ಹಾಲು ಉತ್ಪಾದಕರಿಗೆ 4500 ಕೋಟಿ ಸಬ್ಸಿಡಿ: ಸಿಎಂ

ಹಾಲು ಉತ್ಪಾದಕರಿಗೆ 4500 ಕೋಟಿ ಸಬ್ಸಿಡಿ: ಸಿಎಂ

Jan 06, 2016 11:14:52 AM (IST)

ಬೆಂಗಳೂರು: ರಾಜ್ಯದ ಹಾಲು ಉತ್ಪಾದಕರಿಗೆ ಸರ್ಕಾರ ಇದುವರೆಗೆ ನಾಲ್ಕು ಸಾವಿರದ ಐದು ನೂರು ಕೋಟಿ ರೂಪಾಯಿ ಸಬ್ಸಿಡಿ ನೀಡಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಮಾಗಡಿ ತಾಲೂಕು ಮತ್ತು ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಹುತ್ರಿ ದುರ್ಗ ಹೋಬಳಿಯ ಗ್ರಾಮಗಳ 83 ಕೆರೆಗಳಿಗೆ ಕುಡಿಯುವ ನೀರು ಒದಗಿಸುವ ಯೋಜನೆಗೆ ಮಾಗಡಿಯ ಕೋಟೆ ಮೈದಾನದಲ್ಲಿಂದು ಶಂಕು ಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.

ಹಾಲು ಉತ್ಪಾದಕರಿಗೆ ನಾಲ್ಕು ರೂಪಾಯಿ ಪ್ರೋತ್ಸಾಹ ಧನ ನೀಡಲಾಗುವುದೆಂದು ಘೋಷಣೆ ಮಾಡಲಾಗಿತ್ತು. ಇದರಂತೆ ಹಾಲು ಉತ್ಪಾದಕರ ಖಾತೆಗೆ ಪ್ರತೀ ಲೀಟರ್ ಗೆ ನಾಲ್ಕು ರೂಪಾಯಿಯಂತೆ ಜಮೆ ಮಾಡಲಾಗುತ್ತಿದೆ. ಒಂದು ವರ್ಷಕ್ಕೆ 900 ಕೋಟಿ  ರೂಪಾಯಿ ಸಬ್ಸಿಡಿ ಕೊಡಲಾಗಿದ್ದು, ಇದುವರೆಗೆ 4,500 ಕೋಟಿ  ರೂಪಾಯಿ ಸಬ್ಸಿಡಿ ಕೊಡಲಾಗಿದೆ ಎಂದರು.

ಕರ್ನಾಟಕ ರಾಜ್ಯ ಹಾಲು ಮಹಾಮಂಡಳದಿಂದ ಹಾಲಿಗೆ  ಲೀಟರ್ ಗೆ ನಾಲ್ಕು ರೂಪಾಯಿ ದರ ಹೆಚ್ಚಿಸುವಂತೆ  ಬಂದ ಮನವಿ ಮೇರೆಗೆ  ಲೀಟರ್ ಹಾಲಿಗೆ ನಾಲ್ಕು ರೂಪಾಯಿ ಹೆಚ್ಚಿಸಲಾಗಿದೆ. ಈ ನಾಲ್ಕು ರೂಪಾಯಿಗಳಲ್ಲಿ ಮೂರು ರೂಪಾಯಿಗಳನ್ನು ಹಾಲು ಉತ್ಪಾದಕರಿಗೆ ನೀಡಲಾಗುವುದು. ಉಳಿದ ಒಂದು ರೂಪಾಯಿ ಅನ್ನು ಹಾಲು ಮಹಾಮಂಡಳದ ಅಭಿವೃದ್ಧಿಗೆ ಬಳಸಿಕೊಳ್ಳಲಾಗುವುದು ಎಂದರು.

ನೀರಾವರಿ ಯೋಜನೆಗಳಿಗಾಗಿ ಆಯವ್ಯಯದಲ್ಲಿ 50 ಸಾವಿರ ಕೋಟಿ ರೂಪಾಯಿ ಮೀಸಲಿಡಲಾಗುವುದೆಂದು ತಿಳಿಸಲಾಗಿತ್ತು. ಅದರಂತೆ ಪ್ರತಿ ವರ್ಷ ಆಯವ್ಯಯದಲ್ಲಿ 10 ಸಾವಿರ ಕೋಟಿ ರೂಪಾಯಿಗಳನ್ನು ನೀರಾವರಿ ಯೋಜನೆಗಳನ್ನು ಕೈಗೊಳ್ಳಲು ಮಂಜೂರು ಮಾಡಲಾಗಿದೆ. ಈವರೆಗೆ 33 ಸಾವಿರ ಕೋಟಿ ರೂ.ಗಳನ್ನು ನೀರಾವರಿ ಯೋಜನೆಗಳಿಗಾಗಿ ಖರ್ಚು ಮಾಡಲಾಗಿದೆ ಎಂದು ಮುಖ್ಯಮಂತ್ರಿ ತಿಳಿಸಿದರು.