ನಾಪೋಕ್ಲು, ಡಿ.29: ಪೋಷಕರು, ಶಿಕ್ಷಕರು ಮಕ್ಕಳಲ್ಲಿ ಶಿಸ್ತು, ಪ್ರಾಮಾಣಿಕತೆ, ಸ್ವಚ್ಛತೆ ಹಾಗೂ ಸಂಸ್ಕೃತಿಯನ್ನು ಬೆಳೆಸುವ ನಿಟ್ಟಿನಲ್ಲಿ ಮುತುವರ್ಜಿ ವಹಿಸಬೇಕೆಂದು ಮಡಿಕೇರಿ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ಪ್ರಾಂಶುಪಾಲ ಡಾ.ಚೌರೀರ ಜಗತ್ ತಿಮ್ಮಯ್ಯ ಹೇಳಿದರು.
ಕಕ್ಕಬೆ ಪ್ರೌಢಶಾಲೆಯ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ಮೊಬೈಲ್, ಟಿವಿಗಳ ಅತಿಯಾದ ಬಳಕೆಯಿಂದ ಇಂದಿನ ಯುವ ಜನತೆ ತಮ್ಮ ದೈನಂದಿನ ಕಾರ್ಯ ಚಟುವಟಿಕೆಗಳಲ್ಲಿ ಬದಲಾವಣೆಗಳನ್ನು ಮಾಡಿಕೊಂಡಿದ್ದಾರೆ. ಇದು ಅವರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಲಿದೆ. ಈ ಬಗ್ಗೆ ಮಾರ್ಗದರ್ಶಕರು ಹೆಚ್ಚಿನ ಗಮನಹರಿಸಬೇಕು ಎಂದರು.
ಲಯನ್ಸ್ ಕ್ಲಬ್ ವಲಯ ಅಧ್ಯಕ್ಷ ಮುಕ್ಕಾಟಿರ ಎಂ ವಿನಯ್ ಮಾತನಾಡಿ, ವಿದ್ಯಾರ್ಥಿ ಜೀವನದಿಂದಲೇ ವಿದ್ಯಾರ್ಥಿಗಳು ಆಂತರಿಕ ಶಿಸ್ತಿನೊಂದಿಗೆ ಬಾಹ್ಯ ಶಿಸ್ತನ್ನು ರೂಡಿಸಿಕೊಂಡರೆ ಸಮಾಜದಲ್ಲಿ ಉನ್ನತ ವ್ಯಕ್ತಿಯಾಗಲು ಸಾಧ್ಯ. ನಾಲ್ಕು ಗೋಡೆಗಳ ನಡುವಿನ ಒತ್ತಡದ ಶಿಕ್ಷಣದಿಂದಾಗಿ ಇಂದು ಕ್ರೀಡೆ ಮರೆತುಹೋಗಿದೆ. ವಿದ್ಯಾರ್ಥಿಗಳು ಶಿಕ್ಷಣದೊಂದಿಗೆ ಕ್ರೀಡಾ ಚಟುವಟಿಕೆಗಳಲ್ಲೂ ಹೆಚ್ಚಾಗಿ ಪಾಲ್ಗೊಳ್ಳಬೇಕು. ಪೋಷಕರು ಈ ನಿಟ್ಟಿನಲ್ಲಿ ಗಮನಹರಿಸಬೇಕು ಎಂದರು.