ಬದಲಾಗುತ್ತಿರುವ ವಿದ್ಯಾಮಾನಕ್ಕೆ ಆತಿಥ್ಯ ವಿಜ್ಞಾನ ಪದವಿ

ಬದಲಾಗುತ್ತಿರುವ ವಿದ್ಯಾಮಾನಕ್ಕೆ ಆತಿಥ್ಯ ವಿಜ್ಞಾನ ಪದವಿ

Oct 13, 2020 10:50:00 AM (IST)
ಬದಲಾಗುತ್ತಿರುವ ವಿದ್ಯಾಮಾನಕ್ಕೆ ಆತಿಥ್ಯ ವಿಜ್ಞಾನ ಪದವಿ

ಹಾಸ್ಪಿಟಾಲಿಟಿ ಸೈನ್ಸ್ ಅಥವಾ ಆತಿಥ್ಯ ವಿಜ್ಞಾನ ಪದವಿ ಎಂದಾಗ ತಕ್ಷಣ ನಮ್ಮ ಕಣ್ಣಿಗೆ ಕಾಣುವ ಉದ್ಯೋಗ ಹೋಟೇಲ್ ಮ್ಯಾನೇಜ್ ಮೆಂಟ್. ಸಾವಿರದಿಂದ ಲಕ್ಷದವರೆಗೆ ಮಾಸದ ವೇತನ ಪಡೆದುಕೊಳ್ಳುವ ಬಂಗಾರದ ಮೊಟ್ಟೆ ಈ ಪದವಿಯೆಂದೇ ಇಲ್ಲಿ ಡಿಗ್ರಿ ತೆಗೆದುಕೊಳ್ಳುವವರಿದ್ದಾರೆ. ಈ ಡಿಗ್ರಿಯ ವ್ಯಾಪ್ತಿಯ ಅರಿವಿಲ್ಲದೆ ಯಾವುದೋ ಒಂದು ಕೆಲಸ ಸಿಕ್ಕೇ ಸಿಗುತ್ತದೆ ಎನ್ನುವ ಮನಸ್ಥಿತಿಯವರೂ ಇದ್ದಾರೆ. ಹಾಗಾದರೆ ಈ ಪದವಿ ನಮ್ಮನ್ನು ಕಡೆಗಣಿಸುವ ಪ್ರಶ್ನೆಯೇ ಇಲ್ಲವೇ? ಈ ಪದವಿ ಪಡೆದುಕೊಂಡವರೆಲ್ಲಾ ಉದ್ಯೋಗಿಗಳೇ? "100% ಜಾಬ್ ಗ್ಯಾರಂಟಿ" ಎನ್ನುವ ಮಾತು ಈ ಡಿಗ್ರಿಗೆ ಅನ್ವಯವೇ? ಈ ಎಲ್ಲಾ ಪ್ರಶ್ನೆಗಳನ್ನು ಲೇಖನದ ಕೊನೆಗೆ ಮತ್ತೊಮ್ಮೆ ತಾಳೆ ಹಾಕಿ ನೋಡಿ. ನಿಮಗೆ ಉತ್ತರ ಸಿಗಲೂಬಹುದು.

ಡಿಗ್ರಿಯ ಆಯ್ಕೆಗೂ ಮುನ್ನ:

ಆತಿಥ್ಯ ನಿರ್ವಹಣೆ (ಹಾಸ್ಪಿಟಾಲಿಟಿ ಮ್ಯಾನೇಜ್ ಮೆಂಟ್) ಎನ್ನುವ ಪದವಿ ಹಲವಾರು ಡಿಗ್ರಿಗಳನ್ನು ಹೊಂದಿರುವ ಡಿಗ್ರಿ. ಬೇರೆ ಬೇರೆ ವಿಶ್ವವಿದ್ಯಾಲಯಗಳಲ್ಲಿ ವಿವಿದ ರೀತಿಯಲ್ಲಿ ಈ ಪದವಿ ಶಿಕ್ಷಣದ ಕೋರ್ಸ್ ಗಳು ಲಭ್ಯವಿವೆ. ವೇಗವಾಗಿ ಬೆಳೆಯುತ್ತಿರುವ ವಿಶ್ವಕ್ಕೆ, ಆತಿಥ್ಯ ನೀಡುವ ಕ್ಷೇತ್ರಗಳೂ ಶೀಘ್ರದಲ್ಲಿ ಒಗ್ಗಿಕೊಳ್ಳುತ್ತಿವೆ. ಹೋಟೇಲ್ ಉದ್ಯಮ, ಕಾರ್ಯಕ್ರಮ ನಿರ್ವಹಣೆ (ಈವೆಂಟ್  ಮ್ಯಾನೇಜ್ ಮೆಂಟ್), ಸಾರಿಗೆ ಮತ್ತು ಪ್ರವಾಸೋದ್ಯಮ, ಐಷಾರಾಮಿ ಸೇವೆಗಳು, ಆಹಾರ ಸೇವೆಗಳು, ಮತ್ತು ಇನ್ನಿತರ ವರ್ಗದ ಸೇವೆಗಳು ಈ ಪದವಿಯ ಒಳಗೆ ಸೇರಿಕೊಂಡಿವೆ. ಬರೇ ಡಿಗ್ರಿ ಮಾತ್ರವಲ್ಲ ಈ ಕೋರ್ಸ್ ಬೇಡಿಕೆಯಲ್ಲಿರುವುದು; ಯಾವುದೇ ರೀತಿಯಲ್ಲಿ ಶಿಕ್ಷಣ ಪಡೆದರೂ ಪರಿಣತಿಯಿದ್ದಲ್ಲಿ ಉದ್ಯೋಗದ ಬಾಗಿಲು ಸದಾ ತೆರೆದಿರುತ್ತದೆ. ಒಮ್ಮೆ ಏನೇನು ಅವಕಾಶಗಳಿವೆ ನೋಡೋಣ:

ಸರ್ಟಿಫಿಕೇಟ್ ಕೋರ್ಸ್: ಈ ಕೋರ್ಸ್ ಗಳು ಸಾಮಾನ್ಯವಾಗಿ ಕಡಿಮೆ ಅವಧಿಯದಾಗಿದ್ದು 6 ತಿಂಗಳಿಂದ ಹಿಡಿದು 1 ಅಥವಾ 2 ವರ್ಷದ ಕೋರ್ಸ್ ಗಳೂ ಇದ್ದಾವೆ. ಪಿಯುಸಿಯ ಬಳಿಕ ಯಾರಾದರೂ ಈ ಸರ್ಟಿಫಿಕೇಟ್ ಕೋರ್ಸ್ ಗಳನ್ನು ಮಾಡಬಹುದು.

ಡಿಪ್ಲೊಮಾ ಕೋರ್ಸ್: 1 ಅಥವಾ 2 ವರ್ಷದ ಡಿಪ್ಲೊಮಾ ಕೋರ್ಸ್ ಗಳು ಸಾಮಾನ್ಯವಾಗಿವೆ. ಎಸ್ಸೆಸೆಲ್ಸಿ ಅಥವಾ ಪಿಯುಸಿ ಬಳಿಕ ಡಿಪ್ಲೊಮಾ ಕೋರ್ಸ್ ಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ಕಡಿಮೆಯೆಂದರೂ 40% ಅಂಕಗಳನ್ನು ಹೊಂದಿರಬೇಕು.

ಡಿಗ್ರಿ ಕೋರ್ಸ್: ಪದವಿಯ ವಿಚಾರಕ್ಕೆ ಬಂದಾಗ, ಕೆಲವು ಅಥವಾ ವರ್ಷದ ಕೋರ್ಸ್ ಗಳು ಲಭ್ಯವಿವೆ. ಪಿಯುಸಿಯಲ್ಲಿ ಕಡಿಮೆಯೆಂದರೂ 45% ಅಂಕಗಳನ್ನು ಹೊಂದಿರಬೇಕು. ಇಂಗ್ಲೀಷ್ ಭಾಷೆಯನ್ನು ಅವರು ಕಲಿತಿರಬೇಕು. ಅನೇಕರು ಪದವಿಯನ್ನು ಆಯ್ಕೆ ಮಾಡಿಕೊಂಡು ಕೊನೆಯ ವರ್ಷದ ಇಂಟರ್ನ್ಶಿಪ್ ಸಮಯದಲ್ಲಿಯೇ ಉದ್ಯೋಗ ತಮ್ಮದಾಗಿಸಿಕೊಂಡು; ಕ್ಯಾಂಪಸ್ ಸೆಲೆಕ್ಷನ್ ಗೂ ಕಾಯದೆ ತಮ್ಮ ಹಾದಿಯಲ್ಲಿ ಹೊರಟುಬಿಟ್ಟಿರುತ್ತಾರೆ.

ಪೋಸ್ಟ್ ಗ್ರಾಜುಯೇಟ್ ಡಿಗ್ರಿ ಕೋರ್ಸ್: ಡಿಗ್ರಿ ಮುಗಿಸಿದ ಬಳಿಕ ಸ್ನಾತಕೋತ್ತರ ಪದವಿಯನ್ನು ಕೂಡಾ ಮಾಡಬಹುದು. ಸಾಮಾನ್ಯ ಅರ್ಹತೆ ಕಡಿಮೆಯೆಂದರೂ ಡಿಗ್ರಿಯಲ್ಲಿ 45% ಅಂಕಗಳನ್ನು ಹೊಂದಿರಬೇಕು. ಹೆಚ್ಚಿನವರು ತಮ್ಮ ವಿದ್ಯಾಭ್ಯಾಸವನ್ನು ಡಿಗ್ರಿ ಕೋರ್ಸ್ ಗೇ ಸೀಮಿತಗೊಳಿಸುವುದರಿಂದ ಈ ಕಡೆ ಜಾಸ್ತಿ ಗಮನ ಹರಿಸುವವರಿಲ್ಲ. ಆದರೆ ಸ್ನಾತಕೋತ್ತರ ಪದವಿ ಪಡೆದವನಿಗೆ ಸಿಕ್ಕಾಪಟ್ಟೆ ಬೇಡಿಕೆಯಿರುತ್ತದೆ.

ಯಾವ ಕೋರ್ಸ್ ತಗೊಂಡರೆ ಉತ್ತಮ?:

ಪದವಿಪೂರ್ವ ಶಿಕ್ಷಣದ ಬಳಿಕ ಹುಟ್ಟುವ ಮೊತ್ತಮೊದಲ ಪ್ರಶ್ನೆಯಿದು. ನಾನೇನು ಮಾಡಬೇಕು? ಯಾವ ಕೋರ್ಸ್ ತಗೊಂಡಲ್ಲಿ ಏನು ಮಾಡಬಹುದು? ಯಾವ ಕ್ಷೇತ್ರದಲ್ಲಿ ಕೆಲಸ ಮಾಡಬಹುದು ಎಂಬೆಲ್ಲಾ ಪ್ರಶ್ನೆಗಳು ಬಂದೇ ಬರುತ್ತವೆ. ಹಾಸ್ಪಿಟಾಲಿಟಿ ಸೈನ್ಸ್ ಕೋರ್ಸ್ ಬಗ್ಗೆ ಸಾಮಾನ್ಯವಾಗಿ ಒಂದು ತಪ್ಪು ಕಲ್ಪನೆಯಿದೆ ನಮ್ಮಲ್ಲಿ; ಅದೇನೆಂದರೆ ಇದು ಸೈನ್ಸ್ ಕೋರ್ಸ್ ಮತ್ತು ತುಂಬಾ ಕಷ್ಟಕರ ಇರಬಹುದೆಂದು. ಆದರೆ ಇದು ಬಹಳ ಸುಲಭದ ಪದವಿ ಕೋರ್ಸ್. ಸ್ಕಿಲ್ ಓರಿಯೆಂಟೆಡ್ ಕೊರ್ಸ್ ಆಗಿರುವುದರಿಂದ ಸಾಮಾನ್ಯ ಅಂಕಗಳನ್ನು ಹೊಂದಿ ತೇರ್ಗಡೆಯಾದರೂ ಸಾಕು ಪರಿಣತಿಯ ಮೇಲೆ ಉದ್ಯೋಗ ಖಾತ್ರಿಯಾಗುತ್ತದೆ. ಹಾಸ್ಪಿಟಾಲಿಟಿ ಮ್ಯಾನೇಜ್ ಮೆಂಟ್ (ಆತಿಥ್ಯ ನಿರ್ವಹಣೆ) ತುಂಬಾ ವ್ಯಾಪ್ತಿಯನ್ನೊಳಗೊಂಡ ಕೋರ್ಸ್ಗಳನ್ನು ಹೊಂದಿದೆ. ಕೆಲವೊಂದನ್ನು ನಾನಿಲ್ಲಿ ಪಟ್ಟಿ ಮಾಡಿದ್ದೇನೆ:

ಡಿಪ್ಲೊಮಾ ಇನ್ ಹೋಟೇಲ್ ಮ್ಯಾನೇಜ್ ಮೆಂಟ್, ಪೋಸ್ಟ್ ಗ್ರಾಜುಯೇಟ್ ಡಿಪ್ಲೊಮಾ ಇನ್ ಹೋಟೇಲ್ ಮ್ಯಾನೇಜ್ ಮೆಂಟ್, ಬ್ಯಾಚುಲರ್ ಆಫ್ ಹೋಟೇಲ್ ಮ್ಯಾನೇಜ್ ಮೆಂಟ್, ಬ್ಯಾಚುಲರ್ ಆಫ್ ಆರ್ಟ್ಸ್ ಇನ್ ಹೋಟೇಲ್ ಮ್ಯಾನೇಜ್ ಮೆಂಟ್, ಬ್ಯಾಚುಲರ್ ಆಫ್ ಸೈನ್ಸ್ ಇನ್ ಹೋಟೇಲ್ ಮ್ಯಾನೇಜ್ ಮೆಂಟ್, ಬಿ.ಎ. (ಹೋನರ್ಸ್) ಇನ್ ಹೋಟೇಲ್ ಮ್ಯಾನೇಜ್ ಮೆಂಟ್, ಬಿ.ಬಿ.ಎ. ಇನ್ ಹೋಟೇಲ್ ಮ್ಯಾನೇಜ್ ಮೆಂಟ್, ಮಾಸ್ಟರ್ ಆಫ್ ಸೈನ್ಸ್ ಇನ್ ಹೋಟೇಲ್ ಮ್ಯಾನೇಜ್ ಮೆಂಟ್, ಎಂ.ಬಿ.ಎ. ಇನ್ ಹೋಟೇಲ್ ಮ್ಯಾನೇಜ್ ಮೆಂಟ್, ಸರ್ಟಿಫಿಕೇಟ್ ಕೋರ್ಸ್ ಇನ್ ಹೋಟೇಲ್ ಆಂಡ್ ಕೆಟರಿಂಗ್ ಮ್ಯಾನೇಜ್ ಮೆಂಟ್, ಟೂರಿಸಂ ಮ್ಯಾನೇಜ್ ಮೆಂಟ್, ರೆಸೋರ್ಟ್ ಆಂಡ್ ಟೂರಿಸಂ ಮ್ಯಾನೇಜ್ ಮೆಂಟ್, ಅಡ್ವಾನ್ಸ್ ಸ್ಟಡಿ ಇನ್ ಇಂಟರ್ ನ್ಯಾಶನಲ್ ಹೋಟೇಲ್ ಮ್ಯಾನೇಜ್ ಮೆಂಟ್, ಹಾಸ್ಪಿಟಾಲಿಟಿ ಆಂಡ್ ಟೂರಿಸಂ ಮ್ಯಾನೇಜ್ ಮೆಂಟ್, ಹೋಟೇಲ್ ಆಂಡ್ ಫುಡ್ ಅಡ್ಮಿನಿಸ್ಟ್ರೇಶನ್, ಹಾಸ್ಪಿಟಾಲಿಟಿ ಆಂಡ್ ಹೋಟೇಲ್ ಆಪರೇಷನ್ಸ್ ಮ್ಯಾನೇಜ್ ಮೆಂಟ್ ಹೀಗೆ ಹತ್ತು ಹಲವು ಕೋರ್ಸ್ಗಳಿವೆ ಈ ಒಂದು ಕ್ಷೇತ್ರದಲ್ಲಿ. ತಮ್ಮ ಆಸಕ್ತಿಯನ್ನು ನೋಡಿಕೊಂಡು ಯಾವ ಕೋರ್ಸ್ ಆದರೂ ಸರಿ; ಅದು ನಿಮ್ಮನ್ನು ನಿಮಗೆ ಬೇಕಾಗಿರುವ ದಡ ಮುಟ್ಟಿಸುತ್ತದೆ.

ಈ ಕೋರ್ಸ್ ಕಲಿಯೋದರಿಂದ ಪ್ರಯೋಜನ:

ಪ್ರತಿಯೊಂದು ಕೋರ್ಸ್ ಕೂಡ ತನ್ನದೇ ಆದ ವೈಶಿಷ್ಟ್ಯತೆಯನ್ನು ಹೊಂದಿದೆ. ಅನೇಕ ಪ್ರಯೋಜನಗಳನ್ನು ಈ ಕೋರ್ಸ್ ನೀಡುತ್ತದೆ. ಮುಖ್ಯವಾಗಿ ಯಾರ ಮೇಲೂ ಅವಲಂಬಿಸದೆ ಸ್ವಾವಲಂಬಿಯಾಗಿ ಬದುಕಲು ಈ ಕೋರ್ಸ್ ಮಹತ್ತರ ಪ್ರಯೋಜನಕಾರಿಯಾಗಿದೆ. ಕೆಟರಿಂಗ್ ಬಿಸಿನೆಸ್, ಹೋಟೆಲ್ ಬಿಸಿನೆಸ್, ಟೂರ್ ಆಂಡ್ ಟ್ರಾವೆಲ್ ಹೀಗೇ ಅನೇಕ ವಲಯಗಳಲ್ಲಿ ತಮ್ಮದೇ ಸ್ವಂತ ಉದ್ಯೋಗ ಮಾಡಿಕೊಂಡು ವಿಭಿನ್ನವಾಗಿ ಬದುಕಬಹುದು. ವಿಶ್ವದೆಲ್ಲೆಡೆ ಮಾನ್ಯತೆಯಿರುವ ಕೋರ್ಸ್ ಇದು; ಹಾಗಾಗಿ ವಿದೇಶದಲ್ಲಿ ಕೆಲಸ ಮಾಡುವವರಿಗೂ ಅನುಕೂಲವಿದೆ. ಕೆಲಸ ಕಳೆದುಕೊಳ್ಳುತ್ತೇವೆ ಎಂಬ ಭಯವಿಲ್ಲದ ವಾತಾವರಣದಲ್ಲಿ ಉದ್ಯೋಗ ಮಾಡಬಹುದು. ಬೇಕಾದಷ್ಟು ಹೊಸ ಉದ್ಯೋಗಗಳ ಹುಟ್ಟು ಕೂಡಾ ಸಾಧ್ಯತೆಯಿರುವ ವಲಯ ಇದಾಗಿದೆ. ಹೆಚ್ಚಿನ ಸಂಬಳವನ್ನು ಪಡೆದುಕೊಳ್ಳುವಲ್ಲಿಯೂ ಇದು ಸಹಕಾರಿ. ಸದಾ ಹೊಸ ವಿಷಯಗಳನ್ನು ಕಲಿಯುವಂತಹ ಅವಕಾಶ ಸಿಗುತ್ತದೆ. ಡಿಗ್ರಿಯಿಂದ ಹಿಡಿದು ಕೆಲಸ ಸಿಕ್ಕಿದ ಬಳಿಕವೂ ವಿಭಿನ್ನ ಪ್ರಯತ್ನಗಳನ್ನು ಮಾಡಿ ಯಶಸ್ವಿಯಾಗುವ ಪ್ರಯೋಜನ ಪಡೆದುಕೊಳ್ಳಬಹುದು.

ಉದ್ಯೋಗಾವಕಾಶಗಳು:

ಈ ಡಿಗ್ರಿ ಪಡೆದುಕೊಂಡವರಿಗೆ ಸ್ವಂತ ಉದ್ಯೋಗದಿಂದ ಹಿಡಿದು ಎಲ್ಲಾ ತರಹದ ಕ್ಷೇತ್ರಗಳಲ್ಲೂ ವಿಫುಲ ಅವಕಾಶಗಳಿವೆ. ಸ್ಟಾರ್ ಹೋಟೆಲ್ ಗಳಿಂದ ಶುರುವಾಗುವ ಬೇಡಿಕೆ ಅಂತಾರಾಷ್ಟ್ರೀಯ ಮಟ್ಟದಲ್ಲೂ ಇವರಿಗೆ ಅವಕಾಶಗಳಿವೆ. ಒಂದು ತಪ್ಪು ಕಲ್ಪನೆಯನ್ನು ನಾನು ದೂರ ಮಾಡಲಿಚ್ಚಿಸುತ್ತೇನೆ. ಈ ಡಿಗ್ರಿ ಮಾಡಿದವರು ಸರ್ವರ್ ಕೆಲಸಕ್ಕೆ ಹೋಗುತ್ತಾರೆ ಎನ್ನುವವರಿದ್ದಾರೆ, ಇದು ಬರೇ ಒಂದು ಕೆಲಸವಷ್ಟೇ ಹೊರತು, ಖಂಡಿತಾ ಈ ಕೆಲಸಕ್ಕೋಸ್ಕರ ಡಿಗ್ರಿ ಮಾಡುವುದಲ್ಲ. ಫ್ರಂಟ್ ಆಫೀಸಿನಲ್ಲಿ, ರಿಸೆಪ್ಶನ್ ನಲ್ಲಿ, ಸೂಪರ್ ವೈಸರ್ ಆಗಿ, ಮ್ಯಾನೇಜರ್ ಆಗಿ್, ಶೆಫ್ ಆಗಿ ಹೀಗೆ ಹತ್ತು ಹಲವು ಉದ್ಯೋಗಗಳು ಹೋಟೆಲ್ ರೆಸ್ಟೋರೆಂಟ್ಗಳಲ್ಲಿವೆ. ಇವುಗಳಲ್ಲದೆ:

* ವಿಮಾನದಲ್ಲಿ ಫೈಟ್ ಕೆಟರಿಂಗ್, ನೌಕೆಯಲ್ಲಿ ಕ್ರೂಸ್ ಲೈನರ್ಸ್ ಆಗಿಯೂ ಕೆಲಸ ಮಾಡಬಹುದು.

* ಗೆಸ್ಟ್ ಹೌಸ್, ಟೂರಿಸ್ಟ್ ರೆಸಾರ್ಟ್ಸ್ ಗಳಲ್ಲಿ, ಕೆಫೆಟೇರಿಯಗಳಲ್ಲೂ ವಿಫುಲ ಅವಕಾಶಗಳಿವೆ.

* ಆಸ್ಪತ್ರೆಗಳಲ್ಲಿ ಹಾಸ್ಪಿಟಲ್ ಕೆಟರಿಂಗ್, ಕಾರ್ಖಾನೆಗಳಲ್ಲಿ, ಕಂಪೆನೆಗಳಲ್ಲಿ ಇಂಡಸ್ಟ್ರಿಯಲ್ ಕೆಟರಿಂಗ್ ಮಾಡಬಹುದು.

* ಸಾರಿಗೆ ವಲಯದಲ್ಲಿ, ರಿಸರ್ವೇಶನ್ ಏಜೆನ್ಸಿಗಳಲ್ಲಿ, ಅನೇಕ ಉದ್ಯೋಗಗಳಿರುತ್ತವೆ.

* ಕನ್ಸಲ್ಟೆನ್ಸಿ ಬಿಸಿನೆಸ್ ಅಥವಾ ಸ್ವಂತವಾಗಿಯೂ ಏಜೆನ್ಸಿ ನಡೆಸಬಹುದು.

* ಕ್ಲಬ್ಬುಗಳಲ್ಲಿ, ಸಂಘ ಸಂಸ್ಥೆಗಳಲ್ಲೂ, ಸಾರ್ವಜನಿಕ ಕ್ಷೇತ್ರದಲ್ಲೂ ಕೆಲಸ ಮಾಡಬಹುದು.

* ತಮ್ಮದೇ ಈವೆಂಟ್ ಮ್ಯಾನೇಜ್ ಮೆಂಟ್ ಸಂಸ್ಥೆಯನ್ನೂ ಮಾಡಿಕೊಳ್ಳಬಹುದು ಅಥವಾ ಅಲ್ಲಿ ಕೆಲಸ ಮಾಡಬಹುದು.

* ತಮ್ಮದೇ ಬೇಕರಿ ಉದ್ಯೋಗ, ಜೊಮ್ಯಾಟೋ, ಸ್ವಿಗ್ಗಿಯಂತಹ ವಿತರಕರಾಗಿಯೂ ಅವಕಾಶಗಳಿವೆ.

* ಸರಕಾರಿ ನೌಕರಿಗಳಿಗೂ ಕಮ್ಮಿಯಿಲ್ಲ. ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಡಿಗ್ರಿ ಪಡೆದವರಿಗೆ ಆಹಾರ ಮತ್ತು ಆರೋಗ್ಯ ಕ್ಷೇತ್ರದಲ್ಲೂ ಸರಕಾರಿ ನೌಕರಿಗಳಿವೆ.

ಹೀಗೇ ಹೇಳುತ್ತಾ ಕುಳಿತರೆ ಈ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ನನ್ನ ಅನುಭವದ ಪ್ರಕಾರ ಈ ಡಿಗ್ರಿ ಪಡೆದುಕೊಂಡ ವಿದ್ಯಾರ್ಥಿ ಕೆಲಸದೊಳಿಲ್ಲ ಎಂದರೆ ಅವನಲ್ಲೇ ಏನೋ ದೋಷವಿದೆಯೆಂದರ್ಥ.

ಕೊನೆಗೊಂದು ಕಿವಿಮಾತು:

ಯಾವ ಡಿಗ್ರಿಯಲ್ಲೂ ಈ ತರಹದ ವಿಭಿನ್ನ ಅವಕಾಶಗಳು ಇರಲಾರದು. ಆಫೀಸಿನ ಒಳಗೂ, ಹೊರಗೂ ಅಲ್ಲದೇ ಸಾರ್ವಜನಿಕ ರಂಗದಲ್ಲೂ ಅವಕಾಶಗಳಿದ್ದು ಸಂಬಳ-ಗಿಂಬಳ ಗಟ್ಟಿಯಾಗಿ ತೆಗೆದುಕೊಂಡು ಆರಾಮ ಜೀವನ ತಮ್ಮದಾಗಿಸುವ ಡಿಗ್ರಿಯಿದು. ತಾನು ಕಡಿಮೆ ಅಂಕ ತೆಗೆದುಕೊಂಡು ಪಿಯುಸಿ ಜಸ್ಟ್ ಪಾಸ್ ಆಗಿದ್ದೇನೆ.. ಎನ್ನುವ ಟೆನ್ಶನ್ ಬೇಡ. ಈ ಡಿಗ್ರಿ ನಿಮ್ಮ ಜೀವನವನ್ನು ಒಬ್ಬ ಚಿನ್ನದ ಪದಕ ಪಡೆದ ವಿದ್ಯಾರ್ಥಿಯ ಜೀವನಕ್ಕಿಂತ ಭಿನ್ನವಾಗಿರಿಸುತ್ತದೆ ಎನ್ನುವುದು ನನ್ನ ನಂಬಿಕೆ…. ಖಂಡಿತಾ ಮತ್ತೊಮ್ಮೆ ಸಿಗೋಣ.. ಹೊಸ ಡಿಗ್ರಿ.. ಹೊಸ ನೌಕ್ರಿಯೊಂದಿಗೆ....