ಜನರ ಸಹಕಾರದಿಂದ ಯಶಸ್ವಿಯಾದ ಎಸ್ಸೆಸ್ಸೆಲ್ಸಿ ಪರೀಕ್ಷೆ: ಸುರೇಶ್ ಕುಮಾರ್

ಜನರ ಸಹಕಾರದಿಂದ ಯಶಸ್ವಿಯಾದ ಎಸ್ಸೆಸ್ಸೆಲ್ಸಿ ಪರೀಕ್ಷೆ: ಸುರೇಶ್ ಕುಮಾರ್

LK   ¦    Jun 25, 2020 09:07:07 PM (IST)
ಜನರ ಸಹಕಾರದಿಂದ ಯಶಸ್ವಿಯಾದ ಎಸ್ಸೆಸ್ಸೆಲ್ಸಿ ಪರೀಕ್ಷೆ: ಸುರೇಶ್ ಕುಮಾರ್

ಬೆಂಗಳೂರು: ನಾಡಿನ ಮಕ್ಕಳ ಬಹುದಿನಗಳ ನಿರೀಕ್ಷೆಯಾದ ಹಾಗೂ ಕೊರೋನಾ ಕಾಲಘಟ್ಟದ ಸಾಮಾಜಿಕ ಪರಿಸ್ಥಿತಿಯ ಮಧ್ಯೆಯೂ ನಡೆಯುತ್ತಿರುವ ಎಸ್‍ಎಸ್‍ಎಲ್ಸಿ ಪರೀಕ್ಷೆ ರಾಜ್ಯದೆಲ್ಲೆಡೆ ಯಾವುದೇ ವ್ಯತ್ಯಯವಿಲ್ಲದೇ ಅತ್ಯಂತ ಯಶಸ್ವಿಯಾಗಿ ನಡೆದು ಇತಿಹಾಸವನ್ನೇ ಸೃಷ್ಟಿಸಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ತಿಳಿಸಿದ್ದಾರೆ.

ಗುರುವಾರ ನಡೆದ ಎಸ್‍ಎಸ್‍ಎಲ್ಸಿ ಮೊದಲ ದಿನದ  ಪರೀಕ್ಷೆಯ ನಂತರ ಪರೀಕ್ಷೆ ಕುರಿತು   ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಪರೀಕ್ಷೆ ನಡೆಯುತ್ತಿರುವ ವಿಧಾನಗಳು ನಮಗೆ ನೈಜ ಪ್ರಜಾಪ್ರಭುತ್ವದ ಮಹೋತ್ಸವವಾಗಿ ಗೋಚರಿಸಿದೆ ಎಂದರು.

ಈ ಬಾರಿಯ ಪರೀಕ್ಷೆ ಕೇವಲ ಶಿಕ್ಷಣ ಇಲಾಖೆಗೆ ಮಾತ್ರವೇ ಸೀಮಿತವಾಗಿಲ್ಲ. ಪರೀಕ್ಷೆಗೆ ಇಡೀ ರಾಜ್ಯ  ಸರ್ಕಾರವೇ ಟೊಂಕಕಟ್ಟಿ ನಿಂತಿದ್ದು, ಸುಲಲಿತವಾಗಿ ಪರೀಕ್ಷೆ ನಡೆಯುತ್ತಿರುವುದರ ಹಿಂದೆ ಇಡೀ ಸರ್ಕಾರದ ಪ್ರಾಮಾಣಿಕ ಪ್ರಯತ್ನ ಮತ್ತು ಆಡಳಿತ ಯಂತ್ರದ ಸಮರ್ಪಣೆ ಇದೆ.  ಕೋವಿಡ್ ಪ್ರಸರಣದ ಕಾಲಘಟ್ಟದ ಮಧ್ಯೆ ನಡೆದ  ಈ ಪರೀಕ್ಷೆಗೆ ವ್ಯವಸ್ಥೆಯೊಂದಿಗೆ ಸಾರ್ವಜನಿಕರು, ಪೋಷಕರು ಎಲ್ಲರೂ ಒಟ್ಟಾಗಿ ಕೈಜೋಡಿಸಿ ಒಂದು ಸಂಘಟಿತ ಯಶಸ್ಸಿಗೆ ಕಾರಣೀಭೂತರಾಗಿದ್ದಾರೆ ಎಂದು ಸಚಿವರು ಹೇಳಿದರು.

ಈ ಪರೀಕ್ಷೆಯ ಪೂರ್ವದಲ್ಲಿ ತೆಗೆದುಕೊಂಡ ಯೋಜನಾಬದ್ಧ ನಿರ್ಧಾರಗಳು ಮತ್ತು ಅವುಗಳನ್ನು ಅನುಷ್ಠಾನಗೊಳಿಸಿದ ವೃತ್ತಿಪರ ವ್ಯವಸ್ಥೆ ಎಷ್ಟೊಂದು ಅಚ್ಚುಕಟ್ಟಿಗೆ ನಾಂದಿಯಾಗಿದೆ ಎಂದು ಹೇಳಿದ ಸುರೇಶ್ ಕುಮಾರ್  ಅದಕ್ಕೆ ಪೂರಕವಾದ ಹಲವಾರು ನಿದರ್ಶನಗಳನ್ನು ನೀಡಿದರು

ಮೊದಲನೆ ದಿನವಾದ ಗುರುವಾರ ನಡೆದ ದ್ವಿತೀಯ ಭಾಷೆ ಆಂಗ್ಲ  ಮತ್ತು  ಕನ್ನಡ ವಿಷಯಗಳ  ಪರೀಕ್ಷೆಗೆ ನೊಂದಾಯಿತ 7,85,140  ವಿದ್ಯಾರ್ಥಿಗಳ ಪೈಕಿ 7,71,878 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಒಟ್ಟಾರೆ ಶೇ. 98.3 ರಷ್ಟು ಇಂದು ಹಾಜರಾತಿ ಇದೆ. 13,212 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ. ಮೊದಲ ಬಾರಿಗೆ 7,43,688 ಶಾಲಾ ವಿದ್ಯಾರ್ಥಿಗಳು ಹಾಗೂ 20,892 ಖಾಸಗಿ ವಿದ್ಯಾರ್ಥಿಗಳು ಪರೀಕ್ಷೆ ತೆಗೆದುಕೊಂಡಿದ್ದಾರೆ ಎಂದು ಸುರೇಶ್ ಕುಮಾರ್ ತಿಳಿಸಿದರು.

ಕಂಟೈನ್ಮೆಂಟ್ ಪ್ರದೇಶಗಳ  998 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಕೋವಿಡೇತರ ಅನಾರೋಗ್ಯ ಕಾರಣಗಳಿಂದ ವಿಶೇಷ ಕೊಠಡಿಗಳಲ್ಲಿ 201 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಯವುದೇ ವಿದ್ಯಾರ್ಥಿಯೂ ಪರೀಕ್ಷಾ ಅಕ್ರಮಗಳಲ್ಲಿ ಭಾಗಿಯಾದ ಪ್ರಕರಣಗಳು ಇರುವುದಿಲ್ಲ. ಸರ್ಕಾರಿ, ಖಾಸಗಿ ವಸತಿ ನಿಲಯಗಳಲ್ಲಿ ಇದ್ದು, 1438 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ನೆರೆ ರಾಜ್ಯಗಳಿಂದ 614 ವಿದ್ಯಾರ್ಥಿಗಳು ಪರೀಕ್ಷೆ  ಬರೆಯಬೇಕಿದ್ದು, 59 ವಿದ್ಯಾರ್ಥಿಗಳು ಗೈರು ಹಾಜರಿಯಾಗಿ 555 ಪರೀಕ್ಷೆ ಬರೆದಿದ್ದಾರೆ. 12644 ವಲಸೆ ವಿದ್ಯಾರ್ಥಿಗಳು ಪರೀಕ್ಷೆಗೆ ನೊಂದಾಯಿಸಿದ್ದು, 12,548 ವಿದ್ಯಾರ್ಥಿಗಳು ಹಾಜರಾಗಿದ್ದರೆ, 96 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ. ಇಂತಹ ವಿದ್ಯಾರ್ಥಿಗಳಿಗೆ ಸಕಾರಣದ ಆಧಾರದ ಮೇಲೆ ಮುಂದಿನ ಪೂರಕ ಪರೀಕ್ಷೆಯಲ್ಲಿ ಅವಕಾಶ ನೀಡುವ ವ್ಯವಸ್ಥೆ ಮಾಡಲಾಗುವುದು ಎಂದು ಸಚಿವರು ವಿವರಿಸಿದರು.  ಪರೀಕ್ಷಾ ಕೇಂದ್ರಕ್ಕೆ 3,212 ಬಸ್ ಹಾಗೂ ಇತರೆ ವಾಹನಗಳನ್ನು ಒಪ್ಪಂದದ ಮೇರೆಗೆ ಪಡೆದು ಯಾವುದೇ ಸಮಸ್ಯೆಯಾಗದ ರೀತಿಯಲ್ಲಿ ಸಾರಿಗೆ ಸೌಲಭ್ಯ ಒದಗಿಸಲಾಗಿದೆ ಎಂದು ಅವರು ಹೇಳಿದರು. 

ಒಟ್ಟಾರೆಯಾಗಿ ಇಂದು 2879 ಪರೀಕ್ಷಾ ಕೇಂದ್ರಗಳು ಮತ್ತು 330 ಬ್ಲಾಕ್ ಪರೀಕ್ಷಾ ಕೇಂದ್ರಗಳಲ್ಲಿ ಇಂಗ್ಲಿಷ್ ಭಾಷಾ ಪರೀಕ್ಷೆ ಯಶಸ್ವಿಯಾಗಿ ನಡೆದಿದೆ ಎಂದರು.