"ಅಯ್ದಿದಳವಳು ಶಿವಪದವ....."

"ಅಯ್ದಿದಳವಳು ಶಿವಪದವ....."

Oct 10, 2020 09:52:29 AM (IST)
"ಅಯ್ದಿದಳವಳು ಶಿವಪದವ....."

ಯಾಗಶಾಲೆ... ಹೋಮ ಧೂಮ ವ್ಯೋಮದತ್ತ ಸಾಗಿ ಭವಿತವ್ಯವನ್ನು ವರ್ತಮಾನವನ್ನಾಗಿಸಿದ ಭೂತಕಾಲದ ಫಲಶೃತಿಯದು. ತವರು ಮನೆಯಲ್ಲಾಗುತ್ತಿರುವ ಯಾಗವನ್ನು ಕಣ್ಣಾರೆ ನೋಡಬೇಕೆಂದು ಪರಶಿವೆ ಪರಶಿವನ ಮೌನವನ್ನೇ ಮಾತೆಂದು ಭಾವಿಸಿ ಒಂದೊಂದೇ ಪದವಿರಿಸಿ ಬಂದ ಕ್ಷಣವದು... "ನಿಲ್ಲದು ಮನವಲ್ಲಿ ಪೋಗದೆ ಪ್ರಾಣ ವಲ್ಲಭ ಕಳುಹಿಸಲಾಗದೆ" ಎಂದು ನುಡಿದ ಸತಿ ತನ್ನ ಪತಿಯ ಬಳಿಯಲ್ಲಿ " ನಿಲ್ಲದೆ ಬರುವೆ ನಾಳೆ" ಎನ್ನುತ್ತಾ ಪತಿಯ ಗಲ್ಲವನ್ನು ಹಿಡಿದು ಮುದ್ದಿಸಿದ ಬಗೆಗೆ ದೊರೆತ ಬಹುಮಾನವದು. ದಕ್ಷಸುತೆ ಪಿನಾಕಿಯ ಅರ್ಧ ಶರೀರೆಯೆಂಬುದನ್ನು ಗಮನಿಸಿಯೂ ಗಮನಿಸದಂತೆ ಕುಳಿತ ದಕ್ಷ ಪ್ರಜಾಪತಿಯಿಂದ ದಾಕ್ಷಾಯಣಿಗೆ ದೊರೆತ ಅವಮಾನದ ಸಮ್ಮಾನವದು.

ಹೌದು.....ಸತಿ ತನ್ನ ತವರು ಮನೆಯಲ್ಲಿ ಬೇರೆಯಾಗಿಯೇ ನಿಂತಿದ್ದಳು.

ಯಕ್ಷಗಾನ ಲೋಕಕ್ಕೆ ಅನೇಕ ಪ್ರಸಂಗ ಕಾಣ್ಕೆಯನ್ನಿತ್ತ ದೇವೀದಾಸ ಕವಿಯ ಗಿರಿಜಾಕಲ್ಯಾಣ ಪ್ರಸಂಗದ ಶ್ರೀಮಂತ ಭಾಗವೆನಿಸಿದ "ದಕ್ಷಯಜ್ಞ" ಕೇವಲ ಒಂದು ಯಕ್ಷಗಾನ ಪ್ರಸಂಗವಾಗಿರದೆ ಪುರುಷ - ಪ್ರಕೃತಿ ತತ್ವವು ನಿಯತಿಯ ಆಟದೊಳಗೆ ಒಂದಾಗಿ- ಬೇರೆಯಾಗಿ- ಮರು ಜೊತೆಸೇರುವ ಮಾರ್ಮಿಕ ಕಥಾಹಂದರವಾಗಿದೆ.
ತವರುಮನೆಯ ಬಗೆಗೆ ಹೆಣ್ಣೋರ್ವಳಲ್ಲಿ ಇರುವಂತಹ ವ್ಯಾಮೋಹ, ಪತಿಯ ಮಾತನ್ನು ಮೀರಲಾರದ ಸ್ಥಿತಿ, ಕರುಳ ಕುಡಿಯನ್ನು ಅವಮಾನಿಸುವಲ್ಲಿ ಉತ್ಪತ್ತಿಯಾಗುವ ಮನೋವಿಕಲತೆ ಇವೆಲ್ಲದರ ಪರಿಣಾಮದ ಮೂರ್ತ ಸ್ವರೂಪವಾಗಿ ದಾಕ್ಷಾಯಣಿ ಪಾತ್ರ ರಸೋತ್ಪತ್ತಿಯ ಆಕರವಾಗಿ ಮೂಡಿಬಂದಿರುವುದು ವಿಶೇಷ.

" ಆವಲ್ಲಿಂದ ಬಂದಿರಯ್ಯ ಭೂಮಿ ದೇವ? ಶತ ಸಾವಿರವು ಪೋಪುದೆಲ್ಲಿ ಭೂಮಿ ದೇವ? ಹೆಂಡಿರು ಮಕ್ಕಳು ಸಹ ಭೂಮಿದೇವ, ಕೂಡಿಕೊಂಡು ಪೋಪ ಕಾರ್ಯವೇನು ಭೂಮಿದೇವ?" ಎಂದು ಕೈಲಾಸದ ತಪ್ಪಲಿನಲ್ಲಿ ಹೋಗುತ್ತಿದ್ದ ದ್ವಿಜರನ್ನು ಕೇಳಲು " ದಕ್ಷನ ಯಾಗಕ್ಕೆ ನಾವು ಪೋಪೆವಮ್ಮ, ಬಹು ದಕ್ಷಿಣೆಗಳ ನೀವರಂತೆ ಕೇಳಿರಮ್ಮ..." ಎಂಬ ಉತ್ತರ ದ್ವಿಜರಿಂದ ದೊರೆತದ್ದಕ್ಕಿಂತಲೂ "ಅರಿಯಲವರ ಮಗಳಲ್ಲವೆ ನೀವು ಅಮ್ಮ, ಪೋಗದಿರುವ ಕಾರಣಗಳೇನು? ಪೇಳಿರಮ್ಮ, ಮರೆತರೋ ನಿಮ್ಮನು ಕರೆಯಲೇನಿದಮ್ಮ? ಎಮ್ಮಸಂಗಡ ಬನ್ನಿ ಪೋಗುವಮ್ಮ" ಎಂದಾಗ ಉಂಟಾದ ಕೌತುಕ, ಅವಮಾನ, ಬೇಸರ ಆಕೆಯನ್ನು ಪರಶಿವನ‌ ಮುಂದೆ ಮಾತನಾಡಿಸಿದರೂ ತವರು ಮನೆಯಲ್ಲಿ ಆಕೆ ಮೌನಿಯಾಗಬೇಕಾದ ಸ್ಥಿತಿ ಶಿವನನ್ನೂ ಚಿಂತೆಗೀಡುಮಾಡಿದ ದೃಶ್ಯ ಪ್ರಸಂಗದ ಪರಿಣಾಮಕ್ಕೆ ವೇದಿಕೆಯನ್ನು ನಿರ್ಮಿಸಿದೆ.

"ನೋಡಿರಿ ದ್ವಿಜರು ಪೋಪುದನು ನಿಮ್ಮಯ ಮಾವ ಮಾಡುವ ಯಜ್ಞವಂತೆ, ಆಡಲೇನಧಿಕ ಸಂಭ್ರಮವಂತೆ, ಬಂಧುಗಳು ಕೂಡಿ ರಂಜಿಸುವರಂತೆ, ಎನ್ನ ಅಕ್ಕ ತಂಗಿಯಂದಿರು ಬಾಂಧವರೆಲ್ಲ ಕೂಡಿರ್ಪರಂತೆ, ಬನ್ನಿ! ಬಹುಕಾಲವಾಯಿತು, ಅವರನ್ನು ಕಾಣದೆ ಮನ ನಿಲ್ಲದು " ಎಂದು ಸತಿಯಾಡಲು ಆಕೆಯ ಮಾತಿನ ಬಗೆಯನ್ನರಿತ ಸತೀಶ " ಆಮಂತ್ರಣವಿಲ್ಲದೆ ಹೋಗುವುದು ತರವಲ್ಲ" ಎಂಬುದಾಗಿ ಮೇಲ್ನೋಟಕ್ಕೆ ಹೇಳಿದರೂ " ಗುರುವಿನ ಮನೆಗೆ, ತಾಯಿಯ ಮನೆಗೆ, ಕಾಂತನ ಗೃಹಕೆ, ಅರಸನರಮನೆಗೆ ಹೋಗಲು ಆಮಂತ್ರಣದ ಅವಶ್ಯಕತೆ ಇಲ್ಲ" ಎಂದು ಪರಶಿವನಿಗೆ ಪ್ರತಿಯಾಡಿ ತೆರಳಿದ ಅಂಬಿಕೆಗೆ ತನ್ನ ತವರು ಮನೆಯಲ್ಲಿ ಒದಗಿದ ವ್ಯತಿರಿಕ್ತ ಪರಿಣಾಮದ ಸಾಕಾರ ರೂಪ.

"ಒಂದು ದಿವಸ ತಾನು ಕುಳಿತಿರ್ಪ ಸಭೆಗೆ ಬಂದ ದಕ್ಷ ಆ ಸಂದರ್ಭ ನಾನೇಳದ ಬಗೆಯನ್ನು ಕಂಡು ತನ್ನ ಅಳಿಯನೆಂಬುದನ್ನೂ ಯೋಚಿಸದೆ ಹೀನಾಯವಾಗಿ ಹೀಗಳೆದಿರುವುದನ್ನು ತಾನು ಮರೆತರೂ ನಿನ್ನ ತಂದೆ ನನ್ನನ್ನು ಅಪಮಾನಿಸಬೇಕು ಎಂಬ ಏಕಮಾತ್ರ ಉದ್ದೇಶವಿರಿಸಿ ನಮ್ಮನ್ನು ಆಮಂತ್ರಿಸದೆ ಈ ಯಾಗ ಮಾಡಿಸುತ್ತಿದ್ದಾನೆ" ಎಂದು ಪರಿಪರಿಯಾಗಿ ತಿಳಿಸಿದರೂ ಹಠವಿಡಿದ ಸತಿಗೆ " ದಾಕ್ಷಾಯಣಿ ನಾನು ಹೋಗುವುದಂತಿರಲಿ ನೀನೂ ಹೋಗ ಕೂಡದು. ಆ ದುಷ್ಟ ಕ್ರತುವಿನೊಳಗೆ ಹಗೆತನವನ್ನು ಸಾಧಿಸುವರು.. ಹೋದರೆ ಅಪಮಾನ ತಪ್ಪದು ಕಡೆಗೆ, ನೀ ಪೋಗುವುದು ಉಚಿತವಲ್ಲ " ಎಂದು ನುಡಿದ ಪರಶಿವನ ಮಾತಿನ ಗೂಢಾರ್ಥವನ್ನು ಅರಿಯದೆ ಕೇವಲ ತವರುಮನೆಯ ವ್ಯಾಮೋಹ ಭರಿತಳಾಗಿ ಕಂಬನಿ ದುಂಬಿ ಗೋಳಿಡುತ ಕಾಡಿದ ರೀತಿಗೆ ಪರಶಿವನು ಮರು ಮಾತಾಡದೆ ಮೌನವನ್ನು ತಳೆದು ಕುಳಿತುಕೊಂಡಾಗ " ಯಾಕೆ ನೀವು ಮಾತನಾಡುತ್ತಿಲ್ಲ?" ಎಂದು ಪ್ರಶ್ನಿಸುತ್ತಾ ತನ್ನಲ್ಲಿಯೇ ತಾನು ಮಾತನಾಡಿಕೊಳ್ಳುತ್ತಾ "ತಾನು ತವರು ಮನೆಗೆ ಹೋಗಿಯೇ ಹೋಗುತ್ತೇನೆ" ಎಂದು ನಿರ್ಧರಿಸಿ ಕಾತರದಿಂದ ಎದ್ದು ನಡೆಯುತ್ತಾಳೆ. ತುಸು ನಿಂತು ಹಿಂತಿರುಗಿ ನೋಡುತ್ತಾ ನೋಡುತ್ತಾ ಮುಂದುವರಿಯುತ್ತಾಳೆ. ಬಾಂಧವರನ್ನು ಕಾಣಬೇಕೆಂಬ ಆಸೆ ಮತ್ತು ತನ್ನ ಪ್ರಿಯ ಪತಿಯನ್ನು ಬಿಡಲಾರದ ಇಕ್ಕಟ್ಟಿಗೆ ಸಿಲುಕಿ ಅಳುತ್ತಾ ಅತ್ತಣಿಂದಿತ್ತ ಇತ್ತಣಿಂದತ್ತ ಹೋಗುತ್ತಿದ್ದ ಸತಿ ಕಡೆಗೂ ಪತಿಯ ಮೌನದ ಬಳುವಳಿಯೊಂದಿಗೆ ಪತಿಯ ಚಿತ್ತವನ್ನು ಒಲಿಸುವಲ್ಲಿ ಸೋತು ಹೋಗಿ ಸಖೇದ ಹರುಷದಿಂದ ತವರು ಮನೆಯೆಡೆ ಸಾಗುವಲ್ಲಿ ಗೆಲುವನ್ನು ಪಡೆದ ಭ್ರಮೆಯೊಂದಿಗೆ ಬಂಧು ದರ್ಶನಪರವಶಳಾಗುತ್ತಾಳೆ.
ಕೈಲಾಸಗಿರಿಯ ಹೊಸ್ತಿಲನ್ನು ದಾಟಿ ಸಾಗುತ್ತಾಳೆ.

ಕಂದಿ, ಕುಂದಿ,ನೊಂದು, ಬೆಂದು ತಂದೆ ಮನೆಗೆ ಸತಿ ಬರುವ ಬಗೆ ತವರಿಗೆ ಹೋಗುವಲ್ಲಿ ಹೆಣ್ಮಕ್ಕಳಿಗಿರುವ ಸಂಭ್ರಮದ ಆಧಿಕ್ಯವನ್ನು ಅಭಿವ್ಯಕ್ತಿಗೊಳಿಸುವುದು ಮಾತ್ರವಲ್ಲದೆ ಮುಂದೆ ಘಟಿಸಬಹುದಾದ ಘೋರ ದುರಂತಕ್ಕೆ ಕೌತುಕದ ಕಾವ್ಯವೇದಿಕೆಯನ್ನು ಕವಿ ಸೂಕ್ಷ್ಮವಾಗಿ ನಿರ್ಮಿಸಿದ್ದಾನೆ. ಪಟ್ಟೆಸೀರೆಯನ್ನುಟ್ಟು, ದಿವ್ಯರವಕೆಯನ್ನು ತೊಟ್ಟು, ರವಿಯಂತೆ ಬೆಳಗುತ್ತಾ ಕಟ್ಟಿದಾ ಸಿರಿಮುಡಿಗೆ ನವಮಲ್ಲಿಗೆಯನ್ನು ಮುಡಿದು ಸೃಷ್ಟಿಗೆ ಕೌತುಕವಾಗಿ ಬರುವ ಅಂಬಿಕೆಯು ಕಸ್ತೂರಿಯ ಬೊಟ್ಟನಿಟ್ಟು ನಾನಾ ರತ್ನದ ಪದಕದ ಮಾಲೆಯ ಜೊತೆಗೆ ಉತ್ತಮ ಸರಪಣಿ ಗೆಜ್ಜೆಯೊಂದಿಗೆ ವಿಸ್ತಾರದಾಭರಣದಿಂದ ತವರುಮನೆಯೆಡೆಗೆ ಸುಶೋಭಿತಳಾಗಿ ಪದವಿರಿಸುತ್ತಾಳೆ.

ಪರಿಪರಿಯ ವೇದಗಳ ಘೋಷದ ನಡುವೆ, ನೆರೆದಿರುವ ಸಕಲ ಮುನಿಜಾಲದ ನಡುವೆ, ಸುರಪ ಮುಖ್ಯರ ಸ್ವರ್ಗದಂತೆ ಶೋಭಿಸುತ್ತಿರುವ, ಧರೆಗೆ ನೂತನವೋ ಎಂಬಂತೆ ತೋರುವ ಯಜ್ಞಶಾಲೆಯಲ್ಲಾಗುತ್ತಿರುವ ಆ ಮಹಾಧ್ವರದೆಡೆಗೆ ಭುವನ ಸ್ತೋಮ ವಂದಿತೆಯಾದ ಜಗದಂಬಿಕೆ ಬಂದು, ಬಂಧು ಬಾಂಧವರ ಸಹಿತ ತಾಯ್ತಂದೆಯನ್ನು ಹರ್ಷ ತುಂಬಿ ಕಂಡಾಗ ಯಾಗದೀಕ್ಷಿತರಾಗಿದ್ದ ಅವರು ಕಾಣುತ ಕಾಣದಂದದಲಿ ಸುಮ್ಮನಿರಲು ಆಶ್ಚರ್ಯಪಡುತ್ತಾಳೆ. " ತಡವಾಗಿ ಬರುತ್ತಿರುವ ದಾಕ್ಷಾಯಣಿಯನ್ನು ಕಂಡು ಎಲ್ಲರೂ ತಾ ಮುಂದು ತಾ ಮುಂದು ಎಂದು ಬಂದು ಮಾತನಾಡಿಸುತ್ತಾರೆ" ಎಂದು ಭ್ರಮಿಸಿದ ಸತಿ ಒಂದಿನಿತೂ ಮಾತನಾಡದೆ ಮದದಿ ಕುಳಿತಿದ್ದ ತಾಯಿ ತಂದೆಯನ್ನು ಕಂಡು ಬೆರಗಾಗುತ್ತಾಳೆ. ನೆರೆದಿದ್ದ ಬಂಧು‌ಬಾಂಧವರ ಬಳಿ‌ಮಾತನಾಡಲು ತೆರಳಿದರೆ ಅವರೆಲ್ಲರ ದೃಷ್ಟಿ ತನ್ನ ತಂದೆಯ ತೋರುಬೆರಳಿನ ಮೇಲೆ ಕೇಂದ್ರೀಕೃತವಾಗಿರುವುದನ್ನು ಗಮನಿಸಿದ ಸತಿ ಅಲ್ಲಿ ನಡೆಯುತ್ತಿರುವ ಯಾಗ ತನ್ನ ತಂದೆಯಾದ ದಕ್ಷಪ್ರಜಾಪತಿಯ ಆಶಯದಂತೆ ನಡೆಯುತ್ತಿರುವುದನ್ನು ಅರ್ಥಮಾಡಿಕೊಳ್ಳುತ್ತಾಳೆ. ತವರು‌ಮನೆಯ ಪ್ರೀತಿಯಿಂದಲೂ ಪರಿತ್ಯಕ್ತಳಾದ ಸತಿ ತವರು ಮನೆಯಿಂದಲೂ ದೊರೆತ ಮೌನದ ಉತ್ತರವನ್ನು ಮೌನವಾಗಿಯೇ ಸ್ವೀಕರಿಸಿ ಯಾಗದ ಪೂರ್ಣಾಹುತಿಯನ್ನು ದೂರದಿಂದಲೇ ಕಂಡು ಆ ಬಳಿಕ ಕೈಲಾಸಗಿರಿಯತ್ತ ತೆರಳಲು ನಿರ್ಧರಿಸಿ ಯಾಗದ ಸೊಬಗನ್ನು ವೀಕ್ಷಿಸಲು ಮುಂದಡಿಯಿಡುತ್ತಾಳೆ.

ಆದರೆ ಅಲ್ಲಿ ಅವಳು ಕಂಡ ದೃಶ್ಯ ಅವಳ ಸಂಭ್ರಮದ ಸೌಧವೇ ಕುಸಿದು ಮಣ್ಣು ಪಾಲಾಗುವಂತಿತ್ತು. ಮಹಾರುದ್ರನಿಗೆ ಕ್ರತುವಿನ ರುದ್ರಭಾಗವನ್ನು ಕೊಡದಿರುವ ಘೋರ ಅಪಮಾನವನ್ನು ರುದ್ರಾಣಿಯು ಎಂತು ಸಹಿಸಿಯಾಳು!!!

ಯಾಗದ ಪೂರ್ಣಾಹುತಿಯಾಗಬೇಕಿದ್ದರೆ ಅಷ್ಟ ದಿಕ್ಪಾಲಕರಿಗೆ ಯಾಗದ ಹವಿರ್ಭಾಗವನ್ನು ನೀಡುವುದು ನೀತಿ- ನಿಯಮ. ಅಷ್ಟ ದಿಕ್ಪಾಲಕರ ಪೈಕಿ ಈಶಾನ್ಯ ದಿಕ್ಕಿನ ಅಧಿಪನಾದ ಈಶನಿಗೆ ಹವಿರ್ಭಾಗ ಕೊಡುವುದನ್ನು ದಕ್ಷ ಪ್ರಜಾಪತಿ ತಡೆದು ನಿಲ್ಲಿಸಿದಾಗ ಪತಿ ಭಾಗವನ್ನು ಕೊಡದಿರ್ಪ ಯಾಗವನ್ನು ನೋಡಿ "ಹರಾ ಹರಾ...." ಎಂದು ತಲೆಯನ್ನು ತೂಗುತ್ತಾ " ನಿರೀಶ್ವರ ಯಾಗವನ್ನು ನೋಡುವ ಈ ಗತಿ ನನಗೆ ಬಂದೊದಗಿತೇ? "ಎಂದು ಸಭೆಯೊಳಗೆ ಅಳುತ್ತ ಹಲುಬಿದ ಸತಿಯು ದಕ್ಷ ಪ್ರಜಾಪತಿ ತನ್ನ ತಂದೆ ಎಂಬುದನ್ನು ಮರೆತು " ಏತಕೆ ಬಂದೆನು ತಾನೀ ಪಾತಕಿ ಮಾಡುವ ಯಜ್ಞಕ್ಕೆ " ಎಂದು ಖೇದ ವ್ಯಕ್ತಪಡಿಸುತ್ತಾಳೆ. "ಜಗತ್ಪತಿಯಾದ ತನ್ನ ಪತಿಗೆ ಈ ತ್ರೈಲೋಕದಲ್ಲಿ ಯಾಗದ ಭಾಗವ ಕೊಡದೆ ವೈದಿಕ ಕಾರ್ಯವನ್ನು ನಡೆಸುವ ಮದಾಂಧರು ಯಾರಿದ್ದಾರೆ? ಈ ರೀತಿಯಾದ ನಿಕೃಷ್ಟ ಆಲೋಚನೆ ನನ್ನ ಪಿತನಿಗೇತಕೆ ಬಂತು " ಎಂದು ದು:ಖಿಸುತ್ತಾಳೆ.

"ಅತಿ ದುಷ್ಟರು ಕೂಡಿರುವ ದುರ್ಮತಿಗಳ ಮಧ್ಯಕ್ಕೆ ತಾನು ಏತಕೆ ಬಂದೆನು? ಹಾ... ವಿಧಿಯೇ... ಮುಂದೆ ಗತಿಯೇನು ಅಕಟಾ...ಅಕಟಾ..." ಎಂದು ಕೊರಗುತ್ತಿರುವ ಸತಿಗೆ ತನ್ನ ಪತಿ ತನ್ನನ್ನು ತವರು ಮನೆಗೆ ಹೋಗುವುದನ್ನು ತಡೆದು ನಿಲ್ಲಿಸಿದ ಕಾರಣವೆಲ್ಲ ಸ್ಪಷ್ಟವಾಗಿ ಗೋಚರಿಸುತ್ತಾ ಹೋಯಿತು.


" ನೋಡಿಯೂ ನೋಡದವರಂತೆ ಕುಳಿತಿರುವ ತಂದೆ- ತಾಯಿಗೆ, ಅಕ್ಕ- ತಂಗಿಯರಿಗೆ , ಬಂಧು- ಬಾಂಧವರಿಗೆ ನೋವಾಗುವಂತಹ ದ್ರೋಹವನ್ನು ನಾನೇನು ಮಾಡಿದೆನೋ?" ಎಂದು ಯೋಚಿಸುತ್ತಾ " ನನ್ನರಸ ಸಾರಿ ಸಾರಿ ಹೇಳಿದ... ದಾಕ್ಷಾಯಣಿ ಹೋಗದಿರು ಎಂಬುದಾಗಿ..... ಕೈಲಾಸಕ್ಕೆ ಮರಳಿ ನನ್ನರಸನಿಗೆ ಏನೆಂದು ಹೇಳಲಿ? ಎಂದು ನೆನೆ ನೆನೆದು ನಿಟ್ಟುಸಿರು ಬಿಡುತ್ತಾಳೆ. ಅತೀವ ಯಾತನೆಯನ್ನು ಅನುಭವಿಸಿದ ಸತಿಯು ತನ್ನರಸ ಪರಶಿವನಿಗಾದ ಅವಮಾನದ ಕಿಚ್ಚಿಗೆ ಬಲಿಯಾಗಿ "ದೇಹತ್ಯಾಗವೇ ಗತಿಯೆನಗೆ" ಎಂದು ನಿರ್ಧರಿಸಿ ಶಿವೈಕ್ಯವಾಗಲು ಮುಂದಾಗುವ ದೃಶ್ಯ ಸ್ವಾಭಿಮಾನಕ್ಕಿಂತಲೂ ತನ್ನ ಪತಿಯಾಭಿಮಾನದ ಪ್ರತೀಕವಾಗಿ ಗೋಚರಿಸುತ್ತದೆ.

ದಕ್ಷಸುತೆ, ದಕ್ಷನೆದುರಲ್ಲೇ ತಾನು ಕಂಡ ದುಷ್ಟ ಕ್ರತುವಿನ ರೀತಿಯನ್ನು ನೆನೆ ನೆನೆದು ಅಳುತ್ತಿರಬೇಕಾದರೆ ದಕ್ಷಪ್ರಜಾಪತಿಯ ಕಣ್ಸನ್ನೆಗೆ ಪೂರಕವಾಗಿ ಅಲ್ಲಿದ್ದ ಮುನಿ- ಸುರ ಗಡಣ ಕಿರು ನಗೆಯನ್ನು ಸೂಸುತ್ತಿರಬೇಕಾದರೆ ಪ್ರಳಯ ರುದ್ರನೇ ಮೈದಳೆದು ಬಂದಂತೆ ಸತಿಯು ರೋಷ ಭರಿತಳಾಗಿ ತನ್ನ ತಂದೆಗೆ ನುಡಿದೇ ಬಿಡುತ್ತಾಳೆ.
" ವಿಕಲ ಮತಿ ಕೇಳೆಲವೋ, ಸರ್ವಾತ್ಮಕನೊಡನೆ ಹಗೆತನವ ಸಾಧಿಸಿ ಸುಕೃತ ಹೀನನೆ ಕೆಡಿಸಿಕೊಂಡೈ ಮಖವ ನೀನು " ಎಂದು ತನ್ನ ತಂದೆಯನ್ನೇ ವಿಕಲ ಮತಿಯೆಂಬುದಾಗಿ ಸಂಬೋಧಿಸಿ ಹರಸತಿ ಎಂಬುದನ್ನು ದಕ್ಷನಿಗೆ ಪರಿಚಯಿಸುತ್ತಾಳೆ.

" ಮೃತ್ಯುವಿಗೆ ಮೃತ್ಯುಸದೃಶನಾದ ಪರಶಿವನು ಸಾಮಾನ್ಯದವನಲ್ಲ ಎಂಬುದನ್ನು ಲೋಕಮುಖಕ್ಕೆ ಈ ಮಖದ ಮೂಲಕ ಪರಿಚಯಿಸಲು ಮತ್ತು ಈ ಕುಕೃತ್ಯಕ್ಕೆ ಸಹಕಾರವನ್ನಿತ್ತ ಸುರ- ಮುನಿ ವರ್ಗಕ್ಕೆ ತಕ್ಕ ಶಾಸ್ತಿ ಮಾಡಲು ನನ್ನವರು ಬಂದೇ ಬರುತ್ತಾರೆ" ಎಂದು ನುಡಿಯುತ್ತಾ ಸತಿಯು ತನ್ನ ಆಕ್ರೋಶವನ್ನು ವ್ಯಕ್ತಪಡಿಸುತ್ತಿರಲು ದಕ್ಷ ಪ್ರಜಾಪತಿ ತನ್ನ ಮಗಳ ವೀರಾವೇಶದ ನುಡಿಗಳಿಗೆ ವ್ಯಂಗ್ಯಾತ್ಮಕ‌ ಕುಹಕ ನಗೆ ಬೀರಿದಾಗ ದಾಕ್ಷಾಯಣಿ ನುಡಿಯುವ ಮಾತು ದಕ್ಷಯಜ್ಞದ ಮಾರ್ಮಿಕ ಕ್ಷಣ.


"ಸಾಕು ನಿನ್ನಿಂದಾದ ದೇಹವಿದೇಕೆ? ಸುಡು ಸುಡು... ದಕ್ಷ ಮಗಳು ಪಿನಾಕಿಯರ್ಧ ಶರೀರವೆಂಬರು ಲೋಕಜನರು "
ದಕ್ಷಸುತೆ ಎಂದು ಜಗದೊಳಗೆ ಗುರುತಿಸುವುದಕ್ಕಿಂತ ಶಿವನ ಅರ್ಧಾಂಗಿಯೆನಿಸಿಕೊಳ್ಳುವುದರಲ್ಲೇ ಧನ್ಯತೆಯಿದೆ ಅದುವೇ ಹಿತವಾಗಿದೆ ಎಂಬುದನ್ನು ಲೋಕಮುಖಕ್ಕೆ ತೋರಿಸಿದ ಸತಿಯು ಅರ್ಧನಾರೀಶ್ವರ ತತ್ವವನ್ನು ಪರಿಚಯಿಸುತ್ತಾಳೆ. ನಿರೀಶ್ವರ ಯಾಗವನ್ನು‌ ನೋಡಿದ ತಪ್ಪಿನ ಪರಿಮಾರ್ಜನೆಗಾಗಿ ಸತಿಯು ಧಗಧಗಿಸಿ ಉರಿಯುತ್ತಿರುವ ಯಾಗಕುಂಡಕ್ಕೆ ಹಾರಿ ದೇಹ ತ್ಯಾಗವನ್ನು ಮಾಡಲು ಮುಂದಾದಾಗ ದಕ್ಷ ಪ್ರಜಾಪತಿ " ಸುಡಬೇಡ ಸುಡಬೇಡ ಅಗ್ನಿ" ಎಂದು ಅಗ್ನಿಗೂ ತಡೆಯೊಡ್ಡುತ್ತಾನೆ.

ಲೋಕಪೂಜ್ಯಳಾದ ಸತಿ ಲೋಕವನ್ನು ಶುಚಿಗೊಳಿಸುವ ಈತನ್ಮಧ್ಯೆ ದುಷ್ಟನ ಮಾತನ್ನು ಅನುಸರಿಸಿದ ಅಗ್ನಿಯನ್ನು ತನ್ನ ಮೈಲಿಗೆ ಎಂದು ಭಾವಿಸಿ ಪಂಚಭೂತಗಳಿಂದಾದ ಈ ದೇಹವನ್ನು ಯೋಗಾಗ್ನಿಯ ಮೂಲಕ ಅಂತ್ಯ ಮಾಡಲು ಮುಂದಾಗಿ ಅನೂಹ್ಯ ಅನಿರೀಕ್ಷಿತ ಘೋರ ದುರಂತದ ಕೇಂದ್ರವ್ಯಕ್ತಿಯಾಗಿ ಬಿಡುತ್ತಾಳೆ.

"ಎನುತ ಯೋಗಾಗ್ನಿಯಲಿ ಪಾವಕನನು ನಿಜಾಂಗದಿ ಧರಿಸಿ ದೇಹವನನಲಗಾಹುತಿಗೊಟ್ಟಳಯ್ದಿದಳವಳು ಶಿವಪದವ "

ಅಂತ್ಯದಲ್ಲಿ ಶಿವ ಸಾನಿಧ್ಯದೊಳಿದ್ದ ಶಿವೆ ಪಿತನ ಸಾನಿಧ್ಯಕ್ಕೆ ಬಂದು ಪಂಚಭೂತಗಳಿಂದಾದ ದೇಹದ ಮೇಲಿನ ಮೋಹದಿಂದ ಮುಕ್ತಳಾಗಿ ತನ್ನ ತನವನ್ನೆಲ್ಲಾ ಬೂದಿಯಾಗಿಸಿ ಮರಳಿ ಶಿವೈಕ್ಯಳಾಗುತ್ತಾಳೆ. ಪ್ರಕೃತಿ- ಪುರುಷರ ಭವಿತವ್ಯದ ಸಮಾಗಮಕ್ಕೆ ನಾಂದಿ ಹಾಡುತ್ತಾಳೆ.

ಫೋಟೊ: ಕಿರಣ್ ವಿಟ್ಲ ಫೋಟೊಗ್ರಾಫಿ