News Kannada
Saturday, February 24 2024
ಕ್ಯಾಂಪಸ್

ಅಂಬಿಕಾ ಸಮೂಹಶಿಕ್ಷಣ ಸಂಸ್ಥೆಗಳಿಂದ ಶಿಕ್ಷಕರ ದಿನಾಚರಣೆ

Photo Credit :

ಪುತ್ತೂರು: ಶಿಕ್ಷಕರಾಗುವವರಿಗೆ ಸ್ವಸ್ಥಾನ ಪರಿಜ್ಞಾನ ಇರಬೇಕಾದ್ದು ಅತ್ಯಂತ ಅಗತ್ಯ. ತಾನು ಮಾಡಬಹುದಾದ ಸಾಧ್ಯತೆಗಳೇನು? ತಾನು ಮಾಡಬಾರದ ವಿಚಾರಗಳು ಯಾವುವು? ತನ್ನ ಸಾಮರ್ಥ್ಯವೇನು? ಎಲ್ಲಿ ಹೇಗೆ ವರ್ತಿಸಬೇಕು ಎಂಬಿತ್ಯಾದಿ ವಿಚಾರಗಳ ಬಗೆಗೆ ಸರಿಯಾಗಿ ಅರ್ಥ ಮಾಡಿಕೊಂಡಿರಬೇಕು. ವಿದ್ಯಾರ್ಥಿಗಳು ಶಿಕ್ಷಕರನ್ನು ನೋಡಿ ಕಲಿಯುತ್ತಾರಾದ್ದರಿಂದ ಇಂತಹ ಸಂಗತಿಗಳು ಶಿಕ್ಷಕರಿಗೆ ಅತ್ಯಂತ ಅಗತ್ಯ ಎಂದು ವಿಶ್ರಾಂತ ಪ್ರಾಧ್ಯಾಪಕ, ವಿದ್ವಾಂಸ ಡಾ.ತಾಳ್ತಜೆ ವಸಂತ ಕುಮಾರ ಹೇಳಿದರು.

ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಆಶ್ರಯದಲ್ಲಿ ಬಪ್ಪಳಿಗೆ ಕ್ಯಾಂಪಸ್‌ನಲ್ಲಿ ನಡೆದ ಶಿಕ್ಷಕ ದಿನಾಚರಣೆ ಹಾಗೂ ಅಭಿವಂದನಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಸೋಮವಾರ ಮಾತನಾಡಿದರು.

ಶಿಕ್ಷಕರಿಗೆ ವಾಕ್ಯ ಶುದ್ಧಿ ಇರಬೇಕಾದದ್ದು ಅತೀ ಅನಿವಾರ್ಯ. ಶಿಕ್ಷಕರು ಹೇಳಿಕೊಟ್ಟಂತೆಯೇ ವಿದ್ಯಾರ್ಥಿಗಳು ಕಲಿಯುವುದರಿಂದ ಶಿಕ್ಷಕ ತಪ್ಪನ್ನೇ ಹೇಳಿದರೂ ಅದೇ ಸತ್ಯವೆಂದು ಮಕ್ಕಳು ಭಾವಿಸಿಕೊಳ್ಳುತ್ತಾರೆ. ಹಾಗಾಗಿ ಶಬ್ದವೊಂದನ್ನು ಹೇಗೆ ಉಚ್ಚರಿಸಬೇಕು, ಯಾವ ಧ್ವನಿ ಯಾವ ಅರ್ಥವನ್ನು ಕೊಡುತ್ತದೆ ಎಂಬುದೇ ಮೊದಲಾದ ಸಂಗತಿಗಳಲ್ಲಿ ಶಿಕ್ಷಕರು ಪ್ರವೀಣರಾಗಿದ್ದಾಗ ಉತ್ತಮ ಶಿಕ್ಷಣ ವ್ಯವಸ್ಥೆ ರೂಪುಗೊಳ್ಳಬಹುದು. ವ್ಯಕ್ತಿಗತ ಶೀಲ ಹಾಗೂ ಸಂಭಾವಿತತನ ಶಿಕ್ಷಕರಿಗೆ ಇರಲೇಬೇಕಾದ ಗುಣಗಳು ಎಂದು ತಿಳಿಸಿದರು.

ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ವತಿಯಿಂದ ಸಮರ್ಪಿಸಲಾದ ಗೌರವವನ್ನು ಸ್ವೀಕರಿಸಿ ಮಾತನಾಡಿದ ವಿಶ್ರಾಂತ ಪ್ರಾಧ್ಯಾಪಕಿ ಪ್ರೊ.ವತ್ಸಲಾರಾಜ್ಞಿ ನಾವು ಭಾರತದಲ್ಲಿ ಹುಟ್ಟಿರುವುದಕ್ಕೆ ಹೆಮ್ಮೆ ಪಡಬೇಕು.ಇಲ್ಲಿನ ಪರಂಪರೆಯಲ್ಲಿ ಗುರುಗಳಿಗೆ ಅಪಾರವಾದ ಗೌರವವಿದೆ. ಈ ಸಮಾಜದಲ್ಲಿ ವೈದ್ಯರಿಲ್ಲದಿದ್ದರೆ ಆರೋಗ್ಯವಿಲ್ಲ, ಪೋಲೀಸರಿಲ್ಲದಿದ್ದರೆ ಭದ್ರತೆಯಿಲ್ಲ, ವಕೀಲರಿಲ್ಲದಿದ್ದರೆ ನ್ಯಾಯವಿಲ್ಲ, ಇಂಜಿನಿಯರ್‌ಗಳಿಲ್ಲದಿದ್ದರೆ ತಂತ್ರಜ್ಞಾನವಿಲ್ಲ. ಆದರೆ ಶಿಕ್ಷಕಕರು ಇಲ್ಲದಿದ್ದರೆ ಯಾವುದೂ ಇಲ್ಲ. ಹಾಗಾಗಿಯೇ ಶಿಕ್ಷಕ ಸ್ಥಾನಕ್ಕೆ ಅಪಾರವಾದ ಮನ್ನಣೆಯಿದೆ ಎಂದು ನುಡಿದರು.

ದೇಶ ಕಂಡ ಮಾದರಿ ಶಿಕ್ಷಕ ಡಾ.ಸರ್ವಪಲ್ಲಿ ರಾಧಾಕೃಷ್ಣನ್. ಮೈಸೂರಿನಲ್ಲಿ ತತ್ವಶಾಸ್ತ್ರ ಪ್ರಾಧ್ಯಾಪಕರಾಗಿದ್ದ ಅವರು ಕಲ್ಕತ್ತಾ ವಿಶ್ವವಿದ್ಯಾನಿಲಯಕ್ಕೆ ವರ್ಗಾಯಿತರಾಗಿ ತೆರಳುವ ಸಂದರ್ಭದಲ್ಲಿ ವಿದ್ಯಾರ್ಥಿಗಳು ಅವರನ್ನು ಹೊತ್ತು ರೈಲ್ವೇನಿಲ್ದಾಣಕ್ಕೆ ಕರೆತಂದು ಆಶ್ರುಧಾರೆಯೊಂದಿಗೆ ಬೀಳ್ಕೊಟ್ಟದ್ದು ಅವರ ವ್ಯಕ್ತಿತ್ವಕ್ಕೆ ಹಿಡಿದ ಕೈಗನ್ನಡಿ ಎಂದರಲ್ಲದೆ ತನಗೆ ನೀಡಿರುವ ಗೌರವ ತನ್ನ ಹೆತ್ತವರಿಗೆ, ವಿದ್ಯಾರ್ಥಿಗಳಿಗೆ, ಸಮಾಜದ ಬಂಧುಗಳಿಗೆ ಸೇರಿದೆ ಎಂದು ನುಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜ ಮಾತನಾಡಿ ಶಿಕ್ಷಕರ ಸಾಧನೆಯಿಂದ ಸಂಸ್ಥೆ ಬೆಳೆಯುತ್ತದೆ. ಇಂದು ಸಾಕಷ್ಟು ಹೆಸರು ಮಾಡಿರುವ ಶಿಕ್ಷಣ ಸಂಸ್ಥೆಗಳು ಆ ಸ್ಥಾನಕ್ಕೆ ಬರಲು ಅಲ್ಲಿದ್ದಂತಹ ಅಥವ ಇರುವಂತಹ ಶಿಕ್ಷಕರು ಕಾರಣ. ಅಧ್ಯಾಪನದೊಂದಿಗೆ ವೈಯಕ್ತಿಕ ಸಾಧನೆಯ ಪಥದಲ್ಲಿ ಶಿಕ್ಷಕರು ಮುಂದುವರಿದಾಗ ಸಮಾಜದ ಮೇಲೆ ಅದು ಸತ್ಪರಿಣಾಮ ಬೀರುತ್ತದೆ. ಶಿಕ್ಷಕರ ದಿನಾಚರಣೆ ಪ್ರತಿಯೊಬ್ಬ ಶಿಕ್ಷಕನಿಗೂ ತಾನು ಡಾ.ರಾಧಾಕೃಷ್ಣನ್ ಅವರಂತಾಗಬೇಕೆಂಬುದಕ್ಕೆ ಪ್ರೇರಣೆ ನೀಡುತ್ತದೆ ಎಂದು ಅಭಿಪ್ರಾಯಪಟ್ಟರು.

ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕೋಶಾಧಿಕಾರಿ ರಾಜಶ್ರೀ ಎಸ್ ನಟ್ಟೋಜ, ಆಡಳಿತಾಧಿಕಾರಿ ಗಣೇಶ್ ಪ್ರಸಾದ್ ಎ, ಅಂಬಿಕಾ ಸಿಬಿಎಸ್‌ಇ ವಿದ್ಯಾಲಯದ ಪ್ರಾಚಾರ್ಯೆ ಮಾಲತಿ ಡಿ ಉಪಸ್ಥಿತರಿದ್ದರು. ನಟ್ಟೋಜ ದಂಪತಿ ಪ್ರೊ.ವತ್ಸಲಾರಾಜ್ಞಿ ಅವರ ಪಾದಪೂಜೆ ನಡೆಸಿ, ಗೌರವ ಸಮರ್ಪಿಸಿದರು.

ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಸಾರ್ವಜನಿಕ ಸಂಪರ್ಕಾಧಿಕಾರಿ ರಾಕೇಶ್ ಕುಮಾರ್ ಕಮ್ಮಜೆ ಸ್ವಾಗತಿಸಿದರು. ಅಂಬಿಕಾ ಪದವಿ ಕಾಲೇಜಿನ ಪ್ರಾಚಾರ್ಯ ಡಾ.ವಿನಾಯಕ ಭಟ್ಟ ಗಾಳಿಮನೆ ವಂದಿಸಿದರು. ಉಪನ್ಯಾಸಕರಾದ ಸತೀಶ್ ಇರ್ದೆ ಸನ್ಮಾನ ಪತ್ರ ವಾಚಿಸಿದರೆ ಉಪನ್ಯಾಸಕ ತಿಲೋಶ್ ಅತಿಥಿ ಪರಿಚಯ ನೆರವೇರಿಸಿದರು. ಉಪನ್ಯಾಸಕಿ ಸುಚಿತ್ರಾ ಪ್ರಭು ಕಾರ್ಯಕ್ರಮ ನಿರ್ವಹಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
179

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು