ತಡರಾತ್ರಿ ಜೆ.ಪಿ.ನಗರದಲ್ಲಿ ಡರೋಡೆ ; ಇಬ್ಬರ ಹತ್ಯೆ

ತಡರಾತ್ರಿ ಜೆ.ಪಿ.ನಗರದಲ್ಲಿ ಡರೋಡೆ ; ಇಬ್ಬರ ಹತ್ಯೆ

Apr 08, 2021 10:44:48 AM (IST)
ತಡರಾತ್ರಿ ಜೆ.ಪಿ.ನಗರದಲ್ಲಿ ಡರೋಡೆ ; ಇಬ್ಬರ ಹತ್ಯೆ

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಸಿನಿಮೀಯ ರೀತಿಯಲ್ಲಿ ಮನೆಗೆ ನುಗ್ಗಿ ದುಷ್ಕರ್ಮಿಗಳು ಇಬ್ಬರನ್ನು ಬರ್ಬರವಾಗಿ ಕೊಲೆ ಮಾಡಿರುವ ಭೀಕರ ಘಟನೆ ನಡೆದಿದೆ. ಬೆಂಗಳೂರಿನ ಜೆ.ಪಿ.ನಗರದಲ್ಲಿ ಮನೆಗೆ ನುಗ್ಗಿದ ದುಷ್ಕರ್ಮಿಗಳು ಚಾಕುವಿನಿಂದ ಹಲ್ಲೆ ನಡೆಸಿ 75 ವರ್ಷದ ಮಮತಾ ಬಸು ಮತ್ತು ದೇವ ವ್ರಥಾ ಮೆಹರ(41) ಎಂಬುವವರನ್ನು ಹತ್ಯೆಗೈದಿದ್ದಾರೆ.

ದರೋಡೆ ಮಾಡುವ ಸಲುವಾಗಿ ಮನೆಗೆ ನುಗ್ಗಿದ ದುಷ್ಕರ್ಮಿಗಳು ಇಬ್ಬರನ್ನು ಕೊಲೆ ಮಾಡಿ ಮನೆಯಲ್ಲಿದ್ದ ಲ್ಯಾಪ್ ಟಾಪ್ ಹಾಗೂ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ. ಪುಟ್ಟೇನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು ತಡರಾತ್ರಿ ಸುಮಾರು 1.30ಕ್ಕೆ ನಡೆದಿದೆ ಎಂಬ ಶಂಕೆ ವ್ಯಕ್ತವಾಗಿದೆ. ಡರೋಡೆ ನಡೆಸಲಿಕ್ಕೆಯೇ ಕೊಲೆ ಮಾಡಿರುವ ಶಂಕೆ ಉಂಟಾಗಿದೆ. ಇನ್ನು ಈ ಸಂಬಂಧ ಪುಟ್ಟೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದ್ದು ಡರೋಡೆಕೋರರಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

ಇನ್ನು ಇಂತಹದ್ದೇ ಮತ್ತೊಂದು ದರೋಡೆ ಪ್ರಕರಣ ನಡೆದಿದೆ. ಬೆಂಗಳೂರಿನ ಮತ್ತೊಂದು ದಿಕ್ಕಿನಲ್ಲಿರುವ ಯಲಹಂಕದಲ್ಲಿ ದರೋಡೆಕೋರರು ಮಾರಕಾಸ್ತ್ರಗಳನ್ನ ತೋರಿಸಿ ಮಹಿಳೆ, ಮಕ್ಕಳಿಗೆ ಬೆದರಿಸಿ ಮನೆಯಲ್ಲಿದ್ದವರನ್ನ ಕೂಡಿಹಾಕಿ ಚಿನ್ನಾಭರಣಗಳನ್ನ ದೋಚಿ ಎಸ್ಕೇಪ್ ಆಗಿದ್ದಾರೆ. ಯಲಹಂಕ ತಾಲೂಕಿನ ಅದ್ದಿಗಾನಹಳ್ಳಿ ಗ್ರಾಮದಲ್ಲಿ ಅಚ್ಚಲಾಲ್ ವಿಶ್ವಕರ್ಮ ಎಂಬುವವರ ಮನೆಯಲ್ಲಿ ದರೋಡೆ ನಡೆದಿದೆ. ಮಂಕಿ ಕ್ಯಾಪ್ ಧರಿಸಿ ಮನೆಯ ಬಾಗಿಲು ಮುರಿದು ಮನೆಗೆ ನುಗ್ಗಿದ ಮೂವರು ಅಪರಿಚಿತರು ದರೋಡೆ ನಡೆಸಿ ಪರಾರಿಯಾಗಿದ್ದಾರೆ. ರಾಜಾನುಕುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.