News Kannada
Thursday, February 22 2024
ಕ್ಯಾಂಪಸ್

ಉಜಿರೆ: ವಿಶ್ವ ಮಾನವತೆಯೊಂದಿಗೆ ರಚನಾತ್ಮಕ ಬೆಳವಣಿಗೆ ಅನಿವಾರ್ಯ ಎಂದ ಡಾ.ಡಿ.ವೀರೇಂದ್ರ ಹೆಗ್ಗಡೆ

Dr. D. Veerendra Heggade says that constructive growth is essential with universal humanity
Photo Credit : By Author

ಉಜಿರೆ: ವಿಶ್ವಮಾನವತೆಯ ತತ್ವಕ್ಕನುಗುಣವಾಗಿ ಮುಂದಿನ 25 ವರ್ಷಗಳ ಅವಧಿಯಲ್ಲಿ ಭಾರತದ ರಚನಾತ್ಮಕ ಬೆಳವಣಿಗೆಗಾಗಿ ಯೋಜಿಸಿ ಶ್ರಮಿಸುವುದರ ಕಡೆಗೆ ಯುವಸಮೂಹ ಆಲೋಚಿಸಬೇಕು ಎಂದು ರಾಜ್ಯಸಭೆ ಸದಸ್ಯ, ಆಜಾದಿ ಕಾ ಅಮೃತ ಮಹೋತ್ಸವ ರಾಷ್ಟ್ರೀಯ ಸಮಿತಿ ಸದಸ್ಯರಾದ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರು ಅಭಿಪ್ರಾಯಪಟ್ಟರು.

ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂಭ್ರಮದ ಮಧ್ಯೆ ಉಜಿರೆಯ ಡಿ. ರತ್ನವರ್ಮ ಹೆಗ್ಗಡೆ ಕ್ರೀಡಾಂಗಣದಲ್ಲಿ ಎಸ್.ಡಿ.ಎಂ ಶಿಕ್ಷಣ ಸಂಸ್ಥೆಯ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು, ಅಧ್ಯಾಪಕರು, ಅಧ್ಯಾಪಕೇತರ ಸಿಬ್ಬಂದಿ ಮತ್ತು ವಿವಿಧ ಕ್ಷೇತ್ರಗಳ ನೂರಕ್ಕೂ ಹೆಚ್ಚು ಗಣ್ಯಮಾನ್ಯರ ಸಮಕ್ಷಮದಲ್ಲಿ ಅವರು ಸ್ವಾತಂತ್ರ್ಯೋತ್ಸವದ ಧ್ವಜಾರೋಹಣ ನೆರವೇರಿಸಿ ಮಾತನಾಡಿ ಅಮೃತ ಮಹೋತ್ಸವ ಸಂದೇಶ ನೀಡಿದರು.

ಸ್ವಾತಂತ್ರ್ಯಾನಂತರದ 75 ವರ್ಷಗಳ ಅವಧಿ ಮಹತ್ವಪೂರ್ಣ. ಈ ಅವಧಿಯನ್ನು ಪೂರೈಸಿದ ಈ ಸಂದರ್ಭವನ್ನು ದೇಶದಾದ್ಯಂತ ಅಮೃತವರ್ಷವನ್ನಾಗಿ ಆಚರಿಸಲಾಗುತ್ತಿದೆ. ಇನ್ನೂ 25 ವರ್ಷಗಳ ಅವಧಿ ಕ್ರಮಿಸಿದರೆ ಭಾರತವು ಸ್ವಾತಂತ್ರ್ಯ ಪಡೆದು ಒಂದು ಶತಮಾನ ಕಳೆಯುತ್ತದೆ. ಮುಂಬರುವ 25 ವರ್ಷಗಳ ಅವಧಿಯನ್ನು ಸಮಗ್ರ ಬೆಳವಣಿಗೆಯ ನೆಲೆಯಲ್ಲಿ ಅರ್ಥಪೂರ್ಣವಾಗಿ ಬಳಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಯುವಸಮೂಹದ ಪಾತ್ರ ಮೌಲಿಕವಾದುದು ಎಂದು ಹೇಳಿದರು.

ಸ್ವಾತಂತ್ರ್ಯಪೂರ್ವ ಅವಧಿಯಲ್ಲಿ ಅರಸರ ಆಳ್ವಿಕೆ ಇತ್ತು. ವಿವಿಧ ರಾಜ್ಯಗಳಲ್ಲಿ ವಿವಿಧ ಭಾಷೆಗಳವರು ಈ ಅರಸರ ಆಳ್ವಿಕೆಯ ವ್ಯಾಪ್ತಿಯಲ್ಲಿದ್ದರು. ಬ್ರಿಟಿಷರು ವಿವಿಧ ಭಾಷೆಗಳೊಂದಿಗೆ ಗುರುತಿಸಿಕೊಂಡಿದ್ದ ಭಾರತದ ಪ್ರದೇಶಗಳನ್ನು ಒಡೆದು ಆಳಿದರು. ಇಂಥ ಸಂದರ್ಭದಲ್ಲಿ ಮಹಾತ್ಮಾ ಗಾಂಧೀಜಿ ಈ ದೇಶದ ವಿಶಾಲ ಜನಸಂಖ್ಯಾ ಸಂಪನ್ಮೂಲವನ್ನು ಒಗ್ಗೂಡಿಸಿ ಅಹಿಂಸಾತ್ಮಕವಾದ ಸ್ವಾತಂತ್ರ್ಯ ಹೋರಾಟ ರೂಪಿಸಿ ಯಶಸ್ಸು ಕಂಡರು. ಈ ಮೂಲಕ ಬ್ರಿಟಿಷರಿಂದ ಭಾರತವನ್ನು ವಿಮುಕ್ತಗೊಳಿಸಿದರು. ಇದು ಈಗಲೂ ಅಹಿಂಸಾತ್ಮಕ ಹೋರಾಟದ ಶ್ರೇಷ್ಠ ಮಾದರಿ ಎಂದು ಅವರು ಬಣ್ಣಿಸಿದರು.

ಭಾರತದಲ್ಲಿ ಈಗ ಆಮೂಲಾಗ್ರ ಬದಲಾವಣೆಗಳಾಗಿವೆ. ಕೃಷಿಕನ ಮಗ ವೈದ್ಯನಾಗಬಹುದು. ಕೂಲಿಕಾರನ ಮಗ ಇಂಜಿನಿಯರ್ ಆಗಬಹುದು. ಮಕ್ಕಳು ಮಹತ್ವಾಕಾಂಕ್ಷೆಯೊಂದಿಗೆ ಹೆಜ್ಜೆಯಿರಿಸಿ ಉಜ್ವಲ ಭವಿಷ್ಯದ ಕನಸುಗಳನ್ನು ಸಾಕಾರಗೊಳಿಸಿಕೊಳ್ಳಬಹುದಾದ ವ್ಯಾಪಕ ಅವಕಾಶಗಳು ಲಭ್ಯವಾಗುತ್ತಿವೆ. ದೇಶದಾದ್ಯಂತ ವಿವಿಧ ಶೈಕ್ಷಣಿಕ ಸಂಸ್ಥೆಗಳು ಪ್ರತಿಭಾನ್ವಿತರಿಗೆ ಬೇಕಾದ ಪೂರಕ ಸ್ಪರ್ಧಾತ್ಮಕ ವಾತಾವರಣವನ್ನು ಕಲ್ಪಿಸಿಕೊಡುತ್ತಿವೆ. ಇಂಥ ಅವಕಾಶಗಳನ್ನು ವಿದ್ಯಾರ್ಥಿಸಮೂಹ ಬಳಸಿಕೊಂಡು ದೇಶದ ಹಿರಿಮೆ ಹೆಚ್ಚಿಸುವ ಪ್ರಗತಿಯ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ನುಡಿದರು.

ದೇಶದ ಪ್ರಜೆಗಳಾಗಿದ್ದುಕೊಂಡು ಪ್ರಗತಿಯ ಮುನ್ನಡೆ ಸಾಧಿಸುವುದಕ್ಕೆ ಬೇಕಾದ ವಾತಾವರಣವನ್ನು ಯುವಸಮೂಹ ನಿರ್ಮಿಸಬೇಕು. ಈ ಮುನ್ನಡೆಯು ವಿಶ್ವಮಾನವತೆಯ ತತ್ವದೊಂದಿಗೆ ಸಮೀಕರಿಸಲ್ಪಡಬೇಕು. ಪ್ರಗತಿ ಮತ್ತು ವಿಶ್ವಮಾನವತ್ವ ಇವೆರಡೂ ಒಟ್ಟೊಟ್ಟಿಗೆ ಕ್ರಮಿಸುವ ಹೊಸದೊಂದು ಮಾದರಿಯನ್ನು ದೇಶದ ಯುವ ಸಮೂಹ ಜಗತ್ತಿಗೆ ಕೊಡುಗೆಯಾಗಿ ನೀಡಬೇಕು ಎಂದು ಡಾ.ಡಿ.ವೀರೇಂದ್ರ ಹೆಗ್ಗಡೆ ಹೇಳಿದರು.

ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿಗಳಾದ ಡಿ. ಹರ್ಷೇಂದ್ರಕುಮಾರ್, ಡಾ. ಸತೀಶ್ಚಂದ್ರ ಎಸ್, ಶ್ರೀಮತಿ ಸುಪ್ರಿಯಾ ಹರ್ಷೇಂದ್ರಕುಮಾರ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಗಮನ ಸೆಳೆದ ಧ್ವಜ ಹಸ್ತಾಂತರ: ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಸಾಂಕೇತಿಕವಾಗಿ ಧ್ಜಜ ಹಸ್ತಾಂತರಿಸಿ ನಾಗರಿಕತ್ವದ ಹಿರಿಮೆಯನ್ನು ಪರಿಚಯಿಸುವ ಕಾರ್ಯಕ್ರಮ ಗಮನ ಸೆಳೆಯಿತು. ಡಾ.ಡಿ.ವೀರೇಂದ್ರ ಹೆಗ್ಗಡೆ ಅವರು ಪ್ರಾಥಮಿಕ ಶಾಲಾ ವಿದ್ಯಾರ್ಥಿನಿಯರಿಗೆ ಧ್ವಜ ಹಸ್ತಾಂತರಿಸಿದರು. ಇದೇ ಸಂದರ್ಭದಲ್ಲಿ ವೇದಿಕೆಯ ಮುಂಭಾಗದಲ್ಲಿ ಉಜಿರೆಯ ವಿವಿಧ ಕ್ಷೇತ್ರಗಳ 75 ಗಣ್ಯಮಾನ್ಯರು ಎಸ್.ಡಿ.ಎಂ ಶಿಕ್ಷಣ ಸಂಸ್ಥೆಯ ಪ್ರಾಥಮಿಕ ಶಾಲಾ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಧ್ವಜ ಹಸ್ತಾಂತರಿಸಿದರು.

ಹಿರಿಯರಿಂದ ನಾಗರಿಕ ಪ್ರಜ್ಞೆಯ ಸಂದೇಶ ಮತ್ತು ದೇಶದ ಬೆಳವಣಿಗೆಯ ಹೆಜ್ಜೆಗಳಲ್ಲಿ ಸಕ್ರಿಯ ಸಹಭಾಗಿತ್ವದ ದೃಢೀಕರಣದ ಹೊಣೆಗಾರಿಕೆಯನ್ನು ದಾಟಿಸುವುದರ ಸಂಕೇತವಾಗಿ ಈ ಧ್ವಜ ಹಸ್ತಾಂತರ ಕಾರ್ಯಕ್ರಮ ಮನಸೆಳೆಯಿತು.

ಎಸ್.ಡಿ.ಎಂ.ನ ಪದವಿಪೂರ್ವ ರೆಸಿಡೆನ್ಷಿಯಲ್ ವಿದ್ಯಾರ್ಥಿಗಳು ಸಾರೇ ಜಹಾಂಸೇ ಅಚ್ಛಾ, ವೈಷ್ಣವ ಜನತೋ ಗೀತೆಗಳನ್ನು ಹಾಡಿ ನೃತ್ಯಪ್ರದರ್ಶಿಸಿದರು. ಎಸ್.ಡಿ.ಎಂ ಕಲಾಕೇಂದ್ರದ ವಿದ್ಯಾರ್ಥಿಗಳು ‘ವಂದೇ ಮಾತರಂ’ ಗೀತೆಗೆ ನೃತ್ಯವನ್ನು ಪ್ರದರ್ಶಿಸಿದರು. ಎಸ್.ಡಿ.ಎಂ.ನ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳೂ ಸೇರಿದಂತೆ ಕ್ರೀಡಾಂಗಣದಲ್ಲಿದ್ದ ವಿದ್ಯಾರ್ಥಿಸಮೂಹದ ಕೈಯಲ್ಲಿದ್ದ ಧ್ವಜಗಳು ಸ್ವಾತಂತ್ರ್ಯದ ಅಮೃತಮಹೋತ್ಸವದ ಸಂಭ್ರಮಕ್ಕೆ ಸಾಕ್ಷಿ ನುಡಿಯುತ್ತಿದ್ದವು.

ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಕಾರು ಸಂಗ್ರಹಾಲಯದಿಂದ ತಂದು, ಪ್ರದರ್ಶನಕ್ಕಿಡಲಾಗಿದ್ದ ಪಾಂಡಿಚೇರಿಯಲ್ಲಿ ಮಹಾತ್ಮ ಗಾಂಧೀಜಿಯವರು ಬಳಸಿದ್ದ ಕಾರು ಉಜಿರೆಯ ಡಿ. ರತ್ನವರ್ಮ ಹೆಗ್ಗಡೆ ಕ್ರೀಡಾಂಗಣದಲ್ಲಿ ಆಕರ್ಷಣೆಯ ಕೇಂದ್ರವಾಗಿತ್ತು. ಕಾರ್ಯಕ್ರಮವನ್ನು ಉಜಿರೆ ಎಸ್.ಡಿ.ಎಂ ಪದವಿಪೂರ್ವ ಕಾಲೇಜಿನ ಸುನಿಲ್ ಪಂಡಿತ್ ಅವರು ನಿರೂಪಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು