ಬಹು ಬೇಡಿಕೆಯ ಪದವಿ ಆಹಾರ ವಿಜ್ಞಾನ ಮತ್ತು ಪೋಷಣೆ ಪದವಿ

ಬಹು ಬೇಡಿಕೆಯ ಪದವಿ ಆಹಾರ ವಿಜ್ಞಾನ ಮತ್ತು ಪೋಷಣೆ ಪದವಿ

Ashok K G Mijar   ¦    Nov 18, 2020 12:07:56 PM (IST)
ಬಹು ಬೇಡಿಕೆಯ ಪದವಿ ಆಹಾರ ವಿಜ್ಞಾನ ಮತ್ತು ಪೋಷಣೆ ಪದವಿ

ಮಾನವ ಜನ್ಮ ಅಳುವಿನಿಂದಲೇ ಶುರುವಾಗುವುದು. ಭೂಮಿಗೆ ಪಾದಾರ್ಪಣೆ ಮಾಡುವ ಏನೂ ಅರಿವಿಲ್ಲದ ಶಿಶು, ಕ್ರಮೇಣ ಬೆಳೆದು ಈ ವಿಶ್ವದೊಂದಿಗೆ ಹೊಂದಿಕೊಂಡು ಕೊನೆಗೆ ಮಣ್ಣಲ್ಲೇ ವಿಲೀನವಾಗುವುದು ಸತ್ಯ ವಿಚಾರ. ಈ ಬದುಕು-ಸಾವಿನ ಅಂತರದಲ್ಲಿ ಸಾಗುವ ಜೀವನ ಹಲವು ಏರುಪೇರು ಕಾಣುತ್ತದೆ. ಬದುಕಬೇಕಾದಲ್ಲಿ ಅದು ಆಹಾರದ ಮೇಲೆ ಅವಲಂಬಿತವಾಗಿದೆ. ಯಾವ ದೇಶ, ಯಾವ ಜನವೇ ಆಗಿರಲಿ ಆಹಾರ ಸೇವಿಸಲೇ ಬೇಕು. ಆಯಾಯ ಹವಾಗುಣಕ್ಕೆ, ಸಮಾಜದ ಬೆಳವಣಿಗೆಗೆ ಮತ್ತು ಆಹಾರಪದ್ದತಿಗೆ ಜನ ಒಗ್ಗಿಕೊಂಡಿರುತ್ತಾರೆ.  ಪೌಷ್ಟಿಕ ಆಹಾರದ ಬಗ್ಗೆ ಅದೆಷ್ಟು ಜನ ಗಮನ ಕೊಡುತ್ತಾರೋ ಇಲ್ಲವೋ ಆದರೆ ಒಮ್ಮೆ ಅಸ್ಪತ್ರೆ ಸೇರಿ ವೈದ್ಯರೊಮ್ಮೆ ಹೇಳಿದ ಬಳಿಕ ಈ ವಿಷಯ ಗಂಭೀರ ಎನ್ನಿಸುತ್ತದೆ. ನಾವು ತೆಗೆದುಕೊಳ್ಳುವ ಆಹಾರ ನಮ್ಮನ್ನು ರೂಪಿಸುತ್ತದೆ. ಮೈ-ಮನಸ್ಸನ್ನು ಕಟ್ಟುವ ಕೆಲಸ ಮಾಡುವುದು ಸರಿಯಾದ ಆಹಾರ ಪದ್ದತಿ. ಈ ಬಗ್ಗೆ ತಿಳಿದುಕೊಳ್ಳಲು ಹಲವಾರು ಪದವಿಗಳಿವೆ; ಅವುಗಳಲ್ಲಿ ಮುಖ್ಯವಾದುದು ಫುಡ್ ಸೈನ್ಸ್ ಆಂಡ್ ನ್ಯೂಟ್ರಿಶಿಯನ್. ಈ ಪದವಿಯ ವ್ಯಾಪ್ತಿಯನ್ನು ಒಮ್ಮೆ ಸರಿಯಾಗಿ ಗಮನಿಸಿದರೆ ಇದರ ಪ್ರಾಮುಖ್ಯತೆ ತಿಳಿದುಬರುತ್ತದೆ. ಅನೇಕ ಉದ್ಯೋಗಾವಶಗಳನ್ನು ಹೊಂದಿರುವ ಈ ಪದವಿಗೆ ಇತ್ತೀಚೆಗೆ ಬಹು ಬೇಡಿಕೆ. ಭಾರತದೊಳಗೆ ಮಾತ್ರವಲ್ಲದೆ ವಿದೇಶದಲ್ಲೂ ಕೆಲಸ ಮಾಡಲು ಆಕರ್ಷಣೀಯವೆನಿಸುವ ಪದವಿಯಿದು.

ಫುಡ್ ಸೈನ್ಸ್ ಆಂಡ್ ನ್ಯೂಟ್ರಿಶಿಯನ್ ಕೋರ್ಸ್ ಮಾಡುವುದು ಹೇಗೆ?

ಆಹಾರ ಪದ್ದತಿಯ ಬಗ್ಗೆ, ಪೌಷ್ಟಿಕತೆಯ ಬಗ್ಗೆ, ಪಥ್ಯಶಾಸ್ತ್ರ(ಡಯೆಟೆಟಿಕ್ಸ್)ದ ಬಗ್ಗೆ ಅಧ್ಯಯನ ಮಾಡುವ ಈ ಪದವಿಯನ್ನು ಆಯ್ಕೆ ಮಾಡಿಕೊಳ್ಳಲು ಹತ್ತನೇ ತರಗತಿಯ ಬಳಿಕ ಪದವಿಪೂರ್ವ ವಿಭಾಗದಲ್ಲಿ ವಿಜ್ಞಾನ ವಿಭಾಗದಲ್ಲಿ ಭೌತಶಾಸ್ತ್ರ, ರಸಾಯನಶಾಸ್ತ್ರ, ಜೀವಶಾಸ್ತ್ರ, ಗಣಿತ ಮತ್ತು ಹೋಮ್ ಸೈನ್ಸ್ ವಿಷಯಗಳನ್ನು ಆಯ್ಕೆ ಮಾಡಿಕೊಂಡಲ್ಲಿ ಪದವಿ ಶಿಕ್ಷಣಕ್ಕೆ ಅನುಕೂಲವಾಗುತ್ತದೆ. ಜೀವ ವಿಜ್ಞಾನವನ್ನು ಕಲಿತ ಯಾವುದೇ ವಿದ್ಯಾರ್ಥಿಯೂ ನಿರಾಯಾಸವಾಗಿ ಈ ಕೋರ್ಸ್ ಮಾಡಬಹುದು.  ಕನಿಷ್ಠ೪೦ ರಿಂದ ೫೦% ಅಂಕಗಳನ್ನಾದರು ಪಡೆದಿದ್ದಲ್ಲಿ ಒಳ್ಳೆಯದು. ಪದವಿ ಶಿಕ್ಷಣದ ಬಳಿಕ ಸ್ನಾತಕೋತ್ತರ ಪದವಿಯನ್ನೂ ಬಳಿಕ ಇದೇ ವಿಷಯದಲ್ಲಿ ಪಿ.ಹೆಚ್.ಡಿ. ಯನ್ನು ಕೂಡ ಮಾಡಬಹುದು. ದೂರ ಶಿಕ್ಷಣ ವ್ಯವಸ್ಥೆಯಲ್ಲಿ ಕೂಡಾ ಈ ಕೋರ್ಸ್ಗಳು ಲಭ್ಯವಿವೆ. ಅನೇಕ ಡಿಪ್ಲೋಮಾ ಕೋರ್ಸ್ಗಳು ಕೂಡ ಈ ವಿಷಯದಲ್ಲಿದೆ.

ಸರ್ಟಿಫಿಕೇಟ್ ಕೋರ್ಸ್: ಒಂದು ವರ್ಷದ ಸರ್ಟಿಫಿಕೇಟ್ ಇನ್ ಡಯೆಟೆಟಿಕ್ಸ್ ಕೋರ್ಸ್ ಮಾಡುವ ಮೂಲಕ ಕೆಲವು ಅಗತ್ಯ ವಿಷಯಗಳನ್ನು ಅರ್ಥ ಮಾಡಿಕೊಳ್ಳಬಹುದು.

ಡಿಪ್ಲೊಮಾ ಕೋರ್ಸ್: ಒಂದು ವರ್ಷದ ಡಿಪ್ಲೊಮಾ ಇನ್ ಡಯೆಟ್ ಅಸಿಸ್ಟೆಂಟ್, ಒಂದು ಅಥವಾ ಎರಡು ವರ್ಷದ ಡಿಪ್ಲೊಮಾ ಇನ್ ಡಯೆಟೆಟಿಕ್ಸ್ ಆಂಡ್ ಹೆಲ್ತ್ ಎಜುಕೇಶನ್,  ಡಿಪ್ಲೊಮಾ ಇನ್ ಡಯೆಟೆಟಿಕ್ಸ್, ಡಿಪ್ಲೊಮಾ ಇನ್ ನ್ಯೂಟ್ರಿಶಿಯನ್ ಆಂಡ್ ಡಯೆಟೆಟಿಕ್ಸ್, ಡಿಪ್ಲೊಮಾ ಇನ್ ಫುಡ್ ಸೈನ್ಸ್ ಆಂಡ್ ನ್ಯೂಟ್ರಿಶಿಯನ್,  ಡಿಪ್ಲೊಮಾ ಇನ್ ಡಯೆಟೆಟಿಕ್ಸ್ ಆಂಡ್ ಕ್ಲಿನಿಕಲ್ ನ್ಯೂಟ್ರಿಶಿಯನ್, ಡಿಪ್ಲೊಮಾ ಇನ್ ನ್ಯೂಟ್ರಿಶಿಯನ್ ಆಂಡ್ ಫುಡ್ ಟೆಕ್ನಾಲಜಿ ಮತ್ತು ಮೂರು ವರ್ಷದ ಡಿಪ್ಲೊಮಾ ಇನ್ ನ್ಯೂಟ್ರಿಶಿಯನ್ ಆಂಡ್ ಡಯೆಟೆಟಿಕ್ಸ್ ಕೋರ್ಸ್ಗಳಲ್ಲಿ ಯಾವುದನ್ನಾದರೂ ಆಯ್ಕೆ ಮಾಡಬಹುದು.

ಡಿಗ್ರಿ ಕೋರ್ಸ್: ಮೂರು ವರ್ಷದ ನ್ಯೂಟ್ರಿಶಿಯನ್ ಆಂಡ್ ಡಯೆಟೆಟಿಕ್ಸ್ ನಲ್ಲಿ ಬಿ.ಎಸ್ಸಿ. ಪದವಿ ಮಾತ್ರವಲ್ಲದೆ, ಬಿ.ಎಸ್ಸಿ. ಇನ್ ಕ್ಲಿನಿಕಲ್ ನ್ಯೂಟ್ರಿಶಿಯನ್ ಆಂಡ್ ಡಯೆಟೆಟಿಕ್ಸ್, ಬಿ.ಎಸ್ಸಿ. ಇನ್ ಕ್ಲಿನಿಕಲ್ ನ್ಯೂಟ್ರಿಶಿಯನ್,  ಬಿ.ಎಸ್ಸಿ. ಇನ್ ಅಪೈಡ್ ನ್ಯೂಟ್ರಿಶಿಯನ್,  ಬಿ.ಎಸ್ಸಿ. ಇನ್ ಫುಡ್ ಸೈನ್ಸ್ ಆಂಡ್ ನ್ಯೂಟ್ರಿಶಿಯನ್, ಬಿ.ಎಸ್ಸಿ. ಇನ್ ಡಯೆಟೆಟಿಕ್ಸ್, ಬಿ.ಎಸ್ಸಿ. ಇನ್ ಹೋಮ್ ಸೈನ್ಸ್ ಇನ್ನಿತರ ಪದವಿ ಕೋರ್ಸ್ ಗಳು ಲಭ್ಯವಿವೆ. ತಮ್ಮ ಆಸಕ್ತಿಗೆ ಅನುಗುಣವಾಗಿ ವಿದ್ಯಾರ್ಥಿಗಳು ಪದವಿಯನ್ನು ಆಯ್ಕೆ ಮಾಡಿಕೊಳ್ಳಬಹುದು.

ಪೋಸ್ಟ್ ಗ್ರಾಜುಯೇಟ್ ಡಿಗ್ರಿ ಕೋರ್ಸ್: ಎರಡು ವರ್ಷದ ಕ್ಲಿನಿಕಲ್ ನ್ಯೂಟ್ರಿಶಿಯನ್ ಆಂಡ್ ಡಯೆಟೆಟಿಕ್ಸ್,  ಕ್ಲಿನಿಕಲ್ ನ್ಯೂಟ್ರಿಶಿಯನ್, ಪಿಡಿಯಾಟ್ರಿಕ್ ನ್ಯೂಟ್ರಿಶಿಯನ್, ಪಬ್ಲಿಕ್ ಹೆಲ್ತ್ ನ್ಯೂಟ್ರಿಶಿಯನ್, ಗೆರೊಂಟೋಲೋಜಿಕಲ್ ನ್ಯೂಟ್ರಿಶಿಯನ್, ರೆನಲ್ ನ್ಯೂಟ್ರಿಶಿಯನ್, ಸ್ಪೋರ್ಟ್ಸ್ ನ್ಯೂಟ್ರಿಶಿಯನ್/ಡಯೆಟೆಟಿಕ್ಸ್, ಪಬ್ಲಿಕ್ ಹೆಲ್ತ್ ನ್ಯೂಟ್ರಿಶಿಯನ್, ಫುಡ್ ಸೈನ್ಸ್/ಟೆಕ್ನಾಲಜಿ ಮುಂತಾದ ಸ್ನಾತಕೋತ್ತರ ಪದವಿಗಳನ್ನು ಮಾಡಬಹುದು. ಎರಡು ವರ್ಷದ ಪೋಸ್ಟ್ ಗ್ರಾಜುಯೇಟ್ ಡಿಪ್ಲೊಮಾ ಇನ್ ಡಯೆಟೆಟಿಕ್ಸ್ ಆಂಡ್ ಅಪ್ಲೈಡ್  ನ್ಯೂಟ್ರಿಶಿಯನ್, ಒಂದು ವರ್ಷದ ಪೋಸ್ಟ್ ಗ್ರಾಜುಯೇಟ್ ಡಿಪ್ಲೊಮಾ ಇನ್ ಡಯೆಟೆಟಿಕ್ಸ್, ಪಿ.ಜಿ. ಡಿಪ್ಲೊಮಾ ಇನ್ ಡಯೆಟೆಟಿಕ್ಸ್ ಆಂಡ್ ಪಬ್ಲಿಕ್ ಹೆಲ್ತ್ ಕೋರ್ಸ್ ಗಳು ಕೂಡ ತುಂಬಾ ಬೇಡಿಕೆಯನ್ನು ಹೊಂದಿವೆ.

ಉದ್ಯೋಗದ ಹಲವು ವಲಯಗಳು:

ಹಲವಾರು ವಲಯಗಳಲ್ಲಿ ಈ ಪದವಿ ಪಡೆದ ವಿದ್ಯಾರ್ಥಿಗಳು ಕೆಲಸ ಮಾಡಬಹುದು. ಅವುಗಳಲ್ಲಿ ಕೆಲವೊಂದನ್ನು ಇಲ್ಲಿ ಹೆಸರಿಸಿದ್ದೇನೆ:

ಸರಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ

ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ

ಹಲವಾರು ಸರಕಾರಿ ಯೋಜನೆಗಳಲ್ಲಿ (ಉದಾ: ಐಸಿಡಿಎಸ್, ಎನ್.ಹೆಚ್.ಆರ್.ಎಂ. ಯೋಜನೆಗಳು)

ಸರಕಾರಿ ಸಂಸ್ಥೆಗಳಲ್ಲಿ (ಉದಾ: ಎಫ್.ಎನ್.ಬಿ., ಐಸಿಎಂಆರ್, ಸಾರ್ವಜನಿಕ ಆರೋಗ್ಯ ಸಂಸ್ಥಾನ)

ಸರಕಾರಿ ಮತ್ತು ಖಾಸಗಿ ಸಂಶೋಧನಾ ಕೇಂದ್ರಗಳಲ್ಲಿ

ಸರಕಾರಿ ಮತ್ತು ಖಾಸಗಿ ನರ್ಸಿಂಗ್ ಹೋಮ್ ಗಳಲ್ಲಿ

ಸರಕಾರಿ ಮತ್ತು ಖಾಸಗಿ ಪೋಷಣೆ ಶಿಕ್ಷಣ ಸಂಸ್ಥೆಗಳಲ್ಲಿ

ಸರಕಾರೇತರ ಸಂಸ್ಥೆಗಳಲ್ಲಿ

ಆಹಾರೋತ್ಪನ್ನ ಕಂಪೆನಿಗಳಲ್ಲಿ

ಫಾರ್ಮಸ್ಯುಟಿಕಲ್ ಕಂಪೆನಿಗಳಲ್ಲಿ

ಆರೋಗ್ಯ ಸಂಘ ಸಂಸ್ಥೆಗಳಲ್ಲಿ

ಫಿಟ್ನೆಸ್ ಕೇಂದ್ರಗಳಲ್ಲಿ (ಜಿಮ್, ಆರೋಬಿಕ್ ಕೇಂದ್ರಗಳು)

ಕ್ರೀಡಾ ಕೇಂದ್ರಗಳಲ್ಲಿ

ಸ್ಟಾರ್ ಹೋಟೇಲ್ ಮತ್ತು ರೆಸ್ಟೋರೆಂಟ್ ಗಳಲ್ಲಿ

ಬಹು ರಾಷ್ಟ್ರೀಯ ಕಂಪೆನಿಗಳಲ್ಲಿ

ಡಯಾಬಿಟಿಕ್ ಕ್ಲಿನಿಕ್ ಗಳಲ್ಲಿ

ಅಂತರಾಷ್ಟ್ರೀಯ ಆಹಾರ ಸಂಸ್ಥೆಗಳಲ್ಲಿ

ಆರೋಗ್ಯ ವಿಭಾಗಗಳಲ್ಲಿ

ಶಾಲೆ ಮತ್ತು ಕಾಲೇಜುಗಳಲ್ಲಿ

ವಸತಿನಿಲಯಗಳಲ್ಲಿ

ಹೀಗೆ ಹತ್ತು ಹಲವು ಸಂಸ್ಥೆಗಳಲ್ಲಿ, ಆರೋಗ್ಯ ಕೇಂದ್ರಗಳಲ್ಲಿ ಉದ್ಯೋಗಾವಕಾಶಗಳಿವೆ. ಒಂದು ವೇಳೆ ಸ್ವಂತ ಉದ್ಯೋಗ ಮಾಡುವ ಹಂಬಲವಿದ್ದಲ್ಲಿ ನ್ಯೂಟ್ರಿಶಿಯನ್ ಆಗಿ, ಡಯೆಟಿಶಿಯನ್ ಆಗಿಯೂ ಕೆಲಸ ಮಾಡಬಹುದು.

ಉದ್ಯೋಗಾವಕಾಶಗಳು:

ಈಗಾಗಲೇ ಗಮನಿಸಿದ ಹಾಗೆ ಇಲ್ಲಿ ಹಲವು ಕ್ಷೇತ್ರಗಳಲ್ಲಿ ಬೇರೆಬೇರೆ ರೀತಿಯ ಹುದ್ದೆಗಳಿದ್ದು ಅನೇಕ ಉದ್ಯೋಗಾವಕಾಶಗಳಿವೆ. ಅವುಗಳಲ್ಲಿ ಕೆಲವೊಂದನ್ನಿಲ್ಲಿ ತಿಳಿಸಿದ್ದೇನೆ:

ಕಾಲೇಜಿನಲ್ಲಿ ಉಪನ್ಯಾಸಕರಾಗಿ ಪದವಿಪೂರ್ವ, ಪದವಿ, ಸ್ನಾತಕೋತ್ತರ ಪದವಿ ಹೀಗೆ ಎಲ್ಲಾ ವಿಭಾಗಗಳಲ್ಲೂ ಕೆಲಸ ಮಾಡಬಹುದು.

ಎಂ.ಫಿಲ್, ಪಿ.ಹೆಚ್.ಡಿ. ಅರ್ಹತೆಯನ್ನು ಪಡೆದು ಸಂಶೋಧನಾ ಕೇಂದ್ರಗಳಲ್ಲಿ, ಆರೋಗ್ಯ ವಿಭಾಗಗಳಲ್ಲಿ, ಆಹಾರೋತ್ಪನ್ನ ಕೇಂದ್ರಗಳಲ್ಲೂ ಕೆಲಸ ನಿರ್ವಹಿಸಬಹುದು.

ಹಲವಾರು ಕ್ಲಿನಿಕ್ ಗಳಲ್ಲಿ, ಆಸ್ಪತ್ರೆಗಳಲ್ಲಿ ನ್ಯೂಟ್ರಿಶಿಯನ್, ಡಯೆಟಿಶಿಯನ್ ಆಗಿಯೂ ಕೆಲಸ ಮಾಡಬಹುದು.

ಆರೋಗ್ಯ ಸಂಸ್ಥೆಗಳು, ಆಸ್ಪತ್ರೆಗಳಲ್ಲಿ ರೋಗಿಗಳ ಆಹಾರ ಪದ್ದತಿಯನ್ನು ಅರಿಯಲು, ಆಹಾರದ ಗುಣಮಟ್ಟವನ್ನು ಪರೀಕ್ಷಿಸಲು ಹಲವಾರು ಉದ್ಯೋಗಗಳಿರುತ್ತವೆ.

ಡಯಾಬಿಟಿಕ್ ಕ್ಲಿನಿಕ್ ಗಳಲ್ಲಿ ಆಹಾರದ ಸರಿಯಾದ ಪ್ರಮಾಣ ತಿಳಿಸಲು ಮತ್ತು ಮಾರ್ಗದರ್ಶನ ನೀಡಲು ನ್ಯೂಟ್ರಿಶಿಯನ್, ಡಯೆಟಿಶಿಯನ್ ಅಗತ್ಯವಿರುತ್ತದೆ.

ಅನೇಕ ಐಟಿ ಬಿಟಿ ಕಂಪೆನಿಗಳು ತಮ್ಮ ನೌಕರರ ಆರೋಗ್ಯ ವಿಚಾರದಲ್ಲಿ ಕಾಳಜಿ ತಗೊಳ್ಳುತ್ತಿದ್ದು ಫುಡ್ ರಿಸರ್ಚ್ ಅನಲಿಸ್ಟ್, ನ್ಯೂಟ್ರಿಶಿಯನಲಿಸ್ಟ್, ಡಯಟೇಶಿಯನ್ ಗಳನ್ನು ನೇಮಿಸುತ್ತಾರೆ.

ಆಹಾರೋತ್ಪನ್ನ ಕಂಪೆನಿಗಳಲ್ಲಿ ಫುಡ್ ಸರ್ವೀಸ್ ಮ್ಯಾನೇಜರ್ಸ್, ಮಾರ್ಕೆಟಿಂಗ್ ಫುಡ್ ಆಂಡ್ ನ್ಯೂಟ್ರಿಶಿಯನ್ ಮ್ಯಾನೇಜರ್ಸ್ ಹೀಗೆ ಹಲವು ಹುದ್ದೆಗಳಿರುತ್ತವೆ.

ಹಲವಾರು ಫಿಟ್ ನೆಸ್ ಕೇಂದ್ರಗಳಲ್ಲಿ, ಡಯೆಟ್ ಥೆರಪಿಸ್ಟ್ ಆಗಿಯೂ, ಆರೋಬಿಕ್ ಕನ್ಸಲ್ಟೆಂಟ್ ಆಗಿಯೂ ಕೆಲಸ ಮಾಡಬಹುದು.

ಜಾಹೀರಾತು ಕಂಪೆನಿಗಳಲ್ಲಿ, ಆಹಾರ ಮಾರುಕಟ್ಟೆಯ ನಿರ್ಮಾಣದಲ್ಲೂ, ಒಂದು ಆಹಾರದ ಗುಣಮಟ್ಟ ರೂಪಿಸುವಲ್ಲೂ ಕೆಲಸ ನಿರ್ವಹಿಸಬಹುದು.

ಕ್ರೀಡಾ ಕೇಂದ್ರಗಳಲ್ಲಿ, ಎಲ್ಲಾ ರೀತಿಯ ಅತ್ಲೆಟಿಕ್ ಕೂಟಗಳಲ್ಲೂ ವೈದ್ಯರ ಅಗತ್ಯ ಎಷ್ಟರ ಮಟ್ಟಿಗಿದೆಯೋ ಅದಕ್ಕಿಂತಲೂ ಹೆಚ್ಚಿನ ಅಗತ್ಯ ಈ ಪದವಿ ಮಾಡಿದ ವಿದ್ಯಾರ್ಥಿಗಿದೆ.

ಹೀಗೆ ಹತ್ತು ಹಲವು ಕಡೆಗಳಲ್ಲಿ, ಸರ್ಕಾರಿ ಮತ್ತು ಸರ್ಕಾರೇತರ ಸಂಸ್ಥೆಗಳಲ್ಲೂ, ಸ್ವ-ಉದ್ಯೋಗಿಯಾಗಿಯೂ ಕೆಲಸ ಮಾಡಲು ಅವಕಾಶಗಳಿವೆ.

ಉದ್ಯೋಗ ನೀಡುವ ಪ್ರಮುಖ ಕಂಪೆನಿಗಳು:

ದಿ ಒಬೆರಾಯ್ ಶಿಮ್ಲಾ, ತಾಜ್ ಬೆಂಗಾಲ್, ತಾಜ್ ಪ್ಯಾಲೇಸ್, ಐಟಿಡಿಸಿ, ಮನ್ ಸಿಂಗ್ ಪ್ಯಾಲೇಸ್, ಮಜೆಸ್ಟಿಕ್ ಪಾರ್ಕ್ ಪ್ಲಾಜಾ, ಲೇ ಮೆರೇಡಿಯನ್, ಪಿಜ್ಜಾ ಹಟ್, ಕೆಫೆ ಕಾಫೀ ಡೆ, ಎಕ್ಸೆಲ್, ದಕ್ಷ್, ದಿ ಪ್ಲಾಜಾ ಸೋಲಿಟೈರ್, ಪಂಜಾಬ್ ಟೂರಿಸಂ ಡೆವೆಲೊಪ್ ಮೆಂಟ್ ಕಾರ್ಪೋರೇಶನ್, ಟಿ.ಎಂ.ಐ. ನೆಟ್ ವರ್ಕ್, ಮ್ಯಾಕ್ಸ್ ಹೆಲ್ತ್ ಕೇರ್, ಫೋರ್ಟೀಸ್ ಹಾಸ್ಪಿಟಲ್, ಮೆಟ್ರೋ ಹಾಸ್ಪಿಟಲ್, ಸರ್ ಗಂಗಾರಾಮ್ ಹಾಸ್ಪಿಟಲ್ ಹೀಗೆ ಹಲವಾರು ಕಂಪೆನಿಗಳು ಮತ್ತು ಆಸ್ಪತ್ರೆಗಳು ಸದಾ ಉದ್ಯೋಗಾವಕಾಶಗಳನ್ನು ನೀಡುತ್ತಿರುತ್ತವೆ.

ಕೊನೆಗೊಂದು ಕಿವಿಮಾತು:

ನೋಡಿದಿರಲ್ಲಾ.. ಅದ್ಯಾವ ರೀತಿಯಲ್ಲಿ ಈ ಪದವಿ ನಮ್ಮನ್ನು ಒಂದು ವಿಭಿನ್ನ ಉದ್ಯೋಗದತ್ತ ಮನೆಮಾಡಿಸುತ್ತದೆಂದು. ಆದರೂ ಈ ಪದವಿಯ ಬಗೆಗಿನ ಅರಿವು ಜನಸಾಮಾನ್ಯರಲ್ಲಿ ಸಾಕಾಗುತ್ತಿಲ್ಲ. ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಪ್ರಥಮವಾಗಿ ಫುಡ್ ನ್ಯೂಟ್ರಿಶಿಯನ್ ಆಂಡ್ ಡಯೆಟಿಟಿಕ್ಸ್ ಕೋರ್ಸ್ ಪರಿಚಯವಾದಾಗಿನ ಸನ್ನಿವೇಶವನ್ನು, ಆಳ್ವಾಸ್ ಸ್ನಾತಕೋತ್ತರ ಪದವಿ ಆಹಾರ ವಿಜ್ಞಾನ ಮತ್ತು ಪೋಷಣೆ ವಿಭಾಗದ ಮುಖ್ಯಸ್ಥೆ  ಅರ್ಚನಾ ಪ್ರಭಾತ್ ಹೇಳುವುದು ಹೀಗೆ, "ದೈನಂದಿನ ಬದುಕಿನಲ್ಲಿ ಯಾರಿಗೆ ಯಾವ ಆಹಾರವನ್ನು ಎಷ್ಟು ಪ್ರಮಾಣದಲ್ಲಿ ತೆಗೆದುಕೊಳ್ಳಬೇಕೆಂದು ಗೊತ್ತಿರುವುದಿಲ್ಲ, ಇಲ್ಲಿ ವಿದ್ಯಾರ್ಥಿಗಳು ಆಹಾರದ ಗುಣಮಟ್ಟಕ್ಕೆ ಸಂಬಂಧಪಟ್ಟ ಅನೇಕ ವಿಷಯಗಳನ್ನು ವಿಸ್ತಾರವಾಗಿ ಕಲಿಯುತ್ತಾರೆ. ಮೊದಲು ಈ ಕೋರ್ಸ್ ಪ್ರಾರಂಭವಾಗಿ ನಿಂತು ಹೋಯಿತು, ಕಾರಣ ಇದರ ಬಗೆಗಿನ ಅರಿವಿನ ಕೊರತೆ. ಆದರೆ ಈವಾಗ ಹಾಗಿಲ್ಲ, ದೇಶ-ವಿದೇಶಗಳಿಂದಲೂ ಈ ಕೋರ್ಸ್ ಗಳಿಗೆ ಬಹಳ ಬೇಡಿಕೆಯಿದೆ. ಹಲವಾರು ಕಾಲೇಜುಗಳಲ್ಲಿ ಆಹಾರ ವಿಜ್ಞಾನಕ್ಕೆ ಸಂಬಂಧಿಸಿದ ಹಾಗೇ ಹೊಸ ಕೋರ್ಸ್ ಗಳೂ ಬರುತ್ತಿವೆ. ಕೋರೋನಾದಿಂದಾದ ಹಾವಳಿಯಿಂದ ಅನೇಕ ಆಸ್ಪತ್ರೆಗಳು, ಆರೋಗ್ಯ ಸಂಸ್ಥೆಗಳು, ಡಯೆಟೇಶಿಯನ್, ನ್ಯೂಟ್ರೀಶಿಯನ್ ಕಡೆಗೆ ತುಂಬಾ ಗಮನ ಹರಿಸುತ್ತಿದ್ದಾರೆ. ವಿದ್ಯಾರ್ಥಿಗಳಿಗೆ ಅನೇಕ ಹೊಸ ಹುದ್ದೆಗಳು ಕಾಯುತ್ತಿವೆ ಹಾಗಾಗಿ ವಿದ್ಯಾರ್ಥಿಗಳು ಈ ಕಡೆ ಒಲವು ತೋರಿಸಬೇಕಷ್ಟೇ". ಎನ್ನುತ್ತಾರೆ. ಹಾಗಾದರೆ ಮತ್ತೇಕೆ ತಡ.. ಈ ವಿಷಯದಲ್ಲಿ ಆಸಕ್ತಿಯಿದ್ದವರು ಒಮ್ಮೆ ಆಲೋಚನೆ ಮಾಡಿ ನೋಡಿ. ಖಂಡಿತಾ ಮತ್ತೊಮ್ಮೆ ಸಿಗೋಣ.. ಹೊಸ ಡಿಗ್ರಿ.. ಹೊಸ ನೌಕ್ರಿಯೊಂದಿಗೆ....