ಮೂಡುಬಿದಿರೆ: ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿಗೆ ರಾಷ್ಟ್ರೀಯ ಮೌಲ್ಯಾಂಕನ ಮತ್ತು ಮಾನ್ಯತಾ ಪರಿಷತ್ (ನ್ಯಾಕ್) ಮೊದಲ ಸುತ್ತಿನಲ್ಲೇ ಸಿಜಿಪಿಎ 3.32 ನೊಂದಿಗೆ ಎ+ ಮಾನ್ಯತೆ ನೀಡಿದೆ. ಮುಂದಿನ ಐದು ವರ್ಷಗಳ ಅವಧಿಯ ಈ ಮಾನ್ಯತೆಯನ್ನು ಘೋಷಿಸಿದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ ಆಳ್ವ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ನ್ಯಾಕ್ ತಂಡದ ಭೇಟಿ, ಪರಿಶೀಲನೆ:
ಆಂಧ್ರ ಪ್ರದೇಶದ ಪೂರ್ವ ಗೋದಾವರಿಯ ಆದಿಕವಿ ನನ್ನಯಾ ವಿವಿಯ ಸಿಎಸ್ಇ ಕಾಲೇಜ್ ಆಫ್ ಇಂಜಿನಿಯರಿಂಗ್ ನ ಕುಲಪತಿ ಡಾ.ಸುರೇಶ್ ವರ್ಮಾ ನ್ಯಾಕ್ ತಂಡದ ನೇತೃತ್ವವಹಿಸಿದರು. ಪಾಂಡಿಚೇರಿ ವಿವಿಯ ಸ್ಕೂಲ್ ಆಫ್ ಮೆನೇಜ್ಮೆಂಟ್ ಪ್ರಾಧ್ಯಾಪಕಿ ಡಾ.ಮಾಲಬಿಕ ಡಿಯೋ ಹಾಗೂ ಅಮರಾವತಿಯ ಶ್ರೀ ಶಿವಾಜಿ ಎಜುಕೇಶನ್ ಸೊಸೈಟಿಯ ಕಾರ್ಯದರ್ಶಿ ಡಾ.ವಿಜಯ್ ಠಾಕ್ರೆ ತಂಡದ ಸದಸ್ಯರಾಗಿದ್ದರು. ಈ ಮೂವರ ನ್ಯಾಕ್ ತಂಡವು 2023ರ ಜನವರಿ 13 ಮತ್ತು 14ರಂದು ಸಂಸ್ಥೆಗೆ ಭೇಟಿ ನೀಡಿ ಶೈಕ್ಷಣಿಕ ಸಿದ್ಧತೆ ಹಾಗೂ ಪೂರಕ ವ್ಯವಸ್ಥೆಗಳನ್ನು ಕೂಲಂಕಷವಾಗಿ ಮೌಲ್ಯಮಾಪನ ನಡೆಸಿತು.
ನ್ಯಾಕ್ನ ಗುಣಾತ್ಮಕ ಮಾಪನದ ಪ್ರಮುಖ ಏಳು ಆಯಾಮಗಳ ಆಧಾರದಲ್ಲಿ ತಂಡವು ಸಂಸ್ಥೆಯಲ್ಲಿ ಸೂಕ್ಷ್ಮ ಪರಿಶೀಲನೆ ಹಾಗೂ ಮಾಪನ ನಡೆಸಿತು. ಈ ಆಯಾಮಗಳಾದ ಸಂಸ್ಥೆಯಲ್ಲಿನ ಪಠ್ಯಕ್ರಮದ ಅಂಶಗಳು, ಬೋಧನೆ- ಕಲಿಕೆ ಹಾಗೂ ಮೌಲ್ಯಮಾಪನೆ, ಸಂಶೋಧನೆ, ಆವಿಷ್ಕಾರ ಮತ್ತು ವಿಸ್ತರಣಾ ಕಾರ್ಯಕ್ರಮಗಳು, ಮೂಲಸೌಕರ್ಯ ಹಾಗೂ ಕಲಿಕಾ ಸಂಪನ್ಮೂಲಗಳು, ವಿದ್ಯಾರ್ಥಿ ಪ್ರೋತ್ಸಾಹ ಹಾಗೂ ಪ್ರಗತಿ, ಆಡಳಿತ, ನಾಯಕತ್ವ ಮತ್ತು ನಿರ್ವಹಣೆ ಮತ್ತು ಸಾಂಸ್ಥಿಕ ಮೌಲ್ಯಗಳು ಹಾಗೂ ಉನ್ನತ ಅಭ್ಯಾಸಗಳ ಆಧಾರದಲ್ಲಿ ತಂಡವು ಜನವರಿ 14ರಂದು ನಡೆದ ನಿರ್ಗಮನ ಸಭೆಯಲ್ಲಿ ಪ್ರಶಂಸೆ ವ್ಯಕ್ತಪಡಿಸಿತ್ತು ಎಂದು ಡಾ.ಮೋಹನ ಆಳ್ವ ತಿಳಿಸಿದರು.
ಆಳ್ವಾಸ್ ಇಂಜಿನಿಯರಿಂಗ್ ಕಾಲೇಜು, ಐಐಎಸ್ಸಿ ಇಸ್ರೊ, ಎನ್ಆರ್ಎಸ್ಸಿ, ಕುಮಮೊಟೊ ವಿಶ್ವವಿದ್ಯಾಲಯ- ಜಪಾನ್, ಎಸ್ಕೆಎಫ್, ಟಿಸಿಎಸ್-ಐಯಾನ್, ಟೊಯೊಟೊ- ಕಿರ್ಲೊಸ್ಕರ್ ಮತ್ತಿತರ ಕೈಗಾರಿಕೆ ಹಾಗೂ ಸಂಸ್ಥೆಗಳ ಜೊತೆ ಶೈಕ್ಷಣಿಕ ಸಹಯೋಗ ಹಾಗೂ ಒಪ್ಪಂದಗಳನ್ನು ಮಾಡಿಕೊಂಡು ವಿದ್ಯಾರ್ಥಿಗಳನ್ನು ಸಮಕಾಲೀನ ತಂತ್ರಜ್ಞಾನ ಆಧಾರಿತ ಜಗತ್ತಿನ ಸವಾಲಿಗೆ ಸಿದ್ಧಗೊಳಿಸಿದೆ. ಪ್ರತಿಷ್ಠಿತ ಸಂಸ್ಥೆ- ಕೈಗಾರಿಕೆಗಳ ಜೊತೆ ಸಕ್ರಿಯ ಸಹಭಾಗಿತ್ವಗಳು ಹಾಗೂ ಗುಣಮಟ್ಟದ ಶಿಕ್ಷಣದ ಉನ್ನತ ಧೋರಣೆಯ ಕಾರಣ ನ್ಯಾಕ್ ಎ+ ಶ್ರೇಣಿ ಮಾನ್ಯತೆಯನ್ನು ಸಿಜಿಪಿಎ 3.32ರ ಜೊತೆ ನೀಡಿದೆ. ಕಂಪ್ಯೂಟರ್ ಸೈನ್ಸ್ ಮತ್ತು ಇಂಜಿನಿಯರಿಂಗ್ ಹಾಗೂ ವಿದ್ಯುನ್ಮಾನ ಮತ್ತು ಸಂವಹನ ಎಂಜಿನಿಯರಿಂಗ್ ನಿಕಾಯವು ರಾಷ್ಟ್ರೀಯ ಮೌಲ್ಯಾಂಕನ ಮಂಡಳಿಯಿಂದ 2019 ಮತ್ತು 2022ರಲ್ಲಿ ಮೂರು ವರ್ಷಗಳ ಅವಧಿಗೆ ಮಾನ್ಯತೆ ಹಾಗೂ ಮರು ಮಾನ್ಯತೆಯನ್ನು ಪಡೆದಿದೆ ಎಂದು ತಿಳಿಸಿದರು.
ಕಾಲೇಜಿನ ಪ್ರಾಂಶುಪಾಲ ಡಾ ಪೀಟರ್ ಫೆರ್ನಾಂಡಿಸ್, ಐಕ್ಯೂಎಸಿ ಹಾಗೂ ನ್ಯಾಕ್ ಸಂಚಾಲಕ ಡಾ. ದತ್ತಾತ್ರೇಯ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.