ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿಯಲ್ಲಿ ಭರ್ಜರಿಯಾಗಿ ಮನರಂಜಿಸಿದ ಸಿಂಪಲ್ ಸುನಿ ಈ ಬಾರಿ ಮತ್ತೆ ಹೊಸ ವರುಷಕೆ ‘ಇನ್ನೊಂದ್’ ಹೊಸ ಪ್ರೇಮ ಪಕ್ವಾನ್ನ ಬಡಿಸಲು ಸಜ್ಜಾಗಿದ್ದಾರೆ. ‘ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ’ ಯಲ್ಲಿ ಸುನಿ ಎಸೆದ ಒಂದೊಂದು ಮಾತಿನ ಬಾಣಗಳು ಯುವ ಹೃದಯಗಳಿಗೆ ಕಚಗುಳಿಯಿಟ್ಟು ಬಿಟ್ಟಿವೆ. ತುಂಟ ಪದಗಳ ಸುನಿ ಶಾಯರಿಗಳು, ಸೃಜನಶೀಲತೆಯ ಬಣ್ಣದಲ್ಲಿ ತೋಯ್ದು ನೋಡುಗನ ಮನಸಿಗೆ ಮತ್ತೆ ಮತ್ತೆ ನೋಡಬೇಕೆನ್ನುವ ಚಟವನ್ನು ಅಂಟಿಸಿ, ಪ್ರೇಮಪಕ್ಷಿಗಳ ಮಾತುಗಳಿಗೆ ಹೊಸತನದ ಸ್ಪರ್ಶ ನೀಡುವಲ್ಲಿ ಯಶಸ್ವಿಯಾಗಿದ್ದವು. ರಕ್ತಪಾತ ಮತ್ತು ತಲೆಬುಡವಿಲ್ಲದ ಮರಸುತ್ತುವ ಪ್ರೇಮಕಥೆಗಳನ್ನು ನೋಡಿ ಕ್ಯಾನ್ಸರ್ ಹಿಡಿದಿರುವ ಕನ್ನಡ ಚಿತ್ರರಂಗಕ್ಕೆ ಹೊಸತನದ ಕಿಮೋಥರಪಿ ಕೊಟ್ಟು ಮರುಜನ್ಮ ನೀಡಿದ ಕೀರ್ತಿ ನಿರ್ದೇಶಕ ಸುನಿಗೆ ಸಲ್ಲುತ್ತದೆ. ‘ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ’ಯ ಮೊದಲೇ ತಯಾರು ಮಾಡಿಟ್ಟಿರುವ ಕಥೆಗೆ ಹೊಸ ರೂಪವನ್ನು ನೀಡಿ, ಸದ್ದಿಲ್ಲದೆ ಶೂಟಿಂಗ್ ಮುಗಿಸಿ ಹೊಸವಸಂತಕ್ಕೆ ಟ್ರೇಲರ್ ಹರಿಯಬಿಟ್ಟಿದೆ ಚಿತ್ರತಂಡ. ಸಿಂಪಲ್ಲಾಗಿದ್ದ ಹೊಸತನದ ‘ಕೈ ಬಿಡದ’ ಪ್ರೇಕ್ಷಕ ಪ್ರಭು ‘ಸಿಂಪಲ್ಲಾಗ್ ಇನ್ನೊಂದ್ ಲವ್ ಸ್ಟೋರಿ’ ಯ ಟ್ರೇಲರ್ ನೋಡುತ್ತಾ ‘ಮಕ್ಕಳು ಮಾಡುವುದೇ ಚೆಂದ’ ಆದರೂ ‘ಸುನಿ ಮಾಡುತ್ತಿರುವುದು ಚೆಂದವೋ ಚೆಂದ’ ಎಂಬ ನಿರ್ಣಯಕ್ಕೆ ಬಂದುಬಿಟ್ಟಾಗಿದೆ.
ಹೊಸಮುಖ ಪ್ರವೀಣ್ ಮತ್ತು ಮೇಘನಾ ಗಾಂವ್ಕರ್ ಅಭಿನಯಿಸಿರುವ ‘ಸಿಂಪಲ್ಲಾಗ್ ಇನ್ನೊಂದ್ ಲವ್ ಸ್ಟೋರಿ’ ಮೊದಲ ಚಿತ್ರದ ಛಾಯೆಯಿಲ್ಲದೆ ಸಂಪೂರ್ಣವಾಗಿ ಹೊಸತಾಗಿದೆ. ಈ ಬಾರಿ ಕಚಗುಳಿಯಿಡುವ ಮಾತುಗಳ ಜೊತೆಯಲ್ಲಿ ಇನ್ನೇನೋ ಹೊಸತನ್ನು ಹೇಳಲು ಹೊರಟಿರುವ ನಿರ್ದೇಶಕ ಸುನಿ, ಪ್ರೇಮಿಗಳ ಪಯಣದಲ್ಲಿ ಬಾಲಪ್ರತಿಭೆ ಹೇಮಂತ್ ನನ್ನು ಕೂರಿಸಿ ತುಂಟಮನಸುಗಳು ದಾರಿ ತಪ್ಪದಂತೆ ನೋಡಿದ್ದಾರೆ. ಟ್ರೇಲರ್ ನೋಡಿರುವ ಯುವಪ್ರೇಕ್ಷಕರು ಪ್ರಸ್ಥಕ್ಕೆ ಸಿದ್ಧನಾಗಿರುವ ಮದುಮಗನಂತೆ ತಯಾರಾಗಿ ಕುತೂಹಲದಿಂದ ಚಿತ್ರಕ್ಕಾಗಿ ಕಾಯುತ್ತಿದ್ದಾರೆ. ‘ರಾಧಾ ಕಲ್ಯಾಣ’ ಧಾರಾವಾಹಿಯ ಸಾರಥಿ ಅಶುಬೆದ್ರ ‘ಸಿಂಪಲ್ಲಾಗ್ ಇನ್ನೊಂದ್ ಲವ್ ಸ್ಟೋರಿ’ ಯ ಕೈ ಹಿಡಿದು ನಡೆಸುತ್ತಿದ್ದಾರೆ. ಇನ್ನೇನು ತಿಂಗಳ ಒಳಗಾಗಿ ಚಿತ್ರಮಂದಿರಗಳಿಗೆ ಲಗ್ಗೆಯಿಡಲು ಸಜ್ಜಾಗಿರುವ ಚಿತ್ರವು ಪ್ರೇಕ್ಷಕ ಪ್ರಭುವಿನ ಮನಸಿನ ಜೊತೆ ಬಾಕ್ಸಾಫೀಸಿನಲ್ಲೂ ಹೊಸ ಶಾಯರಿ ಬರೆಯುವುದಂತೂ ಗ್ಯಾರಂಟಿ.