‘೧೦೨ ವರ್ಷಗಳ ಹಿಂದೆ, ಮಂಗಳೂರು ಹಾಗೂ ಆಸುಪಾಸಿನ ಹಳ್ಳಿಗಳಲ್ಲಿ ಹೆಣ್ಣು ಮಕ್ಕಳ ಶಿಕ್ಷಣದ ಬಗ್ಗೆ ಚಿಂತಿಸಿದ ಆ ಮಹಾನ್ ಚೇತನ ಬೆಥನಿ ಸಂಸ್ಥೆಯ ಸ್ಥಾಪಕರ ಆ ದೂರದೃಷ್ಟಿತ್ವಕ್ಕೆ ನಾವು ಶಿರಬಾಗಬೇಕು. ಈ ಶಿಕ್ಷಣ ಸಂಸ್ಥೆ ನೋಂದಣಿಯಾಗಿ ೭೫ ಸಂವತ್ಸರಗಳು ಮುಗಿದು ಇದೀಗ ಅಮೃತಮಹೋತ್ಸವವನ್ನು ಆಚರಿಸುವ ಬೆಥನಿ ಶಿಕ್ಷಣ ಸಂಸ್ಥೆಯು ಈ ಸಮಾಜಕ್ಕೆ ನೀಡಿದ ಅದ್ಭುತ ಕೊಡುಗೆಗಾಗಿ ಅವರನ್ನು ಅಭಿನಂದಿಸುತ್ತೇನೆ. ಮುಂದೆಯೂ ಅವರಿಂದ ಉತ್ತಮ ಮೌಲ್ಯಾಧಾರಿತ ಶಿಕ್ಷಣ ನಮ್ಮ ಮಕ್ಕಳಿಗೆ ಸಿಗಲಿ ಎಂದು ಆಶಿಸುತ್ತೇನೆ’ ಎಂದು ವಿಧಾನಸಭೆಯ ಸಭಾಪತಿ ಸನ್ಮಾನ್ಯ ಯು ಟಿ ಖಾದರ್ ಹೇಳಿದರು.
ಅವರು ಮಂಗಳೂರಿನ ಸೈಂಟ್ ಸೆಬಾಸ್ಟಿಯನ್ ಪ್ಲಾಟಿನಮ್ ಜುಬಿಲಿ ಹಾಲ್, ಬೆಂದೂರು ಇಲ್ಲಿ ನಡೆದ ಬೆಥನಿ ಶಿಕ್ಷಣ ಸಂಸ್ಥೆಯ ಅಮೃತಮಹೋತ್ಸವ ಸಮಾರೋಪ ಕಾರ್ಯಕ್ರಮದಲ್ಲಿ ಗೌರವಾನ್ವಿತ ಅತಿಥಿಗಳಾಗಿ ಭಾಗವಹಿಸಿ ಸ್ಮರಣ ಸಂಚಿಕೆಯನ್ನು ಬಿಡುಗಡೆ ಮಾಡಿ ತಮ್ಮ ಸಂದೇಶ ನೀಡಿದರು. ಮುಖ್ಯ ಅತಿಥಿ ಸ್ಥಾನ ಅಲಂಕರಿಸಿದ ಬೆಂಗಳೂರಿನ ಧರ್ಮಪ್ರಾಂತ್ಯದ ಮಹಾಧರ್ಮಗರು, ಅತೀ ವಂದನೀಯ ಡಾ. ಪೀಟರ್ ಮಚಾದೊ ಅವರು, ದೇಶಾದ್ಯಂತ ೭೫ ಬಡ ಹೆಣ್ಣುಮಕ್ಕಳ ಕೌಶಲಾಪೂರಿತ ಶಿಕ್ಷಣಕ್ಕಾಗಿ ಸಹಾಯ ನೀಡುವ ಸಲುವಾಗಿ ಆರಂಭಿಸಿದ ನಿಧಿಯನ್ನು ಉದ್ಘಾಟಿಸಿ, ಈ ಒಂದು ಉತ್ತಮ ಯೋಜನೆಯನ್ನು ಶ್ಲಾಘಿಸಿ, ಶಿಕ್ಷಣದಲ್ಲಿ ಸರಿಯಾದ ಪಠ್ಯವಿಷಯ, ಉತ್ತಮ ಬೋಧನಾ ರೀತಿ ಹಾಗೂ ಮೌಲ್ಯಗಳು ಒಳಗೊಂಡಾಗ ಅದು ನಿಜವಾದ ಶಿಕ್ಷಣವಾಗುತ್ತದೆ ಎಂದು ಹೇಳಿದರು.
ಮಂಗಳೂರು ದಕ್ಷಿಣ ವಿಧಾನ ಸಭೆಯ ಶಾಸಕ ಸನ್ಮಾನ್ಯ ವೇದವ್ಯಾಸ್ ಕಾಮತ್ ತಮ್ಮ ಸಂದೇಶ ನೀಡಿ ಈ ಸಂಸ್ಥೆ ನೀಡಿದ ಕೊಡುಗೆಯನ್ನು ಕೊಂಡಾಡಿದರು. ಕರ್ನಾಲ್‌ನ ಸಂತ ತೆರೆಸಾ ಹಾಯರ್ ಸೆಕೆಂಡರಿ ಶಾಲೆಯ ಹಿರಿಯ ವಿದ್ಯಾರ್ಥಿ ಅಲ್ಕಾ ಭುಟಾನಿ ಅವರು ಬೆಥನಿ ಶಿಕ್ಷಣ ಸಂಸ್ಥೆಯು ತಮ್ಮ ಜೀವನದಲ್ಲಿ ಬೀರಿದ ಪ್ರಭಾವವನ್ನು ಹಂಚಿಕೊಂಡರು. ದಕ್ಷಿಣ ಕನ್ನಡ ಪದವಿಪೂರ್ವ ಕಾಲೇಜುಗಳ ಪ್ರಾಂಶುಪಾಲರ ಸಂಘದ ಕಾರ್ಯದರ್ಶಿ ಯೂಸುಫ್ ವಿಟ್ಲ ಶಿಕ್ಷಣ ಇಲಾಖೆಯ ಪರವಾಗಿ ಶುಭ ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಬೆಥನಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ವಂ. ಸಿ ರೋಸ್ ಸೆಲಿನ್ ಬಿ ಎಸ್ ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ, ಈ ಸಂಸ್ಥೆಯನ್ನು ಮುನ್ನಡೆಸಿದ ಎಲ್ಲಾ ಭಗಿನಿಯರನ್ನು, ಹಾಗೂ ಇದರ ಬೆಳವಣಿಗೆಯಲ್ಲಿ ಸಹಕರಿಸಿದ ಎಲ್ಲರನ್ನೂ ಸ್ಮರಿಸಿ ಕೃತಜ್ಞತೆಯನ್ನು ಸಲ್ಲಿಸಿದರು ಹಾಗೆಯೇ ಈ ಅಮೃತಮಹೋತ್ಸವ ವರ್ಷ ಆಚರಣೆ ಈ ಮೂಲಕ ಮುಕ್ತಾಯವಾಯಿತು ಎಂದು ಘೋಷಿಸಿದರು.
ವೇದಿಕೆಯ ಮೇಲೆ ಬರೇಲಿ ಧರ್ಮಕ್ಷೇತ್ರದ ಧರ್ಮಾಧ್ಯಕ್ಷ ಅತೀ ವಂದನೀಯ ಡಾ. ಇಗ್ನೇಷಿಯಸ್ ಡಿ ಸೋಜಾ, ಸಿಮ್ಲಾ – ಚಂಡೀಗಡ ಧರ್ಮಕ್ಷೇತ್ರದ ಧರ್ಮಾಧ್ಯಕ್ಷ ಅತೀ ವಂದನೀಯ ಡಾ. ಇಗ್ನೇಷಿಯಸ್ ಮಸ್ಕರೆನ್ಹಾಸ್, ಬೆಂದೂರು ಧರ್ಮಕೇಂದ್ರದ ಪ್ರಧಾನಗುರು ವಂ. ಫಾ ವಿನ್ಸೆಂಟ್ ಮೊಂತೇರೊ, ಸಿ. ಲಿನೆಟ್ ಎ.ಸಿ, ವಂ. ಫಾ. ಮೆಲ್ವಿನ್ ಪಿಂಟೊ ಎಸ್ ಜೆ. ಉಪಸ್ಥಿತರಿದ್ದರು. ಬೆಥನಿ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಸಿ. ಸಂಧ್ಯಾ ಬಿ. ಎಸ್ ಸ್ವಾಗತಿಸಿದರು ಸಿ. ಫಿಲೊಮೆನ್ ಸಲ್ಡಾನ್ಹಾ ಬಿ ಎಸ್ ವಂದಿಸಿದರು. ಶಿಕ್ಷಕರಾದ ಜಾಸ್ಮಿನ್ ಮೊರೆರಾ ಮತ್ತು ರೀನಾ ಸಲ್ಡಾನ್ಹಾ ಕಾರ್ಯಕ್ರಮ ನಿರೂಪಣೆ ಮಾಡಿದರು. ತರುವಾಯ ವಿದ್ಯಾರ್ಥಿಗಳಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ಜರಗಿತು.
ಸಭಾಕಾರ್ಯಕ್ರಮಕ್ಕೆ ಮೊದಲು, ಸಂಜೆ ೩.೩೦ಕ್ಕೆ ಬೆಂದೂರು ಸಂತ ಸೆಬಾಸ್ಟಿಯನ್ ದೇವಾಲಯದಲ್ಲಿ ಕೃತಜ್ಞತಾ ಬಲಿಪೂಜೆಯನ್ನು ಅರ್ಪಿಸಲಾಯಿತು. ಬೆಂಗಳೂರಿನ ಧರ್ಮಪ್ರಾಂತ್ಯದ ಮಹಾಧರ್ಮಗರು, ಅತೀ ವಂದನೀಯ ಡಾ. ಪೀಟರ್ ಮಚಾದೊ ಇವರ ನೇತ್ರತ್ವದಲ್ಲಿ ನಡೆದ ಈ ಬಲಿಪೂಜೆಯಲ್ಲಿ ಕ್ರಮವಾಗಿ ಮಂಗಳೂರು, ಉಡುಪಿ, ಬರೇಲಿ ಮತ್ತು ಸಿಮ್ಲಾ-ಚಂಡೀಗಡ ಧರ್ಮಕ್ಷೇತ್ರದ ಧರ್ಮಾಧ್ಯಕ್ಷರಾದ ಅತೀ ವಂ. ಡಾ. ಪೀಟರ್ ಪಾವ್ಲ್ ಸಲ್ಡನ್ಹಾ, ಅತೀ ವಂ. ಡಾ. ಜೆರಾಲ್ಡ್ ಲೋಬೊ, ಅತೀ ವಂದನೀಯ ಡಾ. ಇಗ್ನೇಷಿಯಸ್ ಡಿ ಸೋಜಾ, ಅತೀ ವಂದನೀಯ ಡಾ. ಇಗ್ನೇಷಿಯಸ್ ಮಸ್ಕರೆನ್ಹಾಸ್, ಹಲವು ಯಾಜಕರು, ಬೆಥನಿ ಭಗಿನಿಯರು, ಶಿಕ್ಷಕ-ರಕ್ಷಕ-ವಿದ್ಯಾರ್ಥಿಗಳು, ಹಿರಿಯ ವಿದ್ಯಾರ್ಥಿಗಳು, ಹಿತೈಷಿಗಳು ಹಾಗೂ ಸ್ಥಳೀಯ ಭಕ್ತಾಧಿಗಳು ಭಾಗವಹಿಸಿದರು. ತಮ್ಮ ಪ್ರವಚನೆಯಲ್ಲಿ ಅತೀ ವಂ. ಡಾ. ಪೀಟರ್ ಪಾವ್ಲ್ ಸಲ್ಡನ್ಹಾ, ಅವರು ಶಿಕ್ಷಣದ ಮೂಲಕ ಮಕ್ಕಳನ್ನು ಸರಿಯಾದ ದಾರಿಯಲ್ಲಿ ಮುನ್ನಡೆಸುವ ಶಿಕ್ಷಕರ ಹಾಗೂ ಶಿಕ್ಷಣ ಸಂಸ್ಥೆಗಳ ಜವಾಬ್ದಾರಿಯ ಬಗ್ಗೆ ಗಮನ ಸೆಳೆದರು. ಬಲಿಪೂಜೆಯ ಬಳಿಕ ಬೆಥನಿ ಶಿಕ್ಷಣ ಸಂಸ್ಥೆಯ ಸ್ಥಾಪಕ, ದೇವರ ಸೇವಕ ಮೊ| ರೇಮಂಡರ ಸಮಾಧಿಗೆ ಪುಷ್ಪಾರ್ಚನೆಗೈದು ಪ್ರಾರ್ಥನೆಯನ್ನು ಸಲ್ಲಿಸಲಾಯಿತು.