
ಬೆಂಗಳೂರು: ಲೋಕಸಭೆ ಚುನಾವಣೆಯಲ್ಲಿ ಭರ್ಜರಿ ಜಯ ಸಾಧಿಸಿದ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಗೆಲುವಿಗೆ ಶುಭಕೋರಿ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ರಾಬರ್ಟ್ ಸೆಟ್ ನಲ್ಲಿ ಕೇಕ್ ಕಟ್ ಮಾಡಿ ಖುಷಿ ಹಂಚಿಕೊಂಡಿದ್ದಾರೆ.
ಈ ಸಂಭ್ರಮದ ಕ್ಷಣಗಳನ್ನು ತರುಣ್ ಸುಧೀರ್ ಅವರು ಟ್ವೀಟ್ ಮಾಡಿದ್ದಾರೆ.
ಫೋಟೋ ಜತೆ ‘ಮಂಡ್ಯ ಜನತೆಗೆ ಗೊತ್ತು, ಯಾವುದು ಸರಿ ಯಾವುದು ತಪ್ಪು. ಸ್ವಾಭಿಮಾನಕ್ಕೆ ಇದೆ ತಾಕತ್ತು, ಅದಕ್ಕೆ ಗೆದ್ದು ಬಂತು ಜೋಡೆತ್ತು. ಶುಭಾಶಯಗಳು ಸುಮಲತಾ ಅಮ್ಮ. ನಿಮ್ಮ ಗೆಲುವು ಚಿತ್ರರಂಗದ ಹೆಮ್ಮೆ ಎಂದು ಬರೆದುಕೊಂಡಿದ್ದಾರೆ.
ಮಂಡ್ಯ ಪಕ್ಷೇತರ ಅಭ್ಯರ್ಥಿ ಸುಮಲತಾ ಪರ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ರಾಕಿಂಗ್ ಸ್ಟಾರ್ ಯಶ್ ಅವರು ಅಬ್ಬರದ ಪ್ರಚಾರವನ್ನು ಕೈಗೊಂಡು ಸುಮಲತಾ ಅವರಿಗೆ ಮನೆ ಮಕ್ಕಳಂತೆ ಬೆಂಬಲಿಸಿದರು.
ಈ ಇಬ್ಬರು ನಟರ ವಿರುದ್ಧ ಜೆಡಿಎಸ್ ನಾಯಕರು ವೈಯ್ಯಕ್ತಿಕವಾಗಿ ಟಾರ್ಗೇಟ್ ಮಾಡಿ ಹೇಳಿಕೆಯನ್ನು ನೀಡಿದ್ದರು. ದರೆ ಭಾರೀ ಪೈಪೋಟಿಯಲ್ಲಿ ಸುಮಲತಾ ಅವರು ಸಿಎಂ ಪುತ್ರ ನಿಖಿಲ್ ಕುಮಾರಸ್ವಾಮಿ ಅವರ ವಿರುದ್ಧ 1 ಲಕ್ಷ 25 ಸಾವಿರ ಮತಗಳ ಅಂತರದಲ್ಲಿ ಜಯವನ್ನು ಪಡೆದರು.