ಮಂಗಳೂರು: `ಪವಿತ್ರ’ ಸಿನಿಮಾದ ಕಥೆ ತುಳುನಾಡಿನ ಜೀವನಾಡಿಯಲ್ಲಿ ಬೆಸೆದಿರುವ ಬೀಡಿ ಕಟ್ಟುವ ಬಡಕುಟುಂಬಕ್ಕೆ ಸೇರಿದ ಹೆಣ್ಣುಮಗಳ ವ್ಯಥೆಯಾಗಿರುವ ಕಾರಣ ತುಳುವರು ಪ್ರೀತಿಯಿಂದ ಸ್ವಾಗತಿಸಬೇಕು. ತುಳು ಚಿತ್ರರಂಗದಲ್ಲಿ ಹೊಸ ಪ್ರಯೋಗಗಳು ನಡೆಯುತ್ತಿರುವ ಇಂದಿನ ಕಾಲಘಟ್ಟದಲ್ಲಿ ಹೊಸ ಪ್ರತಿಭೆಗಳು ಬೆಳಕಿಗೆ ಬರುತ್ತಿರುವುದು ಒಳ್ಳೆಯ ಬೆಳವಣಿಗೆ. ದೇಸಿ ಸೊಗಡಿನ `ಪವಿತ್ರ’ ಚಿತ್ರ ಎಲ್ಲ ರೀತಿಯಲ್ಲೂ ಯಶಸ್ಸನ್ನು ಕಾಣಲಿ ಎಂದು ರಾಜ್ಯ ಮೀನುಗಾರಿಕೆ ಹಾಗೂ ಯುವಜನ ಕ್ರೀಡಾ ಖಾತೆ ಸಚಿವ ಕೆ.ಅಭಯಚಂದ್ರ ಜೈನ್ ಶುಭ ಹಾರೈಸಿದರು.
ಅವರು ಆದಿತ್ಯವಾರ ಸಂಜೆ ನಗರದ ಸಿಟಿ ಸೆಂಟರ್ ಮಾಲ್ ನಲ್ಲಿ ಜರುಗಿದ ತುಳು ಚಲನಚಿತ್ರ `ಪವಿತ್ರ’ ಇದರ ಆಡಿಯೋ ಹಾಗೂ ಟ್ರೈಲರ್ ಬಿಡುಗಡೆ ಮಾಡಿ ಮಾತಾಡಿದರು. ಕಾರ್ಯಕ್ರಮದಲ್ಲಿ ಎಸಿಪಿ ಮದನ್ ಗಾಂವ್ಕರ್, ಇಂಟಕ್ ರಾಜ್ಯಾಧ್ಯಕ್ಷ ರಾಕೇಶ್ ಮಲ್ಲಿ, ಮಾಜಿ ಮೇಯರ್ ರಜನಿ ದುಗ್ಗಣ್ಣ, ಎಲಿಯಾಸ್ ಸ್ಯಾಂಕ್ಟಿಸ್, ಚಿತ್ರದ ನಿರ್ದೇಶಕ ನಾಗವೆಂಕಟೇಶ್, ಕೆಮರಾಮ್ಯಾನ್ ಜೆ.ಜಿ.ಕೃಷ್ಣ, ನಿರ್ಮಾಪಕ ಅನಂತರಾಮ ರಾವ್ ಎರ್ಮಾಳ್, ಸಂಭಾಷಣೆಕಾರ ರಂಜಿತ್ ಸುವರ್ಣ ಕೂಳೂರು, ನಟ ಶ್ರವಂತ್, ನಟಿ ಚಿರಶ್ರೀ, ಸಹನಟ ಮನೋಜ್ ಹಾಗೂ ಇತರರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಚಿತ್ರದ ಧ್ವನಿಸುರುಳಿ ಹಾಗೂ ಚಿತ್ರದ ಟ್ರೈಲರ್ ಬಿಡುಗಡೆ ಜೊತೆಗೆ ಖ್ಯಾತ ನೃತ್ಯತಂಡದಿಂದ ನೃತ್ಯ ಕಾರ್ಯಕ್ರಮ ನಡೆಯಿತು.