ಭ್ರಾತೃನಿಷ್ಠೆಯ ರೂಪಕ "ಪಾದುಕಾ ಪ್ರದಾನ"

ಭ್ರಾತೃನಿಷ್ಠೆಯ ರೂಪಕ "ಪಾದುಕಾ ಪ್ರದಾನ"

Deevith S K Peradi   ¦    Nov 21, 2020 08:00:00 AM (IST)
ಭ್ರಾತೃನಿಷ್ಠೆಯ ರೂಪಕ "ಪಾದುಕಾ ಪ್ರದಾನ"

ಮತ್ತೆ ಬಹು ರಮ್ಯತರ ವನಗಿರಿಯ ಸೌಭಾಗ್ಯ
ಚಿತ್ರಕೂಟದೊಳಿರ್ದರವರಿತ್ತ ದಶರಥ ನೃ
ಪೋತ್ತಮನು ಕೌಸಲ್ಯೆಯರಮನೆಗೆ ಬಂದು ನಿಜಪುತ್ರರಂ ನೆನೆನೆನೆಯುತ |
ಚಿತ್ತದಲಿ ಕಡುನೊಂದು ಚಿಂತಿಸುವ ವೇಳೆಯಲಿ

ಹತ್ತಿರಕೆ ನಡೆತಂದ ಮಂತ್ರೀಶನಂ ಕಂಡು
ಉತ್ತರವ ಬೆಸಗೊಂಡನೆಲ್ಲಿ ಪರ್ಯಂತೆನ್ನ ಪುತ್ರರೈದಿದರೆನ್ನುತ||

ದಶರಥ ನೃಪಾಲನೊಳು ವಸುಧೆಯನು ಬೇಡಿ ತನ್ನ ಮಗನಾದ ಭರತನಿಗೆ ಪಟ್ಟಕಟ್ಟುವಲ್ಲಿ ಕಾರ್ಯಪ್ರವೃತ್ತಳಾದ ಕೈಕೇಯಿಯ ದುರಾಸೆಗೆ ಇನಕುಲದ ನೇಸರ ಮುಳುಗಬೇಕಾದ ಪರಿಸ್ಥಿತಿ ಬಂದೊದಗಿತ್ತು. ರಾಮನಿಗೆ ಹದಿನಾಲ್ಕು ವರುಷ ವನವಾಸ ಭರತನಿಗೆ ಪಟ್ಟಾಭಿಷೇಕವೆಂಬ ಕುತಂತ್ರಯುತ ಯೋಜನೆಗೆ ದಶರಥನೂ ಬಲಿಯಾಗಬೇಕಾಯಿತು. ದಶರಥನಾಡಿದ ಮಾತನ್ನು ಆಲಿಸಿದ ರಾಘವ ಪಿತೃವಾಕ್ಯ ಪರಿಪಾಲನೆಯೇ ತನ್ನ ಧರ್ಮವೆಂದು ಅರಿತು ಅನುಜ ಲಕ್ಷ್ಮಣ ಹಾಗೂ ಸತಿ ಸೀತೆಯ ಜೊತೆಗೆ ವನಗಮನಕ್ಕೆ ಸಿದ್ಧನಾದನು. ತನ್ನವರಾದ ಎಲ್ಲರನ್ನೂ ಬಿಟ್ಟು ಗುಹನ ಸಹಾಯದಿಂದ ಗಂಗಾನದಿಯನ್ನು ದಾಟಿ, ಭಾರಧ್ವಾಜರ ನಿರ್ದೇಶದಂತೆ ಚಿತ್ರಕೂಟದೆಡೆಗೆ ಸಾಗಿದ ರಾಮನಿಗೆ ಸೋದರವಾತ್ಸಲ್ಯದ ವಿರಾಟ್ ದರ್ಶನವಾಗುವ ಕಾಲ ಸನಿಹವಾಗಿತ್ತು.

ಯಕ್ಷಗಾನ ಲೋಕದ ರಸ ಋಷಿ ಪಾರ್ತಿಸುಬ್ಬನ "ಪಾದುಕಾ ಪ್ರದಾನ" ಪ್ರಸಂಗ ಸೋದರವಾತ್ಸಲ್ಯದ ಪ್ರತೀಕ. ಭರತನ ಭಾವಸ್ಫುರಣೆಗೆ ಅವಕಾಶವಿರುವ,  ಸರ್ವಕಾಲಕ್ಕೂ ಮಾನ್ಯವಾದ ಪ್ರಸಂಗ. ವನದೆಡೆಗೆ ಸಾಗಿದ ಪುತ್ರನ ಬಗ್ಗೆ ಚಿಂತೆಯ ಮಹೋದಧಿಯೊಳಗೆ ಮುಳುಗಿದ ದಶರಥ ಕಾಲವಾಗುವ ಹಂತದಲ್ಲಿ "ಎಂದಿನಂತೇಕೆಬಾರೆ ರಾಮಚಂದ್ರ ಕಣ್ಣಮುಂದೆ ಸುಳಿದಾಡಲೊಲ್ಲೆ ರಾಮಚಂದ್ರ" ಎಂದು ರಾಮನ ಬಗ್ಗೆ ಯೋಚಿಸುತ್ತ" ಬಿಲ್ಲು ವಿದ್ಯೆಗಳ ತೋರೊ ರಾಮಚಂದ್ರ, ಹಿಂದೆ ನಿಲ್ಲುವ ಲಕ್ಷ್ಮಣನ ಕಾಣೆ ರಾಮಚಂದ್ರ, ಎಲ್ಲಿಗೆ ಪೋದಳೊ ಸೀತೆ ರಾಮಚಂದ್ರ ನಮ್ಮೆಲ್ಲರ ಬಿಟ್ಟು ನೀ ಪೋದೆ ರಾಮಚಂದ್ರ" ಎಂದು ಸೀತಾ, ರಾಮ, ಲಕ್ಷ್ಮಣರ ಬಗ್ಗೆಯೇ ಕನವರಿಸತೊಡಗುತ್ತಾನೆ.

" ಮೇಲು ಶ್ವಾಸ ಉಕ್ಕಿತಲ್ಲಾ ಇಂಥ ವೇಳ್ಯಕ್ಕೆ ಬಾಲಕರೊಬ್ಬರೂ ಇಲ್ಲ. ತರಹರಿಸುತಿದೆ ಪ್ರಾಣ ತಾನುಳಿವ ಪಾಡಿಲ್ಲ ಕರೆಸು ಭರತನ ಮಂತ್ರಿ ಚಾರಕರ ಕಳುಹು" ತನ್ನ ಇಹದ ಯಾತ್ರೆಯ ಅಂತಿಮ ಕ್ಷಣಗಳನ್ನು ಎಣಿಸುತ್ತಿದ್ದ ದಶರಥನಿಗೆ ಕಾಲನ ದೂತರು ಬಂದುದು ತಿಳಿದೇ ಹೋಯಿತು. ಧಾರಿಣೀಪತಿ ಮಾತುಮಾತಾಡಿದಂತೆ ಎದೆಯಾರಿ ಕಣ್ಮುಚ್ಚಿದಾಗ ಇನಕುಲದ ಆಶಾಸೌಧವೇ ಮುರಿದು ಬಿದ್ದಿತು. ಪತಿಯಳಿದ ಕ್ಲೇಶದಿಂದ ಮೂರು ಮಂದಿ ಪಟ್ಟದರಸಿಯರು " ಕಾಂತನೇಕೆ ಮಾತನಾಡನಯ್ಯಯ್ಯೋ " ಎಂದು ಕಾಂತನ‌ ಮೈಯಲ್ಲಿ ಬಿದ್ದು ಅಳಲು ಪ್ರಾರಂಭಿಸಿದಾಗ ವಸಿಷ್ಠ ಮುನಿ ಅವರನ್ನು ಪರಿಪರಿಯಾಗಿ ಸಮಾಧಾನಿಸುತ್ತಾನೆ.

ಈ ಘೋರ ಸನ್ನಿವೇಶವನ್ನು ಊಹಿಸದೇ ಇದ್ದ ಭರತನು ವಾಸ್ತವವೇನೆಂದು ತಿಳಿಯಲು ಅಯೋಧ್ಯೆಗೆ ಬರುವ ವೇಳೆ ಅವನಿಗಾದ ಘೋರ ಸತ್ಯ ದರ್ಶನ ಜೀವನನ್ನೇ ಕಹಿಯಾಗಿಸಿತು. ತಂದೆಯ ಮರಣ, ಮರಣಕ್ಕೆ ಕಾರಣಳಾದ ತಾಯಿ, ಜ್ಯೇಷ್ಠನಿಗೊದಗಿದ ಸಂಕಟ, ಇನಕುಲಕ್ಕೊದಗಿದ ಕಂಟಕ ಇವೆಲ್ಲವೂ ಭರತನನ್ನು ಕಿತ್ತು ತಿನ್ನಲು ಪ್ರಾರಂಭಿಸಿದಾಗ ಭರತನು " ಎನಗಾಗಿ ರಾಘವನ ವನಕೆ ಕಳುಹಿದ ಮೇಲೆ ಜನನಿಯೇ ಎನಗಿವಳು ಅನುಮಾನವೇನು" ಎಂದು ಯೋಚಿಸಿ ಪ್ರಳಯ ಕಾಲದ ರುದ್ರನ ತೆರದಿ ಆರ್ಭಟಿಸಿ ಹೊಳೆವ ಖಡ್ಗವನ್ನು ಕೊಂಡು ಈ ಎಲ್ಲ ದುಷ್ಕೃತ್ಯಗಳಿಗೆ ಕಾರಣಕರ್ತಳಾದ ತನ್ನವ್ವೆಯನ್ನು ಕಡಿವೆನೆಂದು ಮುಂದುವರೆದಾಗ ಆತನನ್ನು ಸುಮಂತ್ರ ಸಂತ್ತೈಸುತ್ತಾನೆ.

"ಈ ನರೇಂದ್ರನು ತೀರಿ ಹೋದ ಮೇಲೆನಗಾಗಿ ನಾನೆಂತು ಮೊಗದೋರ್ಪೆ ದಾನವಾಂತಕಗೆ" ಎಂದು ದುಃಖಿತನಾದ ಭರತನು "ಕೌಸಲ್ಯೆಯರ ದುಃಖ ಕಾಂಬುದಕ್ಕೆ ಮುನ್ನವೇ ಲೇಸೆನಗೆ ಸಾವು" ಎಂದು ನಿರ್ಧರಿಸಿದಾಗ ಸುಮಂತ್ರನು ಭರತನಿಗೆ ಪುತ್ರ ಧರ್ಮವನ್ನು ನೆನಪಿಸುತ್ತಾನೆ. ವಾಸ್ತವವನ್ನು ಅರಿತುಕೊಂಡ ಭರತ ರೂಢಿಪಾಲಕನ ತನು ಸಂಸ್ಕಾರ ಕರ್ಮವನ್ನು ಮಾಡಿ ಆಕ್ಷಣದಲ್ಲಿಯೇ ರಾಮನನ್ನು ಮರಳಿ ಅಯೋಧ್ಯೆಗೆ ತರಲೆಂದು ಹೊರಟೇ ಬಿಡುವ ದೃಶ್ಯ ಪ್ರಸಂಗದ ಮುಖ್ಯ ಭಾಗ.

ಚಿತ್ರಕೂಟದೆಡೆಗೆ ನಾನಾ ಸೈನ್ಯವನ್ನು ಕೂಡಿಕೊಂಡು ಮೂವರು ಜನನಿಯರ ಸಹಿತ ಆಗಮಿಸುತ್ತಿದ್ದ ಭರತನನ್ನು ದೂರದಿಂದಲೇ ಕಂಡ ಸೌಮಿತ್ರಿ, "ಅಣ್ಣ ನೋಡು ಭರತ ರಾಜ್ಯತನ್ನದಾಯಿತೆಂಬ ಗರ್ವವನ್ನು ತೋರ ಬಂದ ನಮ್ಮ ಕಣ್ಣಿನೆದುರಿಗೆ" ಎಂದು ರಘುಜನಿಗೆ ತಿಳಿಸಿದಾಗ ರಾಘವ ನುಡಿಯುವ ಮಾತು ಶ್ರೀರಾಮನಿಗೆ ಭರತನ ಮೇಲಿದ್ದ ನಂಬಿಕೆಯ ದ್ಯೋತಕವಾಗಿ ಕವಿ ಚಿತ್ರಿಸಿದ್ದಾನೆ.

ಸುಮ್ಮನಿರೈ ಭರತ ಬರುವ ಧರ್ಮವನ್ನು ಅರಿಯೆ ನೀನು|
ಹೆಮ್ಮೆಗಾರನಲ್ಲ ಗುಣದಿ ನಮ್ಮ ಸಹಜನು|

ರಥದಿಂದ ಇಳಿದು ಬಂದ ಭರತ ರಾಮಚಂದ್ರನ ಅಡಿಗೆ ವಂದಿಸಿದಾಗ ಸೋದರ ವಾತ್ಸಲ್ಯದಿಂದ ಅನುಜನನ್ನು ಅಪ್ಪಿದ ರಘುವರ ನುಡಿಯುವ ಮಾತು ಯಕ್ಷಗಾನ ರಂಗದೊಳಗೆ ಖ್ಯಾತವೆನಿಸಿದ ರಚನೆಯಾಗಿದೆ.

ಬಂದೆಯಾ ಇನ ವಂಶವಾರಿಧಿ
ಚಂದ್ರ ನಾ ಬರುವಾಗ ನಿನ್ನೊಡ
ನೆಂದುದಿಲ್ಲವೆನುತ್ತ ಮನದಲಿ ನೊಂದೆಯೇನೈ

ಭರತನಲ್ಲಿ ಮಾತಾ- ಪಿತರ, ಅನುಜನ ಕ್ಷೇಮ ಸಮಾಚಾರದ ಬಗ್ಗೆ ವಿಚಾರಿಸಿದ ರಾಘವ," ಏನು ಮುಖದಲಿ ಕಾಂತಿ ತಗ್ಗಿತು ನೀನು ಜನನಿಯ ಸಹಿತ ನಾವಿಹ ಕಾನನಾಂತಕೆ ಬಂದುದೇತಕೆ ಮಾನನಿಧಿಯೇ" ಎಂದು ಕೇಳಿದಾಗ ಭರತನಿಂದ ದೊರಕಿದ ದಶರಥನ ಮರಣವಾರ್ತೆ ರಾಮ, ಲಕ್ಷ್ಮಣ ಮತ್ತು ಸೀತೆಯನ್ನು ದುಃಖದ ಮಡುವಿನಲ್ಲಿ ಮುಳುಗಿಸಿತು.

ಇನಕುಲದ ಸೌಭಾಗ್ಯ ಚಿಂತಾಮಣಿಯ ಬೆಳಕು ತಗ್ಗಿದ ವಸ್ತು ಸ್ಥಿತಿಯನ್ನು ಅರಿತುಕೊಂಡ ದಾಶರಥಿ ತನ್ನಿಂದೊದಗಬೇಕಾದ ಕ್ರಿಯೆಗಳನ್ನು ಮಾಡಲು ಮುಂದಾಗುತ್ತಾನೆ. ಕವಿ ಪಾರ್ತಿಸುಬ್ಬ ವಾರ್ಧಕದಲ್ಲಿ ಬರೆದ ಈ ರಚನೆ ದಶರಥನ ಮೋಕ್ಷ ಪ್ರಾಪ್ತಿಗಾಗಿ ರಾಮ ಮಾಡಿದ ಧರ್ಮಕಾರ್ಯಗಳನ್ನು ಉಲ್ಲೇಖಿಸುತ್ತದೆ.

ವೇದೋಕ್ತಮಂತ್ರದಿಂ ವಿಹಿತ ಕರ್ಮಂಗಳಂ
ಸಾಧಿಸಿಯೆ ದಾನದಕ್ಷಿಣೆ ಹೋಮ ನೇಮದಿಂ
ಮೇದಿನೀಶಗೆ ಸ್ವರ್ಗಮಂಗೊಳಿಸಿ ಸಕಲ ಪಿತೃಜನವ ಸಂತುಷ್ಟಿಗೊಳಿಸಿ |
ದಿವಸ ಉಪವಾಸದೊಳಗಿರ್ದು ಮರುದಿನದೊ
ಳಾದಯಾಂಬುಧಿ ರಾಮ ಕೌಸಲೆ ಸುಮಿತ್ರೆಯರ
ಪಾದಕೆರಗುತ ಸಕಲ ಮುನಿಜನರ ಮುಂದೆ ಧೈರ್ಯೋದಾರದಿಂ ಪೇಳ್ದನು ||

ಪೂಜ್ಯ ಪಿತನ ಮೋಕ್ಷ ಸಾಧನೆಗಾಗಿ ಮಾಡಬೇಕಾದ ಎಲ್ಲ ಕಾರ್ಯಗಳನ್ನು ಪೂರೈಸಿದ ರಘುವರ ತನ್ನೆಲ್ಲರನ್ನು ಸಮಾಧಾನಿಸಲು ಮುಂದಾಗುತ್ತಾನೆ.  " ನೋವು ತೋಷವೆಂಬುದು ಸಂಸಾರಿಗಳಿಗೆ ಸದಾ ದೊರಕುವಂಥದ್ದು. ಸೂರ್ಯವಂಶದ ದೊರೆತನಕ್ಕೆ ಒಂದಿನಿತೂ ಕುಂದು ಒದಗದಂತೆ ದಾನ ಧರ್ಮಗಳಲ್ಲಿ ಲೋಪವಾಗದಂತೆ ಸಿರಿತನದಿಂದ ನೀವೆಲ್ಲರೂ ಅಯೋಧ್ಯೆಯಲ್ಲಿ ಬಾಳಿ" ಎಂದು ಅರುಹಿದ ರಘುವರ ಪಿತೃವಾಕ್ಯ ಪರಿಪಾಲನೆಯನ್ನು ಧ್ಯೇಯವಾಗಿರಿಸಿಕೊಂಡು ಭರತನನ್ನು ಉದ್ದೇಶಿಸಿ, "ತರಳ ಭರತ ನೀನೂ, ಶತ್ರುಘ್ನನೂ ಒಂದೇ ಬುದ್ಧಿಯೊಳಿರುತ ರಾಜ್ಯವಾಳ ಬೇಕು " ಎಂದು ಹೇಳಿ ಭರತನನ್ನು ಕರ್ತವ್ಯಮುಖನನ್ನಾಗಿಸುವಲ್ಲಿ ಎಚ್ಚರಿಸುತ್ತಾನೆ.

ರಾಮನಾಡಿದ ಮಾತು ಕೇಳಿದ ಭರತ, " ಪುಣ್ಯ ಸಾಗರ ನಿನ್ನ ಪಾದವನು ನಾ ಬಿಡೆನು. ನೀವು ಮೂವರು ಅರಣ್ಯದಲ್ಲಿ ಕಷ್ಟ ಕಾರ್ಪಣ್ಯಗಳ ಬದುಕನ್ನು ನಡೆಸುತ್ತಿರಬೇಕಾದರೆ ನನಗೆ ಅಯೋಧ್ಯೆಯ ರಾಜಕೀಯದ ಬಣ್ಣದ ಬದುಕು ಬೇಕೇ? ತನ್ನ ತಾಯು ಸ್ವಾರ್ಥ ಬುದ್ಧಿಯಿಂದ ಆಡಿದ ದುರ್ಬುದ್ಧಿಯ ನುಡಿಗಳನ್ನು ಕೇಳಿ ಈ ರೀತಿಯಾಗಿ ರಾಜ್ಯಬಿಟ್ಟು ಬರುವುದು ನೀತಿಯೇ? ಜ್ಯೇಷ್ಠ ಸುತನು ಇರಬೇಕಾದರೆ ಆತನ ತಮ್ಮನಿಗೆ ರಾಜ್ಯವೇ? ಇದಾವ ನ್ಯಾಯ? ಕೋಪಿಸಿಕೊಂಡು ನೀವು ಜರೆದರೆ ಮತ್ತೊಂದೂರಿಗೆ ಹೋಗುವೆನು ವಿನಃ ಜನ್ಮಾಂತರಕ್ಕೂ ನಾನು ನೀವಿಲ್ಲದ ಅಯೋಧ್ಯೆಗೆ ಹೋಗಲಾರೆ ಇದಕ್ಕೆ ನಿನ್ನ ಪುಣ್ಯಪಾದವೇ ಸಾಕ್ಷಿ" ಎಂದು ಹೇಳಿದನು.

ಭರತನ ಮಾತನ್ನು ಕೇಳಿದ ಎಲ್ಲರೂ ಹೌದೆನ್ನುತ್ತಾ ಕರವನ್ನು ಮುಗಿಯಲು ಪ್ರಾರಂಭಿಸಿದಾಗ ಮನ ಕರಗಿ ಮರುಗಿದ ಕೈಕಾದೇವಿ ನೊಂದ ಹೃದಯದಿಂದ "ಮಂಥರೆಯ ಮಾತನ್ನು ಕೇಳಿ‌ ಮಂದ ಬುದ್ಧಿಯವಳಾಗಿ ವ್ಯವಹರಿಸಿದ, ನನ್ನ ಮಾತನ್ನು ಮನದೊಳಗೆ ತಂದುಕೊಳ್ಳದಿರು ರಾಮ. ಬಾ ಅಯೋಧ್ಯೆಗೆ ಬಾ.... ತಮ್ಮಂದಿರನ್ನು ಕೂಡಿಕೊಂಡು ಬಾ.... ರಾಜ್ಯವಾಳು ಬಾ..... ಎಂದು ಅಂಗಲಾಚಿ ಬೇಡಿಕೊಳ್ಳಲು ಪ್ರಾರಂಭಿಸುವಳು.

ಮುಗುಳ್ನಕ್ಕ ರಾಮ ಸರ್ವರನ್ನೂ ಸಮಾಧಾನಿಸಲು ಮುಂದಾಗುತ್ತಾನೆ. "ಇನಕುಲದಲ್ಲಿ ಪ್ರಾದುರ್ಭವಿಸಿ ಸತ್ಯವನ್ನು ಬಿಟ್ಟು ನಡೆಯುವುದು ಎಷ್ಟು ಸರಿ ಅನುಜ? ಪಿತನ ವಾಕ್ಯವನ್ನು ಮೀರಿ ನಡೆದರೆ ಲೋಕಕ್ಕೆ ಹಿತವಾದೀತೇ ಅದು? ಮರುಗದಿರು. ಈರೇಳು ವರುಷವನ್ನು ಕಳೆದು ನಾನೇ ಮರಳಿ ಅಯೋಧ್ಯೆಗೆ ಆಗಮಿಸುತ್ತೇನೆ. ನಾ ಬರುವವರೆಗೆ ರಾಜ್ಯವನ್ನು ಆಳಿಕೊಂಡಿರು ನೀನು. ಅನುಮಾನವನ್ನು ಅಳಿಸಿಬಿಡು. ಹಠಮಾಡದಿರು. ನನ್ನೊಡನೆ ಜನಿಸಿರುವ ತಮ್ಮನಾದರೆ ನೀನು ನನ್ನ ಮಾತನ್ನು ಕೇಳು" ಎಂದು ರಾಘವ ನುಡಿದನು.

ರಾಮನಾಡಿದ ನುಡಿಗೆ ಎರಡೆನ್ನದೆ ರಾಮನುಲಿಯನ್ನು ಶಿರದೊಳು ಧರಿಸಿದ ರಾಮಾನುಜ ಭರತ ಮುಂದೆ ನುಡಿಯುವ ಮಾತು ಪ್ರಸಂಗದಲ್ಲಿ ಭ್ರಾತೃನಿಷ್ಠೆಯ ಪ್ರತೀಕವಾಗಿ ಕಾಣುತ್ತದೆ.

ಅಣ್ಣ ಕೇಳೀರೇಳು ವತ್ಸರದ ಮರುದಿವಸ
ಉಣ್ಣದಿಹೆನೊಂಭತ್ತು ಗಳಿಗೆ ಪರ್ಯಂತ
ಅಗ್ರಜರು ನೀವಷ್ಟರೊಳು ಬಾರದಿದ್ದರೆ
ಅಗ್ನಿಕುಂಡದೊಳಿಳಿವೆ ನಿಮ್ಮ ಪದದಾಣೆ

ಹದಿನಾಲ್ಕು ವರುಷ ಕಳೆದ ತರುವಾಯ ಒಂಬತ್ತು ಗಳಿಗೆಯ ಒಳಗಾಗಿ ನೀವು ಬಾರದಿದ್ದರೆ ತಾನು ಅಗ್ನಿಕುಂಡವನ್ನು ಪ್ರವೇಶಿಸುವುದಾಗಿ ಪ್ರತಿಜ್ಞೆ ಮಾಡಿದ ಭರತನಿಗೆ ಸೋದರ ವಾತ್ಸಲ್ಯದ ಪ್ರತೀಕವಾಗಿ ರಾಮ ತನ್ನ ಪಾವನಾಂಘ್ರಿಯೊಳಿದ್ದ ಹಾವುಗೆಯನ್ನು ನೀಡುತ್ತಾನೆ. ರಾಮನ ಪಾದುಕೆಯನ್ನು ಪಡೆದ ಭರತ ತನ್ನ ಶಿರದೊಳಿರಿಸಿ ಶ್ರೀರಾಮ ಸೇವೆಗಾಗಿ ಅಯೋಧ್ಯಾಭಿಮುಖನಾಗುತ್ತಾನೆ. ಪಾದುಕಾ ಪ್ರದಾನ ಅಯೋಧ್ಯೆಯ ಭವಿತವ್ಯದ ಏಳಿಗೆಯ ಪಾದವಾಗಿ ಪ್ರಸಂಗದುದ್ದಕ್ಕೂ ಮೂಡಿಬಂದಿರುವುದು ವಿಶೇಷವಾಗಿದೆ.