ಕಾರ್ವಾಲ್ ಕುಟುಂಬ ಮತ್ತು ಮಾಂಡ್ ಸೊಭಾಣ್ ನೀಡುವ 17ನೇ ಕಲಾಕಾರ್ ಪುರಸ್ಕಾರಕ್ಕೆ ಪ್ರಸಿದ್ಧ ಗಾಯಕ ಹಾಗೂ ಸೋನಿ ಟಿವಿಯ ಇಂಡಿಯನ್ ಐಡಲ್ ರಿಯಾಲಿಟಿ ಶೋ ಇದರ ಅಂತಿಮ ಹಂತಕ್ಕೆ ತಲುಪಿದ (ಟಾಪ್ 5) ನಿಹಾಲ್ ಹ್ಯಾನ್ಸನ್ ತಾವ್ರೊ, ಅಲಂಗಾರ್ ಇವರನ್ನು ಆಯ್ಕೆ ಮಾಡಲಾಗಿದೆ.
2021 ನವೆಂಬರ್ ೦7 ರಂದು ಭಾನುವಾರ ಸಂಜೆ ೬.೦೦ ಗಂಟೆಗೆ ಶಕ್ತಿನಗರದ ಕಲಾಂಗಣದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಸಿದ್ಧ ಕನ್ನಡ ಸಾಹಿತಿ ಮತ್ತು ಗೀತರಚನೆಗಾರ ಶ್ರೀ ಜಯಂತ ಕಾಯ್ಕಿಣಿ ಪುರಸ್ಕಾರ ಪ್ರದಾನ ಮಾಡುವರು. ಈ ಪುರಸ್ಕಾರವು ರು 25,000/- ನಗದು, ಸ್ಮರಣಿಕೆ, ಶಾಲು, ಫಲ-ಪುಷ್ಪ ಮತ್ತು ಸನ್ಮಾನ ಪತ್ರ ಒಳಗೊಂಡಿದೆ.
ನಿಹಾಲ್ ತಾವ್ರೊ ಗಾಯನ ಕ್ಷೇತ್ರದ ಒಂದು ಅಧ್ಭುತ ಪ್ರತಿಭೆಯಾಗಿದ್ದು ತನ್ನ ಮಧುರ ಕಂಠದಿಂದ ನೂರಾರು ಹಾಡುಗಳಿಗೆ ಜೀವ ತುಂಬಿದ್ದಾರೆ. 25 ಧ್ವನಿಸುರುಳಿಗಳು, 12 ಸಿನೆಮಾಗಳು, ೬ ಟಿವಿ ರಿಯಾಲಿಟಿ ಶೋ-ಗಳು, 15 ಸಂಗೀತ ರಸಮಂಜರಿಗಳು, ೬ ಧಾರವಾಹಿಗಳ ಶೀರ್ಷಕ ಗೀತೆಗಳು ಮತ್ತು 200ಕ್ಕೂ ಮಿಕ್ಕಿ ಇತರೆ ಕಾರ್ಯಕ್ರಮಗಳಲ್ಲಿ ತಮ್ಮ ಗಾನಸುಧೆ ಹರಿಸಿದ್ದಾರೆ. ಅವರು ದನಿಗೂಡಿಸಿದ ಯುಟ್ಯೂಬ್ ಹಾಡುಗಳನ್ನು ಲಕ್ಷಾಂತರ ಜನ ವೀಕ್ಷಿಸಿದ್ದಾರೆ. ಈ ಸಾಧನೆಗಳಿಗೆ ಮುಕುಟಮಣಿಯಾಗಿ ಸೋನಿ ಟಿವಿಯ 12 ನೇ ಆವೃತ್ತಿಯ ಇಂಡಿಯನ್ ಐಡಲ್ ಸ್ಪರ್ಧೆಯಲ್ಲಿ ಭಾಗವಹಿಸಿ ಅಂತಿಮ ಸುತ್ತಿಗೆ ತಲುಪಿ ೫ನೇ ಸ್ಥಾನ ಪಡೆದರೂ ಲಕ್ಷಾಂತರ ಜನರ ಅಭಿಮಾನ ಗಳಿಸಿದ್ದಾರೆ. 12 ಹರೆಯದ ಸಣ್ಣ ಪ್ರಾಯದಲ್ಲೇ ಗಾಯನ ಕ್ಷೇತ್ರದಲ್ಲಿ ನಿಹಾಲ್ ಅವರ ಸಾಧನೆಯನ್ನು ಗುರುತಿಸಿ ಈ ಗೌರವ ನೀಡಲಾಗುವುದು.
ನಂತರ ತಿಂಗಳ ವೇದಿಕೆ ಸರಣಿಯ ೨೩೯ ನೇ ಕಾರ್ಯಕ್ರಮವಾಗಿ ಮಾಂಡ್ ನಾಟಕ ತಂಡದಿಂದ ಶೇಕ್ಸ್ ಪಿಯರ್ ರಚಿತ `ಎ ಮಿಡ್ ಸಮ್ಮರ್ ನೈಟ್ಸ್ ಡ್ರೀಮ್’ ಪ್ರದರ್ಶನಗೊಳ್ಳಲಿದೆ. ಇದನ್ನು ಅರುಣ್ ರಾಜ್ ರಾಡ್ರಿಗಸ್ ಕೊಂಕಣಿಗೆ ಅನುವಾದಿಸಿದ್ದು, ವಿದ್ದು ಉಚ್ಚಿಲ್ ನಿರ್ದೇಶಿಸಿದ್ದಾರೆ. ಸರ್ವರಿಗೂ ಉಚಿತ ಪ್ರವೇಶವಿರಲಿದೆ.
17ನೇ ಕಲಾಕಾರ್ ಪುರಸ್ಕಾರಕ್ಕೆ ನಿಹಾಲ್ ತಾವ್ರೊ ಆಯ್ಕೆ

Photo Credit :
ಹನಿ ಹನಿ ಕೂಡಿ ಹಳ್ಳ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.