ಉಜಿರೆ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು (ಸ್ವಾಯತ್ತ), ಉಜಿರೆಯ ವಾಣಿಜ್ಯ ವಿಭಾಗದ ಅಂತಿಮ ಪದವಿ ವಿದ್ಯಾರ್ಥಿಗಳು ದಿನಾಂಕ 20 ಹಾಗೂ 21ನೇ ಡಿಸೆಂಬರ್ 2022 ರಂದು ಉಜಿರೆಯಲ್ಲಿರುವ ಮಂಜುಶ್ರೀ ಪ್ರಿಂಟರ್ಸ್ ಗೆ ಭೇಟಿ ನೀಡಿದರು.
ವಿದ್ಯಾರ್ಥಿಗಳು ಕೇವಲ ತರಗತಿಗಳಲ್ಲಿ ಬೋಧಿಸುವ ಸಂಸ್ಥೆ, ಅದರ ರಚನೆ, ಕಾನೂನಿನ ಚೌಕಟ್ಟು, ಲೆಕ್ಕಪತ್ರಗಳ ನಿರ್ವಹಣೆ, ಕಚೇರಿಯ ಕಾರ್ಯವಿಧಾನ, ಅದರೊಳಗಿರುವ ವಿವಿಧ ವಿಭಾಗಗಳು, ವಿವಿಧ ಕಾರ್ಯಗಳು, ಉತ್ಪಾದನಾ ವಿಧಾನ, ಯಂತ್ರೋಪಕರಣಗಳ ಬಳಕೆ, ಉತ್ಪನ್ನಗಳನ್ನು ಮಾರುಕಟ್ಟೆಗೆ ತಲುಪಿಸುವ ರೀತಿ ಹಾಗೂ ಒಟ್ಟು ವ್ಯವಹಾರ, ಮುಂತಾದ ವಿಷಯಗಳನ್ನು ಪಠ್ಯರೂಪದಲ್ಲಿ ಮಾತ್ರ ಕಲಿತರೆ ಸಾಲದು, ಆ ವಿಷಯಗಳನ್ನು ಪ್ರಾಯೋಗಿಕವಾಗಿ, ಖುದ್ದಾಗಿ ನೋಡಿ ಕಲಿಯಬೇಕು ಎಂಬ ಉದ್ದೇಶದಿಂದ ಈ ಕೈಗಾರಿಕಾ ಭೇಟಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಅಂತಿಮ ಪದವಿಯ ವಿದ್ಯಾರ್ಥಿಗಳನ್ನು ನಾಲ್ಕು ಗುಂಪುಗಳಾಗಿ ವಿಂಗಡಿಸಿ ಮಂಜುಶ್ರೀ ಮುದ್ರಣಾಲಯಕ್ಕೆ ಕರೆದೊಯ್ಯಲಾಗಿತ್ತು. ಈ ಕೈಗಾರಿಕಾ ಬೇಟಿ ಕಾರ್ಯಕ್ರಮವನ್ನು ಉಪನ್ಯಾಸಕರಾದ ಡಾ. ಲಕ್ಷ್ಮೀನಾರಾಯಣ ಕೆ.ಎಸ್, ಶ್ರೀ ಹರೀಶ್ ಶೆಟ್ಟಿ, ಶ್ರೀಮತಿ ಪವಿತ್ರ ಯು. ಕೆ ಹಾಗೂ ಕುಮಾರಿ ಅಪರ್ಣ ಇವರು ಆಯೋಜಿಸಿದ್ದರು.
ಮಂಜುಶ್ರೀ ಮುದ್ರಣಾಲಯಕ್ಕೆ ಭೇಟಿ ನೀಡಿದ ವಿದ್ಯಾರ್ಥಿಗಳು ಅಲ್ಲಿನ ಸಂಪೂರ್ಣ ಚಿತ್ರಣವನ್ನು ಕಣ್ಣಾರೆ ಕಂಡು ಕುತೂಹಲದಿಂದ ಎಲ್ಲವನ್ನು ಪರಿಶೀಲಿಸಿ, ಸಿಬ್ಬಂದಿಗಳೊಂದಿಗೆ ಮಾತನಾಡಿ ಆನಂದಿಸಿದರು. ಈ ಸಂದರ್ಭದಲ್ಲಿ ಆಯೋಜಕರು ವಿಭಾಗದ ಪರವಾಗಿ ಮಂಜುಶ್ರೀ ಮುದ್ರಣಾಲಯದ ಮ್ಯಾನೇಜರ್ ಆದ ಶ್ರೀ ಶೇಖರ್ ಹಾಗೂ ಅವರ ಸಿಬ್ಬಂದಿಗಳಿಗೆ ಮನಃಪೂರ್ವಕ ಧನ್ಯವಾದಗಳನ್ನು ತಿಳಿಸಿದರು.