ಪತ್ನಿಯಿಂದಲೇ ಸುಪಾರಿ ಹತ್ಯೆ;ಪತ್ನಿ ಸೇರಿ ಇಬ್ಬರ ಬಂಧನ

ಪತ್ನಿಯಿಂದಲೇ ಸುಪಾರಿ ಹತ್ಯೆ;ಪತ್ನಿ ಸೇರಿ ಇಬ್ಬರ ಬಂಧನ

May 18, 2021 10:46:29 AM (IST)
ಪತ್ನಿಯಿಂದಲೇ ಸುಪಾರಿ ಹತ್ಯೆ;ಪತ್ನಿ  ಸೇರಿ ಇಬ್ಬರ ಬಂಧನ

ಬೆಂಗಳೂರು, : ಆತನ ದೇಹ ರೈಲ್ವೇ ಹಳಿಯ ಮೇಲೆ ಛಿದ್ರವಾಗಿತ್ತು. ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡಿರಬೇಕು ಅಂತಲೇ ಪೊಲೀಸರು ಭಾವಿಸಿದ್ದರು. ಆದರೆ, ಕುತ್ತಿಗೆ ಮೇಲಿನ ಗುರುತು ಕೊಲೆಯ ಬಗ್ಗೆ ಸಣ್ಣ ಅನುಮಾನ ಮೂಡಿಸಿತ್ತು. ಅದು ರೈಲ್ವೇ ಪೊಲೀಸರ ತನಿಖೆಯಲ್ಲಿ ನಿಜವಾಗಿದೆ. ಕೊಲೆ ಹಂತಕರನ್ನು ಕೇವಲ 24 ತಾಸಿನಲ್ಲಿ ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಕೊಲೆಯಾಗಿದ್ದು ಕೆ.ಆರ್.ಪುರಂ ನಿವಾಸಿ ಲೋಕನಾಥ್ . ಕೊಲೆ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವುದು ಮೃತನ ಪತ್ನಿ ಯಶೋಧಾ, ವಿಜಿನಾಪುರದ ಸೆಂಥಿಲ್ ನಗರ ನಿವಾಸಿ ಮುನಿರಾಜು, ಕಸ್ತೂರಿನಗರ ನಿವಾಸಿ ಪ್ರಭು ಬಂಧಿತರು.
ಮೇ. 15 ರಂದು ಬೈಯಪ್ಪನಹಳ್ಳಿ ರೈಲ್ವೇ ಪೊಲಿಸ್ ಠಾಣಾ ವ್ಯಾಪ್ತಿಯ ಕಸ್ತೂರಿ ನಗರದ ಬಳಿ ಅಪರಿಚಿತ ದೇಹ ಪತ್ತೆಯಾಗಿತ್ತು. ಮೊದಲು ಇದೊಂದು ಆತ್ಮಹತ್ಯೆ ಎಂದೇ ಪೊಲೀಸರು ಭಾವಿಸಿದ್ದರು. ಆದರೆ ಮೃತನ ಕಣ್ಣಿನ ಮೇಲೆ ಹಾಗೂ ಕುತ್ತಿಗೆ ಮೇಲೆ ಕಂಡ ಸಣ್ಣ ಗಾಯವೊಂದು ಅನುಮಾನ ಮೂಡಿಸಿತ್ತು. ಮೃತನ ಪತ್ತೆ ಮಾಡಿದಾಗ ವಿಜಿನಾಪುರದ ನಿವಾಸಿ ಲೋಕನಾಥ್ ಎಂಬುದು ಗೊತ್ತಾಗಿತ್ತು.
ಕೆ.ಆರ್. ಪುರಂ ವಿಜಿನಾಪುರದಲ್ಲಿ ಲೋಕನಾಥ್ ಮತ್ತು ಯಶೋಧ ದಂಪತಿ ನೆಲೆಸಿದ್ದರು. ಲೋಕನಾಥ್ ಬಂದು ಪತ್ನಿ ಜತೆ ಜಗಳ ಮಾಡುತ್ತಿದ್ದ. ಹಣಕ್ಕಾಗಿ ಪೀಡಿಸುತ್ತಿದ್ದ. ಇದರಿಂದ ಬೇಸತ್ತ ಯಶೋಧಾ ಪರಿಚಿತ ಮುನಿರಾಜುಗೆ ತನ್ನ ಗಂಡನನ್ನು ಹತ್ಯೆ ಮಾಡುವಂತೆ ಸೂಚಿಸಿದ್ದಳು. ಯಶೋಧಾ ಅವರ ಮಾತಿನಂತೆ ಲೋಕನಾಥ್ ಹತ್ಯೆಗೆ ಮುನಿರಾಜು ಸಂಚು ರೂಪಿಸಿದ್ದ. ಇದಕ್ಕಾಗಿ ಕಸ್ತೂರಿನಗರ ನಿವಾಸಿ, ಗೆಳೆಯ ಪ್ರಭುವಿನ ನೆರವು ಕೇಳಿದ್ದ. ಇಬ್ಬರು ಸೇರಿ ಮೇ. 15 ರಂದು ಲೋಕನಾಥ್ ನನ್ನು ತನ್ನ ಅಟೋದಲ್ಲಿ ಕರೆದುಕೊಂಡು ಹೋಗಿದ್ದ ಮುನಿರಾಜು ಕಂಠಪೂರ್ತಿ ಕುಡಿಸಿದ್ದಾನೆ. ತಾನು ಕುಡಿದಂತೆ ನಟನೆ ಮಾಡಿದ್ದಾನೆ.
ಕುಡಿದ ಅಮಲಿನಲ್ಲಿ ಕುತ್ತಿಗೆ ಬಿಗಿದು ಹತ್ಯೆ ಮಾಡಿದ್ದಾರೆ. ಇದಕ್ಕೆ ಪ್ರಭು ಎಂಬಾತ ಸಹಾಯ ಮಾಡಿದ್ದಾನೆ. ಉಸಿರುಗಟ್ಟಿ ಸಾವನ್ನಪ್ಪಿದ ಲೋಕನಾಥ್ ಕೊಲೆ ಬಗ್ಗೆ ಅನುಮಾನ ಬಾರದಂತೆ ರೈಲ್ವೇ ಟ್ರ್ಯಾಕ್ ಮೇಲೆ ಇಟ್ಟು ಅಲ್ಲಿಂದ ಪರಾರಿಯಾಗಿದ್ದಾರೆ. ರೈಲು ಕೂಡ ಲೋಕನಾಥ್ ಮೇಲೆ ಹರಿದಿದೆ. ಆದರೆ, ಆತನ ಮೈಮೇಲಿನ ಗಾಯಗಳು ಅನುಮಾನ ಮೂಡಿಸುತ್ತಿದ್ದವು. ಇದರ ಜಾಡು ಹಿಡಿದು ಮೂವರನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಕೊಲೆ ಮಾಡಿದ್ದಾಗಿ ತಪ್ಪೊಪ್ಪಿಕೊಂಡಿದ್ದಾರೆ. ಲೋಕನಾಥ್ ಪತ್ನಿ ಸೇರಿದಂತೆ ಮೂವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.