ಭಾರತ ಪ್ರಪಂಚದ ಅಗ್ರಸ್ಥಾನಕ್ಕೆ ತಲುಪಬೇಕಾದರೆ ಸ್ವಾಮಿ ವಿವೇಕಾನಂದರ ಮಾತುಗಳನ್ನು ಪಾಲಿಸಬೇಕು: ಬಿಎಸ್ ವೈ

ಭಾರತ ಪ್ರಪಂಚದ ಅಗ್ರಸ್ಥಾನಕ್ಕೆ ತಲುಪಬೇಕಾದರೆ ಸ್ವಾಮಿ ವಿವೇಕಾನಂದರ ಮಾತುಗಳನ್ನು ಪಾಲಿಸಬೇಕು: ಬಿಎಸ್ ವೈ

MS   ¦    Jan 12, 2021 05:30:39 PM (IST)
ಭಾರತ ಪ್ರಪಂಚದ ಅಗ್ರಸ್ಥಾನಕ್ಕೆ ತಲುಪಬೇಕಾದರೆ ಸ್ವಾಮಿ ವಿವೇಕಾನಂದರ ಮಾತುಗಳನ್ನು ಪಾಲಿಸಬೇಕು: ಬಿಎಸ್ ವೈ

ಬೆಂಗಳೂರು: ರಾಜ್ಯದ ಕಾಲೇಜುಗಳ ಅಭಿವೃದ್ಧಿಗೆ 430 ಕೋಟಿ ನೀಡಲಾಗಿದೆ. ಹೆಣ್ಣು ಮಕ್ಕಳು ಕಾಲೇಜಿಗೆ ಸೇರ್ಪಡೆಯಾಗಲೂ ಸಂಪೂರ್ಣ ಉಚಿತ ದಾಖಲಾತಿ ಮಾಡಲಾಗಿದೆ. ಅಷ್ಟೇ ಅಲ್ಲದೆ, ವಿದ್ಯಾರ್ಥಿಗಳ ಕಲಿಕೆಯಲ್ಲಿ ಡಿಜಿಟಲ್ ತಂತ್ರಜ್ಞಾನದ ಉತ್ತೇಜನಕ್ಕಾಗಿ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.

ಕಾಲೇಜು ಶಿಕ್ಷಣ ಇಲಾಖೆಯಿಂದ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಹಮ್ಮಿಕೊಂಡಿದ್ದ ಸ್ವಾಮಿ ವಿವೇಕಾನಂದರ ಜನ್ಮ ದಿನದ ರಾಷ್ಟ್ರೀಯ ಯುವ ಜನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳಿಗೆ ತಾಂತ್ರಿಕವಾಗಿ ಪ್ರೋತ್ಸಾಹಿಸಲು 150 ಕೋಟಿ ವೆಚ್ಚದಲ್ಲಿ ಟ್ಯಾಬ್ಲೆಟ್ ಗಳನ್ನ ನೀಡಲು ಸರ್ಕಾರ ಯೋಜಿಸುತ್ತಿದೆ ಎಂದು ಹೇಳಿದರು.

ವಿವೇಕಾನಂದರ ಆದರ್ಶಗಳನ್ನ ನಾವೆಲ್ಲ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಮುಖ್ಯವಾಗಿ ಯುವ ಜನರಿಗಾಗಿ ಯುವ ಸ್ಪಂದನ ಕಾರ್ಯಕ್ರಮ ಅನುಷ್ಠಾನ ಮಾಡಲಾಗಿದೆ. ಯುವ ಜನತೆ ರಾಜ್ಯ, ದೇಶದ ಆಸ್ತಿ. ರಾಷ್ಟ್ರದ ನಿರ್ಮಾಣಕ್ಕೆ ಯುವ ಜನತೆಯನ್ನ ತೊಡಗಿಸಿಕೊಳ್ಳುವ ಕೆಲಸ ದೇಶದಲ್ಲಿ ನಡೆಯುತ್ತಿದೆ. ಹಾಗೂ ಅದೇ ಉದ್ದೇಶದಿಂದ ಪ್ರತಿಯೊಬ್ಬರು ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.

ನಮ್ಮ ದೇಶ ಪ್ರಪಂಚದಲ್ಲಿ ಅಗ್ರಸ್ಥಾನ ಪಡೆಯಬೇಕು ಎಂದರೆ ವಿವೇಕಾನಂದರ ಮಾರ್ಗಸೂಚಿಗಳು ಪ್ರಕಾರ ನಡೆಯಬೇಕು. ಉದ್ದೇಶವನ್ನೇ ಇರಿಸಿಕೊಂಡು ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ರಾಜ್ಯದಲ್ಲಿ ಜಾರಿಗೆ ತರಲಾಗುತ್ತಿದೆ ಎಂದು ಸಿಎಂ ಸ್ಪಷ್ಟಪಡಿಸಿದರು.

ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿ ಬಿ ಎಸ್ ವೈ ಹಾಗೂ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಅವರು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡುವ ಮೂಲಕ ಸನ್ಮಾನಿಸಿದರು. ಕಾರ್ಯಕ್ರಮದಲ್ಲಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಕುಮಾರ್ ನಾಯಕ್, ಆಯುಕ್ತ ಪ್ರದೀಪ್ ಇನ್ನಿತರರು ಉಪಸ್ಥಿತರಿದ್ದರು.