ಕ್ರೌಂಚ ವಧಾ ರೂಪಕ

ಕ್ರೌಂಚ ವಧಾ ರೂಪಕ

Jan 16, 2021 08:27:49 AM (IST)
ಕ್ರೌಂಚ ವಧಾ ರೂಪಕ

ಮಾನಿಷಾದ ಪ್ರತಿಷ್ಠಾಂ ತ್ವಮಗಮಃ ಶಾಶ್ವತೀಃ ಸಮಾಃ

ಯತ್ಕ್ರೌಂಚ ಮಿಥುನಾದೇಕಮವಧೀಃ ಕಾಮ ಮೋಹಿತಂ ||

ಪಣಯಮಗ್ನ ಕ್ರೌಂಚಯುಗ್ಮದಲ್ಲಿ  ಗಂಡನ್ನು ಬೇಡ ಕೊಂದ ಸಂದರ್ಭ ಪೂರ್ವಾಶ್ರಮದಲ್ಲಿ ಬೇಡನಾಗಿದ್ದ ವಾಲ್ಮೀಕಿಯ ಮನದಲ್ಲಿ ಪ್ರೇಮದ ವಿರಾಟ್ ದರ್ಶನವಾಗುವುದು ಮೇಲ್ನೋಟಕ್ಕೆ ಸಾಮಾನ್ಯವಾಗಿ ಕಂಡರೂ ಅದರ ಗೂಢಾರ್ಥ ಬೇರೆಯೇ ಆಗಿದೆ. ಆ ಪ್ರೇಮವೇ ಕ್ರೌರ್ಯವಾಗಿ ಶಾಪವಾಕ್ಯದ ಜನನಕ್ಕೆ ಕಾರಣವಾಗಿ ಶೋಕಾಂಬುಧಿಯಲ್ಲಿ ಮಿಂದೇಳುವ  ವಾಲ್ಮೀಕಿ ರಾಮಾಯಣದ ರಚನೆಗೆ ಮುಂದಡಿಯಿಡುವ ದೃಶ್ಯ ಬೊಟ್ಟಿಕೆರೆ ಪುರುಷೋತ್ತಮ ಪೂಂಜ ವಿರಚಿತ ಮಾನಿಷಾದ ಪ್ರಸಂಗದ ಮುಖ್ಯ ಭಾಗ.

ಜಳಕಕೆಂದು ತಮಸೆಗಿಳಿದನಂದು ಮುನಿವರ ಪುಳಕಗೊಂಡ ಕೇಳುತಂದು ಪಕ್ಷಿಯಿಂಚರ ||
ಈ ಸಾಲು ಯಕ್ಷಗಾನ ಪ್ರಪಂಚದ ಜನಜನಿತವಾದ ಸಾಲಾಗಿದ್ದು  ತಿಶ್ರ ಛಾಪುತಾಳದಲ್ಲಿ ರಚಿಸಲ್ಪಟ್ಟ ಸುಂದರ ಕಾವ್ಯ ಕುಸುಮ. ರಂಗದಲ್ಲಿ ನಡೆಯಬೇಕಾದ ದೃಶ್ಯವನ್ನು ನಿರೂಪಣಾ ಶೈಲಿಯಲ್ಲಿ ನಿರೂಪಿಸಿರುವ ಕವಿಯ ಕಾವ್ಯ ರಚನಾ ಕೌಶಲ್ಯ ಯಕ್ಷಗಾನ ರಂಗದ ಹೊಸ ಸಾಧ್ಯತೆಗೆ ಭಾಷ್ಯ ಬರೆದಂತಿದೆ. ಮುನಿವರನಾದ ವಾಲ್ಮೀಕಿ ಜಳಕಕ್ಕೆಂದು ತಮಸೆಗಿಳಿಯುವ ಸಂದರ್ಭವದು. ಪ್ರಾಕೃತಿಕ‌ ಸೊಬಗಿಗೆ ಮಾರುಹೋದ ತಪೋನಿಧಿಗೆ ಪಕ್ಷಿಗಳ ಇಂಚರ ಕೇಳತೊಡಗಿದಾಗ ಮೈಮರೆತ ವಾಲ್ಮೀಕಿ ಪುಳಕಿತನಾಗುತ್ತಾನೆ.
"ಗಂಡು ಕ್ರೌಂಚ ಹೆಣ್ಣನಂದು ಬಳಿಗೆ ಕರೆಯಿತು ಕಂಡು ಕಾಣದಂತೆ ನಟಿಸಿ ಹೆಣ್ಣು ಮೆರೆಯಿತು" ಈ ಸಾಲುಗಳಲ್ಲಿ‌ ಕವಿಯು ಒಲವಿನಾಟವನ್ನು ಮೇಲ್ನೋಟಕ್ಕೆ ತಿಳಿಸಿದರೂ ಜಗದೋದ್ಧಾರದ ನೀತಿಯ ನಿಹಿತಾರ್ಥವನ್ನು ಪ್ರಸಕ್ತ ಸಾಲಿನಲ್ಲಿ‌ ಕಾಣಬಹುದು. ಗಂಡು ಕ್ರೌಂಚ ಹಕ್ಕಿ ಮತ್ತು ಹೆಣ್ಣು ಕ್ರೌಂಚ ಹಕ್ಕಿಯ ನಡುವಣ ಪ್ರಕರಣ ರಾಮಾಯಣದ ಹುಟ್ಟಿಗೆ ಕಾರಣವಾಗುತ್ತದೆಯಂತಾದರೆ ಆ ಪ್ರಕರಣ ಮಾನಿಷಾದ ಪ್ರಸಂಗದ ಹೃದಯಭಾಗವೆಂದರೆ ಅತಿಶಯವೆನಿಸದು.

ನಿನ್ನ ತೊರೆದು ಬೇರೆ ಹೆಣ್ಣ ಬೆರೆವೆನೆನ್ನುತ ತನ್ನ ರೆಕ್ಕೆಯರಳಿಸಲ್ಕೆ ಹೆಣ್ಣು ತಡೆಯುತ ||
ವಿರಸವೇತಕೀಗ ಪ್ರಿಯನೆ ಅಲ್ಪ ವಿಷಯಕೆ ಸರಸದಿಂದಲೀಗ ಬಾರೆ ಪ್ರಣಯದಾಟಕೆ ||
ಹಕ್ಕಿಗಳೆರಡು ಮನೋ ಸಹಜವಾದ ಕಾಮನೆಗಳನ್ನು ವ್ಯಕ್ತಪಡಿಸುತ್ತಿದ್ದರೂ ಈ ಸಾಲಿನಲ್ಲಿ ಪ್ರಸಂಗದ ಮುಂದಿನ ಭಾಗ ಅಡಗಿದೆ. ಸರಸ- ವಿರಸದ ಭಾವನೆಗಳ ಬೇಗೆಯನ್ನು ಹೊಂದಿಹ ಮಹಾಕಾವ್ಯದ ರಚನೆಗೆ ಈ ಪಕ್ಷಿಗಳ ಪ್ರಣಯದಾಟ ವೇದಿಕೆಯನ್ನು ಸೃಷ್ಟಿಸಿದೆ. ಕ್ರೌಂಚ ಪಕ್ಷಿಗಳನ್ನು ರಾವಣ- ಮಂಡೋದರಿಯಾಗಿ ಪರೋಕ್ಷವಾಗಿ ಚಿತ್ರಿಸಿದ ಕವಿ ಸೀತೆಯ ಮೇಲೆ ರಾವಣ ಮೋಹಿತನಾದ ಬಗೆಯನ್ನು "ನಿನ್ನ ತೊರೆದು ಬೇರೆ ಹೆಣ್ಣ ಬೆರೆವೆನೆನ್ನುತ" ಎಂಬ ಸಾಲಿನಲ್ಲಿ ಗುರುತಿಸಬಹುದಾಗಿದೆ.

ಖಗಗಳಿಂತು ರಮಿಸುತಿರಲು ಮುನಿಪ ದೂರದಿ ಮುಗುಳು ನಗುತ ನೋಡುತಿರ್ದ ನದಿಯ ತೀರದಿ ||
ಈ ಖಗಗಳ ಸರಸದಾಟವನ್ನು ದೂರದಿಂದಲೇ ಗಮನಿಸುತ್ತಿದ್ದ ರಸ ಋಷಿ ವಾಲ್ಮೀಕಿ ರಾಮಾಯಣದ ರಚನೆಗೆ ತನಗರಿವಿಲ್ಲದೆ ಮುಂದಡಿಯಿಡುತ್ತಿದ್ದನು. ಆ ಸಂದರ್ಭ, "ಬಂದನಾಗ ಬೇಟೆಗೆಂದು ಕ್ರೂರಿ ಲುಬ್ಧಕ ತಂದ ಬಲೆಯನೆಸೆದು ಕಾದನಾ ಕಿರಾತಕ" ಎಂಬುದಾಗಿ ಬರೆದ ಕವಿ ಬೇಟೆಗಾರನ ನೆಪದಲ್ಲಿ ಶ್ರೀರಾಮನೇ ಬಂದ ಬಗೆಯನ್ನು ನಾವಿಲ್ಲಿ ಅರ್ಥೈಸಿಕೊಳ್ಳಬಹುದು.
"ದೂರದಲ್ಲಿ ಖಗಗಳಿರುವ ಕಂಡು ಸಂತೋಷದಿ ಕ್ರೂರ ಶರವ ತೆಗೆಯುತೆಸೆದ ಬೇಡ ರೋಷದಿ" ಕಾಮಮೋಹಿತನಾದ ರಾವಣ ಎಂಬ ಗಂಡು ಕ್ರೌಂಚ ಹಕ್ಕಿಯ ಮೇಲೆ ಶರಪ್ರಯೋಗವನ್ನು ಬೇಡನು ಮಾಡುವ ಬಗೆ ಮುಂದಿನ ದೃಶ್ಯದ ಹೆದ್ದಾರಿ.

ಬಾಣದ ಹತಿಯೊಳು ಪ್ರಾಣವ ತೊರೆಯುತ | ಕ್ಷೋಣಿಯೊಳೊರಗಿತು ಬೆಳ್ಳಕ್ಕಿ |
ಕಾಣುತಲದ ಛೀತ್ಕರಿಸುತ ದು:ಖದಿ | ತಾನುಲಿಯಿತು ಪೆಣ್ಣಳುವುಕ್ಕಿ |
ದೂರದೊಳಾ ಶೃಂಗಾರವ ನೋಡಿ ಉ | ದಾರ ಮನದೊಳಾ ಮುನಿಯಿರಲು |
ಚೀರುತ ಹಕ್ಕಿಯು ಹಾರಾಡುತಲಿರೆ | ಕ್ರೂರ ನಿಷಾದನು ಬಳಿ ಬರಲು ||

ಕಣ್ಣಲಿ ಕೆಂಗಿಡಿ ಸೂಸಿದರೆದೆಯಲಿ ಹೆಣ್ಣಿನ ದುರ್ಗತಿಗನುತಾಪ ||
ಬಣ್ಣಿಸಲರಿಯದ ಕರುಣೆಯೊಳಾಮುನಿ ತನ್ನನೆ ಮರೆತಿತ್ತನು ಶಾಪ ||
ಬಾಣದ ಹತಿಯನ್ನು ತಾಳಲಾರದೆ ಧರೆಗೊರಗಿದ ಗಂಡು ಕ್ರೌಂಚ ಹಕ್ಕಿಯನ್ನು ಕಂಡು ಹೆಣ್ಣು ಕ್ರೌಂಚ ಹಕ್ಕಿಯು ರೋಧಿಸಲು ತೊಡಗುತ್ತದೆ. ಇನಿಯನನ್ನು ಕಳೆದುಕೊಂಡ ಪಕ್ಷಿಯ ರೋಧನ ಮುಗಿಲು ಮುಟ್ಟಿದಾಗ ಆ ಶೋಕವೇ ವಾಲ್ಮೀಕಿಯ ಹೃದಯ ತಟ್ಟುತ್ತದೆ. ಕ್ರೌಂಚ ಮಿಥುನದಲ್ಲಿ ಗಂಡನ್ನು ವಧಿಸಿ ಲೋಕಪಾಲನೆಗಾಗಿ ಹೆಣ್ಣಿಗೆ ಶೋಕವಿತ್ತ ಬಗೆಯನ್ನು ಕ್ರೌಂಚವಧಾ ಪ್ರಕರಣ ರಾಮಾಯಣವನ್ನು ಸೂಕ್ಷ್ಮವಾಗಿ ಅರ್ಥೈಸಲು ಕಾರಣವಾಗುತ್ತದೆ. ಕೊಂದ ಬೇಡನ ಮೇಲೊರಗಿದ ಶಾಪವಾಕ್ಯ ಲೋಕ ಕಲ್ಯಾಣಕ್ಕೆ ನಾಂದಿ ಹಾಡುತ್ತದೆ.