ಅಂಬಿಕಾದಲ್ಲಿ ‘ಸ್ವಾತಂತ್ರ್ಯ ಹೋರಾಟದ ಕ್ರಾಂತಿಕಾರಿಗಳು’ ಬಗೆಗೆ ಉಪನ್ಯಾಸ
ಪುತ್ತೂರು: ಪ್ರಸ್ತುತ ವರ್ಷ ಸ್ವಾತಂತ್ರ್ಯ ದ ಎಪ್ಪತೈದನೆಯ ವರ್ಷಾಚರಣೆಗೆ ನಾವೆಲ್ಲರೂ ಸಾಕ್ಷಿಗಳಾಗಿದ್ದೇವೆ. ಈ ‘ಆಝಾದಿ ೭೫’ ಅನ್ನು ಮುನ್ನಡೆಸಿಕೊಂಡು ಹೋಗುವ ಗುರುತರ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಇಂತಹದ್ದೊಂದು ಸ್ವಾತಂತ್ರ್ಯ ದೊರಕುವುದಕ್ಕೆ ಕಾರಣೀಭೂತವಾದ ವಿವಿಧ ಕಾಲಘಟ್ಟದ ಕ್ರಾಂತಿಕಾರಿಗಳನ್ನು ಗುರುತಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಈಗ ನಾವು ಅಂತಹ ಕಾರ್ಯ ಮಾಡದಿದ್ದರೆ ಮುಂದಿನ ಪೀಳಿಗೆ ಆ ಮಹಾನುಭಾವರನ್ನು ಮರೆಯುವ ಅಪಾಯವಿದೆ ಎಂದು ಕಾರ್ಕಳದ ವಾಗ್ಮಿ, ಉಪನ್ಯಾಸಕ ಆದರ್ಶ ಗೋಖಲೆ ಹೇಳಿದರು.
ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯ ಅಂಬಿಕಾ ಪದವಿಪೂರ್ವ ವಿದ್ಯಾಲಯದಲ್ಲಿ ‘ಸ್ವಾತಂತ್ರ್ಯ ಹೋರಾಟದ ಕ್ರಾಂತಿಕಾರಿಗಳು’ ಎಂಬ ವಿಷಯದ ಬಗೆಗೆ ಸೋಮವಾರ ವಿಶೇಷ ಉಪನ್ಯಾಸ ನೀಡಿದರು.
ಝಾನ್ಸಿ ರಾಣಿ ಲಕ್ಷ್ಮೀ ಬಾಯಿಯಂತಹ ಧೀರೋದಾತ್ತ ಮಹಿಳೆಯ ಹೋರಾಟದ ಬದುಕಿನ ಬಗೆಗೆ ನಾವಿಂದು ತಿಳಿದುಕೊಳ್ಳಬೇಕಿದೆ. ಕಡೆಯ ಉಸಿರಿನ ತನಕವೂ ಝಾನ್ಸಿಯನ್ನು ಫಿರಂಗಿಗಳಿಗೆ ಬಿಟ್ಟುಕೊಡಲಾರೆ ಎಂಬ ಆಕೆಯ ಛಲ ಇಂದಿನ ಮಕ್ಕಳಿಗೆ ಪ್ರೇರಣೆಯಾಗಬಹುದು. ಆದರೆ ಅಂತಹವರ ದೇಶಭಕ್ತಿಯ ಇತಿಹಾಸವನ್ನು ಇಂದಿನ ಪೀಳಿಗೆಗೆ ತಲಪಿಸುವ ಕಾರ್ಯ ಆಗಬೇಕಿದೆ. ಸ್ವಾಮಿ ವಿವೇಕಾನಂದರಂತಹ ಮೇರು ವ್ಯಕ್ತಿಗಳು ಲಕ್ಷ್ಮೀ ಬಾಯಿಯ ಸಾಮರ್ಥ್ಯವನ್ನು ಕೊಂಡಾಡಿದ್ದಾರೆ. ಮಗನನ್ನು ಬೆನ್ನಿಗೆ ಕಟ್ಟಿಕೊಂಡು ಬ್ರಿಟಿಷರ ವಿರುದ್ಧ ಹೋರಾಡಿದ ಕೇವಲ ಇಪ್ಪತ್ತಮೂರು ವಯಸ್ಸಿನ ಆ ಹೆಣ್ಣುಮಗಳ ಕಥೆ ಪ್ರತಿಯೊಬ್ಬ ದೇಶ ಭಕ್ತರಿಗೂ ಪ್ರೇರಣಾದಾಯಿ ಎಂದು ನುಡಿದರು.
೧೮೫೭ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮಕ್ಕೆ ಮುನ್ನುಡಿ ಬರೆದ ಮಹಾನ್ ವೀರ ತಾತ್ಯಾಟೋಪೆ. ಆತನ ಸೇನಾ ವ್ಯೂಹ, ನಾಯಕತ್ವ ವಿಶೇಷವಾದದ್ದು. ವಾಹನ ಸೌಕರ್ಯಗಳಿರದ ಆಗಿನ ಕಾಲದಲ್ಲಿ ಕೇವಲ ಕುದುರೆ ಸವಾರಿಯಲ್ಲೇ ದೇಶವನ್ನು ಸುತ್ತಿ ಬ್ರಿಟೀಷರ ವಿರುದ್ಧ ಜನರನ್ನು ಸಂಘಟಿಸಿದ ತಾತ್ಯಾಟೋಪೆ ಇಂದಿನ ಅನೇಕರಿಗೆ ತಿಳಿದೇ ಇಲ್ಲ. ಆತನ ಸಾಮರ್ಥ್ಯವನ್ನು ಬ್ರಿಟಿಷ್ ಇತಿಹಾಸಕಾರರೇ ಗುರುತಿಸಿ ಬರೆದಿದ್ದಾರೆ. ಆತನ ಬಗೆಗೆ ಬ್ರಿಟಿಷರು ಹೆದರುತ್ತಿದ್ದರೆಂದರೆ ಆತನ ಯೋಗ್ಯತೆಯ ಅರಿವಾಗುತ್ತದೆ. ಸಶಕ್ತ ಕ್ರಾಂತಿಯ ಪಿತಾಮಹನೆನಿಸಿಕೊಂಡ ವಾಸುದೇವ ಬಲವಂತ ಫಡ್ಕೆ ಸರ್ಕಾರಿ ಉದ್ಯೋಗ ತ್ಯಜಿಸಿ ಸ್ವಾತಂತ್ರ್ಯ ಹೋರಾಟಕ್ಕೆ ತನ್ನನ್ನು ತಾನು ಅರ್ಪಿಸಿಕೊಂಡ ಮಹಾನುಭಾವ ಎಂದರಲ್ಲದೆ ಅನೇಕ ಮಂದಿ ಕ್ರಾಂತಿಕಾರಿಗಳ ಬಗೆಗೆ ಮಾಹಿತಿ ನೀಡಿದರು.
ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕೋಶಾಧಿಕಾರಿ ರಾಜಶ್ರೀ ಎಸ್ ನಟ್ಟೋಜ, ಆಡಳಿತಾಧಿಕಾರಿ ಗಣೇಶ್ ಪ್ರಸಾದ್ ಎ, ಸಾರ್ವಜನಿಕ ಸಂಪರ್ಕಾಧಿಕಾರಿ ರಾಕೇಶ್ ಕುಮಾರ್ ಕಮ್ಮಜೆ, ಅಂಬಿಕಾ ಪದವಿ ಕಾಲೇಜಿನ ಪ್ರಾಚಾರ್ಯ ಡಾ.ವಿನಾಯಕ ಭಟ್ಟ ಗಾಳಿಮನೆ, ಅಂಬಿಕಾ ಸಿಬಿಎಸ್ಇ ವಿದ್ಯಾಲಯದ ಪ್ರಾಚಾರ್ಯೆ ಮಾಲತಿ ಡಿ, ಉಪಪ್ರಾಚಾರ್ಯೆ ಸುಜನಿ ಬೋರ್ಕರ್, ಅಂಬಿಕಾ ಪದವಿಪೂರ್ವ ವಿದ್ಯಾಲಯದ ಉಪಪ್ರಾಚಾರ್ಯ ರಾಮಚಂದ್ರ ಭಟ್, ಕ್ಯಾಂಪಸ್ ನಿರ್ದೇಶಕ ಭಾಸ್ಕರ ಶೆಟ್ಟಿ, ಬೋಧಕ ಹಾಗೂ ಬೋಧಕೇತರ ವೃಂದ ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಹಾಜರಿದ್ದರು.