ಬೆಂಗಳೂರಲ್ಲಿ ಸಿಗ್ನಲ್ ಫ್ರೀ ರಸ್ತೆ ನಿರ್ಮಾಣ

ಬೆಂಗಳೂರಲ್ಲಿ ಸಿಗ್ನಲ್ ಫ್ರೀ ರಸ್ತೆ ನಿರ್ಮಾಣ

Jan 13, 2016 10:23:39 AM (IST)

ಬೆಂಗಳೂರು: ಬಿಎಂಆರ್ ಡಿಯ ವ್ಯಾಪ್ತಿಗೆ ಬರುವ ಹೊಸಕೋಟೆ, ದೇವನಹಳ್ಳಿ, ರಾಮನಗರ, ಕನಕಪುರ, ದಾಬಸ್ ಪೇಟೆ ಸಂಪರ್ಕಿಸುವ ಸ್ಯಾಟಲೈಟ್ ಟೌನ್ ರಿಂಗ್ ರಸ್ತೆ, ಬೆಂಗಳೂರಿನ ಪೂರ್ವ -ಪಶ್ಚಿಮ, ಉತ್ತರ-ದಕ್ಷಿಣ ಮಾರ್ಗದಲ್ಲಿ ಸಿಗ್ನಲ್ ಫ್ರೀ ಮೂರು ಕಾರಿಡಾರ್ ಹಾಗೂ ಬಿಡಿಎ ಕೈಗೆತ್ತಿಕೊಂಡಿದ್ದ ಫೆರಿಫರಲ್ ರಸ್ತೆ ಯೋಜನೆಗಳಿಗೆ ತೀವ್ರ ಗತಿ ಚಾಲನೆ ಕೊಡಲು ಸರ್ಕಾರ ನಿರ್ಧರಿಸಿದೆ ಎಂದು ನಗರ ಅಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ಹೇಳಿದ್ದಾರೆ.

ವಿಧಾನಸೌಧದಲ್ಲಿ ಪ್ರಗತಿ ಪರಿಶೀಲನೆ ನಡೆಸಿದ ಅವರು 65 ಕಿ.ಮೀ.ಮಾರ್ಗದ  ಫೆರಿಫೆರಲ್ ರಿಂಗ್ ರಸ್ತೆ 11 ಸಾವಿರ ಕೋಟಿ ರೂ. ವೆಚ್ಚದ್ದಾಗಿದೆ. 75 ಕಿ.ಮೀ. ಮಾರ್ಗದ ಮೂರು ಎಲಿವೇಟೆಡ್ ಕಾರಿಡಾರ್ 18500 ಕೋಟಿ ರೂ. ಹಾಗೂ 380  ಕಿ.ಮೀ. ಮಾರ್ಗದ ಸ್ಯಾಟಲೈಟ್ ಟೌನ್ ರಿಂಗ್ ರಸ್ತೆ ನಿರ್ಮಾಣಕ್ಕೆ ಯೋಜನೆ ರೂಪಿಸಿದ್ದು ಮೂರೂ ಯೋಜನೆಗಳಿಗೂ ಕೇಂದ್ರ ಸರ್ಕಾರದ ನೆರವು, ಜೈಕಾ ಹಾಗೂ ಹಣಕಾಸು ಸಂಸ್ಥೆಗಳಿಂದ ಸಾಲ ಪಡೆಯಲಾಗುವುದು.

ಫೆರಿಫರಲ್ ರಿಂಗ್ ರಸ್ತೆ ಹಾಗೂ ಸ್ಯಾಟಲೈಟ್ ಟೌನ್ ರಿಂಗ್ ರಸ್ತೆ ಯೋಜನೆಗೆ ಜಮೀನು ರೈತರಿಂದ ಪಡೆದು 60:40 ಆಧಾರದ ಮೇಲೆ ಅಭಿವೃದ್ಧಿಯಾದ ಜಮೀನು ನೀಡುವ ಒಪ್ಪಂದದೊಂದಿಗೆ ಪಡೆಯಲಾಗುವುದು ಎಂದರು.

ಸೆಂಟ್ರಲ್ ಸಿಲ್ಕ್ ಬೋರ್ಡ್ ಜಂಕ್ಷನ್ ನಿಂದ ಕೆ.ಆರ್.ಪುರಂ ವರೆಗೆ ಬಿಆರ್ಟಿಎಸ್ ಬಸ್ಗಾಗಿ ಪ್ರತ್ಯೇಕ ಮಾರ್ಗ 1300 ಕೋಟಿ ರೂ. ವೆಚ್ಚದಲ್ಲಿ ಪ್ರಸ್ತಾವನೆಯಿದೆ. ಇದೇ ಮಾರ್ಗದಲ್ಲಿ ಮೆಟ್ರೋ ರೈಲು ಜಾರಿಯಾದರೆ ಅದಕ್ಕೆ 3000 ಕೋಟಿ ರೂ. ಆಗಲಿದೆ. ಹೀಗಾಗಿ, ಯಾವುದು ಸೂಕ್ತ ಎಂಬುದರ ಬಗ್ಗೆ ಚರ್ಚಿಸಲಾಗುತ್ತಿದೆ ಎಂದು ಹೇಳಿದರು.

ಕೊಳಚೆ ನೀರು ಸಂಸ್ಕರಣಕ್ಕೆ ಸಂಬಂಧಿಸಿದಂತೆ ಪ್ರಸ್ತುತ 720 ದಶಲಕ್ಷ ಲೀಟರ್ ಸಾಮರ್ಥ್ಯದ ಘಟಕ ಹೊಂದಿದ್ದು, ನಗರದಲ್ಲಿ 1400 ದಶಲಕ್ಷ ಲೀಟರ್ ಸಂಗ್ರಹವಾಗುತ್ತಿದೆ. ಹೀಗಾಗಿ, ಮತ್ತೆ 330 ದಶಲಕ್ಷ ಲೀಟರ್ ಸಾಮರ್ಥ್ಯದ ಘಟಕ ನಿರ್ಮಾಣ ಪ್ರಗತಿಯಲ್ಲಿದೆ. ಹೊಸದಾಗಿ 520 ದಶಲಕ್ಷ ಲೀಟರ್ ಸಾಮರ್ಥ್ಯದ ಘಟಕ ನಿರ್ಮಿಸಲಾಗುವುದು. ಇದು ಕಾರ್ಯಾರಂಭಗೊಂಡರೆ ಕೊಳಚೆ ನೀರು ಸಂಸ್ಕರಣೆ ಸಮಸ್ಯೆ ನಿವಾರಣೆಯಾಗಲಿದೆ ಎಂದರು.