ಕರೆಯುವಳವ್ವೆ.....

ಕರೆಯುವಳವ್ವೆ.....

Deevith SK Peradi   ¦    Jan 23, 2021 05:41:26 AM (IST)
ಕರೆಯುವಳವ್ವೆ.....

ನೆರೆದವರು ಬಾಯ ತೆರದಾಯೆಂದು ನೋಡುತಿರೆ

ತರಣಿಕುಲಜಂಗೆರಗಿ ತೆರಳಿ ಮುಂದಡಿಯಿಡಲು
ಬಿರಿದ ಭೂಮಿಯೊಳಿಳಿದು ಕಾಣದಾದಳು ಸಭಿಕರಕಟೆಂದು ಮರುಗುತಿರಲು||

ಶ್ರೀರಾಮನ ಮುಂದೆ ರಾಮನ ತರಳರಾದ ಕುಶಲವರು ವಾಲ್ಮೀಕಿ ವಿರಚಿತ ರಾಮಾಯಣದ ಕಾವ್ಯ ವಾಚನವನ್ನು ಮಾಡುವ ಸಂದರ್ಭ. ಶರ ವಿಜೃಂಭಕದ ಮೂಲಕ ತನ್ನ ಕುವರರ ಅಸ್ಮಿತೆಯನ್ನು ತಿಳಿದ ಶ್ರೀರಾಮ ಕುಶ- ಲವರನ್ನು ತನ್ನ ಮಡಿಲಿಗೇರಿಸಿಕೊಳ್ಳುವ ಭಾವುಕ ಕ್ಷಣ. ಮಾತೃವಾತ್ಸಲ್ಯದ ಹೊಣೆಯನ್ನು ಹೊತ್ತ ಜಾನಕಿ ಇಹದ ಎಲ್ಲ ಬಾಂಧವ್ಯಗಳಿಂದ ಮುಕ್ತಳಾಗಿ ತನ್ನ ತಾಯಿಯ ಮಡಿಲನ್ನೇರುವ ಪರಲೋಕದ ಸತ್ಯವನ್ನು ಅಪ್ಪಿಕೊಳ್ಳುವ ಕಹಿ, ಕಟು ವಾಸ್ತವಕ್ಕೆ ಸಜ್ಜಾದ ವೇದಿಕೆ. ಹೌದು... ಕಡೆಗೂ ಸೀತೆ ಯಾರಿಗೂ ಅರಿಯದ ರೀತಿಯಲ್ಲಿ ಭೂ ಸಮಾಧಿಯಾಗುವತ್ತ ಧಾವಿಸುತ್ತಿದ್ದಳು.

ಬೊಟ್ಟಿಕೆರೆ ಪುರುಷೋತ್ತಮ ಪೂಂಜ ವಿರಚಿತ ಮಾನಿಷಾದ ಯಕ್ಷಗಾನ ಪ್ರಸಂಗ ಸಾಹಿತ್ಯದ ಸೀತೆಯ ಭೂ ಸಮಾಧಿಯ ಪ್ರಕರಣ ಯಕ್ಷಗಾನ ರಂಗದ ಭಾವುಕ‌ ಸನ್ನಿವೇಶ. ತಂದೆ ತಾಯಿ ಇಬ್ಬರನ್ನೂ ಹೊಂದಿ ಬದುಕುವ ಸೌಭಾಗ್ಯವಿರದ ಕುಶಲವರನ್ನು ತಂದೆಯ ಮಡಿಲಿಗೆ ಒಪ್ಪಿಸಿ ಭದ್ರ ಭವಿಷ್ಯ ಒದಗಿಸಲು ಬಂದ ಸೀತೆ ಭೂತಕಾಲದ ನೆನಪಿನೊಳಗೆ ಲೀನವಾಗಲು ಮುಂದಡಿಯಿಟ್ಟಿದ್ದಳು.

ಬಳಿಕ ತರಳರವೆರಸಿ ರಾಮನ
ಚೆಲುವ ಚರಣಕೆ ಮಣಿದು ಮುನಿಕುಲ
ತಿಲಕಗಭಿ ನಮಿಸುತ್ತಲೆಂದಳು ಜನಕ ನಂದನೆಯು||

ಮಾತೃತ್ವದ ಹೊಣೆಗಾರಿಕೆನ್ನು ಮುಗಿಸಿದ ಸೀತೆ ತರಳದ್ವಯರನ್ನು ರಾಮನ ಚೆಲುವ ಚರಣಕೆ ನಮಿಸಿ, "ತರಳರಿರ ನಿಮಗಿಂದು ದೊರೆತ ನಿಮ್ಮಯ ಜನಕ
ಹರಿದುದೆನ್ನಯ ಹೊಣೆಯು" ಎಂದು ನುಡಿದು ಮಕ್ಕಳನ್ನು ರಘುಕುಲ ತಿಲಕನಿಗೆ ಒಪ್ಪಿಸಿ, " ಮುಂದೆ ನಾ ರಾಮನಿಗೆ ಅರಸಿಯೆನಿಸಿರುವ ಸೌಭಾಗ್ಯವನು ಪಡೆದಿಲ್ಲ " ಎಂದು ನಿರ್ಧಾರದ ಧ್ವನಿಯಲ್ಲಿ ಸತ್ಯವನ್ನು ಲೋಕಕ್ಕೆ ಪರಿಚಯಿಸುತ್ತಾಳೆ. " ಇಳೆಯರಸನೀ ಸನ್ನಿಧಿಯೊಳಿನ್ನಿಳೆಯ ನಂದನೆಗಿಲ್ಲ ಶಾಶ್ವತ
ನೆಲೆಯು " ಎಂದು ಸೀತೆ ಹೇಳುವ ನುಡಿ ರಾಮಾಯಣದ ಮೂಲಾಂಶವನ್ನು ಧ್ವನಿಸುತ್ತದೆ. " ಕರೆಯುವಳವ್ವೆಯವಳನು ಸೇರಿಕೊಂಡಪೆನು" ಎಂದು ಸೀತೆಯ ಮೂಲಕ ಹೇಳಿಸುವ ಕವಿ ಸೀತೆಯ ಜನನದ ಹಾದಿಯನ್ನು ಮರು ನೆನಪಿಸುತ್ತಾನೆ. ಇಹದಲ್ಲಿ ತಾನು ಅನುಭವಿಸಿದ, ತನ್ನಿಂದಾಗಬೇಕಾದ ಎಲ್ಲ ಹೊಣೆಗಾರಿಕೆಯ ಬಂಧನದಿಂದ ಮುಕ್ತಳಾದ ಸೀತೆ ದಾರುಣ ಅಂತ್ಯಕ್ಕೆ ಸಾಕ್ಷಿಯಾಗುತ್ತಾಳೆ. ತನ್ನವತಾರದ ಅಂತ್ಯಕ್ಕೆ ತಾನೇ ನಾಂದಿ ಹಾಡುತ್ತಾಳೆ.