ಬೆಳ್ತಂಗಡಿ: ವಿದ್ಯೆ ಎಂಬುದು ಬೆಲೆ ಕಟ್ಟಲಾಗದ ಸಂಪತ್ತು. ಹಣ , ಆಸ್ತಿ, ಅಧಿಕಾರ ಎಲ್ಲವನ್ನೂ ಮೀರಿಸಿದ್ದು ವಿದ್ಯೆ. ಆ ವಿದ್ಯೆ ಕೈವಶವಾದರೆ ಉಳಿದದ್ದು ತಾನಾಗಿಯೇ ಒಲಿದು ಬರುತ್ತದೆ’ ಎಂದು ಎಕ್ಸೆಲ್ ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಸುಮಂತ್ ಕುಮಾರ್ ಜೈನ್ ಹೇಳಿದರು.
ಅವರು ಗುರುವಾಯನಕೆರೆ ಎಕ್ಸೆಲ್ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ದ್ವಿತೀಯ ಪಿಯುಸಿ ಸಾಧಕ ವಿದ್ಯಾರ್ಥಿಗಳ ಅಭಿನಂದನಾ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.
2014- 15ರಲ್ಲಿ 7 ವಿದ್ಯಾರ್ಥಿಗಳೊಂದಿಗೆ ಶಿಕ್ಷಣ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದ ನಮ್ಮ ಶಿಕ್ಷಣ ಸಂಸ್ಥೆ 2020- 21ರಲ್ಲಿ ಎಕ್ಸೆಲ್ ಪದವಿ ಪೂರ್ವ ಕಾಲೇಜನ್ನು ಸ್ಥಾಪಿಸಿತು. ಇದೀಗ ಮೊದಲ ಬ್ಯಾಚ್ ನ 257 ವಿಜ್ಞಾನ ವಿಭಾಗದ ವಿದ್ಯಾರ್ಥಿಗಳ ಫಲಿತಾಂಶವೇ ರಾಜ್ಯದ ಗಮನ ಸೆಳೆಯುವಂತಾಗಿದೆ.
ರಾಜ್ಯ ಮಟ್ಟದಲ್ಲಿ 4 ನೆಯ ಸ್ಥಾನ, ಜಿಲ್ಲೆಯಲ್ಲಿ ದ್ವಿತೀಯ ಸ್ಥಾನ ಹಾಗೂ ತಾಲೂಕಿಗೆ ಪ್ರಥಮ ಸ್ಥಾನಿಯಾಗಿ ನಮ್ಮ ವಿದ್ಯಾರ್ಥಿ ಸಾಧನೆ ಗೈದಿರುವುದು ಅಭಿನಂದನೀಯ. ತಾಲೂಕಿಗೆ ದ್ವಿತೀಯ, ತೃತೀಯ ಸ್ಥಾನಿಗಳೂ ನಮ್ಮ ವಿದ್ಯಾರ್ಥಿಗಳೇ ಆಗಿರುವುದು ನಮ್ಮ ಗಮನೀಯ ಸಾಧನೆಯಾಗಿದೆ. ನಮ್ಮ ಒಟ್ಟು 103 ವಿದ್ಯಾರ್ಥಿಗಳು ಶೇ.90 ಅಂಕ ಗಳಿಸಿರುವುದು ನೂತನ ಕಾಲೇಜು ಎಲ್ಲೂ ಮಾಡಿರದ ಸಾಧನೆಯಾಗಿದೆ. ‘ ಎಂದರು.
ಕುವೆಟ್ಟು ಗ್ರಾಮ ಪಂಚಾಯತಿ ಅಧ್ಯಕ್ಷೆ ಆಶಾಲತಾ ಮಾತನಾಡಿ, ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ ವಿದ್ಯಾರ್ಥಿಗಳು ನಮ್ಮೂರಿನಲ್ಲಿ ಕಲಿತು, ಸಾಧನೆ ಗೈದಿರುವುದು ಅಭಿಮಾನದ ಸಂಗತಿ. ಇದಕ್ಕೆ ಕಾರಣರಾದ ಸಂಸ್ಥೆಯ ಅಧ್ಯಕ್ಷರು, ಎಲ್ಲಾ ಉಪನ್ಯಾಸಕರನ್ನು ಅಭಿನಂದಿಸುವುದಾಗಿ ಹೇಳಿದರು.
ಕುವೆಟ್ಟು ಗ್ರಾಮ ಪಂಚಾಯತಿ ಉಪಾಧ್ಯಕ್ಷ ಪ್ರದೀಪ್ ಶೆಟ್ಟಿ ಅವರು, ಕಾಲೇಜು ಪ್ರಾರಂಭ ಗೊಂಡಾಗ ಏನು ಸಾಧಿಸುತ್ತಾರೆ ಎಂದುಕೊಂಡವರಿಗೆ ತಮ್ಮ ಸಾಧನೆಯ ಮೂಲಕವೇ ಉತ್ತರ ಕೊಟ್ಟಿದ್ದಾರೆ ಎಕ್ಸೆಲ್ ಕಾಲೇಜು ತಂಡದವರು. ದಣಿವರಿಯದ ಅಧ್ಯಕ್ಷ ಸುಮಂತ್ ಕುಮಾರ್ ಜೈನ್ ಅವರನ್ನು ಅಭಿನಂದಿಸುತ್ತೇನೆ.’ ಎಂದರು.
ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಗೀತಾ ರಮೇಶ್, ಉದ್ಯಮಿ ಶಮಂತ್ ಜೈನ್, ಕಾಲೇಜು ಆಡಳಿತ ಮಂಡಳಿ ಕಾರ್ಯದರ್ಶಿ ಅಭಿರಾಮ್ ಎಸ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ರಾಜ್ಯಕ್ಕೆ ಚತುರ್ಥ ಸ್ಥಾನ ಪಡೆದ ಆಗ್ನೇಯ ಡಿ. ಎ ಅವರನ್ನು ಹಾಗೂ ಅವರ ಅವಳಿ ಸೋದರ ಎನ್. ಡಿ. ಎ ಪರೀಕ್ಷೆಯಲ್ಲಿ ತೇರ್ಗಡೆ ಗೊಂಡ ಆತ್ರೇಯ ಅವರನ್ನು ಗೌರವಿಸಲಾಯಿತು. ತಾಲೂಕಿಗೆ ದ್ವಿತೀಯ ಮತ್ತು ತೃತೀಯ ಸ್ಥಾನ ಗಳಿಸಿದ ದೀಕ್ಷಾ ಬಿ.ಎಸ್. ಹಾಗೂ ಉಜ್ವಲಾ ಎನ್. ಕೆ. ಅವರನ್ನು ಅಭಿನಂದಿಸಲಾಯಿತು.
ಶೇ. ತೊಂಬತ್ತಕ್ಕಿಂತ ಅಧಿಕ ಅಂಕ ಗಳಿಸಿದ ಒಟ್ಟು 103 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಉಪನ್ಯಾಸಕಿ ಶಾಂತಿಪ್ರಿಯ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಸಿಕೊಟ್ಟರು.
ಉಪನ್ಯಾಸಕ ವಿಕಾಸ್ ಹೆಬ್ಬಾರ್ ಸ್ವಾಗತಿಸಿದರು. ವಿದ್ಯಾರ್ಥಿನಿಯರಾದ ಪೂರ್ವಿ, ಮನಿಷಾ, ಹಂಸಪ್ರಿಯ, ಮನೋಹರಿ ಪ್ರಾರ್ಥಿಸಿದರು . ಚೇತನ ಮತ್ತು ಚಂದನ ಕಾರ್ಯಕ್ರಮ ನಿರೂಪಿಸಿದರು. ಉಪನ್ಯಾಸಕಿ ನಿಶಾ ಪೂಜಾರಿ ವಂದಿಸಿದರು.