ಮಂಗಳೂರು: ಶಕ್ತಿನಗರದ ಶಕ್ತಿ ವಿದ್ಯಾ ಸಂಸ್ಥೆಯ ವಿದ್ಯಾರ್ಥಿಗಳಿಗೆ ಗಣಿತ ವಿಷಯವನ್ನು ಸುಲಭವಾಗಿ ಅಭ್ಯಾಸ ಮಾಡುವ ವಿಧಾನದ ಕುರಿತಂತೆ ಕಾರ್ಯಗಾರವನ್ನು ಆಯೋಜಿಸಲಾಗಿತ್ತು. ಈ ಕಾರ್ಯಗಾರದ ಉದ್ಘಾಟಣೆಯನ್ನು ಗಣಿತ ಮಾಂತ್ರಿಕ ಹಾಗೂ ಮಾನವ ಗಣಕಯಂತ್ರ ಎಂದು ಪ್ರಸಿದ್ಧರಾಗಿರುವ ಬಸವರಾಜ್ ಉಮ್ರಾಣಿಯವರು ನೆರವೇರಿಸಿದರು.
ಬಸವರಾಜ್ ಉಮ್ರಾಣಿಯವರು ಸ್ವತಃ ಅಂಧತ್ವವನ್ನು ಹೊಂದಿದ್ದು ಅವರು ಜನ್ಮದಿನಾಂಕವನ್ನು ತಿಳಿಸಿದ ತಕ್ಷಣ ವಾರವನ್ನು ತಿಳಿಸಿರುತ್ತಾರೆ. ೩೦ ಅಂಕೆಯನ್ನು ಬರೆದು ಅದನ್ನು ಅವರಿಗೆ ತಿಳಿಸಿದಾಗ ಅದನ್ನು ನೇರ ಹಾಗೂ ಉಲ್ಟಾ ವಿಧಾನದಲ್ಲಿ ತಿಳಿಸುವುದರ ಮೂಲಕ ವಿದ್ಯಾರ್ಥಿಗಳಿಗೆ ಗಣಿತ ಕಷ್ಟವಲ್ಲ ಎಂಬುದನ್ನು ಮನವರಿಕೆ ಮಾಡಿಕೊಟ್ಟರು. ವಿದ್ಯಾರ್ಥಿಗಳಿಗೆ ಸುಲಭವಾಗಿ ಗಣಿತವನ್ನು ಅಭ್ಯಾಸ ಮಾಡುವ ವಿವಿಧ ರೀತಿಯ ವಿಧಾನವನ್ನು ಅವರು ಹೇಳಿಕೊಟ್ಟರು.
ನಂತರ ಮಾತನಾಡಿದ ಅವರು ನೀವೆಲ್ಲರೂ ಅದೃಷ್ಟವಂತರು ನಿಮಗೆಲ್ಲರಿಗೂ ದೇವರು ಕಣ್ಣನ್ನು ಕೊಟ್ಟಿದ್ದಾರೆ. ಅದನ್ನು ಒಳ್ಳೆಯದನ್ನು ನೋಡುವುದಕ್ಕೋಸ್ಕರ ಹಾಗೂ ಓದುವುದಕ್ಕೋಸ್ಕರ ಉಪಯೋಗಿಸಬೇಕು. ನನಗೆ ಅಂಧತ್ವ ಕೊಟ್ಟರೂ ಸಹ ಹೆಚ್ಚಿನ ಜ್ಞಾಪನಾ ಶಕ್ತಿಯನ್ನು ಕೊಟ್ಟಿರುವುದರ ಮೂಲಕ ನಿಮ್ಮಂತಹ ಸಾವಿರಾರು ಮಕ್ಕಳಿಗೆ ಪ್ರೇರಣಾದಾಯಿ ವಿಷಯನ್ನು ತಿಳಿಸುವ ಶಕ್ತಿಯನ್ನು ಕೊಟ್ಟಿದ್ದಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಅವರ ಸಾಧನೆಯನ್ನು ಗುರುತಿಸಿ ಸನ್ಮಾನಿಸಲಾಯಿತು. ಈ ಕಾರ್ಯಗಾರದ ವೇದಿಕೆಯಲ್ಲಿ ಈ ವಿದ್ಯಾಸಂಸ್ಥೆಯ ಪ್ರಧಾನ ಸಲಹೆಗಾರ ರಮೇಶ ಕೆ. ಶಕ್ತಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಪೃಥ್ವಿರಾಜ್ ಹಾಗೂ ಶಕ್ತಿ ರೆಸಿಡೆನ್ಶಿಯಲ್ ಶಾಲೆಯ ಪ್ರಾಂಶುಪಾಲೆ ವಿದ್ಯಾ ಜಿ. ಕಾಮತ್ ಉಪಸ್ಥಿತರಿದ್ದರು. ಕಾರ್ಯಕ್ರಮದ ನಿರೂಪಣೆಯನ್ನು ಕನ್ನಡ ಅಧ್ಯಾಪಕರಾದ ಶರಣಪ್ಪ ನೆರವೇರಿಸಿದರು.