ಅದು ಐವತ್ತರ ದಶಕದ ಕಾಲ. ಆಗೊಮ್ಮೆ ಆಂಗ್ಲ ಪತ್ರಿಕೆಯೊಂದು ಭಾರತೀಯ ಚಿತ್ರರಂಗದ ಅತ್ಯಂತ ಸುಂದರನಟ ಯಾರೆಂದು ಒಂದು ಸಮೀಕ್ಷೆಯನ್ನೇ ನಡೆಸಿತ್ತು. ಆಗ ಶೇಕಡ 95 ರಷ್ಟು ಚಿತ್ರರಸಿಕರು ಅಂದಿನ ಬಾಲಿವುಡ್ ನ ಖ್ಯಾತನಟ ದೇವಾನಂದ್ ರನ್ನು ಆಯ್ಕೆ ಮಾಡಿದ್ದರು. ಅಂಥ ಸ್ಫುರದ್ರೂಪಿ ನಟ ದೇವಾನಂದ್. ಇಡೀ ಭಾರತೀಯ ಚಿತ್ರರಂಗ ಇದುವರೆಗೂ ದೇವಾನಂದ್ ನಷ್ಟು ಚೆಲುವ ಚೆನ್ನಿಗನಾದ ಪ್ರಮಾಣಬದ್ದ ಶರೀರದ ಮತ್ತೊಬ್ಬ ಸ್ಫುರದ್ರೂಪಿ ನಟನನ್ನು ಉತ್ಪಾದಿಸಿಲ್ಲ. ಈ ಮಾತನ್ನೇ ಹಾಲಿವುಡ್ ಗೂ ಹೇಳಬಹುದು. ಅಲ್ಲೂ ಕೂಡ ನಟ ಗ್ರೆಗರಿಪೆಕ್ ಅನ್ನು ಬಿಟ್ಟರೆ ಆ ಮಟ್ಟದ ಇನ್ನೊಬ್ಬ ಸ್ಫುರದ್ರೂಪಿ ನಟ ಇಲ್ಲಿತನಕ ಸೃಷ್ಟಿಯಾಗಿಲ್ಲ. ಹೀಗೆ ದೇಶಕಂಡ ಅತ್ಯಂತ ಸುಂದರನಟನೆಂಬ ಹೆಗ್ಗಳಿಕೆಗೆ ಪಾತ್ರರಾಗಿ ಇಂಡಿಯನ್ ಗ್ರೆಗರಿಪೆಕ್ ಎಂದು ಕರೆಸಿಕೊಂಡಿದ್ದ ನಟ, ನಿರ್ದೇಶಕ, ನಿರ್ಮಾಪಕ ದೇವಾನಂದ್ ಅವರು ಭಾರತೀಯ ಚಿತ್ರರಂಗದ ಬಹುದೊಡ್ಡ ಐಕಾನ್ ಕೂಡ ಹೌದು.
ನನ್ನಲ್ಲಿ ಇವತ್ತಿಗೂ ಎಳವೆಯ ಜೀವನೋತ್ಸಾಹವೇ ತುಂಬಿ ತುಳುಕುತ್ತಿದೆ. 88ರಲ್ಲೂ ನನ್ನ ಬದುಕು 20ರ ಉತ್ಸಾಹದಂತೆಯೇ ಇದೆ. ನನ್ನ ಒಡಲಲ್ಲಿ ಇವತ್ತಿಗೂ ಸಾವಿರದಷ್ಟು ಕಥೆಗಳು ಬಿಚ್ಚಿಕೊಳ್ಳಲು ತಹತಹಿಸುತ್ತಿವೆ. ಆದರೆ ಅದನ್ನೆಲ್ಲಾ ಹೇಳಲು ಸಮಯವಿಲ್ಲ. ಏಕೆಂದರೆ ಕಾಲ ನನ್ನ ಕೈನಲ್ಲಿ ಇಲ್ಲವಲ್ಲಾ. ಪುನರ್ಜನ್ಮ ನಿಜವೇ ಇದ್ದರೆ, ನಾನು ಪುನಃ ದೇವಾನಂದ್ ಆಗಿಯೇ ಹುಟ್ಟಬೇಕೆಂಬ ಹೆಬ್ಬಯಕೆ ನನ್ನದು. ಆಗ ಉಳಿದಿದೆಲ್ಲಕ್ಕೂ ಸಮಯ ಹೊಂದಿಸಿಕೊಂಡು ಸಾಕಷ್ಟು ಪೂರ್ಣ ಮಾಡಬಹುದೇನೋ! 2011 ಸೆಪ್ಟೆಂಬರ್ 26ರಂದು ತಮ್ಮ 88ನೆಯ ಹುಟ್ಟುಹಬ್ಬ ಆಚರಿಸಿಕೊಂಡ ಸಂದರ್ಭದಲ್ಲಿ ನಟ ದೇವಾನಂದ್ ಹೇಳಿದ್ದ ಮಾತುಗಳಿವು. ಬಹುಷಃ ಅವರಿಗೆ ತಮ್ಮ ಸಾವಿನ ಮುನ್ಸೂಚನೆ ಸಿಕ್ಕಿತ್ತೋ ಏನೋ! ಆನಂತರ ಅವರು ಬದುಕಿದ್ದು ಕೇವಲ 69 ದಿನಗಳು ಮಾತ್ರ. ಕೋಟ್ಯಾನು ಕೋಟಿ ಅಭಿಮಾನಿಗಳನ್ನು ದುಃಖದ ಸಾಗರದಲ್ಲಿ ಮುಳುಗಿಸಿ ದೇವಾನಂದ್ ಅವರು ಮತ್ತೆ ಬಾರದ ಲೋಕದತ್ತ ನಡೆದೇ ಬಿಟ್ಟರು. ಲಂಡನ್ನ ಆಸ್ಪತ್ರೆಗೆ ಚಿಕಿತ್ಸೆಗೆಂದು ಹೋಗಿದ್ದ ಅವರು 2011 ಡಿಸೆಂಬರ್ 4ರ ಭಾನುವಾರ ನಸುಕಿನಲ್ಲೇ ತಾವು ತಂಗಿದ್ದ ವಾಷಿಂಗ್ಟನ್ ಮೇಘೇರ್ ಹೋಟೆಲ್ ನಲ್ಲಿ ನಿದ್ರಿಸುತ್ತಿದ್ದಂತೆಯೇ ಹೃದಯಾಘಾತದಿಂದ ನಿಧನರಾದರು.
ಕೊನೆಯುಸಿರು ಇರುವವರೆಗೂ ಸಿನಿಮಾ ಮಾಡುತ್ತಲೇ ಇರುತ್ತೇನೆ ಎಂದು ದೇವಾನಂದ್ ಅವರು ಅದೆಷ್ಟು ಬಾರಿ ಹೇಳಿದ್ದರೋ ಏನೋ. ನುಡಿದಂತೆಯೇ ನಡೆದುಬಿಟ್ಟರು. ಅವರು ಚಿತ್ರರಂಗಕ್ಕೆ ಕಾಲಿಟ್ಟ ಕಾಲದಿಂದ ಇಲ್ಲಿಯವರೆವಿಗೂ ನಿರಂತರವಾಗಿ ನಾಯಕನಟರಾಗಿಯೇ ನಟಿಸುತ್ತಾ ಬಂದು 88ರ ಇಳಿವಯಸ್ಸಿನಲ್ಲೂ 2011ರಲ್ಲಿ ಚಾರ್ಜ್ ಶೀಟ್ ಚಿತ್ರದಲ್ಲಿ ನಾಯಕನಟರಾಗಿ ಅಭಿನಯಿಸಿ ವಿಶ್ವ ವಿಕ್ರಮ ಸೃಷ್ಟಿಸಿದ್ದಾರೆ. ಅಂದ ಹಾಗೆ ದೇವಾನಂದ್ ಅವರೇ ಈ ಚಿತ್ರದ ನಿರ್ಮಾಪಕ ಮತ್ತು ನಿರ್ದೇಶಕರು. ಎವರ್ಗ್ರೀನ್ ಹೀರೋ ಅಂದರೆ ಅವರೇ ತಾನೆ? ಅವರಿಗಿಲ್ಲ ಯಾರೂ ಸರಿಸಾಟಿ. ಸೂರ್ಯಂಗೆ ಸೂರ್ಯನೇ ಸಾಟಿ ಎಂಬಂತೆ ದೇವಾನಂದ್ ಗೆ ದೇವಾನಂದೇ ಸಾಟಿ.
ಅಂದಗಾರ ದೇವಾನಂದ್ ರ ಬದುಕು ಕೂಡ ಸಿನಿಮಾದಷ್ಟೇ ಚೆಂದವಾದದ್ದು. ಒಂದು ರೀತಿ ಪ್ರೇಮಾನಂದಕರವಾದದ್ದು. ಪ್ರೇಮವೇ ತುಂಬಿದ ಮಹಾಕಾವ್ಯವದು. ಅಷ್ಟೇ ರೋಚಕವಾದದ್ದು. ರೋಮಾಂಚನಕಾರಿಯಾದದ್ದು. ದೇವಾನಂದ್ ರ ಹಿಂದೆ ಬಿದ್ದ ಸಾಮಾನ್ಯರಿರಲಿ, ತಾರಾಮಣಿಗಳೇ ಲೆಕ್ಕವಿಲ್ಲದಷ್ಟು ಮಂದಿ ಇದ್ದರು. ಅವರಲ್ಲಿ ದೇವಾನಂದರೇ ಇಷ್ಟಪಟ್ಟು ಪ್ರೇಮಿಸಿದವರೂ ಉಂಟು. ಅವರಲ್ಲಿ ಸುರಯ್ಯ, ಜೀನತ್ ಅಮಾನ್, ಮಧುಬಾಲಾ, ಗೀತಾಬಾಲಿ, ವೈಜಯಂತಿಮಾಲಾ ಹೀಗೆ ಪಟ್ಟಿ ಬೆಳೆಯುತ್ತದೆ. ಇವರುಗಳೆಲ್ಲರ ಜೊತೆ ತಾವು ಮಧುರ ಕ್ಷಣಗಳನ್ನು ಯಾವ ಮುಜುಗರವೂ ಇಲ್ಲದೆ ಯತಾವತ್ತಾಗಿ ವರ್ಣಿಸಿ ಬರೆದು ರೊಮ್ಯಾನ್ಸಿಂಗ್ ವಿತ್ ಲೈಫ್ ಎಂಬ ಆತ್ಮಚರಿತ್ರೆಯನ್ನೇ ದೇವಾನಂದ್ ಅವರು 2007ರಲ್ಲಿ ಪ್ರಕಟಿಸಿದ್ದಾರೆ. ದೇವಾನಂದ್ ರ ಪ್ರೇಮಾಯಣ ಮತ್ತು ಪ್ರಣಯಾನಂದವನ್ನು ಅವರ ಆತ್ಮಕಥೆಯಲ್ಲಿ ಕಾಣಬಹುದು. ಅವರ ಸಿನಿಮಾಗಳೂ ಅಷ್ಟೆ ಬಹುತೇಕ ಪ್ರೇಮಮಯ. ಆದರೆ ಹೀಗಿನವರಂತೆ ವಿಕೃತ ಕಾಮ-ಪ್ರೇಮ ಚೇಷ್ಟೆಗಳಿಗೆ ಅವಕಾಶವಿರುತ್ತಿರಲಿಲ್ಲ. ಪ್ರೀತಿ, ಪ್ರೇಮ, ಪ್ರಣಯಗಳೆಲ್ಲವೂ ದೇವಾನಂದರ ಚಿತ್ರಗಳಲ್ಲಿ ತುಂಬಾ ಸಂವೇದನಾಶೀಲವಾಗಿರುತ್ತಿದ್ದದ್ದು ವಿಶೇಷ.
ದೇವಾನಂದ್ ಜನಿಸಿದ್ದು 1923 ಸೆಪ್ಟೆಂಬರ್ 26ರಂದು. ಅವಿಭಜಿತ ಪಂಜಾಬ್ ರಾಜ್ಯದ ಗುರುದಾಸ್ಪುರ್ ಜಿಲ್ಲೆಯ ಶಾಕರ್ಗರ್ರ್ ತೆಹಸಿಲ್ (ಈಗ ಪಾಕಿಸ್ತಾನದಲ್ಲಿದೆ) ಎಂಬಲ್ಲಿ. ಹುಟ್ಟಾ ಸಿರಿವಂತ. ಸುಸಂಸ್ಕೃತ ಮನೆತನ. ತಂದೆ ಪಿಸೋರಿಮಲ್ ಆನಂದ್. ಅವರು ಆ ಕಾಲದಲ್ಲಿ ಖ್ಯಾತ ವಕೀಲರಾಗಿದ್ದರು. ಅಣ್ಣ ಚೇತನ್ ಆನಂದ್ ಮತ್ತು ತಮ್ಮ ವಿಜಯ್ ಆನಂದ್ ಎಂಬ ಇಬ್ಬರು ಸಹೋದರರು. ಇವರು ಸಹ ಚಲನಚಿತ್ರ ನಿರ್ದೇಶಕರಾಗಿ ಹೆಸರು ಮಾಡಿದವರೇ. ಶೀಲಾಕಾಂತಕಪೂರ್ ಎಂಬ ಓರ್ವ ಸೋದರಿ. ಈಕೆ ಪ್ರಸಿದ್ಧ ಹಿಂದಿ ಮತ್ತು ಇಂಗ್ಲೀಷ್ ಚಿತ್ರ ನಿರ್ದೇಶಕ ಶೇಖರ್ ಕಪೂರ್ರ ತಾಯಿ. ದೇವಾನಂದ್ರ ಮೊದಲ ಹೆಸರು ಧರಮ್ದೇವ್ ಆನಂದ್. ಆಮೇಲೆ ದೇವಾನಂದ್ ಆದದ್ದು.
ಈಗ ಪಾಕಿಸ್ತಾನಕ್ಕೆ ಸೇರಿಕೊಂಡಿರುವ ಲಾಹೋರ್ನ ಸರ್ಕಾರಿ ಆರ್ಟ್ಸ್ ಕಾಲೇಜಿನಲ್ಲಿ ಇಂಗ್ಲೀಷ್ ಸಾಹಿತ್ಯವನ್ನು ಮೇಜರ್ ಆಗಿ ತೆಗೆದುಕೊಂಡು ಉನ್ನತ ಶ್ರೇಣಿಯಲ್ಲಿ ಬಿ.ಎ. ಪದವಿಗಳಿಸಿದ ದೇವಾನಂದ್ ನಂತರ ಸಿನಿಮಾ ಕನಸು ಹೊತ್ತು ನಡೆದದ್ದು ಮುಂಬೈನತ್ತ. ಸದ್ಯಕ್ಕೆ ಅಲ್ಲಿ ಚರ್ಚ್ ಗೇಟ್ ನಲ್ಲಿ ಮಿಲಿಟರಿ ಅಧಿಕಾರಿಯಾಗಿ 1940 ರಲ್ಲಿ 160 ರೂ. ಸಂಬಳಕ್ಕಾಗಿ ಕೆಲಕಾಲ ಉದ್ಯೋಗ. ಆನಂತರ ಅಣ್ಣ ಚೇತನ್ ಆನಂದ್ ಸದಸ್ಯನಾಗಿದ್ದ ಇಂಡಿಯನ್ ಪೀಪಲ್ಸ್ ಥಿಯೇಟರ್ (ಐಪಿಟಿಎ) ಗೆ ಸೇರ್ಪಡೆ. ಅಲ್ಲಿ ಆಗಿನ ಕಾಲದ ಪ್ರಸಿದ್ಧ ಚಿತ್ರ ನಿರ್ಮಾಣ ಸಂಸ್ಥೆಯಾದ ಪ್ರಭಾತ್ ಟಾಕೀಸ್ನ ಮಾಲೀಕರ ಪರಿಚಯ. ಮುಂದೆ ಆ ಸಂಸ್ಥೆ 1946ರಲ್ಲಿ ನಿರ್ಮಿಸಿದ ಹಮ್ ಏಕ್ ಹೈ ಚಿತ್ರದ ನಾಯಕ ನಟರಾಗಿ ಮೊಟ್ಟಮೊದಲಿಗೆ ಬಾಲಿವುಡ್ ಬೆಳ್ಳಿತೆರೆಗೆ ಪ್ರವೇಶ. ಈ ಚಿತ್ರ ಸಾಧಾರಣ ಯಶಸ್ಸು ಕಂಡರೂ ಸ್ಫುರದ್ರೂಪಿಯಾದ ದೇವಾನಂದ್ ಚಿತ್ರರಸಿಕರಿಗೆ ಇಷ್ಟವಾಗಿ ಬಿಟ್ಟಿದ್ದ.
ಹಮ್ ಏಕ್ ಹೈ ಚಿತ್ರದ ಚಿತ್ರೀಕರಣ ಸಂದರ್ಭದಲ್ಲಿ ದೇವಾನಂದ್ ಗೆ ಆ ಕಾಲದ ಖ್ಯಾತನಟ ಅಶೋಕ್ ಕುಮಾರ್ ಹಾಗೂ ಗುರುದತ್ರ ಪರಿಚಯವಾಗಿತ್ತು. ಅವರು ಮುಂಬಯಿಯ ಹೆಸರಾಂತ ಚಿತ್ರ ಸಂಸ್ಥೆ ಬಾಂಬೆ ಟಾಕೀಸ್ನ ನಿಮರ್ಾಪಕರಿಗೆ ಶಿಫಾರಸ್ಸು ಮಾಡಿದ ಫಲವಾಗಿ ದೇವಾನಂದ್ ಜಿದ್ದಿ ಚಿತ್ರದ ನಾಯಕರಾದರು. ಆಗಿನ ಜನಪ್ರಿಯ ನಟಿ ಕಾಮಿನಿ ಕೌಶಲ್ ನಾಯಕಿಯಾಗಿದ್ದರು. ಆ ಚಿತ್ರ ಸೂಪರ್ ಹಿಟ್ ಆಯಿತು. ಮತ್ತೆಂದೂ ದೇವಾನಂದ್ ಹಿಂತಿರುಗಿ ನೋಡುವ ಪ್ರಮೇಯ ಬರಲೇ ಇಲ್ಲ. ಹಮ್ ಏಕ್ ಹೈ ಚಿತ್ರದಿಂದ ಹೀಗೆ ಶುರುವಾದ ದೇವಾನಂದ್ರ ಚಿತ್ರ ಪಯಣ ಚಾರ್ಜ್ ಶೀಟ್ ಚಿತ್ರದವರೆಗೂ ಯಶಸ್ವಿಯಾಗಿ ಸಾಗಿಬಂದು ದೇವಾನಂದ್ ಅವರನ್ನು ಭಾರತೀಯ ಚಿತ್ರರಂಗದ ಓರ್ವ ಮಹಾನ್ ಕಲಾವಿದನನ್ನಾಗಿ ಕಡೆದು ನಿಲ್ಲಿಸಿದ್ದು ಈಗ ಇತಿಹಾಸ. ಈ ಹಾದಿಯಲ್ಲಿ ನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿ ಆರೂವರೆ ದಶಕಗಳ ಸುದೀರ್ಘ ಕಾಲ ಭಾರತೀಯರನ್ನು ರಂಜಿಸಿದ ಏಕೈಕ ತಾರೆ ದೇವಾನಂದ್ರ ಸಾಧನೆ ಸಹ ಒಂದು ಮಹಾಚರಿತ್ರೆಯೇ!
ಕಲ್ಪನಾ ಜತೆ ವಿವಾಹ: ತಮ್ಮ ನೌದೋಗ್ಯಾರಾ, ಟ್ಯಾಕ್ಸಿ ಡ್ರೈವರ್, ಅಂಧಿಯಾನ, ಬಾಜಿ, ಹೌಸ್ ನಂ. 44 ಮುಂತಾದ ಚಿತ್ರಗಳಲ್ಲಿ ನಾಯಕಿಯಾಗಿ ನಟಿಸಿದ್ದ ಸಿಮ್ಲಾ ಮೂಲದ ಕಲ್ಪನಾ ಕಾರ್ತಿಕ್ ಅವರನ್ನು 1954ರಲ್ಲಿ ದೇವಾನಂದ್ ವಿವಾಹವಾದರು. ಕಲ್ಪನಾ ಮೂಲತಃ ಮೋನಾಸಿಂಗ್ ಹೆಸರಿನ ಕ್ರಿಶ್ಚಿಯನ್ ಯುವತಿ. ಇವರ ಸುಖೀ ದಾಂಪತ್ಯಕ್ಕೆ ಸಾಕ್ಷಿ ಎಂಬಂತೆ ಸುನಿಲ್ ಎಂಬ ಓರ್ವ ಪುತ್ರ ಮತ್ತು ದೇವಿನಾ ಎಂಬ ಓರ್ವ ಪುತ್ರಿ ಇದ್ದಾರೆ.
ದೇವಾನಂದ್ರ ಟಾಪ್ ಟ್ವೆಂಟಿಫೈವ್ ಚಿತ್ರಗಳು: ಗೈಡ್, ಜಿದ್ದಿ, ಸಿಐಡಿ, ಹರೇ ರಾಮ ಹರೇ ಕೃಷ್ಣ, ಹಮ್ದೋನೋ, ಟ್ಯಾಕ್ಸಿ ಡ್ರೈವರ್, ಕಾಲಾಪಾನಿ, ಜಾಲ್, ಕಾಲಾಬಜಾರ್, ಜ್ಯುವೆಲ್ ಥೀಫ್, ಅಫ್ಸರ್, ಲೂಟ್ ಮಾರ್, ಜಾನಿ ಮೇರಾ ನಾಮ್, ದೋಸಿತಾರೆ, ಅವ್ವಲ್ ನಂಬರ್, ನೀಲಿ, ದೇಶ್ಪರದೇಶ್, ಪೇಯಿಂಗ್ ಗೆಸ್ಟ್, ಶೈರ್, ಸಾಂಗ್ ಆಫ್ ಲೈಫ್, ಅಮೀರ್ ಗರೀಬ್, ವಾರಂಟ್, ಸನಮ್, ವಿದ್ಯಾ, ಬಾಜಿ.
ಅಂತೆಯೇ ನೌದೋಗ್ಯಾರಾ, ಫಂಟೂಲ್, ತೇರೆ ಘರ್ಕೆ ಸಾಮ್ನೆ, ಪ್ರೇಂ ಪೂಜಾರಿ, ಜೋಶಿಲಾ, ಶರೀಫ್ ಬದ್ಮಾಶ್, ಗ್ಯಾಂಬ್ಲರ್, ಚುಪಾರುಸ್ತುಂ, ಇಸ್ಕ್ ಇಸ್ಕ್ ಇಸ್ಕ್, ಮಿಸ್ಟರ್ ಫ್ರೈಮಿನಿಸ್ಟರ್, ತೇರೆ ಮೇರೆ ಸಪ್ನೆ, ಸತ್ಯಂ ಶಿವಂ ಸುಂದರಂ, ಅಚ್ಚಾ ಬುರಾ, ಹೀರಾಪನ್ನ, ಸ್ವಾಮಿದಾದಾ, ಸೌಕ್ರೋರ್,ಸೆನ್ಸಾರ್, ಲವ್ ಮ್ಯಾರೇಜ್, ತೀನ ದೇವಿಯಾ, ಜಬ್ ಪ್ಯಾರ್ ಕಿಸೀಸೆ ಹೋತಾ ಹೈ, ಮಾಯಾ, ಸಚ್ಚೇ ಕಾ ಬೋಲ್ ಬಾಲಾ, ಅಮರ್ದೀಪ್, ಲೂಟ್ ಮಾರ್, ಜಾಲ್ ಮುಂತಾದವು ದೇವಾನಂದರ ಪ್ರಮುಖ ಚಿತ್ರಗಳು.
ಪ್ರಮುಖ ಪ್ರಶಸ್ತಿಗಳು: ‘ಕಾಲಾಪಾನಿ’ ಚಿತ್ರಕ್ಕಾಗಿ 1958ರಲ್ಲಿ ಫಿಲ್ಮ್ಫೇರ್ ಪ್ರಶಸ್ತಿ ಹಾಗೂ ಅದೇ ವರ್ಷ ಈ ಚಿತ್ರ ಆಸ್ಕರ್ಗೆ ನಾಮನಿದರ್ೇಶನಗೊಂಡಿತ್ತು. 1966ರಲ್ಲಿ ‘ಗೈಡ್’ ಚಿತ್ರದ ನಟನೆಗಾಗಿ ಫಿಲ್ಮ್ಫೇರ್ ಪ್ರಶಸ್ತಿ ಮತ್ತು ಅದೇ ವರ್ಷ ಇದೇ ಚಿತ್ರ ವಿದೇಶಿ ಸಿನಿಮಾ ವಿಭಾಗದಲ್ಲಿ ಆಸ್ಕರ್ ಪ್ರಶಸ್ತಿಗೆ ನಾಮನಿದರ್ೇಶನವಾಗಿತ್ತು. 1991ರಲ್ಲಿ ಫಿಲಂಫೇರ್ ಜೀವಿತಾವಧಿ ಸಾಧನೆಯ ಪ್ರಶಸ್ತಿ, 2000ದ ಜುಲೈನಲ್ಲಿ ನ್ಯೂಯಾಕರ್್ನಲ್ಲಿ ಪೌರಸನ್ಮಾನ, ಅದೇ ವರ್ಷ ಸ್ಟಾರ್ ಆಫ್ ಮಿಲೇನಿಯಂ ಪ್ರಶಸ್ತಿ, ಸ್ಟಾರ್ ಸ್ಕ್ರೀನ್ ಜೀವಮಾನ ಸಾಧನೆ ಪ್ರಶಸ್ತಿ, ವಿಶೇಷ ಸ್ಕ್ರೀನ್ ಪ್ರಶಸ್ತಿ, ಎವರ್ಗೋಲ್ಡ್ ಆಫ್ ದಿ ಮಿಲೇನಿಯಂ ಪ್ರಶಸ್ತಿ, ಸೋನಿ ಗೋಲ್ಡನ್ ಗ್ಲೋರಿ ಪ್ರಶಸ್ತಿಗಳು ಸೇರಿದಂತೆ ದೇಶ-ವಿದೇಶಗಳ ನೂರಾರು ಪ್ರಶಸ್ತಿ, ಪುರಸ್ಕಾರಗಳಿಂದ ದೇವಾನಂದ್ ಗೌರವಿಸಲ್ಪಟ್ಟಿದ್ದಾರೆ.