ಷೋಡಶಿಯಾದಳಾ ಮುದಿರಕ್ಕಸಿ.....

ಷೋಡಶಿಯಾದಳಾ ಮುದಿರಕ್ಕಸಿ.....

Deevith S K Peradi   ¦    Nov 14, 2020 11:31:00 AM (IST)
ಷೋಡಶಿಯಾದಳಾ ಮುದಿರಕ್ಕಸಿ.....

ಆರೆಲೋ ಮನುಜಾ ಈವನಕೆ ಬಂದವ ||||
ಬಾರಿ ಬಾರಿಗೆ ಮೆಯ್ಯ ವಾಸನೆ ಬೀರುತಿದೆ ಪೊಸ |ಗಮಲುಗಳ ಬಲು |
ಧೀರರೆಲ್ಲರು ಬನ್ನಿ ನಮ್ಮಯ ಬಾರಣೆಗೆ ತುತ್ತಾಗಿ ಬಂದವ||

ದಂಡಕಾರಣ್ಯದ ಭಾಗವಾದ ಪಂಚವಟಿ ಘೋರಾಟವಿಯಲ್ಲಿ ಸ್ವೇಚ್ಛೆಯಾಗಿ ಸ್ವತಂತ್ರವಾಗಿ ಕಾಲ ಕಳೆಯುತ್ತಿದ್ದ ಶೂರ್ಪನಖಿಯ ನಾಸಿಕಕ್ಕೆ ನರವಾಸನೆ ಬಡಿಯತೊಡಗಿತ್ತು. "ಇಷ್ಟು ಕಾಲದೊಳೊಬ್ಬರಿಲ್ಲಿಗೆ ಥಟ್ಟನೇ ತನಗಂಜಿ ಬಾರರು, ದಿಟ್ಟರಿವರಹರಾರು ನೋಳ್ಪಡೆ ದೃಷ್ಟಿಗೋಚರವಿಲ್ಲ" ಎಂದುಕೊಂಡ ಅಸುರೆ "ಖಂಡ ಖಂಡವ ಬೇರೆ ಬೇರೇ ತುಂಡು ತುಂಡೇ ಹಸಿಯ ನುಂಗುವೆ, ಕೆಂಡದಲ್ಲಿಟ್ಟವರ ಎಲುಗಳ ಖಂಡಿಸುವೆ ಕಟಕಟನೆ ಸೊಗಸಿಲದಾರೆಲೋ" ಎಂದು ತನ್ನ ಹಸಿವೆ-ತೃಷೆಯನ್ನು ವ್ಯಕ್ತಪಡಿಸಿ ಕಾನನಕ್ಕೆ ಆಗಮಿಸಿದವರ ಕಾಯದ ಬಗ್ಗೆ ಯೋಚಿಸುತ್ತಿದ್ದ ನರಭಕ್ಷಕಿ ರಕ್ಕಸಿಗೆ ನೆತ್ತರಿನೌತಣ ಸಿದ್ಧವಾದ ಕಾಲವದು.

ಯಕ್ಷಗಾನ ಪ್ರಸಂಗ ಸಾಹಿತ್ಯದ ಪೂರ್ವಸೂರಿಗಳ ಪೈಕಿ ಅಗ್ರ ಸ್ಥಾನದಲ್ಲಿರುವ ಯಕ್ಷಕವಿ ಪಾರ್ತಿಸುಬ್ಬನ ಸಾರ್ವಕಾಲಿಕ ಸ್ಮರಣೀಯ ಕಾವ್ಯ ಕಾಣಿಕೆ "ಪಂಚವಟಿ". ರಾಮಾಯಣದ ಕಥಾವಸ್ತುವನ್ನು ಆಯ್ದುಕೊಂಡು ಕಥೆಯ ಮೂಲಾಶಯಕ್ಕೆ ಧಕ್ಕೆ ಬಾರದ ರೀತಿಯಲ್ಲಿ ಪ್ರಸಂಗವನ್ನು ಕಟ್ಟಿಕೊಟ್ಟ ಕವಿ ಕಲ್ಪನೆ ಯಕ್ಷಗಾನ ಪ್ರಸಂಗ ಸಾಹಿತ್ಯ- ಪ್ರದರ್ಶನವನ್ನು ಸದಾ ಹಸಿರಾಗಿಸಿದೆ ಎಂದರೆ ಅತಿಶಯೋಕ್ತಿಯೆನಿಸದು.

ಶೂರ್ಪನಖಿಯ ಮಾನಭಂಗ ಪಂಚವಟಿ ಯಕ್ಷಗಾನ ಪ್ರಸಂಗದ ಹೃದಯಭಾಗ. ತನ್ನ ಸೋದರನಿಂದಲೇ ಹತನಾದ ತನ್ನ ಪತಿಯ ಮರಣದಿಂದುಂಟಾದ ಬೇಗುದಿಯಲ್ಲಿ ಬೇಯುತಿದ್ದ ಶೂರ್ಪನಖಿ ರಾವಣನ ಮೇಲೆ ಪ್ರತೀಕಾರಗೈಯ್ಯಲು ತನ್ನ ಮಗನನ್ನು ಅಣಿಗೊಳಿಸುತ್ತಿದ್ದ ಸಂದರ್ಭವದು. ದುರದೃಷ್ಟವಶಾತ್ ಲಕ್ಷ್ಮಣನಿಂದಲೇ ಮರಣಿಸಲ್ಪಟ್ಟ ಮಗನ ಮರಣದ ದುಃಸ್ಥಿತಿಯು ಶೂರ್ಪನಖಿಯನ್ನು ಇನ್ನಷ್ಟು ಘಾಸಿಗೊಳಿಸಿತು. ಪ್ರತೀಕಾರಕ್ಕಾಗಿಯೇ ಹಪಹಪಿಸುತ್ತಿದ್ದ ಅಸುರೆಯು ನರವಾಸನೆಯ ಮೂಲವನ್ನು ಹುಡುಕುತ್ತ ಬಂದಾಗ ರಾಮ ಲಕ್ಷ್ಮಣರ ಇರುವಿಕೆ ಸ್ಪಷ್ಟವಾಗುತ್ತಾ ಹೋಯಿತು. ರಾವಣಾನುಜೆಯ ಆರ್ಭಟ ಕೇಳಲಾರದೆ ಖೇದ ಮಾನಸಳಾದ ಜಾನಕಿ "ರಾಘವ ನೀ ಎನ್ನ ಬಿಟ್ಟು ಪೋಗದಿರಯ್ಯ, ಈಗ ಬಂದಳಾ ರಾಕ್ಷಸಿ ಕೂಗುತ್ತಾಳೆ ಆರ್ಭಟಿಸಿ" ಎಂದು ರಾಮನಲ್ಲಿ ತನ್ನ ಖೇದ ವ್ಯಕ್ತಪಡಿಸಿದಾಗ ಪುಂಡರೀಕ ಲೋಚನನಾದ ರಾಮ, "ಅಂಜಬೇಡೆಲೆ ಸೀತೆ ಮಿಥಿಲೇಂದ್ರ ಕುಲಜಾತೆ ಭಂಜಿಸುವೆ ರಾಕ್ಷಸಿಯ ಕುಂಜರಗಮನೆ" ಎಂದು ಸಮಾಧಾನಿಸುತ್ತಾನೆ.

ಸತಿಪತಿಯ ಸಲ್ಲಾಪವನ್ನು ದೂರದಿಂದಲೇ ನೋಡಿದ ಶೂರ್ಪನಖಿ, " ಕಂಡರೆ ಮದನನಂಥ ಗಂಡಸಾಗಿರುವನೀತ ಕೊಂಡೊಯ್ದಿವನ ಮನೆಗೆಯೆನ್ನ ಗಂಡನ ಮಾಳ್ಪೆ" ಎಂದು ನಿರ್ಧರಿಸಿ ಮನದೊಳಗೆ ಯೋಚನೆಯನ್ನು ಮಾಡಿ ತನ್ನ ಘನವಾದ ದೇಹವನ್ನು ಕುನಿಸಿ ಮರೆಮಾಡಿ ಮಾಯಕದ ರೂಪದಲಿ ಮತ್ತೊಂದು ಬಗೆಯ ಕಾಯವನು ಧರಿಸಿ ಕಪಟದಾಕೃತಿಯನ್ನು ತಾಳುತ್ತಾ ಮಾಯಾಶೂರ್ಪನಖಿಯಾಗಿ ರಾಮನ ಮುಂದೆ ಬರುವ ದೃಶ್ಯ ಯಕ್ಷಗಾನ ರಂಗದಲ್ಲಿ ಬಹು ಬಾಳಿಕೆ- ಬೇಡಿಕೆಯ ದೃಶ್ಯ.

ಹದಿನಾರು ವತ್ಸರದ ಹೆಣ್ಣಾದಳವಳು
ಮುದದಿಂದ ಶೃಂಗಾರ ಮಾಡಿ ನೋಡಿದಳು
ಪೂಗೋಲನುರುಪಟ್ಟದಾನೆಯಂದದಲಿ
ರಾಘವನ ಬಳಿಗಾಗಿ ಬಂದಳೊಲವಿನಲಿ

ಹದಿನಾರು ವರುಷದ ಹೆಣ್ಣಾಗಿ ರಾಮನ ಮುಂದೆ ಬರುವ ಶೂರ್ಪನಖಿ ಕರವನ್ನು ಮುಗಿಯುತ್ತಾ ತನ್ನ ಆಂತರ್ಯದೊಳಗೆ ಕಟ್ಟಿದ ಪ್ರೇಮ ಸೌಧದ ಅನಾವರಣ ಮಾಡಲು‌ ಮುಂದಾಗುತ್ತಾಳೆ. ಕಾಂತ ಶಕ್ತಿಯ ಪ್ರತೀಕದಂತಿರುವ ರಾಘವನನ್ನು ಕಾಂತನನ್ನಾಗಿ ಮಾಡಬೇಕು ಎಂಬ ದುರಾಸೆಯಿಂದ "ರಾಘವ ನರಪತೇ ಶ್ರುಣು ಮಮ ವಚನಂ" ಎಂದು ಹೇಳುವ ಶೂರ್ಪನಖಿ ಅತಿಕುಲವತಿ ನಾನು ಎಂಬ ವಿಚಾರವನ್ನು ಸಂಕೇತಪೂರ್ವಕವಾಗಿ ತಿಳಿಸುವ ಜೊತೆಗೆ "ನೀ ಗುಣ ನಿಧಿಯೆಂದು ನಿನ್ನ ಸೇರಿದೆ ಬಂದು" ಎಂದು ಹೇಳುತ್ತಾ ಅನೇಕ ಉಪಮೆಗಳನ್ನು ನೀಡುತ್ತಾ ರಾಮನನ್ನು ತನ್ನವನನ್ನಾಗಿಸಲು ಮುಂದಾಗುತ್ತಾಳೆ.

ಅತಿಕುಲವತಿ ನಾನು ಪೃಥಿವಿಪಾಲಕ ನೀನು
ರತಿದೇವಿಗೆಣೆ ನಾನು ಮನ್ಮಥ ನೀನು
ಸರಸಿಜಾಂಬಕಿ ನಾನು ತರಣಿಪ್ರಕಾಶ ನೀನು
ವರಬಿಂಬಾಧರೆ ನಾನು ಅರಗಿಣಿ ನೀನು

ರಾಮನ ರೂಪಕ್ಕೆ ಮನಸೋತು ಕಾಮಕೇಳಿಯಾಡುವುದಕ್ಕಾಗಿ ಮನ ಮಾಡಿದ ಶೂರ್ಪನಖಿ ಜಗದೇಕವೀರ ಶ್ರೀರಾಮನಲ್ಲಿ," ಕವಲು ಮನವಬಿಟ್ಟು ತವಕದಿ ದಯವಿಟ್ಟು
ಸವಿದಂಬುಲವ ನೀಡು ಸರಸ ಮಾತಾಡು" ಎಂದು ಹೇಳುವ ಜೊತೆಗೆ "ಎಲ್ಲಿ ನೋಡಿದರೆನಗಿಲ್ಲ ಒಪ್ಪುವ ಜನ ಬಲ್ಲಾತ ನೀ ಖರೆಯೊ ಬಲು ಬೇಗ ನೆರೆಯೊ" ಎಂಬುದಾಗಿ ನುಡಿದು ರಾಮನ ಮನವನ್ನು ಗೆಲ್ಲುವುದಕ್ಕೆ ಪ್ರಯತ್ನ ಪಡುತ್ತಾಳೆ.

ಕಪಟರೂಪವನ್ನಾಂತು ಬಂದ ಅಸುರೆಯ ಮನದಿಂಗಿತವನ್ನರಿತ ಸೀತಾವಲ್ಲಭ ಶೂರ್ಪನಖಿಯ ಬಳಿಯಲ್ಲಿ ನುಡಿಯುವ ಮಾತು ಪ್ರಸಂಗದ ಜೊತೆಗೆ ಇಡೀ ರಾಮಾಯಣದ ಕಥೆಗೆ ಹೊಸ ತಿರುವನ್ನು ನೀಡುತ್ತದೆ. "ಮದನನ ಪಟ್ಟದಾನೆ ನೀ ಮೊದಲೇ ಯಾಕೆ ಬರಲಿಲ್ಲ? ಚದುರೆ ಸಣ್ಣವಳೊಬ್ಬಳನ್ನು ಈಗಾಗಲೇ ನಾನು‌ ಮದುವೆಯಾಗಿರುವೆನಲ್ಲ" ಎಂದು ವಾಸ್ತವವನ್ನು ಶೂರ್ಪನಖಿಗೆ ಪರಿಚಯಿಸುವ ರಾಮನು ಆಕೆಯ ಆಸೆಗೆ ದಾರಿಯೇನೋ ಎಂಬಂತೆ ಹೊಸದಾದ ಮಾರ್ಗವನ್ನು ಸೂಚಿಸುತ್ತಾನೆ. ಅನತಿ ದೂರದಲ್ಲಿ ನನಗಿಂತ ನೂರ್ಮಡಿ ಚೆಲುವನಾಗಿರುವ ನನ್ನ ತಮ್ಮ ನಿನ್ನನ್ನು ಮಾನಿಸಿಯಾನು, ಗಮ್ಮನೆ ನೀ ಹೋಗು ನಿನ್ನ ಚತುರತೆಯನ್ನು ತೋರಲ್ಲಿ" ಎಂದು ರಾಮನು ನುಡಿದಾಗ "ರಾಮನೇ ಇಷ್ಟು ಚಂದ ಇದ್ದರೆ ಇನ್ನು ಆತನ ತಮ್ಮ ಎಷ್ಟು ಚಂದ ಇರಬಹುದೋ" ಎಂದು ಶೂರ್ಪನಖಿಯು ಲಕ್ಷ್ಮಣನ ಸೌಂದರ್ಯದ ಬಗ್ಗೆ ಮನದಲ್ಲಿಯೇ ಮಂಡಿಗೆ ಮೆಲ್ಲುತ್ತಾ ಆಸೆಯ ಪರಿಧಿಯನ್ನು ಮೀರಿ ವ್ಯವಹರಿಸಲು ಮುಂದಾಗುತ್ತಾಳೆ.

ಚಂದದಿಂದ ಬಂದಳಬ್ಜ ಲೋಚನೆ ರಾಮ|
ಚಂದ್ರನೆಂದ ಮಾತಿನ ಆನಂದವನ್ನೆ ನೆನೆಯುತಾಗ||
ಕನ್ನಡಿಯನು ಹಿಡಿದು ಮುಂದೆ ನೋಡುತ ಮೊಗವು|
ಚೆನ್ನಾಗಿಹುದೆಂದು ನಗೆಯ ಮಾಡುತ ತನಗೆ|
ಕನ್ನೆಯರೊಳು ಜೋಡಿಲ್ಲೆಂದು ಪಾಡುತ ಅಸುರೆ |
ತನ್ನೊಳಗೆ ತಾನೇ ನಲಿದಾಡುತ ಚಂದದಿಂದ||

ರಾಮನನ್ನು ಪಡೆಯಬೇಕೆಂಬ ಆಸೆಯಿಂದ ಶೃಂಗರಿಸಿಕೊಂಡು ಬಂದ ಶೂರ್ಪನಖಿಗೆ " ಲಕ್ಷ್ಮಣ ನೂರು ಪಟ್ಟು ಚೆಲುವನಿದ್ದಾನೆ" ಎಂಬ ವಿಷಯ ತಿಳಿದಾಗ ಇನ್ನಷ್ಟು ಸಿಂಗರಿಸಲು ಅಣಿಯಾಗುತ್ತಾಳೆ. "ಕುರುಳ ಕಯ್ಯ ಬೆರಳಿಂದೊಡನೆ ತಿದ್ದುತ ಹೂವಿನ ಪರಿಮಳದೊಳು ಮೆಯ್ಯನಲವಿಂದದ್ದುತ ಮೂಗಿಂಗರಿವ ತಿಲಕವನ್ನು ಬೆರಳಿಂದುದ್ದುತ" ಶೃಂಗಾರ ಮಾಡಲು ಮುಂದಾಗುತ್ತಾಳೆ. ಅಪಮಾನದಲಂಕಾರವೇನೋ ಎಂಬಂತೆ ಬಹುವಿಧದಿಂದ ಸಿಂಗರಗೊಂಡ ಅಸುರೆ ಲಕ್ಷ್ಮಣನ ಬಳಿಗೆ ಬಂದು ಆತನ ಸೌಂದರ್ಯಕ್ಕೆ ಮಾರುಹೋಗಿ, "ಕಾಮಸನ್ನಿಭ ಮಾತಕೇಳು,ಪೇಳಿ ರಾಮತಾ ಕಳುಹಿದನೆನ್ನೊಳು ನೀ ಮನಸಿಟ್ಟು ಕೃಪಾಳು ಅತಿಕಾಮಿಸಿ ಬಂದೆನು ನಿನ್ನೊಳು ಇನ್ನು ತಾಮಸಗೊಳದಿರು ತಾಳಲಾರೆನು ಸುಪ್ರೇಮದಿಂದಲೆ ಕೂಡು ಸರಸಮಾತಾಡು" ಎಂದು ಹೇಳಿದಾಗ ಅದಕ್ಕೆ ಪ್ರತಿಕ್ರಿಯೆಯನ್ನು ವ್ಯಕ್ತಪಡಿಸದ ಲಕ್ಷ್ಮಣನನ್ನು ಕಂಡು ಆತನನ್ನು ಪಡೆಯಲೇ ಬೇಕೆಂಬ ಉದ್ದೇಶದಿಂದ ಸಹಜವಾಗಿ ಸ್ತ್ರೀಯರಿಗೆ ಪ್ರತಿಬಂಧಕವಾದ ಲಜ್ಜಾಕೋಟೆಯಿಂದ ಹೊರಬಂದು, "ನೆರೆಮನಸೆನ್ನ ಮೇಲಿಟ್ಟು ಇಕ್ಕೊ, ಗುರುಕುಚವೆರಡ ನೀ ಮುಟ್ಟು, ತೆರೆದ ಚೆಂದುಟಿಗೆ ಬಾಯಿಟ್ಟು ಚಪ್ಪರಿಸಿ ಸುರತಸುಖ ಕೊಟ್ಟು ಎನ್ನ ವಿರಹವ ನಿಲಿಸು ಕಾತರವನ್ನೆ ಮರೆಸು ಕಣ್ದೆರೆದು ಮಾತಾಡು ಕಟಾಕ್ಷದಿಂದಲೆ ನೋಡು" ಎಂದು ಹೇಳಿ ಮುಕತ ಕಾಮಕ್ಕೆ ಆಹ್ವಾನ ನೀಡುತ್ತಾ ತಾನು ರಾಕ್ಷಸಿ ಎಂಬುದನ್ನು ತನಗರಿವೆಯೇ ಇಲ್ಲದಙತೆ ಸೂಚಿಸುತ್ತಾಳೆ. ಆಗ ಕ್ರುದ್ಧನಾದ ಲಕ್ಷ್ಮಣ, "ಮಂದಗಮನೆ ಇಂಥಸುದ್ದಿಯೊಂದನೆನ್ನೊಳಾಡದಿರು. ನಾನು ಬ್ರಹ್ಮಚಾರಿಯಾಗಿದ್ದೇನೆ, ಬಂದ ದಾರಿಗೆ ಸುಂಕವಿಲ್ಲವೆಂದು ತಿಳಿದು ಹಿಂತಿರುಗು. ಒಂದು ವೇಳೆ ನನ್ನ ಅಣ್ಣನೇ ನಿನ್ನನ್ನು ಕಳುಹಿಸಿದ್ದಾನೆ ಎನ್ನುವುದಕ್ಕೆ ಸೂಕ್ತವಾದ ಕುರುಹನ್ನು ನೀನು ನೀಡಿದರೆ ಮುಂದೆ ಯೋಚನೆ ಮಾಡುತ್ತೇನೆ" ಎಂದು ಹೇಳುತ್ತಾನೆ. ಆಗ ಧೈರ್ಯಗುಂದಿ ಕೋಪಾಕ್ರಾಂತಳಾದ ಶೂರ್ಪನಖಿ ರಾಮನಲ್ಲಿಗೆ ಬಂದು, " ಚಂದವಾಯ್ತು ರಾಘವ, ಏಕಪತ್ನಿಯ ವ್ರತ ನಿನಗೆ ಬ್ರಹ್ಮಚರ್ಯ ಸಾಕಾರಿಸುತಿದೆ ನಿನ್ನ ತಮ್ಮನಿಗೆ, ಬೇಕಂತೆ ಗುರುತವಾತನಿಗೆ ನೀಡಯ್ಯ ವಿವೇಕದಿಂದನುಜ ಲಕ್ಷ್ಮಣಗೆ" ಎಂದು ನುಡಿದಾಗ ನಸುನಕ್ಕ ಸೀತಾಲೋಲ ಶೂರ್ಪನಖಿಗೆ ಗುರುತನ್ನು ನೀಡಲು ಮುಂದಾಗುತ್ತಾನೆ.

ಚದುರೆ ಬಾ ಬಾರೆಂದು ಕೈಯ ಅಂಬಿನ
ತುದಿಯೊಳ್ ಬರೆದ ಮೂಗ ಕೊಯ್ಯ
ಮುದದಿಂದ ತೋರೆಲೆ ಬೆನ್ನ ಕುರುಹನೋ
ಡಿದರೆ ಕೂಡುವ ತಮ್ಮ ನಿನ್ನ

ಶೂರ್ಪನಖಿಯ ಬೆನ್ನ ಮೇಲೆ ಆಕೆಗೊದಗಿಸಬೇಕಾದ ಸಮ್ಮಾನದ ಬಗ್ಗೆ ಶ್ರೀರಾಮ ಬರೆದಾಗ ಕುರುಹು ದೊರಕಿತು ಎಂಬ ಭ್ರಮೆಯಿಂದ ಆನಂದಮುದಿತ ಹೃದಯದವಳಾದ ಶೂರ್ಪನಖಿ ಲಕ್ಷ್ಮಣನೆಡೆಗೆ ಪಾದಬೆಳೆಸಿ ಆತನಿಗೆ ವಂದಿಸಿ ಬೆನ್ನನ್ನು ನೋಡು ಎಂದು ಹೇಳುತ್ತಾಳೆ. ಆಗ ಅಣ್ಣನಾಜ್ಞೆಯ ನೋಡಿ ಲಕ್ಷ್ಮಣ ತನ್ನ ಮನದಲಿ ತಾನೆ ನಗುತ " ಕನ್ನೆ ಪ್ರಾಯದ ಚದುರೆ ಬಾ ಮೋಹನ್ನಕಾರಿ, ಇತ್ತ ನಿಲ್ಲು" ಎಂದು ಹೇಳಿ ಆಕೆಯ ಮೂಗು, ಕಿವಿಗಳನ್ನು ಕತ್ತರಿಸಿ‌ಬಿಡುತ್ತಾನೆ.

ಕೆತ್ತಿದನು ನಾಸಿಕವನುದ್ದಕೆ
ರಕ್ತಮಾಂಸಗಳುದುರೆ ಭರದಲಿ
ಮತ್ತೆ ಕೂಗಿದಳಸುರೆ ಶರಧಿಯೆ ಬತ್ತುವಂತೆ

ದೇಹಕ್ಕೂ, ಮನಸಿಗೂ ಆದ ಘಾಸಿಯನ್ನು ತಾಳಿಕೊಳ್ಳಲಾರದ ಶೂರ್ಪನಖಿ ಶರಧಿಯೇ ಬತ್ತುವಂತೆ ಅರಚಲು ಪ್ರಾರಂಭಿಸಿ ತನಗಾದ ಅವಮಾನಕ್ಕೆ ತಕ್ಕ ಶಾಸ್ತಿಯನ್ನು ಮಾಡುವುದಾಗಿ ಪಣತೊಡುತ್ತಾಳೆ. ಹೆಣ್ಣಿಗಾದ ಅವಮಾನದ ಬೇಗೆಯನ್ನು ನಿನ್ನ ಜೀವನದಲ್ಲಿಯೂ ಅನುಭವಿಸುವ ಸ್ಥಿತಿಗೆ ನಾನು ಕಾರಣೀಭೂತಳಾಗುತ್ತೇನೆ ಎಂದು ನುಡಿಯುವ ಜೊತೆಗೆ ಭವಿತವ್ಯದ ಕಥನಗಳಿಗೆ ನಾಂದಿ ಹಾಡುತ್ತಾಳೆ. ಪಾರ್ತಿಸುಬ್ಬನ ಕಾವ್ಯಭೂಮಿಕೆ ಪಂಚವಟಿಯ ಕಥನವನ್ನು ಯಕ್ಷಗಾನ ರಂಗದಲ್ಲಿ ಸದಾ ಹಸಿರಾಗಿಸಿದೆ. ಶೂರ್ಪನಖಿಗೆ ಆದ ಅವಮಾನ ಸೀತಾಪಹರಣದ ಕಥನಕ್ಕೆ ಪೂರಕವಾಗುವ ರೀತಿಯಲ್ಲಿ ಕವಿ ಕಥೆಯನ್ನು ಪ್ರಸಂಗದಲ್ಲಿ ಚಿತ್ರಿಸಿರುವುದು ಸೃಜನಶೀಲತೆಯ ಪ್ರತೀಕವೇ ಸರಿ.