
ಬೆಂಗಳೂರು: ಸ್ಯಾಂಡಲ್ ವುಡ್ ನ ಚಾಲೆಂಜಿಂಗ್ ಸ್ಟಾರ್ ದರ್ಶನ್ ತೂಗುದೀಪ ಇದೇ 16ರಂದು 41ವರ್ಷದ ಹುಟ್ಟು ಹಬ್ಬವನ್ನು ಆಚರಿಸುತ್ತಿದ್ದು ಈ ಬಾರಿ ದಾಸ ತಮ್ಮ ಅಭಿಮಾನಿಗಳ ಬಳಿ ಮನವಿಯನ್ನು ಮಾಡಿದ್ದಾರೆ.
ದರ್ಶನ್ ಹುಟ್ಟುಹಬ್ಬಕ್ಕೆ ಶುಭಕೋರಲು ರಾಜ್ಯದ ವಿವಿಧ ಕಡೆಯಿಂದ ಅಭಿಮಾನಿಗಳು ದರ್ಶನ್ ಮನೆ ಬಳಿ ಬಂದು ಕಾಯುತ್ತಾರೆ. ಈ ವೇಳೆ ಸಾವಿರಾರು ಮಂದಿ ದರ್ಶನ್ ಕಾಣಲು ಮನೆಯ ಕಾಂಪೌಂಡ್ ಗೋಡೆ ಹತ್ತಿ ಒಳ ಬರಲು ಸಾಹಸ ಪಡುತ್ತಾರೆ. ಈ ಘಟನೆಯಿಂದ ನೆರೆಮನೆಯವರಿಗೆ ತೊಂದರೆ ಆಗುತ್ತಿದೆ. ಅಲ್ಲದೇ ಅಭಿಮಾನಿಗಳ ಜೀವಕ್ಕೂ ಹಾನಿಯಾಗುವ ಸಂಭವ ಹೆಚ್ಚಿದ್ದರಿಂದ ದರ್ಶನ್ ಅವರು ಅಭಿಮಾನಿಗಳ ಬಳಿ ವಿಶೇಷ ಮನವಿಯನ್ನು ಮಾಡಿದ್ದಾರೆ.
ದರ್ಶನ್ ಟ್ವೀಟ್ ಏನಿದೆ: ನಲ್ಮೆಯ ಅಭಿಮಾನಿಗಳಲ್ಲಿ, ನಿಮ್ಮ ದಾಸ ದರ್ಶನ್ ತೂಗುದೀಪ ಮಾಡುವ ವಿನಂತಿ. ನನ್ನ ಹುಟ್ಟು ಹಬ್ಬದ ದಿನ ನೀವೆಲ್ಲ ದೂರ ದೂರದ ಊರುಗಳಿಂದ ಬಂದು ನನಗೆ ಶುಭಾಶಯ ಕೋರಿ ನಿಮ್ಮದೇ ಹುಟ್ಟು ಹಬ್ಬ ಎನ್ನುವಂತೆ ಸಂಭ್ರಮಿಸುದು ನನ್ನ ಯಾವುದೋ ಜನ್ಮದ ಪುಣ್ಯ ಫಲವೆಂದೇ ಭಾವಿಸುತ್ತೇನೆ. ಈ ನಿಮ್ಮ ಪ್ರೀತಿಗೆ ನಾನು ಚಿರಋಣಿ. ನಿಮಗೆಲ್ಲ ತುಂಬು ಹೃದಯದ ಧನ್ಯವಾದ.
ಈ ಸಂಭ್ರಮಾಚರಣೆಯ ಸಂದರ್ಭದಲ್ಲಿ ದಯವಿಟ್ಟು ನೀವೆಲ್ಲರೂ ಅಕ್ಕಪಕ್ಕದ ಮನೆಯ ನಿವಾಸಿಗಳಿಗೆ ತೊಂದರೆ ಆಗದಂತೆ ಶಾಂತಿ ಹಾಗೂ ಶಿಸ್ತಿನಿಂದ ವರ್ತಿಸಬೇಕಾಗಿ ನಿಮ್ಮೆಲ್ಲರಲ್ಲಿ ಕೈ ಮುಗಿದು ಕೇಳಿಕೊಳ್ಳುತ್ತೇನೆ.
ದಯವಿಟ್ಟು ಯಾರೂ ನನ್ನ ಅಕ್ಕಪಕ್ಕದ ಮನೆಯ ಕಾಂಪೌಂಡ್ ಹತ್ತುವುದು, ಒಳಪ್ರವೇಶಿಸುವುದು, ಹೂಕುಂಡಗಳನ್ನು ಬೀಳಿಸುವುದು, ಅವರ ಸ್ವತ್ತುಗಳಿಗೆ ಹಾನಿ ಮಾಡುವುದು ಇಂತಹ ಅನುಚಿತ ವರ್ತನೆ ತೋರಬಾರದು. ನನ್ನ ಬಗ್ಗೆ ಇಷ್ಟೆಲ್ಲಾ ಪ್ರೀತಿ ಅಭಿಮಾನ ಇಟ್ಟಿರುವ ನೀವೆಲ್ಲ ನನ್ನ ಈ ಕೋರಿಕೆಯನ್ನು ನಡೆಸಿಕೊಡುವಿರಾಗಿ ನಂಬಿರುತ್ತೇನೆ ಹಾಗೂ ಸಂಘದ ಕಾರ್ಯಕರ್ತರಿಗೆ ಮತ್ತು ಪೊಲೀಸ್ ಸಿಬ್ಬಂದಿ ವರ್ಗದವರಿಗೆ ಸಹಕರಿಸಬೇಕಾಗಿ ವಿನಂತಿ.
ದರ್ಶನ್ ಈ ಮೂಲಕ ಅಭಿಮಾನಿಗಳ ಬಳಿ ವಿಶೇಷ ಮನವಿಯನ್ನು ಮಾಡಿದ್ದಾರೆ.