ನಿಟ್ಟೆ: ‘ವಿದ್ಯಾರ್ಥಿಗಳು ಜೀವನದಲ್ಲಿ ಯಶಸ್ಸನ್ನು ಸಾಧಿಸಬೇಕಾದರೆ ತಮ್ಮ ಅನುಕೂಲಕರವಾದ ವಾತಾವರಣದಿಂದ ಹೊರಬರಬೇಕು. ನಾವು ಡಿಜಿಟಲ್ ಯುಗದಲ್ಲಿ ಬದುಕುತಿದ್ದು ಪ್ರತಿಯೊಬ್ಬರೂ ಡಿಜಿಟಲ್ ಸಾಕ್ಷರತೆಯ ಕಡೆಗೆ ಗಮನಕೊಡಬೇಕು, ಜೊತೆಗೆ ಭಾರತ ದರ್ಶನದಂತಹ ಕಾರ್ಯಕ್ರಮಗಳನ್ನು ಕಾಲೇಜಿನಲ್ಲಿ ಹಮ್ಮಿಕೊಳ್ಳುವ ಮೂಲಕ ಮುಂದಿನ ತಲೆಮಾರಿಗೆ ಭಾರತೀಯ ಅಂತಸಃತ್ವವನ್ನು ಪರಿಚಯಿಸಬೇಕು’ ಎಂದು ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ತಾಂತ್ರಿಕ ಶಿಕ್ಷಣ ವಿಭಾಗದ ಉಪಾಧ್ಯಕ್ಷ ಪ್ರೊ.ಡಾ| ಗೋಪಾಲ ಮುಗೇರಾಯ ಅವರು ಅಭಿಪ್ರಾಯಪಟ್ಟರು.
ಅವರು ಸೆ.೧೧ ರಂದು ಹಮ್ಮಿಕೊಳ್ಳಲಾಗಿದ್ದ ಡಾ.ನಿಟ್ಟೆ ಶಂಕರ ಅಡ್ಯಂತಾಯ ಸ್ಮಾರಕ ಪ್ರಥಮದರ್ಜೆ ಕಾಲೇಜಿನ 2023-24 ನೇ ಸಾಲಿನ ವಿದ್ಯಾರ್ಥಿ ಪರಿಷತ್ ನ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಿಟ್ಟೆ ಕ್ಯಾಂಪಸ್ ಸಿಎಮ್&ಡಿ ನಿರ್ದೇಶಕ ಯೋಗೀಶ್ ಹೆಗ್ಡೆ ಅವರು ಮಾತನಾಡಿ ‘ನಾಯಕತ್ವ ಎನ್ನುವುದು ಕೇವಲ ವೇದಿಕೆಯ ಮೇಲೆ ಕುಳಿತುಕೊಳ್ಳುವುದಲ್ಲ, ತಮ್ಮ ಸಹವರ್ತಿಗಳನ್ನು ಕೂಡಿಕೊಂಡು ಮುಂದುವರೆಯುವ ಹೊಣೆಗಾರಿಕೆಯಿದೆ’ ಎಂದು ತಿಳಿಸಿದರು.
ಕಾಲೇಜಿನ ಪ್ರಾಂಶುಪಾಲೆ ಡಾ| ವೀಣಾಕುಮಾರಿ ಬಿ.ಕೆ. ಅವರು ವಿದ್ಯಾರ್ಥಿ ಪರಿಷತ್ ಗೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು. ಇದೇ ಕಾರ್ಯಕ್ರಮದಲ್ಲಿ ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯ ಕೊಡಮಾಡುವ 2022-23 ನೇ ಸಾಲಿನ ಅತ್ಯುತ್ತಮ ಅಧ್ಯಾಪಕ ಪ್ರಶಸ್ತಿಯನ್ನು ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಶ್ರೀ ರಮೇಶ್ ಎಂ ಇವರಿಗೆ ನೀಡಿ ಸನ್ಮಾನಿಸಲಾಯಿತು. ಇವರ ಪ್ರಶಸ್ತಿ ಪತ್ರವನ್ನು ಐಕ್ಯೂಎಸಿ ಸಂಯೋಜಕರಾದ ಶ್ರೀ ಪ್ರಕಾಶ್ ವಾಚಿಸಿದರು. ಪ್ರಶಸ್ತಿಯು 25,000 ರೂ ನಗದು ಬಹುಮಾನವನ್ನು ಒಳಗೊಂಡಿತ್ತು.
ವಿದ್ಯಾರ್ಥಿ ಪರಿಷತ್ ನ ಕಾರ್ಯದರ್ಶಿ ಕುಮಾರಿ ಶ್ರೀಷಾ ಯು ಪೈ 2023-24 ನೇ ಸಾಲಿನ ವಿದ್ಯಾರ್ಥಿ ಪರಿಷತ್ ನ ಕಾರ್ಯಕ್ರಮಗಳನ್ನು ತಿಳಿಸಿದರು. ವಿದ್ಯಾರ್ಥಿ ಪರಿಷತ್ ನ ಸಂಯೋಜಕಿ ಶ್ರೀಮತಿ ರೇಖಾ ಅವರು ಅತಿಥಿ-ಗಣ್ಯರನ್ನು ಸ್ವಾಗತಿಸಿದರು.
ವಿದ್ಯಾರ್ಥಿ ಪರಿಷತ್ ಮುಖ್ಯ ಸಂಯೋಜಕಿಯಾದ ಶ್ರೀಮತಿ ಮಾಲಿನಿ ಜೆ.ರಾವ್ ವಂದನಾರ್ಪಣೆ ನೆರೆವೇರಿಸಿದರು ಹಾಗೂ ವಿದ್ಯಾರ್ಥಿ ಕುಮಾರಿ ನೇಹಾ ಕಾರ್ಯಕ್ರಮವನ್ನು ನಿರೂಪಿಸಿದರು. ಉದ್ಘಾಟನಾ ಕಾರ್ಯಕ್ರಮದ ನಂತರ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.