ಚು. ಹಾಗಾಗಿ ಬಹಳಷ್ಟು ಜನರ ಆಸಕ್ತಿ ಖಾಸಗೀ ವಲಯದಲ್ಲೇ ವೃತ್ತಿ ಜೀವನ ಇರುತ್ತದೆ.

ಉದ್ಯೋಗಾವಕಾಶಗಳು:

ನಾನು ಮೊದಲೇ ತಿಳಿಸಿದ ಹಾಗೆ ಈ ಪದವಿಗೆ ಸರ್ಕಾರಿ ಉದ್ಯೋಗದ ಅವಕಾಶಗಳಿದ್ದರೂ ಅದು ಕೇವಲ ಸೀಮಿತ ಮಂದಿಗಷ್ಟೇ ಹೊರತು ಎಲ್ಲರಿಗೂ ದಕ್ಕುವಂತದ್ದಲ್ಲ. ಪ್ರವೇಶಾತಿ ಪರೀಕ್ಷೆಯೇ ಅತೀ ದೊಡ್ಡ ಸವಾಲು ಈ ವೃತ್ತಿಗೆ. ತಾವು ಆಸಕ್ತಿ ಹೊಂದಿರುವ ಮತ್ತು ಅನುಭವವಿರುವ ಕ್ಷೇತ್ರದಲ್ಲಿ ಮುಂದುವರೆಯುವುದು ಉತ್ತಮ. ಎಲ್ಲಾ ವಲಯಗಳಲ್ಲೂ ಹಲವು ರೀತಿಯ ಅವಕಾಶಗಳಿವೆ ಅವುಗಳಲ್ಲಿ ಕೆಲವನ್ನು ಇಲ್ಲಿ ಹೇಳಿದ್ದೇನೆ ನೋಡಿ: ಸೈಂಟಿಫಿಕ್ ಟೆಕ್ನಿಷಿಯನ್, ಟೆಕ್ನಿಕಲ್ ಅಸಿಸ್ಟೆಂಟ್, ಜೂನಿಯರ್ ಅಸಿಸ್ಟೆಂಟ್, ಅಸೋಸಿಯೇಟ್, ಕನ್ಸಲ್ಟೆಂಟ್ ಮತ್ತು ಐಟಿ ಕನ್ಸಲ್ಟೆಂಟ್ ಹೀಗೆ ಹತ್ತು ಹಲವು ಉದ್ಯೋಗಗಳಿವೆ.  ಎಂ.ಎಸ್ಸಿ. ಕಂಪ್ಯೂಟರ್ ಸೈನ್ಸ್ ಪದವಿಯ ಬಳಿಕ ಹಲವರು ಭಿನ್ನ ರೀತಿಯಲ್ಲೂ ತಮ್ಮ ಉದ್ಯೋಗವನ್ನು ಅರಸಿಕೊಂಡು ಹೋಗುತ್ತಾರೆ, ಹೇಗೆಂದರೆ, ಪ್ರಾಧ್ಯಾಪಕರಾಗಿ, ಸಹಪ್ರಾಧ್ಯಾಪಕರಾಗಿ, ಉಪನ್ಯಾಸಕರಾಗಿ, ಕಂಪ್ಯೂಟರ್ ತರಬೇತುದಾರರಾಗಿ ಶಿಕ್ಷಕ ವೃತ್ತಿಯನ್ನು ಆಯ್ಕೆ ಮಾಡಿಕೊಳ್ಳುವ ಮಂದಿಯಿರುತ್ತಾರೆ. ಇದಲ್ಲದೆ ತಾಂತ್ರಿಕ ವಿಭಾಗಗಳಲ್ಲಾದರೆ, ಸಾಫ್ಟ್ ವೇರ್ ಕನ್ಸಲ್ಟೆಂಟ್, ಇನ್ಫೋರ್ಮೇಶನ್ ಸೆಕ್ಯೂರಿಟಿ ಮ್ಯಾನೇಜರ್, ಡಾಟಾ ಸೈಂಟಿಸ್ಟ್, ಕಂಪ್ಯೂಟರ್ ಸಿಸ್ಟಮ್ ಅನಲಿಸ್ಟ್, ವೆಬ್ ಡಿಸೈನರ್, ಕಂಪ್ಯೂಟರ್ ನೆಟ್ ವರ್ಕ್ ಆರ್ಕಿಟೆಕ್ಟ್, ಕಂಪ್ಯೂಟರ್ ಇಂಜಿನಿಯರ್ ಹೀಗೆ ಹಲವು ಪ್ರತಿಷ್ಠಿತ ಹುದ್ದೆಗಳೂ ಕೂಡಾ ಈ ಪದವಿಗೆ ಅವಕಾಶವನ್ನು ಒದಗಿಸಿಕೊಡುತ್ತದೆ.

ಸವಾಲುಗಳು ಮತ್ತು ಪೈಪೋಟಿ:

ಗಣಕ ವಿಜ್ಞಾನದ ಪದವಿಗೆ ಇಷ್ಟೊಂದು ಅವಕಾಶಗಳಿದ್ದರೂ ವರುಷಗಳು ಉರುಳಿದಂತೆ ಪರ್ಯಾಯ ಪದವಿಗಳು ಈ ಸ್ಥಾನವನ್ನು ತುಂಬುತ್ತಿವೆ. ಇದೇ ವಲಯದ ಹಲವು ಪದವಿಗಳು ಗಣಕಯಂತ್ರ ವಿಜ್ಞಾನದ ಪದವಿಯನ್ನು ಬೆಳೆಯಲು ಬಿಡುತ್ತಿಲ್ಲ. ಕೆಲವೊಂದು ಸವಾಲುಗಳನ್ನು ಮತ್ತು ಈ ಪದವಿಗಿರುವ ತೀವ್ರ ಪೈಪೋಟಿಯನ್ನು ಇಲ್ಲಿ ನೀಡಿದ್ದೇನೆ:

* ಪದವಿಪೂರ್ವ ಶಿಕ್ಷಣದಲ್ಲಿ ಕಂಪ್ಯೂಟರ್ ಸೈನ್ಸ್ ತೆಗೆದುಕೊಂಡವನು ಬೇರೆ ವಿಷಯಗಳನ್ನೂ ಆಯ್ಕೆ ಮಾಡಿಕೊಂಡಿರುತ್ತಾನೆ. ಉದಾಹರಣೆಗೆ, ಭೌತಶಾಸ್ತ್ರ, ಗಣಿತ ಮತ್ತು ಗಣಕ ವಿಜ್ಞಾನ ಆಯ್ಕೆ ಮಾಡಿಕೊಂಡವನು ತನ್ನ ಆಸಕ್ತಿ ಭೌತಶಾಸ್ತ್ರ ಅಥವಾ ಗಣಿತಶಾಸ್ತ್ರದ ಕಡೆಗಿದ್ದರೆ ಪದವಿ ಕೇವಲ ಬೇಸಿಕ್ ನಾಲೇಜ್ ಗಾಗಿ ತಗೊಳ್ಳುವಷ್ಟರ ಮಟ್ಟಿಗೆ ಬಂದು ನಿಲ್ಲುತ್ತದೆ. ಇತರೆ ವಿಷಯಗಳು ಆಕರ್ಷಣೀಯವಾಗಿ ಕಂಡಷ್ಟು ಗಣಕ ವಿಜ್ಞಾನ ಕೆಲವೋಂದು ಬಾರಿ ಕೆಲಸ ಮಾಡುವದಿಲ್ಲ.

* ಪಿ.ಯು.ಸಿ. ಬಳಿಕದ ಡಿಪ್ಲೊಮಾ ಕೋರ್ಸ್ಗಳು ಈಗಿನ ಯುವಕರ ಮನಸ್ಸನ್ನು ಸೆಳೆಯುತ್ತದೆ. ಮೂರು ವರ್ಷ ಡಿಗ್ರಿ ಮಾಡುವುದಕ್ಕಿಂತ ಒಂದು ಅಥವಾ ಎರಡು ವರ್ಷದ ಡಿಪ್ಲೊಮಾ ಮತ್ತು ತಕ್ಷಣ ಸಿಗುವ ಜಾಬ್ ಆಫರ್ ಕೋರ್ಸ್ ಗೆ ಕುತ್ತು ತಂದಿದೆ. ಇತ್ತೀಚೆಗೆ ಆರ್‍ಟಿಫೀಶಿಯಲ್ ಇಂಟೆಲೆಜೆನ್ಸ್, ಮೆಶಿನ್ ಲರ್ನಿಂಗ್, ಡಾಟಾ ಸೈನ್ಸ್ ಬಗ್ಗೆ ಆನ್ಲೈನ್ ತರಗತಿಗಳೂ ಮತ್ತು ಇವಕ್ಕಾಗಿಯೇ ಹುಟ್ಟಿಕೊಳ್ಳುತ್ತಿರುವ ಖಾಸಗಿ ತರಬೇತಿ ಕೇಂದ್ರಗಳು ಇರುವ ಸಾಂಪ್ರದಾಯಿಕ ಪದವಿಯನ್ನು ಕಿತ್ತುಕೊಳ್ಳುತ್ತಿದೆ.

* ಬಿ.ಸಿ.ಎ. ಪದವಿ ಮಾಡಿದವರು ಎಂ.ಎಸ್ಸಿ. ಕಂಪ್ಯೂಟರ್ ಸೈನ್ಸ್  ಮಾಡಬಹುದು ಆದರೆ ಬಿ.ಸಿ.ಎ. ಬಳಿಕ ಸಿಗುವ ಕ್ಯಾಂಪಸ್ ಪ್ಲೇಸ್ ಮೆಂಟ್ಸ್ ಮುಂದಿನ ಶಿಕ್ಷಣಕ್ಕೆ ಬ್ರೇಕ್ ಹಾಕುತ್ತದೆ. ಬಿ.ಸಿ.ಎ. ಬಳಿಕ ಎಂ.ಸಿ.ಎ. ಆಕರ್ಷಕವಾಗಿ ಕಾಣಿಸುತ್ತದೆಯೇ ಹೊರತು ಪದವಿಯಲ್ಲ. ಅದೂ ಅಲ್ಲದೆ ಇತ್ತೀಚಿನ ವರ್ಷಗಳಲ್ಲಿ 3 ವರ್ಷದ ಎಂ.ಸಿ.ಎ. ಪದವಿ 2 ವರ್ಷಕ್ಕೆ ಇಳಿಸಿರುವುದೂ ಇನ್ನೂ ಅನುಕೂಲವಾಗಿದೆ.

* ತೀವ್ರ ಪೈಪೋಟಿ ಕೊಡುವಂತಹದ್ದು ಇಂಜಿನಿಯರಿಂಗ್ ಪದವಿ. ಇದರಲ್ಲಿ ಬಿ.ಇ. ತಗೊಂಡವರಿಗೆ ಎರಡು ಆಯ್ಕೆಗಳಿವೆ. ಒಂದು ಐ.ಟಿ. ಮತ್ತೊಂದು ಕಂಪ್ಯೂಟರ್ ಸೈನ್ಸ್. ಹಾಗಾಗಿ ತಾಂತ್ರಿಕ ಕ್ಷೇತ್ರಗಳಿಗಾಗಿ ಗುರಿಯಿಟ್ಟಿರುವವರು ಮುಖ್ಯವಾಗಿ ಪದವಿಗಳಿಗೇ ಮೊರೆಹೋಗುತ್ತಾರೆ. ಎಂ.ಎಸ್ಸಿ. ಕಂಪ್ಯೂಟರ್ ಸೈನ್ಸ್  ಗಿಂತ ಜಾಸ್ತಿ ವ್ಯಾಪ್ತಿ ಪದವಿಗಳಿಗಿದೆ ಎಂಬ ಭಾವನೆಯೇ ಇಲ್ಲಿ ಸಂಕಷ್ಟಕ್ಕೆ ಸಿಲುಕಿಸಿರುವುದು.

ಕೊನೆಗೊಂದು ಕಿವಿಮಾತು:

ಇಷ್ಟೆಲ್ಲಾ ಅವಕಾಶಗಳಿದ್ದರೂ ಈ ಪದವಿ ದಿನೇ ದಿನೇ ತನ್ನ ಛಾಪು ಕಳೆದುಕೊಳ್ಳುತ್ತಿರುವುದು ದುಃಖಕರ. ಇದಕ್ಕೆ ಕಾರಣ ಇಲ್ಲಿ ಪದವಿ ಪಡೆದುಕೊಳ್ಳುತ್ತಿರುವ ವಿದ್ಯಾರ್ಥಿಗಳೂ ಹೊಣೆಯಾಗುತ್ತಾರೆ. ಇಂಜಿನಿಯರಿಂಗ್ ವಿದ್ಯಾರ್ಥಿಗಳ ಸರಿಸಮಾನ ಪ್ರವೇಶಾತಿ ಪರೀಕ್ಷೆಗಳನ್ನು ನೀಡಿ ತಮಗಿಷ್ಟವಾದ ಹುದ್ದೆ ಅಲಂಕರಿಸುವ ಗುರಿ ಈ ಪದವಿ ವಿದ್ಯಾರ್ಥಿಗಳಲ್ಲಿ ಬರಬೇಕು. ಸರ್ಕಾರಿ ನೌಕರಿಯನ್ನು ತಮ್ಮದಾಗಿಸಿಕೊಳ್ಳುವ ಮನೋಭಾವ ಹೊಂದಿರಬೇಕು. ಇಲ್ಲಿ ವಿಫುಲ ಅವಕಾಶಗಳಿವೆಯೆಂದು ತಾವು ಸಮಾಜದಲ್ಲಿ ತೋರ್ಪಡಿಸಬೇಕು. ಯಾವುದೇ ಪದವಿ ಬೆಳೆಸುವ ಅಥವಾ ನೌಕರಿಗೆ ಬೇಡಿಕೆ ಪಡೆದುಕೊಳ್ಳುವಂತೆ ಮಾಡುವ ಶಕ್ತಿಯಿರುವುದು ಆಯಾಯ ಪದವಿ ಆಯ್ಕೆ ಮಾಡಿಕೊಳ್ಳುವ ವಿದ್ಯಾರ್ಥಿಗಳ ಕೈಯಲ್ಲಿ. ಕಂಪ್ಯೂಟರ್ ಸೈನ್ಸ್ ಓದುತ್ತಿರುವ ಮತ್ತು ಇನ್ನು ಮುಂದಕ್ಕೆ ಈ ಪದವಿ ಆಯ್ದುಕೊಳ್ಳುವವರೆಲ್ಲರಿಗೂ ಒಳ್ಳೆಯದಾಗಲಿ.. ಮತ್ತೊಮ್ಮೆ ಸಿಗೋಣ. ಹೊಸ ಡಿಗ್ರಿ.. ಹೊಸ ನೌಕ್ರಿಯೊಂದಿಗೆ...