ಬೆಳ್ತಂಗಡಿ: ನಮಗೆ ಆರೋಗ್ಯಭಾಗ್ಯ ಅತಿ ಮುಖ್ಯ. ಕೈಯ ಅಶುಚಿತ್ವದಿಂದ ಅನೇಕ ರೋಗಗಳು ಬರುತ್ತವೆ. ಕೈಯ ವೈರಸ್ ಗಳಿಂದ ಬರುವ ರೋಗಗಳಿಂದ ಮುಕ್ತವಾಗಲು ವಿಶೇಷ ಗಮನ ಕೊಡಬೇಕು. ವಿಶೇಷವಾಗಿ ವಿದ್ಯಾರ್ಥಿಗಳು ಕೈಯ ಶುಚಿತ್ವ ಕಾಪಾಡಿಕೊಳ್ಳಬೇಕು. ಈ ಮೂಲಕ ಆರೋಗ್ಯವಂತ ಸಮಾಜ ಕಟ್ಟಲು ಸಾಧ್ಯ ಎಂದು ರೋಟರಿ ಕ್ಲಬ್ ಬೆಳ್ತಂಗಡಿಯ ಅಧ್ಯಕ್ಷೆ ರೋ. ಮನೋರಮಾ ಹೇಳಿದರು.
ಇವರು ರೋಟರಿ ಕ್ಲಬ್ ಬೆಳ್ತಂಗಡಿ ಹಾಗೂ ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವತಿಯಿಂದ ಬೆಳ್ತಂಗಡಿ ತಾಲೂಕಿನ ಆಯ್ದ ಶಾಲೆ ಕಾಲೇಜುಗಳಲ್ಲಿ ವಿಶ್ವ ಕೈ ತೊಳೆಯುವ ದಿನದ ಅಂಗವಾಗಿ ಆಯೋಜಿಸುತ್ತಿರುವ ವೈಜ್ಞಾನಿಕವಾಗಿ ಕೈ ತೊಳೆಯುವ ಅಭಿಯಾನವನ್ನು ಕೈ ತೊಳೆಯುವ ಮಾರ್ಗದರ್ಶಿ ಫಲಕ ಅನಾವರಣಗೊಳಿಸಿ ಉದ್ಘಾಟಿಸಿದರು.
ಕನ್ನಡ ಭಾಷಾ ಉಪನ್ಯಾಸಕರಾದ ಡಾ. ರಾಜೇಶ್ ಬಿ ಅಧ್ಯಕ್ಷತೆ ವಹಿಸಿ ಕೈ ಶುಚಿತ್ವದ ಮಹತ್ವ ತಿಳಿಸಿದರು.
ರಾಷ್ಟ್ರೀಯ ಸೇವಾ ಯೋಜನೆಯ ಯೋಜನಾಧಿಕಾರಿ ಡಾ. ಪ್ರಸನ್ನಕುಮಾರ ಐತಾಳ್ ಅವರು ಕೈ ತೊಳೆಯುವ ದಿನದ ವಿಶೇಷತೆ ಹಾಗೂ ಪ್ರಾತ್ಯಕ್ಷಿಕೆ ನಡೆಸಿದರು. ಸಹ ಯೋಜನಾಧಿಕಾರಿ ಚೇತನಾ ಕುಮಾರಿ ಉಪಸ್ಥಿತರಿದ್ದರು.
ಅಂಕಿತಾ ಸ್ವಾಗತಿಸಿ ಪರಿಚಯಿಸಿದರು. ಶಾಂತಿಕಾ ನಿರೂಪಿಸಿ , ವಂಶಿ ಭಟ್ ವಂದಿಸಿದರು.