ಮಂಗಳೂರು: ಕೆ.ವಿ.ಜಿ ಇಂಜಿನಿಯರಿಂಗ್ ಕಾಲೇಜಿನ, ಮೆಕ್ಯಾನಿಕಲ್ ವಿಭಾಗದ ಸಹಯೋಗದೊಂದಿಗೆ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು ಸಿದ್ಧಪಡಿಸಿದ ವಾಯುಜೀತ್ ರೇಸಿಂಗ್ ವಿ.ಆರ್. 5.0 ಗೋ-ಕಾರ್ಟ್‌ನ ಅನಾವರಣವು ಕಾಲೇಜಿನಲ್ಲಿ ಎ.05 ರಂದು ನಡೆಯಿತು. ಇದು ವಿದ್ಯಾರ್ಥಿಗಳು ಸಿದ್ಧಪಡಿಸಿದ ಐದನೇ ರೇಸಿಂಗ್ ವೆಹಿಕಲ್ ಆಗಿದ್ದು ಎಪ್ರಿಲ್ 10 ರಿಂದ ಕೊಯಮುತ್ತೂರಿನ ಕಾರಿ ಮೋಟಾರ್ ಸ್ಪೀಡ್ ವೇ ನಲ್ಲಿ ನಡೆಯಲಿರುವ ಜಿಕೆಡಿಸಿ ಸೀಸನ್ 10 ಸ್ಪರ್ಧಿಸಲು ಸಿದ್ಧಪಡಿಸಿರುವ ರೇಸಿಂಗ್ ಕಾರ್ ಆಗಿದೆ.
ಸ್ವತಃ ವಿದ್ಯಾರ್ಥಿಗಳೇ ಕಾಲೇಜಿನ ಮೇಕರ್‍ಸ್ ಲ್ಯಾಬ್‌ನಲ್ಲಿ ಅಭಿವೃದ್ಧಿ ಪಡಿಸಿದ್ದು ಹಿಂದಿನ ನಾಲ್ಕು ಸಿದ್ಧಪಡಿಸಿದ ವಾಹನಕ್ಕಿಂತ ಹೆಚ್ಚಿನ ತಾಂತ್ರಿಕತೆಯನ್ನು ಹೊಂದಿದೆ. ಇದರ ಅನಾವರಣವನ್ನು ಕಾಲೇಜಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಕಂಪ್ಯೂಟರ್ ಸೈನ್ಸ್ ಮತ್ತು ಇಂಜಿನಿಯರಿಂಗ್ ವಿಭಾಗ ಮುಖ್ಯಸ್ಥರು ಡಾ. ಉಜ್ವಲ್ ಯು.ಜೆ. ಮತ್ತು ಪ್ರಾಂಶುಪಾಲರಾದ ಡಾ. ಸುರೇಶ ವಿ. ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಮುಖ್ಯ ಅತಿಥಿ ಡಾ. ಉಜ್ವಲ್ ಯು.ಜೆ ಹೊಸ ಆವಿಷ್ಕಾರಗಳು ಕಲಿಕೆಯೊಂದಿಗೆ ಮಹತ್ವದ ಪಾತ್ರವಹಿಸುತ್ತದೆ ಹಾಗೂ ಹೊಸ ಶಿಕ್ಷಣ ಪದ್ಧತಿಯ ಪ್ರಕಾರ ಇದೊಂದು ಮಹತ್ವದ ಬೆಳವಣಿಗೆ ಎಂದು ಹೇಳಿ ಶುಭ ಹಾರೈಸಿದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ. ಸುರೇಶ ವಿ. ಮಾತನಾಡಿ ವಿದ್ಯಾರ್ಥಿಗಳ ಸಾಧನೆಯು ಮುಂದಿನ ದಿನಗಳಲ್ಲಿ ಅವರಿಗೆ ಒಳ್ಳೆಯ ಉದ್ಯೋಗವಕಾಶವನ್ನು ಕಲ್ಪಿಸುತ್ತದೆ. ಕೆ.ವಿ.ಜಿ.ಸಿ.ಇ.ಯ ಮೇಕರ್ಸ್ ಲ್ಯಾಬ್ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಮಾತ್ರವಲ್ಲದೆ ಇತರ ಬ್ರಾಂಚ್‌ಗಳಾದ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಶನ್ ಇಂಜಿನಿಯರಿಂಗ್, ಕಂಪ್ಯೂಟರ್ ಸೈನ್ಸ್ ಮತ್ತು ಇಂಜಿನಿಯರಿಂಗ್, ಆರ್‌ಟಿಫಿಶಿಯಲ್ ಇಂಟೆಲಿಜ್‌ನ್ಸ್ ಮತ್ತು ಮೆಶಿನ್ ಲರ್ನಿಂಗ್ ಹಾಗೂ ಸಿವಿಲ್ ಇಂಜಿನಿಯರಿಂಗ್ ವಿದ್ಯಾರ್ಥಿಗಳ ತಾಂತ್ರಿಕತೆಯನ್ನು ಹೆಚ್ಚಿಸುವುದರ ಜೊತೆಗೆ ಹೊಸ ವಿಷಯಗಳನ್ನು ಕಲಿಯುವಲ್ಲಿ ಮಹತ್ತರ ಪಾತ್ರವನ್ನು ನಿರ್ವಹಿಸಿದೆ ಎಂದು ಗಮನ ಸೆಳೆದರು.
ಕಾಲೇಜಿನಲ್ಲಿ ವಾಯುಜಿತ್ ರೇಸಿಂಗ್ ನಂತಹ ಇತರ ಅಸೋಸಿಯೇಶನ್‌ಗಳಾದ ವಾಯುತೇಜ್, ಸಿಲ್ವರ್‌ರೋಬೊಟ್, ಎಸ್.ಎ.ಇ ಮತ್ತು ಎನರ್ಜಿ ಕ್ಲಬ್‌ಗಳು ವಿದ್ಯಾರ್ಥಿಗಳಲ್ಲಿ ಉತ್ತಮ ನಾಯಕತ್ವ ಮತ್ತು ಹೊಂದಾಣಿಕೆಯ ಕೆಲಸ ಮಾಡುವಲ್ಲಿ ಸಹಕರಿಸುತ್ತದೆ ಮತ್ತು ವಿದ್ಯಾರ್ಥಿಗಳು ಇದರ ಸದುಪಯೋಗ ಪಡಿಸಿಕೊಳ್ಳಬೇಕೆಂದು ಹೇಳಿದರು.
ರೇಸಿಂಗ್ ಟೀಮ್‌ನ ರೇಸ್ ಡೈರೈಕ್ಟರ್‌ರಾದ ಕಾಲೇಜಿನ ಡೀನ್-ಅಕಾಡೆಮಿಕ್ ಮತ್ತು ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಡಾ. ಉಮಾಶಂಕರ್ ಕೆ.ಎಸ್. ಅತಿಥಿ, ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿ ಸಮೂಹವನ್ನು ಸ್ವಾಗತಿಸಿದರು. ಕ್ಲಬ್‌ನ ಉದ್ದೇಶ ಮತ್ತು ಕಾರ್ಯನಿರ್ವಹಿಸುವ ಬಗ್ಗೆ ವಿವರಿಸಿದರು. ಇದೇ ಕಾರ್ಯಕ್ರಮದಲ್ಲಿ ವಾಯುಜಿತ್ 5.0ಗೆ ಡಾ. ಉಜ್ವಲ್ ಯು.ಜೆ ಅವರು ವಿದ್ಯಾರ್ಥಿಗಳ ಆವಿಷ್ಕಾರವನ್ನು ಮೆಚ್ಚ ಮೆಚ್ಚಿ 50000 ರೂಗಳನ್ನು ಕೊಡುಗೆ ಘೋಷಿಸಿದರು.
ರೇಸಿಂಗ್ ಟೀಮ್‌ನ ಲೀಡರ್ ಧೀಮಂತ್‌ರವರು ಕ್ಲಬ್‌ನ ಬೆಳವಣಿಗೆ ಮತ್ತು ಮುಂಬರುವ ದಿನಗಳಲ್ಲಿ ನಡೆಯುವ ರೇಸ್‌ನ ಬಗ್ಗೆ ಮಾಹಿತಿ ನೀಡಿದರು. ಕಾಲೇಜಿನ ಉಪಪ್ರಾಂಶುಪಾಲ, ವಿವಿಧ ವಿಭಾಗಗಳ ಮುಖ್ಯಸ್ಥರು, ಪ್ರಾಧ್ಯಾಪಕ ವೃಂದ, ನಾಗೇಶ್ ಕೊಚ್ಚಿ ಮತ್ತು ವಿದ್ಯಾರ್ಥಿವೃಂದ ಉಪಸ್ಥಿತರಿದ್ದರು. ಟೀಮ್‌ನ ಸದಸ್ಯರಾದ ಹೃತಿಕ್ಷ ಕಾರ್ಯಕ್ರಮ ನಿರ್ವಹಿಸಿ, ಚರೀಷ್ಮಾ ಕಡಪಳ ವಂದಿಸಿದರು.